ಸಂವಿಧಾನ ಸೃಷ್ಟಿಯ ಕತೆ (ಭಾಗ 2)

ಸಂವಿಧಾನ ಸೃಷ್ಟಿಯ ಕತೆ (ಭಾಗ 2)

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ. 1949 ನವೆಂಬರ್ 25 ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದಾದರೆ “ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ. ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು. ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ  “Dear Sir, On behalf of the Drafting Committee… I submit  herewith the Draft of the new Constitution of  India… I have been authorized to sign the Draft… Yours truly,  B.R.AMBEDKAR".

ಖಂಡಿತ, ಹೀಗೆ ಪ್ರತಿ ಅಕ್ಷರವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26, 1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947 ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು! ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು "ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು" ಎಂದು.

ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ.  ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು. ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635. ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು. 

ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಇನ್ನು ಸೇಠ್ ಗೋವಿಂದದಾಸ್ ಎನ್ನುವವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ! ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ‘”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ... ನನಗೆ ಭರವಸೆ ಆ ಇದೆ”. ಖಂಡಿತ, ಸಂವಿಧಾನ ದಿನಾಚರಣೆಯ ಈ ಶುಭ ದಿನದಂದು ಡಾ.ಖಾಂಡೇಕರರ ಭರವಸೆ ಎಲ್ಲರದ್ದಾಗಲಿ.

(ಮುಗಿಯಿತು)

-ರಘೋತ್ತಮ ಹೊ.ಬ

(ಸಂಗ್ರಹಿಸಿದ್ದು: ಶ್ರೀರಾಮ ದಿವಾಣ, ಉಡುಪಿ)