ಸಂಸ್ಕೃತ ದಿನಪತ್ರಿಕೆ "ಸುಧರ್ಮ"

ಸಂಸ್ಕೃತ ದಿನಪತ್ರಿಕೆ "ಸುಧರ್ಮ"

ಬರಹ

aw
ಕಳೆದ ಸುಮಾರು ನಲುವತ್ತು ವರ್ಷಗಳಿಂದ ಮೈಸೂರಿನಿಂದ ಸಂಸ್ಕೃತ ಪತ್ರಿಕೆಯೊಂದು ಪ್ರಕಟವಾಗುತ್ತಿದೆ. ಈಗದು ಅಂತರ್ಜಾಲ ಆವೃತ್ತಿಯನ್ನೂ ಹೊಂದಿ http://sudharma.epapertoday.com ತಾಣದಲ್ಲಿ ಲಭ್ಯ.ಕೆ ವಿ ಸಂಪತ್‌ಕುಮಾರ್ ಈ ಪತ್ರಿಕೆಯ ಸಂಪಾದಕರು. ವರ್ಷಕ್ಕೆ ಇನ್ನೂರೈವತ್ತು ರುಪಾಯಿ ಚಂದಾ ಹಣದಿಂದ ನಡೆಯುತ್ತಿರುವ ಪತ್ರಿಕೆ ಇದೀಗ ಅಂತರ್ಜಾಲ ಜಾಹೀರಾತುಗಳಿಂದ ಆದಾಯ ಗಳಿಸಲು ಪ್ರಯತ್ನಿಸುತ್ತಿದೆ.ಸೀಮಿತ ಪ್ರಸಾರ ಹೊಂದಿ, ಅಂಚೆಯ ಮೂಲಕ ಬಟವಾಡೆಯಾಗ ಬೇಕಿದ್ದ ಪತ್ರಿಕೆ ಈಗ ಅಂತರ್ಜಾಲ ಆವೃತ್ತಿಯ ಮೂಲಕ ಹೆಚ್ಚು ಜನರನ್ನು ಮುಟ್ಟಲು ಸಾಧ್ಯವಿದೆ.
-------------------------------------------
ಚಂದ್ರನ ಮೇಲ್ಮೈಯಲ್ಲಿ ನೀರಿದೆಯೇ?
ಚಂದ್ರನ ಮೇಲೆ ನೀರಿದೆಯೇ ಎನ್ನುವ ಪ್ರಶ್ನೆಗಿನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಚಂದ್ರನ ಮೇಲಿನ ತಾಪದ ಕಾರಣ ಅಲ್ಲಿ ನೀರು ಇದ್ದರೂ ತಕ್ಷಣ ಆವಿಯಾಗಿ ಹೋಗುವುದು ನಿಶ್ಚಿತ. ಆದರೆ ಚಂದ್ರನ ಧ್ರುವ ಪ್ರದೇಶಗಳಲ್ಲಿ ಯವತ್ತೂ ಬಿಸಿಲು ಬೀಳದ ಭಾಗಗಳೂ ಇವೆ. ಇಲ್ಲಿ ಬಂಡೆಯ ಕೊರಕಲುಗಳಲ್ಲಿ ನೀರು ಮಂಜುಗಡ್ಡೆಯಾಗಿ ಇದೆಯೇ ಎಂಬ ಸಂಶಯ ಅಮೆರಿಕಾದ ಬಾಹ್ಯಾಕಾಶ ವಾಹನವು ತೊಂಭತ್ತರ ದಶಕದ ಆರಂಭದಲ್ಲಿ ತೆಗೆದ ಚಿತ್ರಗಳ ಕಾರಣ ಬಂದಿದೆ. ಜಪಾನಿನ ಕಾಗುಯ ಚಂದ್ರನ ಶೋಧ ವಾಹನ ತೆಗೆದ ಚಿತ್ರಗಳು ಮಂಜುಗಡ್ಡೆಯ ಇರುವಿಕೆ ಬಗ್ಗೆ ಹೊಸ ಚರ್ಚೆ ಎಬ್ಬಿಸಿದೆ. ಈಗ ಲಭ್ಯವಿರುವ ಧ್ರುವ ಪ್ರದೇಶದ ಹೊಸ ಚಿತ್ರಗಳು, ಮೊದಲು ತೆಗೆದ ಚಿತ್ರಗಳಿಗಿಂತ ಹೆಚ್ಚಿನ ಪ್ರಕಾಶ ಲಭ್ಯವಿರುವಾಗ ತೆಗೆದ ಚಿತ್ರಗಳಾಗಿವೆ. ಜಪಾನಿ ವಿಜ್ಞಾನಿಗಳು  ಚಂದ್ರನ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆ ಇರುವಷ್ಟು ಕಡಿಮೆ ಉಷ್ಣತೆ ಇದೆಯಾದರೂ, ಅಲ್ಲಿ ನೀರಿನ ಇರುವಿಕೆಯ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಒಂದು ವೇಳೆ ಮಂಜುಗಡ್ಡೆ ಇದ್ದರೂ,ಅದು ಚಿತ್ರದ ಸ್ಪಷ್ಟತೆಯಾದ ಹತ್ತು ಮೀಟರ್ ಪ್ರದೇಶಕ್ಕಿಂತ ಕಡಿಮೆ ಪ್ರದೇಶದಲ್ಲಿ ವ್ಯಾಪಿಸಿರಬಹುದು ಎಂದವರು ವ್ಯಾಖ್ಯಾನಿಸಿದ್ದಾರೆ.
ಈ ನಿಟ್ಟಿನಲ್ಲಿ ಚಂದ್ರಯಾನದ ಮಿನಿಸ್ಯಾರ್ ರಾಡಾರ್ ಚಂದ್ರನ ಧ್ರುವ ಪ್ರದೇಶಗಳ ಮೇಲೆ ಬಹಳ ಸಮೀಪದಿಂದ ಹೋಗುತ್ತಾ, ಅಲ್ಲಿನ ಕೊರಕಲುಗಳ ಆಳದಲ್ಲಿ ಏನಿದೆ ಎಂದು ಗಮನಿಸಲಿದೆ. ಅದರ ಆಧಾರದಲ್ಲಿ ನಮ್ಮ ವಿಜ್ಞಾನಿಗಳು ಖಚಿತವಾಗಿ ಈ ಕಗ್ಗಂಟನ್ನು ಬಿಡಿಸಲು ಸಫಲರಾಗುವುದು ನಿಶ್ಚಿತ.
--------------------------------------------------
ಜಾಣ ಮರೆವು ಸಾಧ್ಯ!aw
ಆಯ್ದ ಸಂಗತಿಗಳನ್ನಷ್ಟೇ  ಮರೆಯುವಂತೆ ಮಾಡಬಹುದೇ ಎನ್ನುವುದಕ್ಕೆ ಒಂದು ಉತ್ತರವಂತೂ ವಿಜ್ಞಾನಿಗಳಿಗೆ ಸಿಕ್ಕಿದೆ.ಜಾರ್ಜಿಯಾದ ಮೆಡಿಕಲ್ ಕಾಲೇಜಿನ ಸಂಶೋಧಕರು ಇಲಿಗಳ ಮೇಲೆ ಪ್ರಯೋಗ ಮಾಡಿ ನೆನಪಿನ ಶಕ್ತಿಯನ್ನು ಕುಂದಿಸಲು ಕಾರಣವಾದ ಹಾರ್ಮೋನ್ ಯಾವುದೆಂದು ಪತ್ತೆ ಹಚ್ಚಲು ಸಫಲರಾಗಿದ್ದಾರೆ.ಕೈನೇಸ್ ಎನ್ನುವ ಹಾರ್ಮೋನನ್ನು ಇಲಿಯಲ್ಲಿ ಹೆಚ್ಚು ಸ್ರವಿಸುವಂತೆ ಮಾಡಿದಾಗ ಇಲಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡುವು. ಈ ಇಲಿಗಳು ಒಂದು ನಿಗದಿತ ಗೂಡು ಮತ್ತು ಸದ್ದನ್ನು ಆಲಿಸಿದ ಕೂಡಲೇ ಭಯದಿಂದ ನಿಂತು ಬಿಡುವಂತೆ ತರಬೇತಿ ಕೊಡಲಾಯಿತು.ಬಳಿಕ ಈ ಕಿಣ್ವವನ್ನು ಹೆಚ್ಚು ಸ್ರವಿಸುವಂತೆ ಮಾಡಿದ ಬಳಿಕ, ಇದೇ ಪರಿಸ್ಥಿಯಲ್ಲಿಯೂ ಇಲಿಗಳು ಗಾಬರಿ ಬೀಳದ್ದು ಕಂಡು ಬಂತು. ಅಂದರೆ, ಇಲಿಗಳು ತಮ್ಮ ವರ್ತನೆಯನ್ನು ಮರೆತವು ಎಂದಾಯಿತು.ಕೈನೇಸ್ ಕಿಣ್ವವು ಮನುಷ್ಯರಲ್ಲೂ ಇದೆಯಾದ್ದರಿಂದ ಮನುಷ್ಯರು ಬೇಕಾದ ಸಂಗತಿಗಳನ್ನು ಮರೆವಂತೆ ಮಾಡಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.ಬಳಿಕ ಈ ಮರೆವು ತಾತ್ಕಾಲಿಕವೋ ಎಂದು ನೋಡಲು ವಿಜ್ಞಾನಿಗಳು ಕಿಣ್ವವನ್ನು ಕಡಿಮೆ ಸ್ರವಿಸುವಂತೆ ಮಾಡಿದರೂ ಮರೆವಿನಲ್ಲಿ ಯಾವ ಬದಲಾವಣೆಯೂ ಆಗದ್ದು ಕಂಡು ಬಂತು.ಈ ಕಿಣ್ವವು ಹೆಚ್ಚಿದ್ದಾಗಲೂ ಬೆಕ್ಕಿಗೆ ಬೆದರುವ ನಡತೆಯನ್ನು ಇಲಿಗಳು ಮರೆಯದೆ ಇದ್ದ ಕಾರಣ,ಕೈನೇಸ್ ಸೀಮಿತ ಪರಿಣಾಮವನ್ನಷ್ಟೇ ಹೊಂದಿದೆ ಎನ್ನುವುದು ದೃಢ ಪಟ್ಟಿತು.
----------------------------------------------
ಗೊರಿಲ್ಲಾಕ್ಕೆ ಸಂಗಾತಿ ಬೇಕು! aw
ಮೈಸೂರು ಮೃಗಾಲಯದ ಗೊರಿಲ್ಲಾ ಪೋಲೋ ಭಾರತದ ಏಕೈಕ ಗೊರಿಲ್ಲಾ ವಾನರ. ಎರಡು ಸಾವಿರನೆಯ ಇಸವಿಯಲ್ಲಿ ಇದರ ಜತೆಗಾರ್ತಿ ಸುಮತಿ ನಿಧನವಾಯಿತು. ಬಳಿಕ ಈ ಗೊರಿಲ್ಲಾಗೆ ಕಂಪೆನಿಯೇ ಇಲ್ಲವಂತೆ. ಡಬ್ಲಿನ್‌ನಿಂದ ಭಾರತಕ್ಕೆ ಬಂದ ಗೊರಿಲ್ಲಾನಿಗೆ ಸಂಗಾತಿಯನ್ನು ಎಲ್ಲಾ ಮೃಗಾಲಯಗಳಲ್ಲಿ ಅರಸಲಾಗಿದೆ. ಆದರಿದು ಫಲಕೊಟ್ಟಿಲ್ಲ.ಏಕಾಂಗಿಯಾಗಿರುವುದು, ಗೊರಿಲ್ಲಕ್ಕೆ ಮಾನಸಿಕ ಸಮಸ್ಯೆಗಳನ್ನು ತರಬಹುದ್ದಾದ್ದರಿಂದ ಅದರ ಸಂಗಾತಿಯನ್ನು ಕಂಡುಕೊಳ್ಳಲು ವಿಶ್ವದ ಹೆಚ್ಚಿನ ಮೃಗಾಲಯಗಳಿಗೆ ಸಂದೇಶ ಹೋಗಿದೆಯಂತೆ.
--------------------------------------------
ಗಂಟೆಗೆ ಸಾವಿರ ಮೈಲಿ ಕ್ರಮಿಸುವ ಕಾರು ಬರಲಿದೆ!AW

ಒಂದು ಗಂಟೆಗೆ ಸಾವಿರ ಮೈಲಿ ವೇಗದಲ್ಲಿ ಚಲಿಸುವ ಬ್ಲಡ್‌ಹೌಂಡ್ ಸೂಪರ್ ಸೋನಿಕ್ ವೇಗದ ಕಾರು ಬರಲಿದೆ ಇನ್ನು ಮೂರು ವರ್ಷಗಳಲ್ಲಿ ಈ ದಾಖಲೆ ಸಾಧ್ಯವಾಗಬಹುದು ಎಂದು ಭಾವಿಸಲಾಗಿದೆ. ಇದರಲ್ಲಿ ರಾಕೆಟ್ ತಂತ್ರಜ್ಞಾನಕ್ಕೆ ಹೋಲುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ.ಇದನ್ನು ಓಡಿಸಲು ಮರಳುಗಾಡಿನಂತಹ ಸಸ್ಯಗಳಿಲ್ಲದ ತಾಣಗಳಿಗಾಗಿ ಹುಡುಕಾಟ ನಡೆದಿದೆ. ಅಲ್ಲಿ ನೀರಿನ ಪಸೆಯೂ ಇರಬಾರದು. ಹತ್ತು ಮೈಲು ಸ್ಥಳಾವಕಾಶವಾದರೂ ಇರಬೇಕು. ಅಮೆರಿಕಾದ ಎಂಟು,ಆಸ್ಟ್ರೇಲಿಯಾದ ನಾಲ್ಕು ತಾಣಗಳನ್ನು ಗುರುತಿಸಲಾಗಿದೆ.ಅಂತಿಮ ಆಯ್ಕೆಯಿನ್ನೂ ಆಗಬೇಕಿದೆ.ಇದರ ಉದ್ದ ಹನ್ನೆರಡ್ ಮೀಟರಿಗಿಂತ ಹೆಚ್ಚಿದ್ದು ತೂಕ ಆರೂವರೆ ಟನ್ ಇರಬಹುದು.ಇದನ್ನು ಚಲಾಯಿಸಲು ಆಂಡಿ ಗ್ರೀನ್ ಎಂಬ ಪೈಲಟ್ ಆಯ್ಕೆಯಾಗಿದ್ದಾನೆ.
-------------------------------------------
ಅಗ್ಗದ ಚಂದ್ರಯಾನ
ಭಾರತ ಚಂದ್ರಯಾನಕ್ಕೆ ಮುನ್ನೂರ ಎಂಭತ್ತು ಕೋಟಿ ರುಪಾಯಿಗಳಷ್ಟು ಖರ್ಚು ಮಾಡಿದ್ದಕ್ಕೆ ಆಕ್ಷೇಪ ಎತ್ತುವವರು ಇದ್ದಾರೆ. ನಮ್ಮಂತಹ ಬಡದೇಶ ಇಂತಹ ಪ್ರಯೋಗಗಳಿಗೆ ಕೋಟಿಗಟ್ಟಲೆ ಸುರಿಯಬೇಕೇ ಎನ್ನುವ ಚರ್ವಿತ ಚರ್ವಣ ವಾದ ಇದ್ದೇ ಇದೆ.ವಿಶ್ವದಲ್ಲಿ ಭಾರತ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು, ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳುವಲ್ಲಿ, ಚಂದ್ರನ ಮೇಲೆ ವಸಾಹತು ಸ್ಥಾಪನೆಗೆ ಹಕ್ಕು ಸ್ಥಾಪಿಸಲು ಮುಂತಾದ ದೃಷ್ಟಿಗಳಿಂದ ನೋಡಿದರೆ, ಚಂದ್ರಯಾನಕ್ಕೆ ಅಷ್ಟು ಹಣ ಖರ್ಚು ಮಾಡುವುದನ್ನು ಟೀಕಿಸುವುದು ಸರಿಯಲ್ಲ. ಹಾಗೆ ನೋಡಿದರೆ ಭಾರತ ಅದಕ್ಕೆ ವ್ಯಯಿಸಿದ ಹಣ ಇತರ ದೇಶಗಳಿಗೆ ಹೋಲಿಸಿದರೆ ಬಹು ಕಡಿಮೆ. ಅಮೆರಿಕಾದಲ್ಲಾದರೆ,ಇದಕ್ಕೆ ಇದರ ಐದು ಪಟ್ಟು ಖರ್ಚು ಬರುತ್ತಿತ್ತು. ಅವರು ಆರು ಬಾರಿ ಪರೀಕ್ಷಿಸಿ,ಖಚಿತ ಪಡಿಸಿಕೊಳ್ಳುವುದನ್ನು ನಾವು ಮೂರೇ ಸಲ ಮಾಡಿ,ಖರ್ಚು ಕಡಿಮೆ ಮಾಡಿದ್ದೇವೆ.ಅದರರ್ಥ ನಾವು ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಅಂತೇನಲ್ಲ. ಅದಲ್ಲದೆ ಹೆಚ್ಚಿನ ಭಾಗಗಳು ಈಗಾಗಲೇ ಅಭಿವೃದ್ಧಿ ಪಡಿಸಿ, ಇತರ ಉಡ್ಡಯಣಗಳಲ್ಲಿ ಬಳಕೆಯಾದ್ದದ್ದೇ ಆಗಿವೆ.ಉದಾಹರಣೆಗೆ ಪಿಎಸೆಲ್ವಿ ರಾಕೆಟ್. ಅದರ ವಿನ್ಯಾಸವನ್ನು ಹಿಂದಿನ ಉಡಯಣಗಳಲ್ಲಿ ಬಳಕೆಯಾದಂತೆ ಉಳಿಸಿಕೊಳ್ಳಲಾಗಿದೆ. ಇಸ್ರೋದ ಸದ್ಯದ ಬಜೆಟ್ ವಾರ್ಷಿಕ ಐದು ಸಾವಿರ ಕೋಟಿ ರುಪಾಯಿಗಳು. ಇತರರ ಉಪಗ್ರಹವನ್ನು ಕಕ್ಷೆಗೇರಿಸುವ ಮೂಲಕ ಮತ್ತು ರಿಮೋಟ್ ಸೆನ್ಸಿಂಗ್ ಮಾಹಿತಿಯನ್ನು ಇತರರ ದೇಶಗಳ ಜತೆ ಹಂಚಿಕೊಂಡು ಇಸ್ರೋ ಆದಾಯವನ್ನೂ ಗಳಿಸುತ್ತಿದೆ. ಈಗಿನ ಉಡಾವಣೆ ಇಸ್ರೋ ಇಮೇಜ್ ಸುಧಾರಿಸಿ, ಅದರ ಹೆಚ್ಚು ಹೊರಗುತ್ತಿಗೆ ವ್ಯವಹಾರಗಳನ್ನು ದೊರಕಿಸಿಕೊಡಲಿದೆ.ಇಸ್ರೋದ ಚಂದ್ರಯಾನದಲ್ಲಿ ಒಂದು ಸಾವಿರ ವಿಜ್ಞಾನಿಗಳು ಮೂರು ವರ್ಷ ಕಾಲ ದುಡಿದಿದ್ದಾರೆ. ಅವರುಗಳು ಗಳಿಸಿರುವ ಈ ಯಶಸ್ಸು,ಅವರ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. ಅದರಿಂದಾಗುವ ಲಾಭವನ್ನು ಅಳೆಯುವುದು ಹೇಗೆ?

*ಅಶೋಕ್‌ಕುಮಾರ್ ಎ

ಇ-ಲೋಕ  (27/10/2008)

udayavani

ashokworld