ಸಜ್ಜನರ ಸಂಗದೊಳು ಇರಿಸೆನ್ನ ರಂಗ

ಸಜ್ಜನರ ಸಂಗದೊಳು ಇರಿಸೆನ್ನ ರಂಗ

 ಸಜ್ಜನರ ಸಂಗದೊಳು ಇರಿಸೆನ್ನ ರಂಗ

ದುರ್ಜನರ ಸಂಗನಾನೊಲ್ಲೆ ಮಂಗಳಾಂಗ
 
ಎಂಬ  ದಾಸಶ್ರೇಷ್ಠರಾದ ಕನಕದಾಸರ ನುಡಿಗಳನ್ನು ಕೇಳಿದಾಗ ಸಜ್ಜನರ ಸಂಗದ ಬಗ್ಗೆ ಏಕೆ ಬರೆಯಬಾರದೆಂದೆನಿಸಿತು.ಜೀವನದಲ್ಲಿ ಪ್ರತಿಯೊಬ್ಬಮನುಷ್ಯನೂ ಸಂಘಜೀವಿ.ನಮ್ಮ ಮಾನಸಿಕ ಭಾವನೆಗಳಿಗೆ ಅತಿ ಹತ್ತಿರವಾಗಿರುವ,ನಮ್ಮ ನೋವು ನಲಿವುಗಳಿಗೆ ತುಡಿಯುವ,ಮಿಡಿಯುವ ಮನೋಬಾವನೆಯಿರುವವರಲ್ಲಿ ಸ್ನೇಹ ವಿರುವುದು ಒಂದು ಸಹಜ ಪ್ರಕ್ರಿಯೆಯಾಗಿದೆ.
ಇದನ್ನೇ ಸಂಸ್ಕೃತದಲ್ಲಿ
 
ಸಮಾನ ಶೀಲ ವ್ಯಸನೇಷು ಸಖ್ಯಮ್ 
 
ಎಂದಿದ್ದಾರೆ.
ಆದರೆ ನಾವು ಜೀವನದಲ್ಲಿ ಸಜ್ಜನರ ಸಂಗವನ್ನು ಮಾಡಲೇಬೇಕೆಂದು ಜ್ಞಾನಿಗಳ ಅಭಿಪ್ರಾಯ.ಸಜ್ಜನರ ಸಂಗ ನಮ್ಮಲ್ಲಿರುವ ದುರ್ಗುಣಗಳನ್ನು ಹೊಡೆದೋಡಿಸಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ
 
"ಏನನ್ನು ತಿನ್ನುತ್ತೇವೆಯೋ ಅದನ್ನೇ ತೇಗುತ್ತೇವೆ" 
ಎಂಬ ರಾಮಕೃಷ್ಣ ಪರಮಹಂಸರ ಮಾತು ಸಜ್ಜನ ಸಂಗದ ಹಾಗೂ ಉತ್ತಮ ಕರ್ಮಗಳ ಮಹತ್ವವನ್ನು ಸೂಚಿಸುತ್ತದೆ.ಎಂಥ ದೃಢಸಂಕಲ್ಪವನ್ನು ಹೊಂದಿದ ಮನುಷ್ಯನಾದರೂ,ಗುಣಗಣಮಂಡಿತನಾದರೂ ಅವನು ದುರ್ಜನರ ಸಂಗದಲ್ಲಿದ್ದರೆ ಕ್ರಮೇಣ ಅವನ ಮನಸ್ಸೇ ಕುಕರ್ಮಗಳತ್ತ ಹೊರಳಬಹುದೆಂಬ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
 
ಅದಕ್ಕೇ ಇಂಗ್ಲಿಷ್ ನಲ್ಲಿ
 
Tell me your company i will tell u what you are.
 
ಎಂದಿದ್ದಾರೆ.
 
ಸರ್ವಜ್ಞ ಕವಿ ಹೇಳಿದ್ದಾನೆ.
 
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ 
ದುರ್ಜನರ ಕೂಡ ಒಡನಾಟ ಕೆಸರೊಳಗೆ
ಮುಳ್ಳುತುಳಿದಂತೆ ಸರ್ವಜ್ಞ
 
ಹೆಜ್ಜೇನನ್ನು ಸವಿದಾಗ ಯಾವ ಆನಂದ ನಮಗಾಗುತ್ತದೆಯೋ ಅದೇ ಸವಿ ಸಜ್ಜನರ ಸಹವಾಸದಿಂದ ನಮಗೆ ಅನುಭವಕ್ಕೆ ಬರುತ್ತದೆ.ದುರ್ಜನರ ಸ್ನೇಹ ಎಂಬುದು ಕೆಸರೊಳಗೆ ಗೊತ್ತಿಲ್ಲದೇ ತುಳಿದ ಮುಳ್ಳಿನಂತೆ.ಮುಳ್ಳುತುಳಿದು ನೋವಾಗುವವವರೆಗೂ ಕೆಸರಿನಲ್ಲಿ ಮುಳ್ಳಿರಬಹುದೆಂಬ ಸಂಶಯ ನಮಗೆ ಬರುವುದೇ ಇಲ್ಲ.
 
ಅದಕ್ಕೆ ಹಿಂದಿ ಭಾಷೆಯಲ್ಲಿ ಈ ರೀತಿ ಹೇಳಿದ್ದಾರೆ.
 
ಸೌ ಯೋಜನ ಸಾಜನ ಬಸೈ
ಜಾನೆ ಹೃದಯಮಂದೀರ್
ಕಪಟ್ ಸನೇಹಿ ಆಂಗನೇ
ಜಾನೇ ಸಮುಂದರ್ ಪಾರ್
 
ನೂರು ಯೋಜನದ ದೂರದಲ್ಲಿ ಸಜ್ಜನ ನೋರ್ವನು ವಾಸವಾಗಿದ್ದರೂ ಸಹ ಅವನು ನಮ್ಮ ಹೃದಯ ಮಂದಿರದಲ್ಲೇ ವಾಸವಾಗಿದ್ದಾನೆಂದು ತಿಳಿಯಬೇಕು.ಕಪಟಿಯಾದ ವ್ಯಕ್ತಿಯು ಮನೆಯ ಪಕ್ಕದಲ್ಲೇ ಇದ್ದರೂ ಅವನು ಸಮುದ್ರದಾಚೆ ಇರುವನೆಂದು ತಿಳಿಯಬೇಕು.
 
ಕನ್ನಡದಲ್ಲಿ ಸಂತರೋರ್ವರು
 
"ಸಂಗವಾಗಲಿ ಸಾಧು ಸಂಗವಾಗಲಿ
ಸಂಗದಿಂದ ಲಿಂಗದೇಹ ಭಂಗವಾಗಲಿ"
 
ಎಂಬುದಾಗಿ ಹಾಡಿದ್ದಾರೆ.
 
ಹಾಗಾದರೆ ಸಜ್ಜನರು ಹೇಗಿರುತ್ತಾರೆ?
ಅವರ ಸ್ವಭಾವ ಎಂಥಾದ್ದು?
 
ಸಂತರು ಹಾಗು ವಸಂತಕಾಲ ಎರಡೂ ತಮ್ಮ ಸುಖಕ್ಕೋಸ್ಕರ ಬರುವುದಿಲ್ಲ "ವಸಂತವಲ್ಲೋಕಹಿತಮ್ ಚರಂತಃ" ಇವರೀರ್ವರೂ ಸಹ ಲೋಕೋಪಕಾರಕ್ಕಾಗಿಯೇ ತಮ್ಮನ್ನು ಮುಡಿಪಾಗಿಟ್ಟಿದ್ದಾರೆಂಬ ಭಾವಾರ್ಥ.
ಸುಭಾಷಿತವೊಂದರಲ್ಲಿ ಸಜ್ಜನರ ಸ್ವಭಾವವನ್ನು ಈ ಕೆಳಕಂಡಂತೆ ವರ್ಣಿಸಲಾಗಿದೆ.
 
ಮೃದುಲಮ್ ನವನೀತಮೀರಿತಮ್
ನವನೀತಾದಪಿ ಸಜ್ಜನಸ್ಯ ಹೃತ್
ತದಿದಮ್ ದ್ರವತಿ ಸ್ವತಾಪನಾತ್
ಪರತಾಪಾ ದ್ರವತೇ ಸತಾಂ ಪುನಃ
 
ಲೋಕದಲ್ಲಿ ಬೆಣ್ಣೆಯನ್ನೇ ಮೃದುವೆಂಬರಂತೆ,ಬೆಣ್ಣೆಗಿಂತ ಮೃದು ಸಜ್ಜನರ ಮನಸ್ಸಂತೆ.ಬೆಣ್ಣೆಯನ್ನು ನಾವು ಕಾಯಿಸಿದಾಗ ಅದು ಕರಗುತ್ತದೆ.ಅರ್ಥಾತ್ ಬೆಣ್ಣೆಗೆ ನಾವು ತಾಪವನ್ನಿತ್ತಾಗ ಅದು ಕರಗುತ್ತದೆ.ಆದರೆ ಸಜ್ಜನರು ಹಾಗಲ್ಲ.ಅವರಿಗೆ ನಾವು ತಾಪವನ್ನು(ಕಷ್ಟವನ್ನು) ಕೊಟ್ಟಾಗ ಅವರ ಹೃದಯ ಕರಗುವುದಿಲ್ಲ ಅವರ ಮನಸ್ಸು ಇನ್ನೊಬ್ಬರ ಸಂಕಷ್ಟಗಳನ್ನು ನೋಡಿ ದ್ರವಿಸುತ್ತದೆ.
 
ಇದೀಗ ದೃಷ್ಟಾಂತವೊಂದು ನೆನಪಾಗುತ್ತಿದೆ
 
ಸಂತ ಏಕನಾಥರೊಮ್ಮೆ ಕಾಶೀಕ್ಷೇತ್ರದಲ್ಲಿದ್ದಾಗ ಅವರ ಸಹನಶೀಲತೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದರು.ಅವರ ಕೀರ್ತಿಯನ್ನು ಸಹಿಸದ ದುರುಳನೋರ್ವನಿಗೆ ಅವರ ಸಹನೆಯನ್ನು ಕೆಡಿಸುವ ಮನಸ್ಸಾಯಿತು.
ಏಕನಾಥರು ಗಂಗಾಸ್ನಾನ ಮಾಡಿ ಬರುತ್ತಿದ್ದಾಗ ಎಲೆಯಡಿಕೆಯನ್ನು ಬಾಯ್ತುಂಬಾ ಹಾಕಿಕೊಂಡು ಅವರ ಮೇಲೆ ಉಗುಳಿದ.ಮರು ಮಾತನಾಡದೇ ಆ ಮಹಾನಭಾವರು ಪುನಃ ಗಂಗಾಸ್ನಾನ ಮಾಡಿ ಬಂದರು.ಇವನು ಪುನಃ ಉಗುಳಿದ.ಅವರು ಪುನಃ ಗಂಗಾಸ್ನಾನ ಮಾಡಿಬಂದರು.ಮಗದೊಮ್ಮೆ ಉಗುಳಿದ,ಹೀಗೆಯೆ ೯೮ ಸಲ ಉಗುಳಿದ ಏಕನಾಥರೂ ೯೯ ಸಲ ಗಂಗಾಸ್ನಾನ ಮಾಡಿ ಬಂದ.ಇದೀಗ ಆ ದುರುಳನ ಕಲ್ಲು ಮನ ಕರಗಿತು ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯಿತು ಪಶ್ಚಾತ್ತಾಪದಿಂದ  ಬೇಯುತ್ತಾ ಏಕನಾಥರ ಕಾಲುಹಿಡಿದ ಅವರ ಕಾಲುಗಳ ಮೇಲೆ ಕಂಬನಿಯ ಮಳೆಗರೆದ.ಹೊರಳಾಡಿದ ಸರ್ವಾಪರಾಧವಾಯಿತುಕ್ಷಮಿಸಿ ಎಂದ.
 
ಆಗ ಏಕನಾಥರು ಹೇಳಿದ್ದೇನು?ಅಯ್ಯಾ ಮಹಾತ್ಮ ನೀನೇಕೆ ಅಳುವೆ?ನೀನಾವ ತಪ್ಪನ್ನೂ ಮಾಡಿಲ್ಲ.ನೀನು ಪುಣ್ಯಾತ್ಮ.ನಿನ್ನಿಂದ ನನಗೆ ಇವತ್ತು ೯೯ ಸಲ ಗಂಗಾ ಸ್ನಾನ ಮಾಡಿದ ಪುಣ್ಯ ಬಂತು.ಇನ್ನೊಂದು ಬಾರಿ ಉಗುಳಿದ್ದರೆ ನೂರು ಬಾರಿ ಗಂಗಾಸ್ನಾನಮಾಡಿಸಿದ ಪುಣ್ಯ ನಿನಗೆ ಬರುತ್ತಿತ್ತು ಎಂದರು.ಆ ಮನುಷ್ಯನ ಮನ ಕರಗಿತು ಏಕನಾಥರ ಶಿಷ್ಯನಾಗಿ ಮುಂದೆ ಉತ್ತಮ ಜೀವನ ನಡೆಸಿದ.
 
ಇದೆಂಥಾ ಸೌಜನ್ಯದ,ಸಜ್ಜನಿಕೆಯ ಹಾಗೂ ಸಹನೆಯ ಪರಮಾವಧಿ?
 
ಸೌಜನ್ಯ ದೌರ್ಜನ್ಯ ಗಳೆರಡೂ ಪ್ರತಿಯೊಬ್ಬನಲ್ಲೂ ಅಡಕವಾಗಿರುವ ಈ ಕಲಿಕಾಲದಲ್ಲಿ ಇಂತಹ ಸಜ್ಜನಸಂಗ ದೊರಕಬಹುದೆ?
 
ಕೆಸರಿನಲ್ಲಿಯೇ ಕಮಲವಿರುವುದು ಹಾಗಾಗಿ ಸಜ್ಜನ ಬಾಹುಳ್ಯ ಸರ್ವೇ ಸಾಮನ್ಯವಾಗಿದೆಯಾದರೂ ಸಜ್ಜನರನ್ನು ಗುರುತಿಸುವ ಶಕ್ತಿಯನ್ನು ಆಭಗವಂತನೇ ಕರುಣಿಸಬೇಕಲ್ಲವೇ
 
"ಎಂದುರೋ ಮಹಾನು ಭಾವುಲು ಅಂದರಿಕಿ ವಂದನಮು" ಎಂಬ  ಸಂತ ತ್ಯಾಗರಾಜರ ಮಾತಿನಂತೆ ಸಜ್ಜನ ಶಿರೊಮಣಿಗಳಿಗೆ ನನ್ನ ನಮನ.
 

Comments