ಸಂಸ್ಕೃರಿತ ಆಹಾರದ ಬಗ್ಗೆ ಜೋಕೆ !
ಇಂದು ಡಿಢೀರ್ ಆಹಾರದ (ಫಾಸ್ಟ್ ಫುಡ್) ಯುಗ. ಮಕ್ಕಳಿರಲಿ, ಯುವಜನಾಂಗವೂ ಸಂಪೂರ್ಣವಾಗಿ ಫಾಸ್ಟ್ ಫುಡ್ ಗೆ ಜೋತು ಬಿದ್ದಿದೆ. ಗಂಡ-ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರಂತೂ ಮುಗಿಯಿತು ಬಿಡಿ. ಫಾಸ್ಟ್ ಫುಡ್ಡೇ ಅವರಿಗೆ ಗತಿ! ಅಲ್ಲದೆ ಅವರ ಆದಾಯದ ಕಾಲು ಭಾಗವಾದರೂ ಫಾಸ್ಟ್ ಫುಡ್ ಗೆ ಹೋಗಿ ಬಿಡುತ್ತದೆ. ಹಣ ಹೋದರೆ ಹೋಗಲಿ ಬಿಡಿ, ಆದರೆ ಅವರ ಆರೋಗ್ಯ ?
ಏಕೆಂದರೆ ಇಂದು ಸಂಸ್ಕೃರಿತ ಆಹಾರದಲ್ಲಿ ೧೪ ಸಾವಿರ ಮಾನವನಿರ್ಮಿತ ಕೃತಕ ರಾಸಾಯನಿಕಗಳು ಬಳಕೆಯಾಗುತ್ತಿವೆ. ಇವು ನಿಜಕ್ಕೂ ಸ್ವಾಭಾವಿಕ ಜೀರ್ಣಕಾರಿಗಳಲ್ಲ. ಇಂದು ಫಾಸ್ಟ್ ಫುಡ್ ಮತ್ತು ಇತರೆ ಸಂಸ್ಕೃರಿತ ಆಹಾರ ಪದಾರ್ಥಗಳಲ್ಲಿ ಬಳಸುವ ರಾಸಾಯನಿಕಗಳು ಮಾನವನ ಆರೋಗ್ಯವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಇಂದು ನಾವು ಅನುಭವಿಸುತ್ತಿರುವ ಹೆಚ್ಚಿನ ರೋಗಿಗಳು ಇವುಗಳದೇ ಕೊಡುಗೆ ! ಅಂತಹ ಕೆಲವು ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…
ಏಸ್ ಸಲ್ಫೇಮ್ ಕೆ (acesulfame k): ಇದೊಂದು ಕೃತಕ ಸಕ್ಕರೆ. ಇದು ಮಾತ್ರೆಗಳ ರೂಪದಲ್ಲಿ ಅಥವಾ ಚಿಕ್ಕ ಪೊಟ್ಟಣಗಳಲ್ಲಿ ಸಿಗುತ್ತದೆ. ನೀವು ಗಂಟೆಗಟ್ಟಲೆ ಜಗಿಯುವ ಬಬಲ್ ಗಂ, ತಂಪು ಪಾನೀಯಗಳು, ಇನ್ಸ್ಟಂಟ್ ಕಾಫಿ-ಟೀ, ಚಾಕಲೇಟ್ ಗಳು, ಡೈರಿ ಉತ್ಪನ್ನಗಳು, ನೀವು ತಿನ್ನುವ ಕುರುಕಲು ತಿಂಡಿಗಳಲ್ಲಿ ಇದನ್ನು ಯಥೇಚ್ಛವಾಗಿ ಬಳಕೆ ಮಾಡುತ್ತಾರೆ. ಇದು ನಿಮ್ಮ ಹಲ್ಲುಗಳ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಇತ್ತೀಚೆಗೆ ಈ ರಾಸಾಯನಿಕಗಳನ್ನು ಪ್ರಾಣಿಗಳ ಮೇಲೆ ಬಳಸಿದಾಗ ಇದರಿಂದ ಕ್ಯಾನ್ಸರ್ ಬರುವುದು ಸಬೀತಾಗಿದೆ. ಆದ್ದರಿಂದ ‘ಏಸ್ ಸಲ್ಫೇಮ್ ಕೆ' ಬಳಸದೇ ಇರುವುದು ಒಳ್ಳೆಯದು.
ಕೃತಕ ಬಣ್ಣಗಳು: ಇಂದು ಸಂಸ್ಕರಿತ ಆಹಾರ ಪದಾರ್ಥಗಳಲ್ಲಿ ಬಳಸುವ ಬಹುಮಟ್ಟಿನ ಬಣ್ಣಗಳು ಕೃತಕ ರಾಸಾಯನಿಕ ಬಣ್ಣಗಳು. ಹಿಂದೆ ಬಹಳಷ್ಟು ಬಣ್ಣಗಳನ್ನು ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರಿಸುತ್ತಿದ್ದರು. ಅವು ಕ್ಯಾನ್ಸರ್ ತರುವಂಥ ವಸ್ತುಗಳು ಎಂದು ಗೊತ್ತಾದ ಮೇಲೆ ಇಂದು ಅವುಗಳ ಪೈಕಿ ಹೆಚ್ಚಿನವನ್ನು ಬಹಿಷ್ಕರಿಸಲಾಗಿದೆ. ಆದರೆ ನೆನಪಿಡಿ, ಯಾವುದೇ ರಾಸಾಯನಿಕ ಬಣ್ಣ ಆರೋಗ್ಯಕ್ಕೆ ಮಾರಕ. ಯಾವುದೇ ರಾಸಾಯನಿಕ ಬಣ್ಣ ಪೌಷ್ಟಿಕ ಆಹಾರವಲ್ಲ. ಆದ್ದರಿಂದ ಕೃತಕ ಬಣ್ಣಗಳನ್ನು ಬಳಸದೆ ಇರುವ ಆಹಾರ ಪದಾರ್ಥಗಳನ್ನು ಬಳಸುವುದೇ ಯೋಗ್ಯ ಮಾರ್ಗ.
ಆಸ್ ಪಾರ್ಟೇಮ್ (aspartame) : ಇದು ಇನ್ನೊಂದು ತರಹದ ಕೃತಕ ಸಕ್ಕರೆ. ಸಾಮಾನ್ಯವಾಗಿ ಪಥ್ಯ ಮಾಡುವವರು ಇದನ್ನು ಬಳಸುತ್ತಾರೆ. ಇದು ಸ್ಯಾಕರೀನ್ ಬದಲು ಬಳಸುವ ಒಂದು ಸಿಹಿ ರಾಸಾಯನಿಕ. ಇದನ್ನು ಬಳಸುವುದರಿಂದ ಬರುವ ಸಮಸ್ಯೆಗಳು ಹತ್ತಾರು. ಇದರಲ್ಲಿರುವ ಪ್ರಮುಖ ರಾಸಾಯನಿಕ ಫೀನೆಲ್ ಕೆಟೊನ್ಸುರಿಯಾ. ಇದನ್ನು ಬಳಸಿದ ಸುಮಾರು ೨೦ ಸಾವಿರ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಿದೆ. ಅಲ್ಲದೆ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮವನ್ನು ಉಂಟುಮಾಡಿರುವುದು ಧೃಢಪಟ್ಟಿದೆ. ಇದನ್ನು ಬಳಸುವ ವಯಸ್ಕರಲ್ಲಿ ತೀವ್ರ ತಲೆನೋವು, ತಲೆಸುತ್ತು ಮತ್ತು ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಸ್ಯೆಗಳು ಕಂಡು ಬಂದಿವೆ. ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಇದರಿಂದ ದೂರವಿರುವುದು ಒಳ್ಳೆಯದು.
ಬ್ಯೂಟಿಲೇಟೆಡ್ ಹೈಡ್ರಾಕ್ಸಿಯಾನಿಸೋಲ್ (ಬಿ ಎಚ್ ಎ) ಮತ್ತು ಬ್ಯೂಟ್ರಿಲೇಟೆಡ್ ಹೈಡ್ರಾಕ್ಸಿಟಾಲೀನ್ (ಬಿ ಎಚ್ ಟಿ): ಈ ಬಿ ಎಚ್ ಎ ಮತ್ತು ಬಿ ಎಚ್ ಟಿ ರಾಸಾಯನಿಕಗಳನ್ನು ನಾವು ಬಳಸುವ ಎಣ್ಣೆಗಳು ಕೆಟ್ಟ ವಾಸನೆ ಬರದೆ ಇರಲು ಹಾಗೂ ಬಹಳ ಕಾಲ ಕೆಡದಂತೆ ಬಳಸಲಾಗುತ್ತದೆ. ಈ ಎರಡು ರಾಸಾಯನಿಕಗಳೂ ಕ್ಯಾನ್ಸರ್ ನಂತಹ ರೋಗಗಳನ್ನು ತರುವುದು ಸಾಬೀತಾಗಿದೆ. ಮುಂದೆ ನೀವು ಯಾವುದೇ ಅಡುಗೆ ಎಣ್ಣೆ ಪ್ಯಾಕೇಟ್ ಅನ್ನು ಖರೀದಿಸುವಾಗ ಬಿ ಎಚ್ ಎ ಅಥವಾ ಬಿ ಎಚ್ ಟಿ ಗಳಿಲ್ಲ ಎಂಬುದನ್ನು ಖಾತರಿ ಪಡಿಸಿ.
ಕೆಫೀನ್ (caffeine): ಸಾಮಾನ್ಯವಾಗಿ ಈ ಕೆಫೀನ್ ಕಾಫಿ, ಟೀ ಮತ್ತು ಕೋಕ್ ಗಳಲ್ಲಿ ಕಂಡುಬರುತ್ತದೆ. ತಂಪು ಪಾನೀಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಕೆಫೀನ್ ನಮ್ಮ ಹೊಟ್ಟೆಯಲ್ಲಿ ಹೆಚ್ಚು ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪಾದಿಸಿ ಪೆಪ್ಟಿಕ್ ಅಲ್ಸರ್ ಗೆ ಕಾರಣವಾಗುತ್ತದೆ. ಇದು ರಕ್ತದೊತ್ತಡವನ್ನು ಏರಿಸಬಲ್ಲದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಇದು ರಕ್ತನಾಳದ ಸಮಸ್ಯೆಯನ್ನೂ ತಂದೊಡ್ಡಬಲ್ಲದು. ಇದಲ್ಲದೆ ಇದರ ಹೆಚ್ಚು ಬಳಕೆ ಮಾನಸಿಕ ಉದ್ವೇಗಕ್ಕೂ ಕಾರಣವಾಗುತ್ತದೆ. ಒಟ್ಟಿನಲ್ಲಿ ಕೆಫೀನ್ ಬಳಕೆ ಮಿತಿಯಲ್ಲಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಮೊನೋಸೋಡಿಯಂ ಗ್ಲುಟಮೇಟ್ (ಎಂ ಎಸ್ ಜಿ) : ಈ ಎಂ ಎಸ್ ಜಿ ರಾಸಾಯನಿಕವನ್ನು ಜಪಾನಿನ ರಸಾಯನ ವಿಜ್ಞಾನಿಯೊಬ್ಬರು ಕಂಡು ಹಿಡಿದರು. ಇದನ್ನು ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳು ಸುವಾಸನೆಯನ್ನು ಬೀರಲೆಂದು ಸೇರಿಸುತ್ತಾರೆ. ಇದರ ಬಳಕೆಯಿಂದ ಅರೆ ತಲೆನೋವು (ಮೈಗ್ರೇನ್), ಎದೆಯಲ್ಲಿ ಉರಿತ ಮತ್ತು ಉರಿ, ಕತ್ತಿನ ಸ್ನಾಯುಗಳ ಸೆಳೆತಗಳು ಕಂಡುಬರುತ್ತವೆ. ಆದ್ದರಿಂದ ಸಂಸ್ಕರಿತ ಆಹಾರ ಪದಾರ್ಥಗಳನ್ನು ಬಳಸುವಾಗ ಈ ರಾಸಾಯನಿಕವನ್ನು ಬಳಸಲಾಗಿದೆಯೇ ಎಂಬುದನ್ನು ಗಮನಿಸಿ.
ನೈಟ್ರೆಟ್ ಮತ್ತು ನೈಟ್ರೇಟ್ ಗಳು: ಸೋಡಿಯಂ ನೈಟ್ರೆಟ್ ಮತ್ತು ಸೋಡಿಯಂ ನೈಟ್ರೇಟ್ ಏ ಎರಡು ಜೋಡಿ ರಾಸಾಯನಿಕಗಳನ್ನು ಪ್ರಾಣಿಗಳ ಮಾಂಸಗಳನ್ನು ಸಂರಕ್ಷಿಸಿಡಲು ಬಳಸಲಾಗುತ್ತದೆ. ಸೋಡಿಯಂ ನೈಟ್ರೇಟ್ ಅಪಾಯಕಾರಿಯಲ್ಲದಿದ್ದರೂ ಅದು ಕ್ರಮೇಣ ಸೋಡಿಯಂ ನೈಟ್ರೆಟ್ ಆಗಿ ಪರಿವರ್ತನೆ ಹೊಂದುವುದರಿಂದ ಅಪಾಯಕಾರಿ ಆಗಬಲ್ಲದು. ಈ ನೈಟ್ರೆಟ್ ಖಂಡಿತವಾಗಿಯೂ ಕ್ಯಾನ್ಸರನ್ನು ತರುವ ರಾಸಾಯನಿಕ. ಇದು ಹೊಟ್ಟೆಯ ಕ್ಯಾನ್ಸರನ್ನು ತರಬಲ್ಲದು. ಆದ್ದರಿಂದ ನೀವು ನೈಟ್ರೇಟ್ ಮತ್ತು ನೈಟ್ರೆಟ್ ರಹಿತ ಸಂಸ್ಕರಿತ ಮಾಂಸವನ್ನು ಬಳಸುವುದು ಸೂಕ್ತ.
ಒಲೆಸ್ಟ್ರಾ: ಕೊಬ್ಬನ್ನು ತೆಗೆಯುವಂಥ ಅಪಾಯಕಾರಿ ರಾಸಾಯನಿಕ ಇದು. ಇದನ್ನು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಬಳಸಲಾಗುತ್ತಿದೆ. ಆದರೆ, ಇದು ದೇಹದಲ್ಲಿರುವ ಕೊಬ್ಬಿನ ಜೊತೆಗೆ ದೇಹಕ್ಕೆ ಬೇಕಾಗುವ ಕೆರೊಟನಾಯ್ಡ್ಸ್ ಎಂಬ ಪೋಷಕಾಂಶವನ್ನೂ ಹೊರದೂಡಿಬಿಡುತ್ತದೆ. ಈ ಪೋಷಕಾಂಶಕ್ಕೆ ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳನ್ನು ತಡೆಗಟ್ಟುವ ಶಕ್ತಿ ಇದೆ. ಈ ಒಲೆಸ್ಟ್ರಾ ರಾಸಾಯನಿಕಕ್ಕೆ ಮಾಂಸಖಂಡಗಳನ್ನು ಸಂಕುಚಿತಗೊಳಿಸುವ ಸಾಮರ್ಥ್ಯವಿದ್ದು, ಕುರುಡುತನಕ್ಕೂ ಕಾರಣವಾಗಬಲ್ಲದು.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ