ಸಂಸ್ಕೃತಿ ಆಚಾರ-ವಿಚಾರ
‘ಸಂಸ್ಕೃತಿ ಆಚಾರ-ವಿಚಾರ’ ಮನುಷ್ಯ ಜೀವನದ ಹಾದಿಯುದ್ದಕ್ಕೂ, ಭ್ರೂಣವಾಗಿ ತಾಯಿಯ ಗರ್ಭದಿಂದಲೇ ಆರಂಭವಾಗಿ, ಉಸಿರು ನಿಂತು ಚಟ್ಟಕ್ಕೇರಿ, ಪಂಚಭೂತಗಳಲ್ಲಿ ಲೀನವಾಗುವಲ್ಲಿವರೆಗೂ ಬೆನ್ನ ಹಿಂದೆಯೇ ಸಾಗಿ ಬರುವ ವಿಚಾರಗಳಾಗಿದೆ.
ಸಮ್ ಎಂದರೆ ಚೆನ್ನಾಗಿ, ಸುಂದರವಾಗಿ, ಸಾಧುವಾಗಿ, ಎಲ್ಲರೂ ಒಪ್ಪುವುಂಥ, ಕೃತಿ--ಕಾರ್ಯ, ಕೆಲಸ, ಕರ್ಮ, ಅನುಷ್ಠಾನ , ಎಲ್ಲವನ್ನೂ ಚೆನ್ನಾಗಿ ಯೋಚಿಸಿ, ಏಕಾಗ್ರತೆ, ಶೃದ್ಧೆಯಿಂದ ಕೂಡಿದ ಕಾರ್ಯ ಸಾಧನೆಯೇ *ಸಂಸ್ಕೃತಿ* ಎಂದು ವ್ಯಾಖ್ಯೆಯನ್ನು ಕೊಡಬಹುದು. ಈ ಸಂಸ್ಕೃತಿ ಎನ್ನುವ ಪದ ಚಿರಂತನ, ನಿತ್ಯ ನೂತನ, ಶಾಶ್ವತ. ಭೂಮಿ ಆಗಸ ಒಂದಾದರೂ ಬದಲಾವಣೆ ಆಗದ್ದು. ಹಾಗಾದರೆ ನಾವು ಹೇಳಬಹುದು, ಈಗ ಹಿಂದಿನ ಯಾವುದೂ ಇಲ್ಲ ಎಂಬುದಾಗಿ. ಆಚಾರ-ವಿಚಾರ ನಾವು ಸಂಸ್ಕೃತಿಯಡಿ ಮಾಡಿಕೊಂಡದ್ದು, ಅಳವಡಿಸಿದ್ದು. ಸಂಸ್ಕೃತಿ ಎಂಬುದು ಸನಾತನ ತಾಯಿ ಬೇರು. ಆಚಾರ ವಿಚಾರ ಕಾಂಡದಿಂದ ಟಿಸಿಲೊಡೆದ ಗೆಲ್ಲುಗಳು.
ನಾವು ಹೇಗೆ ನಮ್ಮ ಮನೆಯಲ್ಲಿ ಒಂದು ಕ್ರಮ, ಪದ್ಧತಿ ಅಂಥ ಅಳವಡಿಸುತ್ತೇವೆ, ಅದು ಸಂಸ್ಕೃತಿಯಡಿ ಬಂದ ಆಚರಣೆ. ಇವೆಲ್ಲವೂ ಒಂದೇ ನಾಣ್ಯದ ಮುಖಗಳು, ಒಂದೇ ಮರದ ಭಾಗಗಳು. ಬಿತ್ತಿದಂತೆ ಬೆಳೆ, ಬೆಲ್ಲ ಹಾಕಿದಷ್ಟೆ ಪಾಯಸ ಸಿಹಿಯಾಗುವುದು, ಎತ್ತುಗಳು ಹಿಂದಿನವ ಎಬ್ಬಿದಂತೆ ಮುಂದೆ ಹೋಗುವುದು ಹಾಗೆ ಇದು ಸಹ. ಒಳ್ಳೆಯ ಫಸಲು ಪಡೆಯಬೇಕೆಂದು ಬೀಜ ಹಾಕಿ, ನೀರು ಮಿತಿಮೀರಿ ಎರೆದರೆ ಕೊಳೆಯುತ್ತದೆ. ಚೆನ್ನಾಗಿ ಹಿತಮಿತವಾಗಿ ನೋಡಿದರೆ ಮೊಳಕೆಯೊಡೆದು, ಉತ್ತಮ ಫಲ ನೀಡಬಹುದು.
ನಾವು ೨೦--೩೦ ವರುಷಗಳ ಹಿಂದಕ್ಕೆ ಹೋದರೆ ಪ್ರತಿ ಮನೆಯಲ್ಲಿ ಊರಿನ ದನಗಳು ಹಟ್ಟಿ ತುಂಬಾ ಕಾಣಲು ಸಿಗುತಿತ್ತು. ಗ್ರಹಣ ಕಳೆದು ಮನೆಯ ನೆಲವನ್ನೆಲ್ಲಾ ಸೆಗಣಿಯಿಂದ ಸಾರಿಸುತ್ತಿದ್ದರು. ಮನೆಯಲ್ಲಿ ಯಾವುದೇ ಸಮಾರಂಭವಿದ್ದರೂ ಸೆಗಣಿ ಸಾರಿಸುವುದು, ಸೆಗಣಿ ನೀರು ಚಿಮುಕಿಸಿ ಶುದ್ಧ ಮಾಡುವುದು ಕಡ್ಡಾಯ. ಊಟ ಮಾಡಿದ ಸ್ಥಳಕ್ಕೆ ಸೆಗಣಿ ನೀರನ್ನು ಹಾಕಬೇಕಿತ್ತು. ಈಗ ಬಹಳ ಕಡಿಮೆ.
ಮನೆಗಳಲ್ಲಿ ತಿಂಗಳ ೩ ದಿನ ಮುಟ್ಟಾದ ಹೆಣ್ಣು ಮಕ್ಕಳು ಬೇರೆಯೇ ಇರಬೇಕಿತ್ತು. ಇದಂತೂ ಈಗ ಇಲ್ಲ ಎನ್ನಬಹುದು. ಇದಕ್ಕೆಲ್ಲ ಹಿರಿಯರು ಅವರದೇ ಆದ ಕಾರಣಗಳನ್ನು ಕೊಡುತ್ತಿದ್ದರು. ವೈಜ್ಞಾನಿಕ, ತಂತ್ರಜ್ಞಾನಗಳು ಬೆಳೆದಂತೆ ಎಲ್ಲದರಲ್ಲೂ ಬದಲಾವಣೆ ಆಯಿತು. ಅವಿಭಕ್ತ ಕುಟುಂಬಗಳೆಲ್ಲ ವಿಭಕ್ತ ಕುಟುಂಬಗಳಾಯಿತು. ಹೆಣ್ಣು ಮಕ್ಕಳು ಹೊರಗೆ ದುಡಿಯಲು ಹೋದಂತೆ ಕಾಲಕ್ರಮೇಣ ಎಲ್ಲಾ ಮರೆಯಾಯಿತು. ಹೊಂದಿಕೊಳ್ಳುವುದು ಬದುಕಿನ ಒಂದು ಅಂಗವಲ್ಲವೇ?
ಮನೆಯಿಂದಲೇ, ತಾಯಿಯಿಂದಲೇ ಆಚಾರ ವಿಚಾರಗಳು ಆರಂಭವಾಗುವುದು. ಯಾವುದೇ ಕೆಲಸ ಮಾಡಿದಾಗ, ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಕೆಟ್ಟ ಕೆಲಸ ಮಾಡಿದಾಗ, ದುರ್ಗುಣಗಳನ್ನು ಬೆಳೆಸಿಕೊಂಡಾಗ, ಬಾಲ್ಯದಲ್ಲಿಯೇ ತಿದ್ದಿ, ಬುದ್ಧಿವಾದ ಹೇಳಿ ಸರಿಪಡಿಸಬೇಕು. ಬರೇ ಪುಸ್ತಕದ ವಿಚಾರ ಸಾಕಾಗದು. ಬದುಕಿನ ಹಾದಿಯಲ್ಲಿ, "ಇದು ತಪ್ಪು, ಇದು ಸರಿ"ಎಂದು ತಿದ್ದಿ ಹೇಳಬೇಕು.
ಈ ರೀತಿಯ ಬಾಲಪಾಠಗಳು ಸಿಕ್ಕಿದ ಮಗು, ಮುಂದೆ ಉತ್ತಮ ವ್ಯಕ್ತಿತ್ವ ಹೊಂದಬಲ್ಲ. ಬಾಲಕ ನರೇಂದ್ರ (ಸ್ವಾಮಿ ವಿವೇಕಾನಂದರು), ರಾಮಕೃಷ್ಣ ಪರಮಹಂಸ, ಶಾರದಾ ಮಾತೆ, ಛತ್ರಪತಿ ಶಿವಾಜಿ, ಅಷ್ಟೇ ಏಕೆ ಮಹಾ ತತ್ವಜ್ಞಾನಿ, ದಾರ್ಶನಿಕ, ಧರ್ಮಗಳ ಮರ್ಮವರಿತ ಆದಿಶಂಕರರು ಇವರೆಲ್ಲ ಸಂಸ್ಕೃತಿ ,ಆಚಾರ ವಿಚಾರದ ಪ್ರತಿಪಾದಕರು, ಬಾಲ್ಯಕಾಲದ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿ, ಮುಂದೆ ಸಮಾಜದಲ್ಲಿ ಪ್ರತಿಪಾದಿಸಿದವರು. ನಡವಳಿಕೆ, ನಂಬಿಕೆ ನಮ್ಮ ಧರ್ಮಗಳ ಸಾರ.ಧರ್ಮವೆಂಬುದು ನಮ್ಮ ದೇಹದ ಆತ್ಮವಿದ್ದಂತೆ.
ದೇಶೀ ಸಂಸ್ಕೃತಿಯನ್ನು ಬಿತ್ತಿ ಒಳ್ಳೆಯ ಪ್ರಜೆಯನ್ನಾಗಿಸುವುದು, ಪ್ರತಿಯೊಬ್ಬ ಹೆತ್ತವರ ಕರ್ತವ್ಯ. ಬದಲಾವಣೆ ಜಗದ ನಿಯಮ ಸರಿ, ಒಪ್ಪಿ ಹೊಂದಾಣಿಕೆಯೊಂದಿಗೆ ಸಾಗಬೇಕು. ಸಮಾಜದ ಅಭಿವೃದ್ಧಿಯಾಗಬೇಕಾದರೆ ನಡೆ ನುಡಿ, ಆಚಾರ ವಿಚಾರ, ಶುದ್ಧತೆ, ಬದ್ಧತೆ, ಸತ್ಯ, ನ್ಯಾಯ, ಪ್ರಾಮಾಣಿಕತೆ, ಧ್ಯೇಯ, ಗುರಿ, ಗೌರವ ಕೊಂಡುಕೊಳ್ಳುವಿಕೆ ಎಲ್ಲವೂ ಮನುಜನಲ್ಲಿ ತುಂಬಿರಬೇಕು, ವರ್ತನೆಯಲ್ಲಿ ಕಾಣಬೇಕು.
ಗುರು ಹಿರಿಯರನ್ನು ಗೌರವದಿಂದ ಕಾಣುವುದು, ಹೆತ್ತವರನ್ನು ಕಡೆಗಣಿಸದಿರುವುದು, ಒಡಹುಟ್ಟುಗಳನ್ನು ಪ್ರೀತಿಸುವುದು, ಪಶುಪಕ್ಷಿ ಪ್ರಾಣಿಗಳಲ್ಲಿ ದಯೆ ಇರುವುದು, ಪರಿಸರ ಪ್ರೀತಿ ಇವೆಲ್ಲವನ್ನೂ ಅಳವಡಿಸಿ, ಆಚರಣೆಯಲ್ಲಿ ತರುವಂತೆ ನಮ್ಮ ಬದುಕಿನ ಹಾದಿ ಇರಬೇಕು.
‘ಹೇಳುವುದು ಮಾತ್ರ, ಇಕ್ಕುವುದು ಗಾಳ’ ಹಾಗಿರಬಾರದು "ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ"ಅಲ್ಲವೇ? ಮೊದಲು ನಾವು ಆಚರಣೆ ಮಾಡಿ ಇತರರಿಗೆ ಹೇಳಬೇಕು. ದೊಡ್ಡವರೆದುರು, ಗುರುಗಳೆದುರು ಕಾಲಮೇಲೆ ಕಾಲುಹಾಕಿ ಕೂರುವುದು ಸಭ್ಯತೆ ಅಲ್ಲ. ಪುಟ್ಟ ಮಕ್ಕಳಿಗೆ ಅದನ್ನು ತಿಳಿ ಹೇಳಬಹುದು.ಹೆಣ್ಣು ಮಕ್ಕಳಿಗೆ ತಿಲಕ, ಕೈಬಳೆ, ಹೂವು ಇದೆಲ್ಲಾ ಲಕ್ಷಣ. ಆದರೆ ಈಗ ತದ್ವಿರುದ್ಧ. ಕಾರಣರಾರು ಎಂದು ಕೇಳಿದರೆ ನಾವೇ. ಹೇಳುತ್ತಾ ಬಂದರೆ ಅಭ್ಯಾಸವಾಗುತ್ತದೆ. ದುಶ್ಚಟಗಳಿಗೆ ಮಾರುಹೋಗದಿರುವುದು. ಭಗವಂತನನ್ನು ಶೃದ್ಧಾಭಕ್ತಿಯಲ್ಲಿ ಪ್ರಾರ್ಥಿಸುವುದು, ಸಂಜೆ ಭಜನೆ ಮಾಡುವುದು, ಒಳ್ಳೆಯ ಅಭ್ಯಾಸಗಳನ್ನು ಮಾಡಿಸುವುದು ಇದೆಲ್ಲಾ ಮನೆಯಲ್ಲಿರುವ ಹಿರಿಯರ ಕರ್ತವ್ಯ ಮತ್ತು ಜವಾಬ್ದಾರಿ. ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಿ ಮನೆ, ಕುಟುಂಬ, ಪರಿಸರ, ದೇಶವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯೋಣ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ