ಸಜೀವ ಹೊದಿಕೆಯ ಮಹತ್ವ (ರೈತರೇ ಬದುಕಲು ಕಲಿಯಿರಿ-೧೫)

ಸಜೀವ ಹೊದಿಕೆಯ ಮಹತ್ವ (ರೈತರೇ ಬದುಕಲು ಕಲಿಯಿರಿ-೧೫)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಈಗಾಗಲೇ ಓದಿರುವಂತೆ ಹೊಲದಲ್ಲಿಯ ಮೇಲು ಹೊದಿಕೆಯಿಂದ ಭೂಮಿಯ ತೇವದ ರಕ್ಷಣೆಯಾಗುತ್ತದೆ ಎಂಬುದನ್ನು ನೀವು ಬಲ್ಲಿರಿ. ಹೊದಿಕೆಯಲ್ಲಿ ಜಡ ಮತ್ತು ಸಜೀವ ಎಂಬ ಎರಡು ವಿಭಾಗಗಳನ್ನು ಮಾಡಬಹುದು. ಜಡ ಹೊದಿಕೆ ಎಂದರೆ ಒಣಗಿದ ಎಲೆ, ಕಡ್ಡಿ, ದಂಟು, ಬೇರಿನ ಉಳಿದ ಭಾಗ, ಒಣ ಹುಲ್ಲು ಇತ್ಯಾದಿ. ಸಣ್ಣ ಮಳೆ ಬಿದ್ದರೂ ಇವು ನೀರನ್ನು ಹೀರಿಕೊಂಡು ಹೊದಿಕೆ ಕೆಳಗಿನ ಮಣ್ಣಿನಲ್ಲಿರುವ ಕೋಟ್ಯಾನುಕೋಟಿ ಸೂಕ್ಷ್ಮಜೀವಿಗಳ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತವೆ. ಹೀರಿದ ನೀರನ್ನು ಮಣ್ಣಿಗೆ ಸೇರಿಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ.

ಒಂದು ವೇಳೆ ಹೆಚ್ಚು ಮಳೆ ಬಂತೆನ್ನಿ. ಆಗ ಒಣ ಹೊದಿಕೆ ಮಣ್ಣಿನ ತೇವವನ್ನು ಸ್ಪಂಜಿನಂತೆ ಹೀರಿ ವಾತಾವರಣಕ್ಕೆ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ನೀರಿನಿಂದಾಗುವ ತೊಂದರೆಗಳನ್ನು ತಪ್ಪಿಸುತ್ತದೆ. ಇಂತಹ ದ್ವಿಮುಖ ಕ್ರಿಯೆಯಿಂದಾಗಿ ಹೊದಿಕೆ ನೈಸರ್ಗಿಕ ಕೃಷಿಯ ಅವಿಭಾಜ್ಯ ಅಂಗವಾಗಿದೆ.

ಇಷ್ಟಕ್ಕೂ ಹೊದಿಕೆ ಎಂದರೆ ಅದು ಭೂಮಿಯಿಂದ ಉದ್ಭವವಾಗಿದ್ದ ಪೋಷಕಾಂಶವೇ. ತನ್ನ ಆಯುಷ್ಯ ಮುಗಿಸುವ ಸಸ್ಯ ಭೂಮಿಯಲ್ಲಿಯೇ ಜೀರ್ಣವಾಗುವ ಮೂಲಕ, ಅಲ್ಲಿಂದ ಹೀರಿಕೊಂಡಿದ್ದ ಪೋಷಕಾಂಶಗಳ ಹೆಚ್ಚಿನ ಪಾಲನ್ನು ವಾಪಸ್ ನೀಡುತ್ತದೆ. ನಿಮಗೆ ಗೊತ್ತಿರುವಂತೆ ಯಾವುದೇ ಸಸ್ಯವಿರಲಿ, ಅದರ ಶೇ.೭೮ ಪಾಲು ನೀರಿರುತ್ತದೆ. ಸಸ್ಯ ತನ್ನ ಆಯುಷ್ಯ ಮುಗಿಸಿದಾಗ, ಬಿಸಿಲಿಗೆ ಹಾಗೂ ಗಾಳಿಗೆ ಸಿಕ್ಕು ಒಣಗಿ ಈ ನೀರಿನ ಅಂಶ ವಾತಾವರಣ ಸೇರುತ್ತದೆ. ಆದರೆ ಬಾಕಿ ಉಳಿದ ಶೇ.೨೨ ಭಾಗ ಪೋಷಕಾಂಶಗಳಿಂದ ತುಂಬಿದ್ದು ಇದನ್ನು ಹಾಗೇ ಬಿಟ್ಟರೆ ಸೂಕ್ಷ್ಮಜೀವಿಗಳು, ಎರೆಹುಳು ಮುಂತಾದ ಜೀವಿಗಳಿಗೆ ಆಹಾರವಾಗಿ ವಾಪಸ್ ಭೂಮಿಯನ್ನು ಸೇರುತ್ತದೆ. ಜೀರ್ಣವಾಗುವವರೆಗೆ ಹೊದಿಕೆಯಾಗಿ ಮೇಲ್ಮಣ್ಣನ್ನು ಕಾಪಾಡುತ್ತದೆ.

ಆದ್ದರಿಂದ ನೈಸರ್ಗಿಕ ಕೃಷಿಯಲ್ಲಿ ಹೊದಿಕೆಗೆ ತುಂಬ ಮಹತ್ವವಿದೆ. ಇದರ ಜತೆಗೆ ಹಸಿರು ಹೊದಿಕೆಯೂ ಸೇರಿಕೊಂಡರೆ ರೈತ ಕಡಿಮೆ ನೀರಿನಲ್ಲಿ, ಹೊರಗಿನಿಂದ ಗೊಬ್ಬರ ಸುರಿಯುವ ಹಂಗಿಲ್ಲದೇ ಅದ್ಭುತವಾಗಿ ಬೆಳೆಯಬಲ್ಲ.

ಉದ್ದು, ಅಲಸಂದೆ, ಹೆಸರು, ತೊಗರಿ, ಸೋಯಾ ಅವರೆ, ಶೇಂಗಾ, ಅವರೆ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸಣ್ಣ ತರಕಾರಿ ಗಿಡಗಳು ಅತ್ಯುತ್ತಮ ಹಸಿರು ಹೊದಿಕೆಯಾಗಿ ಕೆಲಸ ಮಾಡುತ್ತವೆ. ಇವುಗಳ ಜತೆಗೆ ಹಾಗಲ, ಕುಂಬಳ, ಹೀರೆ, ಕರಬೂಜ, ಹಾಗಲಕಾಯಿ, ಸೌತೆ, ಕಲ್ಲಂಗಡಿಯಂತಹ ಹಬ್ಬುವ ಬಳ್ಳಿಯ ಬೆಳೆಗಳನ್ನು ಹಾಕಿದರೆ, ಭೂಮಿಗೆ ಸೊಗಸಾದ ಸೀರೆ ಉಡಿಸಿದಂತೆ.

ಆದರೆ, ಈ ಬೆಳೆಗಳು ಆಯಾ ಭೌಗೋಳಿಕೆ ಲಕ್ಷಣಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಒಟ್ಟಿನಲ್ಲಿ ಉದ್ದೇಶ ಇಷ್ಟೇ, ಭೂಮಿ ಬೆತ್ತಲೆ ಇರಬಾರದು. ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗುವ ಮುಚ್ಚುಗೆಯನ್ನು ಹಾಕಬೇಕು.
ಇದರಿಂದ ಆಗುವ ಪ್ರಯೋಜನಗಳು ನೂರಾರು.

ಮೊದಲನೆಯದೆಂದರೆ ಈ ಬೆಳೆಗಳು ಇಡೀ ಭೂಮಿಯನ್ನು ಮುಚ್ಚುವುದರಿಂದ ಕಳೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಕಷ್ಟ. ಪ್ರಮುಖ ಪೋಷಕಾಂಶಗಳು, ನೀರು ಹಾಗೂ ಬಿಸಿಲನ್ನು ನಾವೇ ಬಿತ್ತಿದ ಮುಚ್ಚುಗೆ ಬೆಳೆಗಳು ಬಳಸಿಕೊಳ್ಳುವುದರಿಂದ, ಕಳೆಗಳಿಗೆ ಇವುಗಳ ಕೊರತೆಯಾಗುತ್ತದೆ. ಭೂಮಿಯಲ್ಲಿ ಜೈವಿಕ ವೈವಿಧ್ಯತೆ, ಅಂದರೆ ವಿವಿಧ ಬೆಳೆಗಳು ಬೆಳೆಯುವುದರಿಂದ, ಕೀಟಗಳ ನಿಯಂತ್ರಣವೂ ಸಾಧ್ಯವಾಗುತ್ತದೆ.

ನಿಮಗೆ ಅಚ್ಚರಿ ಅನ್ನಿಸಬಹುದು, ಅಲಸಂದೆಯಂತಹ ದ್ವಿದಳ ಧಾನ್ಯಗಳೆಂದರೆ ಕೀಟಗಳಿಗೆ ಪಂಚತಾರಾ ಹೋಟೆಲ್‌ಗಳಿದ್ದಂತೆ. ಈ ರೀತಿಯ ಬೆಳೆಗಳಿದ್ದಲ್ಲಿ ಕೀಟಗಳು ಹೆಚ್ಚಾಗಿ ಅಲ್ಲಿಗೇ ದಾಳಿಯಿಡುತ್ತವೆ. ನಿಮ್ಮ ಹೊಲದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದಿಲ್ಲವಾದ್ದರಿಂದ ಈ ಕೀಟಗಳನ್ನು ಹುಡುಕಿಕೊಂಡು ಹಕ್ಕಿಗಳು ಬರುತ್ತವೆ. ಒಂದೆಡೆ ದ್ವಿದಳ ಬೆಳೆಗಳನ್ನು ಹಾಕುವ ಮೂಲಕ ಕೀಟಗಳನ್ನು ಆಕರ್ಷಿಸಲಾಗುವುದು. ಇನ್ನೊಂದೆಡೆ ಆಹಾರ ಹುಡುಕಿಕೊಂಡು ಬರುವ ಹಕ್ಕಿಗಳು ಕೀಟಗಳನ್ನು ಭಕ್ಷಿಸುವುದರಿಂದ ನೈಸರ್ಗಿಕವಾಗಿ ಕೀಟ ನಿಯಂತ್ರಣವಾಗುವುದು. ಹಕ್ಕಿಗಳ ಹಿಕ್ಕೆಯಲ್ಲಿ ಭೂಮಿಗೆ ಅವಶ್ಯಕವಾಗಿರುವ ಲಘು ಪೋಷಕಾಂಶಗಳು ಸಾಕಷ್ಟಿರುವುದರಿಂದ ಪುಕ್ಕಟೆ ಗೊಬ್ಬರವೂ ಹೊಲಕ್ಕೆ ದಕ್ಕುತ್ತದೆ. ಒಂದೆರಡು ಆವರ್ತನಗಳಲ್ಲಿ ಕೀಟಗಳ ಬಾಧೆ ಬಹಳಷ್ಟು ಕಡಿಮೆಯಾಗಿಬಿಡುತ್ತದೆ.

ಒಂದು ವೇಳೆ ಹೊಲದಲ್ಲಿ ಕಳೆಗಳೂ ಇವೆಯೆನ್ನಿ. ಅದಕ್ಕಾಗಿ ಕಿಂಚಿತ್ತೂ ಚಿಂತಿಸಬೇಕಿಲ್ಲ. ಹಾಗೆ ನೋಡಿದರೆ ಕಳೆಗಳು ನಮ್ಮ ಮಿತ್ರರೇ ಸೈ.

ಇದನ್ನು ಓದಿ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಏಕೆಂದರೆ ಕಳೆಗಳು ಅಪ್ಪಟ ಜೈವಿಕ ಹೊದಿಕೆಯಂತೆ ಕೆಲಸ ಮಾಡುತ್ತವೆ. ಉದಾಹರಣೆಗೆ ಪಾರ್ಥೇನಿಯಂ. ಬಹಳಷ್ಟು ರೈತರು ಇದನ್ನು ನಿವಾರಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ಕೊಂಚ ಬುದ್ಧಿವಂತಿಕೆ ಬಳಸಿಕೊಂಡರೆ ಪಾರ್ಥೇನಿಯಂ ನಮ್ಮ ಮಿತ್ರನಾಗುತ್ತದೆ.

ಹೂ ಬಿಡುವ ಹಂತದವರೆಗೆ ಪಾರ್ಥೇನಿಯಂ ಅನ್ನು ಬೆಳೆಯಲು ಬಿಡಿ. ನಂತರ ಅದನ್ನು ಬೇರು ಸಹಿತ ಕಿತ್ತು ನೆಲದಲ್ಲಿಯೇ ಕೊಳೆಯಲು ಬಿಡಿ. ಒಂದು ವೇಳೆ ನಿಮ್ಮ ಹೊಲದಲ್ಲಿ ಬೇರೆ ಬೇರೆ ಕೀಟಗಳು ದಾಳಿಯಿಟ್ಟಿವೆ ಎಂದು ಭಾವಿಸೋಣ. ಆಗ ಪಾರ್ಥೇನಿಯಂ ಅನ್ನು ಗೋಮೂತ್ರ ಹಾಗೂ ಲಂಟಾನ ಗಿಡದೊಂದಿಗೆ ಸೇರಿಸಿ, ಜಜ್ಜಿ, ಚೆನ್ನಾಗಿ ಕುದಿಸಿ, ಅದರ ಸಾರವನ್ನು ಕೀಟನಾಶಕವಾಗಿ ಬಳಸಬಹುದು.

ಇದರಿಂದಾಗಿ ನಿಮಗೆ ಎರಡು ರೀತಿಯ ಅನುಕೂಲಗಳಿವೆ. ಮೊದಲನೆಯದಾಗಿ ಪಾರ್ಥೇನಿಯಂ ಸಹಜವಾಗಿ ನಿಯಂತ್ರಣಕ್ಕೆ ಬರುತ್ತದೆ. ಇನ್ನೊಂದೆಡೆ ಅದನ್ನು ಬಳಸಿಕೊಂಡು ಕೀಟಗಳನ್ನು ನಿಯಂತ್ರಿಸಬಹುದು. ನಿಮ್ಮ ಹೊಲದಲ್ಲಿ ನೈಸರ್ಗಿಕ ವಾತಾವರಣ ಬಲಗೊಂಡಷ್ಟೂ ಪಾರ್ಥೇನಿಯಂ ಸಹಜವಾಗಿ ನಿಯಂತ್ರಣಕ್ಕೆ ಬರುತ್ತದೆ.

ಹೊಸದಾಗಿ ನೈಸರ್ಗಿಕ ಕೃಷಿಗೆ ಬಂದವರ ಹೊಲದಲ್ಲಿ ಹಸಿರು ಮುಚ್ಚುಗೆ ಇರುವುದಿಲ್ಲ. ಆ ಸಂದರ್ಭದಲ್ಲಿ ಮನೆಯಲ್ಲಿರುವ ಹರಿದ ಬಟ್ಟೆ, ಹತ್ತಿ ತುಂಡು, ಹಳೆಯ ಗೋಣಿಚೀಲ ಮುಂತಾದವನ್ನು ಹೊದಿಕೆಗೆಯಾಗಿ ಬಳಸಬಹುದು. ಒಣಹುಲ್ಲು, ಉದುರಿದ ಎಲೆಗಳನ್ನು ಕೂಡ ಹೊದಿಕೆಯಾಗಿ ಬಳಸಬಹುದು. ಆದರೆ ಯಾವ ಕಾರಣಕ್ಕೂ ಪ್ಲಾಸ್ಟಿಕ್ ಅನ್ನು ಬಳಸಬೇಡಿ. ಪ್ಲಾಸ್ಟಿಕ್‌ನಿಂದಾಗಿ ಉಷ್ಣಾಂಶ ಹೊರಹೋಗದೇ ಬಿಸಿ ಉತ್ಪತ್ತಿಯಾಗಿ ಜೀವಾಣುಗಳು ಸಾಯುತ್ತವೆ. ಅಲ್ಲದೇ ಪ್ಲಾಸ್ಟಿಕ್ ಕರಗುವುದಿಲ್ಲವಾದ್ದರಿಂದ ಇದು ಹೊಸ ಸಮಸ್ಯೆಗೆ ಕಾರಣವಾಗುತ್ತದೆ.

(ಮುಂದುವರಿಯುವುದು)

- ಚಾಮರಾಜ ಸವಡಿ