ಸಜ್ಜನನ ಸಾವು (ವಿಶ್ವಕಥಾಕೋಶ -೧೪)

ಸಜ್ಜನನ ಸಾವು (ವಿಶ್ವಕಥಾಕೋಶ -೧೪)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ ‘ಸಜ್ಜನನ ಸಾವು'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಐಸ್ ಲೆಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ ದೇಶದ ಕಥೆಗಳಿವೆ. ಈ ೧೪ನೇ ಸಂಪುಟದಲ್ಲಿರುವ ಕಥೆಗಳ ಸಂಖ್ಯೆ೧೨. ಯುರೋಪಿನಲ್ಲಿ ಉತ್ತರಕ್ಕಿರುವ ಭೂಭಾಗದ ಸಾಮಾಜಿಕ-ಆರ್ಥಿಕ-ರಾಜಕೀಯ-ಸಾಂಸ್ಕೃತಿಕ-ಸಾಹಿತ್ಯಿಕ ಹಿನ್ನಲೆಯನ್ನು ವಿವರಿಸುವ ಈ ಕಥೆಗಳು ಬಹಳ ಅರ್ಥಪೂರ್ಣವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಈ ಪುಸ್ತಕದಲ್ಲಿ ಇರುವ ೧೨ ಕಥೆಗಳೆಂದರೆ, ಸಜ್ಜನನ ಸಾವು (ಸ್ನೋರಿ ಸ್ಟುರ್ಲ್ ಸೋನ್), ಬಲೆ-ಬೆಸ್ತರು (ಮೋಲ್ದಿ), ಬುಲ್ ಬುಲ್ ಹಕ್ಕಿ (ಹಾನ್ಸ್ ಕ್ರಿಶ್ಟಿಯನ್ ಅಂಡರ್ ಸನ್), ಎರಡು ಪ್ರಪಂಚಗಳು (ಯೇನ್ಸ್ ಪೇಟರ್ ಯಾಕಬ್ ಸನ್), ಹಾದಿಯ ಹಕ್ಕಿಗಳು (ಮಾರ್ಟಿನ್ ಆಂಡರ್ಸನ್ ನೆಕ್ಸೊ), ತಂದೆ (ಬ್ಯೋರ್ನ್ ಸ್ಟೈರ್ನ್ ಬ್ಯೋರ್ನ್ ಸೋನ್), ರಕ್ಕಸ ಮೀನು (ಯೋಹಾನ್ ಬೋಯೆರ್), ಪ್ರೇಮ ಮತ್ತು ರೊಟ್ಟಿ (ಆಗಸ್ಟ್ ಸ್ಪ್ರೈಂಡ್ ಬರ್ಗ್), ನಿದ್ದೆಯಲ್ಲಿ ಕಣ್ಣೀರು (ಪೇಡರ್ ಷೋರ್ಗೆನ್), ವಿಚಿತ್ರ ಪ್ರವಾಸಿ (ಪೇರ್ ಓಲಾಫ್ ಸುಂಡ್ ಮಾನ್), ಪರಿಶುದ್ಧ ಮಾನವಕುಲ (ಮಾರ್ತ್ತಿ ಲಾರ್ನಿ), ಕ್ಷಣಗಳು ( ಫಾವೋ ಫೋಸ್ಸಿ).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಕ.ನಂ.ನಾಗರಾಜು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೩೫ ಪುಟಗಳನ್ನು ಹೊಂದಿದೆ. ಐಸ್ ಲೆಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಹಾಗೂ ಫಿನ್ ಲ್ಯಾಂಡ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.