ಸಂಪರ್ಕ ಸ್ನೇಹಿತ ರೇಡಿಯೋ ಅಲೆಗಳು

ಸಂಶೋಧನೆಗಳು ಹೇಗೆ ಘಟಿಸುತ್ತವೆ ಎಂಬುದೇ ಕೌತುಕ. ಅನೇಕ ಬಾರಿ ಅವಶ್ಯಕತೆಗಳು ಅನ್ವೇಷಣೆಗೆ ಅನಿವಾರ್ಯವಾಗುತ್ತವೆ. ಅಮೋನಿಯಂ ತಯಾರಿಕೆಯನ್ನು ಹೇಬರ್ ಕಂಡುಹಿಡಿಯಲು ಅದೇ ಕಾರಣ. ಇನ್ನೊಮ್ಮೆ ಕುತೂಹಲಗಳೇ ಅನ್ವೇಷಣೆಗೆ ಕಾರಣವಾಗುತ್ತವೆ. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ ವೆಲ್ ವಿದ್ಯುತ್ಕಾಂತೀಯ ಅಲೆಗಳ ಸಿದ್ಧಾಂತವನ್ನು ಮಂಡಿಸಿ ಚಾಲ್ತಿಗೆ ಬಂದ. ಇದು ನಿಜವೇ ಎಂದು ತಿಳಿಯಲು ಕುತೂಹಲಿಗನಾದ ಹೆನ್ರಿಜ್ ಹರ್ಟ್ಜ್ ಎಂಬ ಜರ್ಮನ್ ವಿಜ್ಞಾನಿ ತನ್ನದೇ ತಯಾರಿಯೊಂದಿಗೆ ಕಣಕ್ಕಿಳಿದ. ತನ್ನ ಕೋಣೆಯಲ್ಲಿ ವಿದ್ಯುತ್ ಕಿಡಿಗಳನ್ನು ಉತ್ಪಾದಿಸುವ ಒಂದು ಚೋದಕ ಸುರುಳಿಯನ್ನಿರಿಸಿದ (induction coil). ಇಲ್ಲಿಂದ ಹೊರಡುವ ತರಂಗಗಳನ್ನು ಸ್ವೀಕರಿಸುವ ಅಥವಾ ಗುರುತಿಸುವ ಗ್ರಾಹಕವೊಂದನ್ನು ಪಕ್ಕದ ಕೋಣೆಯಲ್ಲಿರಿಸಿದ. ಅಂದರೆ ಚೋದಕ ಸುರುಳಿ ಪ್ರೇಷಕವಾದರೆ (transmitter) ಪಕ್ಷದ ಕೋಣೆಯಲ್ಲಿನ ಸಂದೇಶವನ್ನು ಗ್ರಹಿಸುವ ಉಪಕರಣ ಗ್ರಾಹಕವಾಯಿತು (receiver). ಹರ್ಟ್ಝ್ ಪ್ರೇಷಕದಲ್ಲಿ ಹೆಚ್ಚಿನ ವೋಲ್ಟೇಜ್ ನ ವಿದ್ಯುತ್ ಕಿಡಿಗಳನ್ನು ಉತ್ಪತ್ತಿ ಮಾಡಿದಾಗ ಗ್ರಾಹಕದಲ್ಲಿಯೂ ವಿದ್ಯುತ್ ಕಿಡಿಗಳುಂಟಾದವು ಮತ್ತು ಅವು ಪ್ರೇಷಕದ ವಿದ್ಯುತ್ ಕಿಡಿಗಳಿಗೆ ಸಂವಾದಿಯಾಗಿದ್ದವು. ಈಗ ಉಂಟಾದ ಅಲೆಗಳು ಕೂಡಾ ವಿದ್ಯುತ್ಕಾಂತೀಯ ತರಂಗಗಳು ಮತ್ತು ಇವು ಗಾಳಿಯಲ್ಲಿ ಹೆಚ್ಚೂ ಕಡಿಮೆ ಬೆಳಕಿನಷ್ಟೇ ವೇಗದಲ್ಲಿ ಚಲಿಸುತ್ತವೆ ಎಂಬುದನ್ನು 1980 ರ ಅಂತ್ಯದಲ್ಲಿ ಸಾಬೀತುಪಡಿಸಿದ. ಹೀಗೆ ಮ್ಯಾಕ್ಸ್‌ವೆಲ್ ನ ಸಿದ್ದಾಂತವನ್ನು ಸುಳ್ಳು ಎಂದು ಸಾಧಿಸಲು ಹೊರಟವನು ಮ್ಯಾಕ್ಸ್‌ವೆಲ್ ನ ಸಿದ್ದಾಂತಕ್ಕೆ ಪುರಾವೆಯನ್ನೊದಗಿಸಿದ್ದು ಆಕಸ್ಮಿಕವೇ ಸರಿ. ಹೀಗೆ ಮ್ಯಾಕ್ಸ್‌ವೆಲ್ ನನ್ನು ಪುಷ್ಟೀಕರಿಸಿದ ಈ ಹೆನ್ರಿಚ್ ಹರ್ಟ್ಝ್ ನ ಹೆಸರನ್ನು ವಿಜ್ಞಾನದಲ್ಲಿ ಸ್ಥಿರವಾಗಿಸಲಾಗಿದೆ. ನಾವು ಕಂಪನಾಂಕವನ್ನು ಹೇಳುವಾಗ ಸೆಕುಂಡಿಗೆ ಇಷ್ಟು ತರಂಗಗಳು (cycles/second) ಅನ್ನು ಹರ್ಟ್ಝ್ (HZ) ಎನ್ನುತ್ತೇವೆ. ಉದಾಹರಣೆಗೆ 3k Hz ಅಂದರೆ 3000 cycles/sec ಎಂದರ್ಥ.
ಪ್ರೇಷಕದಿಂದ ಹೊರಡಿಸಲಾದ ತರಂಗ ಗ್ರಾಹಕದಲ್ಲಿ ಸ್ವೀಕೃತವಾಗುತ್ತದೆ ಎಂದು ಗೊತ್ತಾದಾಗ ಇಟಾಲಿಯನ್ ತಂತ್ರಜ್ಞ ಗೂಗ್ಲಿಯೆಲ್ಮೋ ಮಾರ್ಕೋನಿ ಎಂಬಾತ ಈ ಅಲೆಗಳ ಮೂಲಕ ಶ್ರವಣ ಸಂಕೇತಗಳನ್ನು ಕಳುಹಿಸಲು ಸಾಧ್ಯವೇ ಎಂದು ನೋಡುತ್ತಿದ್ದ ಹೀಗೆ ಆವಿಷ್ಕಾರವಾದದ್ದು ರೇಡಿಯೋ. ಇದು ಆದದ್ದು 1895 ರಲ್ಲಿ. ಇದಾಗಿ 2 ವರ್ಷದಲ್ಲಿ ಮಾರ್ಕೋನಿಗೆ ರೇಡಿಯೋ ಪೇಟೆಂಟ್ ದೊರೆಯಿತು. ಆರಂಭದಲ್ಲಿ ಸುಮಾರು 2.5 ಕಿಮೀ ಅಂತರದಲ್ಲಿ ಸಂದೇಶಗಳನ್ನು ಕಳಿಸುವ ಮೂಲಕ ಹಡಗಿನಿಂದ ಹಡಗಿಗೆ ಅಥವಾ ಸಮೀಪದ ಭೂ ಪ್ರದೇಶಗಳನ್ನು ಸಂಪರ್ಕಿಸಲು ಮಾತ್ರ ಬಳಕೆಯಾಗುತ್ತಿದ್ದ ರೇಡಿಯೋಗಳು 1920 ರಲ್ಲಿ ರೇಡಿಯೋ ಮನೆಗಳನ್ನು ಪ್ರವೇಶಿಸಿತು. 1920 ರಿಂದ 1950 ರೇಡಿಯೋದ ಸುವರ್ಣ ಯುಗ ಎಂದು ನಮೂದಿಸಲ್ಪಟ್ಟಿದೆ. 1950 ರ ಹೊತ್ತಿಗೆ ರೇಡಿಯೋ ಕಿಸೆಯ ಗಾತ್ರಕ್ಕೆ ಇಳಿದದ್ದರಿಂದ ರೇಡಿಯೋ ಪ್ರತಿಯೊಬ್ಬರ ವೈಯುಕ್ತಿಕ ಸ್ವತ್ತಾಯಿತು. 1927 ರಲ್ಲಿ ಬಿತ್ತರವಾದ ಮೊದಲ ಟಿವಿ ಸಿಗ್ನಲ್ ಸ್ವರದೊಂದಿಗೆ ಚಿತ್ರವನ್ನೂ ಬಿತ್ತರಿಸಿತು. ಈ ಟಿವಿ ತರಂಗಗಳೂ ರೇಡಿಯೋ ತರಂಗಗಳೇ. ವಾಣಿಜ್ಯ ಉದ್ದೇಶವಿಲ್ಲದ ರೇಡಿಯೋವನ್ನು ಹ್ಯಾಮ್ ರೇಡಿಯೋ (Ham radio) ಎನ್ನುತ್ತೇವೆ. ಭೂಕಂಪ, ನೆರೆ ಇತ್ಯಾದಿ ಸಂದರ್ಭಗಳಲ್ಲಿ ಈ ಹ್ಯಾಮ್ ರೇಡಿಯೋ ಬಹಳ ಜನರ ಜೀವ ಉಳಿಸಿವೆ. ಇತ್ತೀಚೆಗೆ ಈ ಹ್ಯಾಮ್ ರೇಡಿಯೋವನ್ನು ವಿಧ್ವಂಸಕ ಘಟಕಗಳು ಬಳಸಿದ ಬಗ್ಗೆ ವರದಿಗಳಿವೆ.
ರೇಡಿಯೋ ತರಂಗಗಳು ವಿದ್ಯುತ್ಕಾಂತೀಯ ಕುಟುಂಬದಲ್ಲಿ ಅತ್ಯಂತ ದುರ್ಬಲ ತರಂಗಗಳು. ಇವುಗಳ ಕಂಪನಾಂಕ ಕಡಿಮೆ ಮತ್ತು ತರಂಗಾಂತರ ಹೆಚ್ಚು. ಸಾಮಾನ್ಯವಾಗಿ 3GHz ಕಂಪನಾಂಕವಿರುವ ರೇಡಿಯೋ ತರಂಗಗಳು 1 ಮಿಲಿಮೀಟರ್ ತರಂಗಾಂತರ ಹೊಂದಿದ್ದರೆ 3 kHz ಕಂಪನಾಂಕದ ಅಲೆಯುದ್ದ 100 ಕಿಲೋಮೀಟರ್.
ಸಂಪರ್ಕಕ್ಕಾಗಿ, ವಿಮಾನಗಳ ನೆಲೆಯನ್ನು ಗುರುತಿಸಲು ರೇಡಾರ್ ಗಳಲ್ಲಿ ರೇಡಿಯೋ ಅಲೆಗಳನ್ನು ಬಳಸಲಾಗುತ್ತದೆ. 1933 ರಲ್ಲಿ ಕಾರ್ಕ್ ಜೆನ್ಸ್ಕಿ ಆಕಾಶಗಂಗೆಯಿಂದ (milky way) ಬರುವ ರೇಡಿಯೋ ತರಂಗಗಳನ್ನು ಗುರುತಿಸಿದ. ಆ ನಂತರ ವ್ಯೋಮ ಸಂಶೋಧನೆಯಲ್ಲಿ ರೇಡಿಯೋ ತರಂಗಗಳ ಹುಡುಕಾಟ ನಡೆದಿದೆ. ಈ ವ್ಯೋಮದಿಂದ ಬರುವ ರೇಡಿಯೋ ತರಂಗಗಳನ್ನು ಸೆರೆಹಿಡಿಯಲು ರೇಡಿಯೋ ದೂರದರ್ಶಕಗಳನ್ನು ಸ್ಥಾಪಿಸಲಾಗುತ್ತಿದೆ. ಚೀನಾದ ಗಿಜೂ ನಲ್ಲಿ (Guizhou) ಸ್ಥಾಪಿಸಲಾಗಿರುವ FAST (Five hundred metre Aperture Spherical Telescope) 500 ಮೀಟರ್ ವ್ಯಾಸದ ಅತಿದೊಡ್ಡ ರೇಡಿಯೋ ದೂರದರ್ಶಕ. ಪುಣೆಯ ನಾರಾಯಣ ಗಾಂವದಲ್ಲಿರುವ GMRT (Giant Metrewave Radio Telescope) 50 ಮೀಟರ್ ವ್ಯಾಸದ ರೇಡಿಯೋ ಟೆಲಿಸ್ಕೋಪ್. ಇದು ಅತಿ ಸಣ್ಣ (nano waves) ಗಳನ್ನು ಗುರುತಿಸುವ ಜಗತ್ತಿನ 6 ದೂರದರ್ಶಕಗಳಲ್ಲಿ ಅತ್ಯಂತ ನಿಖರವಾದದು ಎಂಬುದು ನಮಗೆ ಹೆಮ್ಮೆ.
ಹೀಗೆ ಅತ್ಯಂತ ಪ್ರಬಲವಾದ ಅಯಾನೀಕರಣಗೊಳಿಸುವ ಸಾಮರ್ಥ್ಯ ಹೊಂದಿರುವ ಗಾಮಾ ಕಿರಣಗಳಿಂದ ಅತ್ಯಮತ ದುರ್ಬಲವಾದರೂ ನಿತ್ಯೋಪಯೋಗಿಗಳಾದ ರೇಡಿಯೋ ತರಂಗಗಳ ವರೆಗೆ ಎಲ್ಲಾ ವಿದ್ಯುತ್ಕಾಂತೀಯ ತರಂಗಳ ಬಗ್ಗೆ ತಿಳಿದು ಕೊಂಡೆವು. ಇನ್ಯಾವುದಾದರೂ ಬಿಟ್ಟು ಹೋಗಿವೆಯೇ? ಸ್ವಲ್ಪ ನೆನಪು ಮಾಡುತ್ತೀರಾ ಏಕೆಂದರೆ ನನಗೆ ವಯಸ್ಸು ಆಯಿತು ನೋಡಿ.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ