ಸಂಪಾದಕರ ಸದ್ಯಶೋಧನೆ (ಭಾಗ 1)

ಸಂಪಾದಕರ ಸದ್ಯಶೋಧನೆ (ಭಾಗ 1)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ವಿಶ್ವವಾಣಿ ಪುಸ್ತಕ, ರಾಜರಾಜೇಶ್ವರಿನಗರ, ಬೆಂಗಳೂರು-೫೬೦೦೯೮
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿ ಯಾವುದನ್ನು ಬೇಕಾದರೂ ಮೊದಲು ಓದಬಹುದು. ಪುಸ್ತಕದಲ್ಲೂ ಯಾವ ಪುಟದಿಂದಲೂ ನಿಮ್ಮ ಓದನ್ನು ಪ್ರಾರಂಭಿಸಬಹುದಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇದು ನಿಜವೂ ಹೌದು. 

ಕಡಿಮೆ ವಾಕ್ಯಗಳಲ್ಲಿ ಹಿಂದೆ ನಡೆದ ಘಟನೆಗಳು, ಮಹನೀಯರ ಬದುಕಿನಲ್ಲಿ ಜರುಗಿದ ಸಂಗತಿಗಳು, ನಮಗೆ ತಿಳಿಯದೇ ಇದ್ದ ಹಲವಾರು ಸಂಗತಿಗಳನ್ನು ವಿಶ್ವೇಶ್ವರ ಭಟ್ ಇವರು ಕಡಿಮೆ ಪದಗಳಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಇದೊಂದು ರೀತಿಯ ಚಾಲೆಂಜ್. ಏಕೆಂದರೆ ಪ್ರತೀ ದಿನ ಯಾವುದಾದರೊಂದು ಆಸಕ್ತಿದಾಯಕ ಸಂಗತಿಯನ್ನು ಲಭ್ಯವಿರುವ ಪುಟ್ಟ ಜಾಗದಲ್ಲಿ ಹಿಡಿಸುವಂತೆ ಅರ್ಥಗರ್ಭಿತವಾಗಿ ಬರೆಯುವುದು ಯಾವುದೇ ಬರಹಗಾರನಿಗೆ ಒಂದು ಚಾಲೆಂಜಿಂಗ್ ವಿಷಯ. ಇದನ್ನು ಕಳೆದ ಕೆಲವು ವರ್ಷಗಳಿಂದ ವಿಶ್ವೇಶ್ವರ ಭಟ್ ಅವರು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.

ಪುಸ್ತಕವನ್ನು ನೋಡಿದ ಕೂಡಲೇ ಕೈಯಲ್ಲಿ ಹಿಡಿದು ಮುದ್ದಾಡಬೇಕು ಅನ್ನುವಷ್ಟು ಚೆನ್ನಾಗಿರುವ ಮುಖಪುಟ ಮುದ್ರಣ, ವಿನ್ಯಾಸ ಹಾಗೂ ಅದಕ್ಕೆ ಬಳಸಿದ ಮುದ್ರಣ ಕಾಗದ. ಈ ವಿಷಯವೇ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಲೇಖಕರಾದ ವಿಶ್ವೇಶ್ವರ ಭಟ್ ಅವರು ತಮ್ಮ ಮಾತು “ಸದ್ಯಶೋಧನೆ : ನನ್ನ ಭಾವನೆ" ಇಲ್ಲಿ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಅವರ ಪ್ರಕಾರ “ನಮಗೆ ಸತ್ಯಶೋಧನೆ ಗೊತ್ತು. ಅದು ಕಷ್ಟವೂ ಹೌದು. ಅದರಲ್ಲೂ ದಿನಾ ಸತ್ಯಶೋಧನೆ ಕಷ್ಟ ಕಷ್ಟ. ಪತ್ರಕರ್ತರದ್ದು ಶೋಧಿಸುವ ಕೆಲಸ. ಅದರಲ್ಲೂ ಸದ್ಯಶೋಧನೆ ಅವರ ದೈನಂದಿನ ಕೆಲಸ. ಅದು ಸತ್ಯಶೋಧನೆಯಷ್ಟು ಕಷ್ಟವಲ್ಲ. ಈ ಮೂಸೆಯಲ್ಲಿ ಮೂಡಿಬಂದಿದ್ದು ‘ಸಂಪಾದಕರ ಸದ್ಯಶೋಧನೆ'.

ಪ್ರತಿ ದಿನವೂ ಪತ್ರಿಕೆಗೆ ಬರೆಯುವುದು (ನಿತ್ಯ ಅಂಕಣ) ಕಷ್ಟದ ಕೆಲಸವೇ, ದಿನವೂ ಹೊಸ ಹೊಸ ವಿಷಯಗಳನ್ನು ಶೋಧಿಸುವುದು, ದಿನವೂ ಕುತೂಹಲವನ್ನು ಕಾಪಾಡಿಕೊಳ್ಳುವುದು, ಬರಹದ ಶೈಲಿಯಲ್ಲಿ ಏಕತಾನತೆ ಮೂಡದಂತೆ ನೋಡಿಕೊಳ್ಳುವುದು, ನಿತ್ಯವೂ ಫ್ರೆಶ್ ಆಗಿ ಯೋಚಿಸಿ ಓದುಗರ ಮುಂದೆ ಬರೆಯಲು ಕುಳಿತುಕೊಳ್ಳುವುದು, ಯಾವ ದೇಶದಲ್ಲಿದ್ದರೂ ಸದ್ಯದ ಶೋಧನೆಯಲ್ಲಿ ಮಗ್ನನಾಗುವುದು ನನಗೆ ಖುಷಿಕೊಡುವ ಸಂಗತಿಯೇ.

ನನಗೆ ಪತ್ರಿಕೆಯಲ್ಲಿ ಬರೆಯಲು ಆಗಲೇ ನಾಲ್ಕೈದು ಅಂಕಣಗಳಿದ್ದವು. ಬೇರೆಯ ಹೆಸರಿನಲ್ಲಿ ಬರೆಯುತ್ತೇನೆ ಎಂಬ ಆಪಾದನೆಗಳೂ ಇದ್ದವು. ಅವು ಸಾಲದು ಎಂಬಂತೆ, ‘ಸಂಪಾದಕರ ಸದ್ಯಶೋಧನೆ'ಯನ್ನು ನಾನು ಬೇಕೆಂದೇ ಮೈಮೇಲೆ ಎಳೆದುಕೊಂಡೆ. ಒಂದು ದಿನವೂ ತಪ್ಪಿಸುವ ಹಾಗಿಲ್ಲ. ಹೊಸ ವಿಷಯವನ್ನು ಹೇಳಲೇ ಬೇಕು.

ಒಂದೂ ಬರಹವನ್ನು ಕಾಟಾಚಾರಕ್ಕೆ ಬರೆದಿದ್ದಲ್ಲ. ಇಲ್ಲಿನ ಬರಹದ ಗಾತ್ರ ಮತ್ತು ಹರವು ಸಣ್ಣದು. ವಿಷಯವನ್ನು ಲಂಬಿಸಲು ಹೆಚ್ಚು ಅವಕಾಶವಿಲ್ಲ. ವಸ್ತುವಿನ ಒಂದು ಮಗ್ಗುಲನ್ನಷ್ಟೇ ಹೇಳಲು ಅವಕಾಶವಿರುವಂಥದ್ದು. ಒಂದು ಝಲಕ್ ಅನ್ನು ಮಾತ್ರ ಕೊಡಬಹುದಾದಷ್ಟು ವ್ಯಾಪ್ತಿಯುಳ್ಳದ್ದು. ಅದು ಈ ಅಂಕಣದ ಪ್ಲಸ್ ಮತ್ತು ಮೈಸನ್ ಎರಡೂ ಹೌದು" ಎಂದಿದ್ದಾರೆ. 

ಪುಸ್ತಕದ ಶೋಧನೆಯ ಒಡಲಿನಲ್ಲಿ ನೂರು ಅಧ್ಯಾಯಗಳಿವೆ. ಎರಡು ಪುಟಗಳಿಗೆ ಒಂದರಂತೆ ಅಧ್ಯಾಯವಿದೆ. ಐದು ನಿಮಿಷ ಸಮಯವಿದೆ ಎಂದಾದಾಗ ಇದರ ಒಂದು ಅಧ್ಯಾಯವನ್ನು ಓದಿ ಮುಗಿಸುವಷ್ಟು ಪುಟ್ಟದಾಗಿದೆ ಮತ್ತು ಆಸಕ್ತಿದಾಯಕವಾಗಿದೆ. ನಮಗೆ ಗೊತ್ತೇ ಇಲ್ಲದ ವ್ಯಕ್ತಿಗಳ ಬಗ್ಗೆ ಸ್ವಾರಸ್ಯಕವಾದ ಮಾಹಿತಿಗಳನ್ನು ಓದುವುದೇ ಚೆನ್ನ. ಈ ಪುಸ್ತಕದ ಎರಡನೇ ಅಧ್ಯಾಯ “ಪೇದೆಯೊಬ್ಬ ಪುತ್ಥಳಿಯಾದದ್ದು...!” ಬರಹವು ತನ್ನ ಮೀಸೆಯ ಕಾರಣದಿಂದಲೇ ಗಮನ ಸೆಳೆಯುತ್ತಿದ್ದ ಮೀಸೆ ತಿಮ್ಮಯ್ಯ ಎಂಬ ಸಂಚಾರಿ ಪೋಲೀಸ್ ಬಗ್ಗೆ. ಮೀಸೆಯ ಬಗ್ಗೆ ಅಷ್ಟೇ ಅಲ್ಲ, ಅವರ ಅಕಾಲ ನಿಧನದ ಬಳಿಕ ಬೆಂಗಳೂರಿನ ವೃತ್ತವೊಂದಕ್ಕೆ ಅವರ ಹೆಸರು ಇಟ್ಟಿರುವ ಬಗ್ಗೆಯೂ ಈ ಅಧ್ಯಾಯ ಹೇಳುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ವಿಶ್ವೇಶ್ವರ ಭಟ್ ಅವರ ಬರಹದಲ್ಲಿ…

“ಈ ಕೆಲಸ ಎಂದೋ ಆಗಬೇಕಿತ್ತು. ಬರೋಬ್ಬರಿ ಇಪ್ಪತ್ತೈದು ವರ್ಷಗಳ ನಂತರ ಆಗಿದೆ. ಬೆಂಗಳೂರಿನ ಜಿಪಿಒ ವೃತ್ತದಲ್ಲಿ ಸಂಚಾರಿ ಪೋಲೀಸ್ ಆಗಿ ಕೆಲಸ ಮಾಡುತ್ತಿದ್ದ, ಎಲ್ಲರ ಕಣ್ಮಣಿ ಆಗಿದ್ದ, ತನ್ನ ಗಿರಿಜಾ ಮೀಸೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದ ಮೀಸೆ ತಿಮ್ಮಯ್ಯ, ಕರ್ತವ್ಯ ನಿರತನಾಗಿದ್ದಾಗ ಬಾಲಕಿಯೊಬ್ಬಳನ್ನು ರಕ್ಷಿಸಲು ಹೋಗಿ ಅಸುನೀಗಿ, ಕಾಲು ಶತಮಾನದ ನಂತರ, ಅವನ ಪುತ್ಥಳಿ ಸ್ಥಾಪನೆಯಾಗಿದೆ. ಮೀಸೆ ತಿಮ್ಮಯ್ಯ ನಿಧನಕ್ಕೆ ಇಡೀ ನಗರವೇ ಕಂಬನಿ ಮಿಡಿದಿತ್ತು. ಬಹುತೇಕ ಪತ್ರಿಕೆಗಳು ಒಬ್ಬ ಕಾನ್ಸ್ ಟೇಬಲ್ ನಿಧನಕ್ಕೆ ಒಂದು ಪುಟ ಮೀಸಲಿಟ್ಟಿದ್ದವು.

ಅಂದಿನ ಮುಖ್ಯಮಂತ್ರಿ ದೇವೇಗೌಡರು, ತಿಮ್ಮಯ್ಯನ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದರು. ಮುಖ್ಯಮಂತ್ರಿಯೊಬ್ಬರು ಪೋಲೀಸ್ ಪೇದೆಯೊಬ್ಬ ನಿಧನನಾದಾಗ ಮನೆಗೆ ಹೋಗಿ ಬಂದಿದ್ದು ಅದೇ ಮೊದಲಿರಬೇಕು. ತಿಮ್ಮಯ್ಯನ ಪತ್ನಿಗೆ ನೌಕರಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆ ಭರವಸೆ ತಕ್ಷಣ ಈಡೇರದಿದ್ದಾಗ, ಅಂದಿನ ಸರಕಾರ ಟೀಕೆಗೆ ಗುರಿಯಾಗಿತ್ತು.

ಅದಾಗಿ ಮೂರ್ನಾಲ್ಕು ವರ್ಷಗಳ ನಂತರ ಪತ್ನಿಗೆ ಸರಕಾರ ನೌಕರಿ ನೀಡಿತು. ಜಿಪಿಒ ವೃತ್ತಕ್ಕೆ ತಿಮ್ಮಯ್ಯನ ಹೆಸರಿಡಬೇಕು ಅಂತ ಪತ್ರಿಕೆಗಳಲ್ಲಿ ಓದುಗರು ಒತ್ತಾಯಿಸಿದಾಗ, ಸರಕಾರ ಅದನ್ನು ಸಮ್ಮತಿಸಿ, ಅವನ ಹೆಸರನ್ನಿಟ್ಟಿತು. ತಿಮ್ಮಯ್ಯ ತನ್ನ ಮೀಸೆ ಮತ್ತು ಮ್ಯಾನರಿಸಂನಿಂದ ಎಲ್ಲರ ಜನಾನುರಾಗಿಯಾಗಿದ್ದ. ಜಿಪಿಒ ವೃತ್ತ ಬಳಸಿ, ರಾಜಭವನಕ್ಕೆ ಹೋಗುವ ಗಣ್ಯರು ಅವನತ್ತ ಕೈಬೀಸುತ್ತಿದ್ದರು. ಮೀಸೆ ತಿಮ್ಮಯ್ಯನನ್ನು ನೋಡಲೆಂದೇ, ಬೆಂಗಳೂರಿಗೆ ಭೇಟಿ ನೀಡಿದ್ದ ಅಂದಿನ ಬ್ರಿಟನ್ ನ ಪ್ರಧಾನಿ ಜಾನ್ ಮೇಜರ್, ಜಿಪಿಒ ವೃತ್ತದ ಬಳಿ ವಾಹನದ ವೇಗ ತಗ್ಗಿಸಿ, ಅವನ ಮೀಸೆ ಮತ್ತು ಹಾವಭಾವ ನೋಡಿ, ಮೆಚ್ಚುಗೆಯಿಂದ ಕೈಬೀಸಿ ಹೋಗಿದು, ಆ ದಿನಗಳಲ್ಲಿ ಸುದ್ದಿಯಾಗಿತ್ತು. ಅದನ್ನು ಆತ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಜಿಪಿಒ ವೃತ್ತಕ್ಕೆ ವಿಶೇಷ ಮೆರುಗು ತಂದಿದ್ದ ಆತನನ್ನು ಪೋಲೀಸ್ ಇಲಾಖೆ ಬಹಳ ವರ್ಷಗಳ ನಂತರ ಒಮ್ಮೆ ವರ್ಗ ಮಾಡಿತ್ತು. 

ಆಗ ಸಾರ್ವಜನಿಕರಿಂದ ತೀವ್ರ ವಿರೋಧ ಬಂದು ಪುನಃ ಅವನನ್ನು ಅದೇ ಜಾಗಕ್ಕ್ರೆ ನಿಯೋಜಿಸಿತ್ತು. ಆ ವೃತ್ತ ಬಳಸಿ ಹೋಗುವ ವೃದ್ಧರಿಗೆ, ಅಂಧರಿಗೆ, ಬಾಲಕರಿಗೆ ರಸ್ತೆ ದಾಟಲು ಆತ ವಿಶೇಷವಾಗಿ ನೆರವಾಗುತ್ತಿದ್ದ. ಕುಡಿದು ವಾಹನ ಓಡಿಸುವವರಿಗೆ ಬುದ್ಧಿ ಹೇಳುತ್ತಿದ್ದ. ರಾಜ್ಯಪಾಲರು, ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ತನ್ನತ್ತ ಕೈಬೀಸುವುದರಿಂದ, ಆತ ಸದಾ ಟಿಪ್ ಟಾಪ್ ಆಗಿ ಇರುತ್ತಿದ್ದ. ಎಂಟು-ಹತ್ತು ತಾಸು ನಿಂತೇ ಇರುತ್ತಿದ್ದ.

ಇದು ಆತನ ಜನಪ್ರಿಯತೆಗೆ ಸಾಕ್ಷಿ. ಮೂಲತಃ ಕೊರಟಗೆರೆಯವನಾದ ಮರಿಚಿಕ್ಕಯ್ಯ ತಿಮ್ಮಯ್ಯ ನಾನು ‘ಕನ್ನಡ ಪ್ರಭ' ದಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ದಿನಾ ಸಿಗುತ್ತಿದ್ದ. ಇಂದು ಆತ ಬದುಕಿದ್ದರೆ, ದಿನಾ ಸಾವಿರ ಸೆಲ್ಫಿಗೆ ಫೋಸ್ ಕೊಡಬೇಕಾಗುತ್ತಿತ್ತು. ಇನ್ನು ಮುಂದೆ ಅವನ ಪುತ್ಥಳಿ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಬೇಕಷ್ಟೇ” 

ಇಂತಹ ನೂರು ಅಪರೂಪದ ಸಂಗತಿಗಳು ಒಂದು ಪುಸ್ತಕದಲ್ಲಿದೆ. ಪತ್ರಿಕೆಯಲ್ಲಿ ದಿನಾ ಪ್ರಕಟವಾಗುವ ಈ ಅಂಕಣದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ, ಸ್ಥಳಗಳ, ಮಾಹಿತಿಗಳ ಬಗ್ಗೆ ಯಾವುದೇ ಚಿತ್ರಗಳನ್ನು ಪ್ರಕಟಿಸುವುದಿಲ್ಲ. ಇದೊಂದು ಪುಟ್ಟ ಕೊರತೆ ಈ ಬರಹಕ್ಕಿದೆ. ಇದಕ್ಕೆ ಅಲ್ಲಿ ಲಭ್ಯ ಇರುವ ಸ್ಥಳಾವಕಾಶವೂ ಕಡಿಮೆ ಎಂಬ ಕಾರಣವಿರಲೂ ಬಹುದು. ಆದರೆ ಪುಸ್ತಕ ರೂಪದಲ್ಲಿ ಹೊರ ತರುವಾಗ ಸೂಕ್ತ ಚಿತ್ರಗಳೊಂದಿಗೆ ಹೊರತಂದರೆ ಇನ್ನಷ್ಟು ಅರ್ಥಪೂರ್ಣವಾಗಬಹುದು ಎನ್ನುವ ಅನಿಸಿಕೆ ಇದೆ. ಸುಮಾರು ೨೧೨ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ವಿಶ್ವೇಶ್ವರ ಭಟ್ ಅವರು ಕ್ರಿಯಾಶೀಲ ಮನಸ್ಸಿನ, ಆಪ್ತ ಸ್ನೇಹಿತ ಶ್ರೀ ಹರಿಪ್ರಕಾಶ್ ಕೋಣೆಮನೆ ಇವರಿಗೆ ಅರ್ಪಣೆ ಮಾಡಿದ್ದಾರೆ.