ಸಂಶೋಧನೆಗೆ “ಹಿಮ್ಮತ್" ಬೇಕೆನ್ನುವ ಕೃಷಿಉಪಕರಣ ವಿನ್ಯಾಸಗಾರ

ಸಂಶೋಧನೆಗೆ “ಹಿಮ್ಮತ್" ಬೇಕೆನ್ನುವ ಕೃಷಿಉಪಕರಣ ವಿನ್ಯಾಸಗಾರ

ರಾಷ್ಟ್ರೀಯ ಅನುಶೋಧನ ಪ್ರತಿಷ್ಠಾನ (ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್)ನ 4ನೇ ದ್ವೈ-ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 28 ನವಂಬರ್ 2006ರಂದು ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರಿಂದ “ಜೀವನಾವಧಿ ಸಾಧನೆ ಪ್ರಶಸ್ತಿ" ಪಡೆದವರು ಶಾಮರಾವ್ ಪರ್-ಹಾಟೆ. ಇವರು ಐಟಿಐ ಅಥವಾ ಇಂಜಿನಿಯರಿಂಗ ಕಾಲೇಜಿಗೆ ಹೋಗಿ ತಂತ್ರಜ್ನಾನ ಕಲಿತವರಲ್ಲ.

"ಯಂತ್ರಗಳೇ ನನಗೆ ಅವುಗಳನ್ನು ಚಲಾಯಿಸುವುದು ಹೇಗೆಂದು ಕಲಿಸುತ್ತವೆ" ಎನ್ನುವ ಶಾಮರಾವ್ ಅವರ ಒಡನಾಟ ಯಂತ್ರಗಳೊಂದಿಗೆ ಶುರುವಾದದ್ದು ಅವರು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ. ಆಗಾಗ ಶಾಲೆಗೆ ಚಕ್ಕರ್ ಹೊಡೆಯುವುದು ಅವರ ಅಭ್ಯಾಸ. ಒಂದು ದಿನ ಅವರ ಟೀಚರ್ ಮನೆಗೆ ಬಂದೇ ಬಿಟ್ಟರು; ಶಾಮರಾವ್‌ನ ತಂದೆಗೆ ವಿಷಯ ತಿಳಿಸಿದರು. ತನ್ನ ಮಗನಿಗೆ ಶಾಲಾಪಾಠಗಳಲ್ಲ್ಲಿ ಆಸಕ್ತಿಯಿಲ್ಲ ಎಂದು ಅವರ ತಂದೆಗೆ ಸ್ಪಷ್ಟವಾಯಿತು. ಹಾಗಾಗಿ ಆತನಿಗೆ ವಾಚ್ ರಿಪೇರಿ ಕಲಿಸಲು ಶುರುವಿಟ್ಟರು. ಅಂದಿನಿಂದ ಯಂತ್ರಗಳ ಒಳಹೊರಗನ್ನು ಶ್ರದ್ಧೆಯಿಂದ ಕಲಿಯ ತೊಡಗಿದ ಶಾಮರಾವ್ ತನ್ನದೇ ಕಾರ್ಯಾಗಾರ ಆರಂಭಿಸುವ ಕನಸು ಕಂಡರು. ಅವರ ಕನಸು ನನಸಾದದ್ದು 1969ರಲ್ಲಿ. ತನ್ನ ಜೀವನಾವಧಿ ಸಾಧನೆಗೆ ಸಿಕ್ಕ ಮನ್ನಣೆ ಅವರಲ್ಲಿ ಇನ್ನಷ್ಟು ಉತ್ಸಾಹ ತುಂಬಿತು.

ಮಧ್ಯಪ್ರದೇಶದ ಚಿಂದ್‌ವಾರಾ ಜಿಲ್ಲೆಯ ರೈತನ ಮಗನಾದ ಶಾಮರಾವ್‌ಗೆ ರೈತನ ಸಮಸ್ಯೆಗಳೆಲ್ಲ ಚೆನ್ನಾಗಿ ಗೊತ್ತು. ಹಾಗಾಗಿ, ಅವುಗಳ ಪರಿಹಾರಕ್ಕಾಗಿ ಕೃಷಿ ಉಪಕರಣಗಳನ್ನು ರೂಪಿಸುವ ತುಡಿತ. ಅವರ ಆವಿಷ್ಕಾರಗಳಲ್ಲಿ ಎತ್ತುಗಳಿಂದ ಎಳೆಯಬಹುದಾದ “ಶಿವರಾಜ್" (ಇದು ಅವರ ಹಿರೇಮಗನ ಹೆಸರು) ಕೃಷಿಕರಿಗೆ ಬಹಳ ಪ್ರಯೋಜನಕಾರಿ. ಉಳುಮೆ, ಬಿತ್ತನೆ, ಕುಂಟೆ ಹೊಡೆಯುವುದು, ಕಳೆ ಕೀಳುವುದು, ನೆಲಗಡಲೆ ಕೊಯ್ಲು, ಸೋಯಾಬೀನ್ಸ್ ಕೊಯ್ಲು - ಈ ಎಲ್ಲ ಕೆಲಸಗಳಿಗೂ ಶಿವರಾಜ್ ಸೂಕ್ತ.

ಬಿತ್ತನೆಯಲ್ಲಿ ಬೀಜಗಳ ಪ್ರಮಾಣ ಮತ್ತು ಬೀಜಗಳ ನಡುವಣ ಅಂತರ ಕಾಯ್ದುಕೊಳ್ಳುವುದು ಶಿವರಾಜ್‌ನ ವಿಶೇಷತೆ. ಉಪಕರಣದ ಅಲಗು ಮಣ್ಣನ್ನು ಸೀಳುವ ಕೋನವನ್ನೂ ಇದರಲ್ಲಿ ಹೊಂದಾಣಿಕೆ ಮಾಡಲು ಸಾಧ್ಯ. ನಾಗಪುರ, ವಾರ್ಧಾ ಮತ್ತು ಚಿನ್‌ವಾರಾದ ಹಲವು ರೈತರಿಗೆ “ಶಿವರಾಜ್" ಉಪಕರಣವನ್ನು ಶಾಮರಾವ್ ಮಾಡಿಕೊಟ್ಟಿದ್ದಾರೆ. ಇದರ ಬಗ್ಗೆ ಕೃಷ್ಣನ್ ಹೇಳುತ್ತಾರೆ, “ರೈತರು ಉಪಯೋಗಿಸುವ ಉಪಕರಣಗಳಲ್ಲಿ ಹೆಚ್ಚಿನವು ಎರಡು ಅಥವಾ ಮೂರು ಸಾಲುಗಳ ಉಳುಮೆ ಮಾಡುತ್ತವೆ. ಆದರೆ ಶಿವರಾಜ್ ನಾಲ್ಕು ಸಾಲುಗಳ ಉಳುಮೆ ಮಾಡುವ ದಕ್ಷ ಉಪಕರಣ.”

1988ರಲ್ಲಿ ಪಾಂಡುರ್ನಾದಲ್ಲಿ ಸೋಯಾಬೀನ್ಸ್ ಸಂಸ್ಕರಣಾ ಘಟಕ ಶುರುವಾದಾಗ, ಅದರ ಯಂತ್ರದ ಭಾಗವೊಂದು ಕೆಲಸ ಮಾಡಲಿಲ್ಲ. ಕೊನೆಗೆ ಅದನ್ನು ಹೊಸದಾಗಿ ಮಾಡಿಕೊಟ್ಟವರು ಶಾಮರಾವ್. ಇದು ಜಪಾನಿನಲ್ಲಿ ನಿರ್ಮಿತವಾಗಿದ್ದ ಯಂತ್ರದ ಮೂಲ (ಒರಿಜಿನಲ್) ಭಾಗಕ್ಕಿಂತಲೂ ಚೆನ್ನಾಗಿ ಕೆಲಸ ಮಾಡಿತು! ಆ ಸಂಸ್ಕರಣಾ ಯಂತ್ರ ಸ್ಥಾಪನೆ ಮಾಡಿದ ಕಂಪೆನಿ ಥರ್ಮಾಕ್ಸ್. ಬಾಂಗ್ಲಾದೇಶ, ಮಲೇಷ್ಯಾ, ಪಾಕಿಸ್ತಾನ ಇತ್ಯಾದಿ ದೇಶಗಳಲ್ಲಿಯೂ ಥರ್ಮಾಕ್ಸ್ ಅಂತಹ ಸಂಸ್ಕರಣಾ ಯಂತ್ರ ಸ್ಥಾಪನೆ ಮಾಡಿತ್ತು. ಶಾಮರಾವ್ ರೂಪಿಸಿದ ಯಂತ್ರಭಾಗದ ದಕ್ಷತೆ ಮೆಚ್ಚಿಕೊಂಡ ಥರ್ಮಾಕ್ಸ್ ಕಂಪೆನಿ, ಅದನ್ನೇ ಪುನಃ ತಯಾರಿಸಲು ದೊಡ್ಡ ಸಂಖ್ಯೆಯ ಬೇಡಿಕೆ ಸಲ್ಲಿಸಿತು. 1993ರ ತನಕವೂ ಥರ್ಮಾಕ್ಸ್ ಕಂಪೆನಿಗೆ ಆ ಬಿಡಿಭಾಗ ಪೂರೈಸಿದರು ಶಾಮರಾವ್.

ಇಂತಹ ಹಲವು ಸಾಧನೆಗಳ ಸರದಾರ ಶಾಮರಾವ್. 1969ರಲ್ಲಿ 540 ಚದರಡಿ ಜಾಗದಲ್ಲಿ ನಿರ್ಮಿಸಿದ ತನ್ನ ಕಾರ್ಯಾಗಾರವನ್ನು 2006ರಲ್ಲಿ 4,500 ಚದರಡಿಗಳಿಗೆ ವಿಸ್ತರಿಸಿದರು. ಪರ್ಹಾಟೆ ಇಂಜಿನಿಯರಿಂಗ್ ವರ್ಕ್ಸ್ ಹೆಸರಿನ ಈ ಕಾರ್ಯಾಗಾರದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಹುಡುಕುವುದೇ ಶಾಮರಾಯರ ನಿರಂತರ ತಪಸ್ಸು.

ಅವರ ಹಲವಾರು ಅನುಶೋಧನೆಗಳಲ್ಲಿ ಇವು ಪ್ರಮುಖವಾದವು: ಸುಧಾರಿತ ಹನಿನೀರಾವರಿ ವ್ಯವಸ್ಥೆ, ವೆಲ್ಡಿಂಗ್ ಸ್ಪಾರ್ಕಿನಿಂದ ಕಣ್ಣು ರಕ್ಷಿಸುವ ಸಾಧನ, ಬೀಜಬಿತ್ತನೆ ಉಪಕರಣ, ವಾಹನಗಳ ಚಕ್ರಗಳ ವೋಬ್ಲಿಂಗ್ ನಿವಾರಕ, ಬಹುಬಳಕೆಯ “ಶಿವರಾಜ್" ಉಪಕರಣ. ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳ ಒತ್ತಡದಿಂದ ವಿದ್ಯುತ್ ಉತ್ಪಾದಿಸುವ ವಿಧಾನ ಅವರ ಮಗದೊಂದು ಸಂಶೋಧನೆ.

ಶಾಮರಾವ್ ಬೀಜಬಿತ್ತನೆ ಉಪಕರಣ ಅಭಿವೃದ್ಧಿ ಪಡಿಸುವಾಗ, ಕೇವಲ ಮೂರು ರೂಪಾಯಿ ಬೆಲೆಯ ಒಂದು ಬಿಡಿಭಾಗ ಬೇಕಾಗಿತ್ತು. ಆದರೆ ಅದನ್ನು ತಯಾರಿಸಲು ಅಗತ್ಯವಾದ ಡೈ ಸಿಗಲಿಲ್ಲ. ಕೊನೆಗೆ ಅದನ್ನು ಮುಂಬೈಯಿಂದ ತರಿಸಬೇಕಾಯಿತು. ಅದಕ್ಕಾಗಿ ಅವರಿಗಾದ ವೆಚ್ಚ ರೂಪಾಯಿ 12,500. ಇದನ್ನು ನೆನೆಯುತ್ತಾ ಶಾಮರಾವ್ ಹೇಳುತ್ತಾರೆ, “ಸಂಶೋಧಕನಿಗೆ ‘ಹಿಮ್ಮತ್" ಇರಬೇಕು. ಆಗ ಅಸಂಭವ ಎನಿಸಿದ್ದನ್ನೂ ಸಾಧಿಸಲು ಸಾಧ್ಯ.”

ಸಾಂಪ್ರದಾಯಿಕ ಶಿಕ್ಷಣವೇ ಭಾರತದಂತಹ ದೇಶಗಳ ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದಕ್ಕೆ ಉಜ್ವಲ ನಿದರ್ಶನ ಶಾಮರಾವ್ ಪರ್ಹಾಟೆ.

ಫೋಟೋ 1: ಶಾಮರಾವ್ ಪರ್ಹಾಟೆ
ಫೋಟೋ 2: “ಶಿವರಾಜ್" - ಹಲವು ಕೃಷಿಕೆಲಸಗಳಿಗೆ ಒಂದೇ ಉಪಕರಣ
ಫೋಟೋ ಕೃಪೆ: ಎನ್‌ಐಎಫ್.ಓಆರ್ ಜಿ.ಇನ್