ಸಖತ್ ಸಮಜಾಯಿಷಿಗಳು !!

ಸಖತ್ ಸಮಜಾಯಿಷಿಗಳು !!

ಬರಹ

ಇದು ನನ್ನ ವೃತ್ತಿ ಬದುಕಿನಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಅವರ ಮನೆಯಲ್ಲಿ ಎರಡು ಬೇರೆ ಬೇರೆ ಸಂದರ್ಭದಲ್ಲಿ ಕೊಟ್ಟ ಸಮಜಾಯಿಷಿಗಳು. ಮೊದಲ ಬಾರಿ ನಾವುಗಳು ಇದನ್ನು ಅವರ ಬಾಯಿಂದಲೇ ಕೇಳಿದಾಗ ಯದ್ವಾ ತದ್ವಾ ನಕ್ಕಿದ್ವಿ.
ಈಗಲೂ ಕೂಡಾ ಹಳೆಯ ಕೊಲೀಗುಗಳು ಸಿಕ್ಕಾಗ ಇದನ್ನು ನೆನೆಸಿಕೊಂಡು ಸಖತ್ತಾಗಿ ನಗ್ತೀವಿ.

ಇದನ್ನು ಓದಿದಕ್ಕಿಂತಾ ಹೇಳುವುದನ್ನು ಕೇಳಿದರೆ ಇನ್ನೂ ಮಸ್ತ್ ಎಫೆಕ್ಟು ಗ್ಯಾರಂಟಿ, ಅದ್ರೂ ನಿಮ್ಮನ್ನು ಈ ಬರಹದ ಮೂಲಕ ನಗಿಸಲು ಶತಪ್ರಯತ್ನ ಮಾಡ್ತಾ ಇದೀನಿ.

ಇದನ್ನು ಸಂಭಾಷಣೆ ಮೂಲಕ ನಿಮ್ಮ ಮುಂದೆ ಇಡ್ತಾ ಇದೀನಿ.

ನಮ್ಮ Mr. X ಅಪರೂಪಕ್ಕೆ ಬಿಯರ್ ಹಾಕೋ ಅಭ್ಯಾಸ ಇಟ್ಕೊಂಡಿದ್ರು. ಆದ್ರೆ, ಮನೆಯವರಿಗೆ ಇದು ಗೊತ್ತಿರ್ಲಿಲ್ಲ.

ಸಂದರ್ಭ 1 -

ಅವರ ಸ್ನೇಹಿತ ಫ್ರಾನ್ಸಿನಿಂದ ಬಂದಾಗ, ಇವ್ರಿಗೆ ಒಂದು ಬಾಟಲ್ ಒಳ್ಳೇ ರೆಡ್ ಫ್ರೆಂಚ್ ವೈನ್ ತಂದು ಕೊಟ್ಟಿದ್ರು. ಇದನ್ನು ಇವರು ಪೇಪರಿನಲ್ಲಿ ಜತನವಾಗಿ ಸುತ್ತಿ, ಮನೆಯ ಕಪಾಟಿನಲ್ಲಿ ಇಟ್ಟಿದ್ರು. ಇದು ಅವರ ಮಡದಿಗೂ ಗೊತ್ತಾಯ್ತು. ಇವ್ರು ಏನ್ ಮಾಡ್ತಾ ಇದ್ರು ಅಂದ್ರೆ, ಅವಾಗವಾಗ ಆ ಬಾಟಲಿನಿಂದ ಸ್ವಲ್ಪ ಸ್ವಲ್ಪ ವೈನ್ ಕುಡಿತಾ ಇದ್ರು. ಸುಮಾರು ಎರಡು ತಿಂಗಳಾದ ಮೇಲೆ, ಅವರ ಮಡದಿ ಮುಕ್ಕಾಲು ಖಾಲಿಯಾಗಿದ್ದ ಬಾಟಲನ್ನು ನೋಡಿ
"ಏನ್ರೀ ಇದೂ, ಇದನ್ನು ನೀವು ತಂದಾಗ ನೋಡಿದ್ದೆ, ಫುಲ್ಲ್ ಬಾಟಲ್ ಇತ್ತು, ಈಗ ಮುಕ್ಕಾಲು ಖಾಲಿ ಆಗಿದೆ !! ನೀವೇನೇ ಕುಡ್ದಿರ್ತೀರಾ.. ನಂಗೆ ಗೊತ್ತು..." ಅಂತಾ ವರಾತ ತೆಗೆದ್ರು.
ಅದಕ್ಕೆ ನಮ್ಮ್ Mr. X, "ಇಲ್ಲಪ್ಪಾ, ನಾನ್ಯಾಕೆ ಕುಡೀಲಿ.. ಇದು ವೈನ್ ಅಲ್ವಾ? ಸ್ಪಿರಿಟ್ಟು, ನಾನು ಬಾಟಲ್ ತಂದಾಗ ಸ್ವಲ್ಪ ಟೇಸ್ಟ್ ನೋಡಿದ್ದೆ, ಮುಚ್ಚಳ ಸರಿಯಾಗಿ ಮುಚ್ಚಿರ್ಲಿಲ್ಲಾ, ಅದಕ್ಕೆ ಸ್ಪಿರಿಟ್ಟು EVAPORATE ಆಗಿದೆ, ಅಷ್ಟೇ..." ಅನ್ನೋದಾ ?

ಸಂದರ್ಭ 2 (ಇದಕ್ಕೇ ನಾವೆಲ್ಲಾ ಕೇಕೆ ಹಾಕಿ ನಗೋದು) -

ಇದು ದೀಪಾವಳಿಯ ಒಂದು ತಿಂಗಳ ಮುಂಚೆ ನಡೆದ ಘಟನೆ.
ಇವರ ಶ್ರೀಮತಿ ತವರಿಗೆ ಹೋಗಿದ್ದಾಗ, ಅಣ್ಣಾವ್ರು ಮನೆಗೆ ಒಂದು ಬಾಟಲ್ ಬಿಯರ್ ತಗೊಂಡು ಹೋಗಿ ಕುಡಿದಿದ್ರು. ಜಾಸ್ತಿ ಅಲ್ಲಾ, ಒಂದೇ ಒಂದು ಸಾರಿ ಒಂದೇ ಬಾಟಲ್ ಬಿಯರ್. ಅದನ್ನ ಬಿಸಾಡೋಕ್ಕೆ ಮರೆತು ಹೋದ್ರು. ಶ್ರೀಮತಿ ವಾಪಸ್ ಬಂದಾಗ ಮನೆ ಒಮ್ಮೆ ಕ್ಲೀನ್ ಮಾಡ್ತಾ ಇದ್ದಾಗ, ಖಾಲಿ ಬಿಯರ್ ಬಾಟ್ಲು ಕಂಡಿದೆ. ಸಂಜೆ ಪತಿದೇವ್ರು ಬಂದಾಗ, ಅವರ ಎದುರು ಬಾಟಲನ್ನು ಹಿಡಿದು "ಏನ್ರೀ ಇದು ಬಿಯರ್ ಬಾಟ್ಲು ಮನೇಲಿ? ನಾನಿಲ್ಲ ಅಂದ್ರೆ ಹೇಳೋರು ಕೇಳೋರು ಯಾರು ಇಲ್ವಾ? ಯಾಕೆ ಕುಡುದ್ರಿ ಬಿಯರ್ ನಾ?" ಅಂತಾ ಸ್ವಲ್ಪ ಬೇಜರ್ ಮಾಡ್ಕೊಂಡು ಕೇಳಿದಾರೆ.
ಅದಕ್ಕೆ ನಮ್ಮ Mr. X ಅವ್ರು "ಇಲ್ಲಾ ಕಣೇ, ಮೊನ್ನೆ ಮನೆ ಹತ್ರ ನಡ್ಕೊಂಡು ಬರ್ತಾ ಇದ್ದೆ, ದಾರಿಯಲ್ಲಿ ಈ ಬಿಯರ್ ಬಾಟ್ಲು ಬಿದ್ದಿತ್ತು. ಇನ್ನೇನು ದೀಪಾವಳಿ ಬರ್ತಾ ಇದ್ಯಲ್ಲಾ, ಅವಗ ರಾಕೆಟ್ ಹಾರಿಸೋಕ್ಕೆ ಆಗುತ್ತೆ ಅಂತಾ ಎತ್ಕೊಂಡು ಬಂದೆ" ಅನ್ನೋದಾ ?

ಇದನ್ನ ಕೇಳಿ ಯಾವ್ ರೀತಿ ನಕ್ಕಿದೀವಿ ಅಂದ್ರೆ, ಅವತ್ತು ಕಣ್ಣಲ್ಲಿ ಫುಲ್ಲ್ ನೀರು. ಇವತ್ತಿಗೂ ಇದನ್ನ ನೆನೆಸಿಕೊಂಡ್ರೆ, ಹೊಟ್ಟೆ ಹಿಡ್ಕೊಂಡು ನಗ್ತೀವಿ.

ನಿಮ್ಗೂ ಸರಿಯಾಗಿ ನಗು ಬಂದಿದೆ ಅನ್ಕೊತೀನಿ. ಇದಕ್ಕೆ ನಿಮ್ಮ ಅಂಬೋಣ ?

ವಿ.ಸೂ : ಈ ಬರಹವನ್ನು Mr. X ಓದಿದರೆ ದಯವಿಟ್ಟೂ ಬೇಜಾರು ಮಾಡ್ಕೋಬಾರದಾಗಿ ವಿನಂತಿ. ಬೇಜಾರು ಮಾಡ್ಕೊಂಡಿದ್ದಿದ್ರೆ ನೀವು ನಮ್ಮ ಹತ್ರ ಈ ವಿಷಯ ಹೇಳ್ತಾ ಇರ್ಲಿಲ್ಲಾ ಅಲ್ವಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com