ಸಣ್ಣದಲ್ಲದ ಕಾಡುವ ಕಥೆಗಳು

ಸಣ್ಣದಲ್ಲದ ಕಾಡುವ ಕಥೆಗಳು

ಹಳೆಯ ಪತ್ರಿಕೆಗಳನ್ನು ಹುಡುಕಾಡುವಾಗ ಸಿಕ್ಕ ಕೆಲವು ಸಣ್ಣ ಆದರೆ ಬಹಳ ಸಮಯ ಕಾಡುವ ಕಥೆಗಳನ್ನು ಸಂಗ್ರಹಿಸಿ ನಿಮ್ಮ ಓದಿಗಾಗಿ ಇಲ್ಲಿ ನೀಡಿರುವೆ. ಮೂಲ ಕಥೆಗಾರರಿಗೆ ಕೃತಜ್ಞತೆಗಳು

ಮರಳು ಸಾಕ್ಷಿ

ಅವರು ಕಳೆದ ಒಂದು ವರ್ಷದಿಂದ ಅದೇ ಸಮುದ್ರದ ಮರಳಿನ ಮೇಲೆ ಕುಳಿತು ಪರಸ್ಪರ ಕಣ್ಣಂಚಿನಲ್ಲಿಯೇ ಮೌನವಾಗಿ ಪ್ರೀತಿಸುತ್ತಿದ್ದರು. ಮೊದಲು ಮರಳಿನ ಕಣದಷ್ಟಿದ್ದ ಅವರೀರ್ವರ ನಡುವಣ ಪ್ರೇಮ ಸಾಗರದ ಅಲೆಗಳೆತ್ತರಕ್ಕೇರಿತು. ಅವರ ಪವಿತ್ರ ಪ್ರೇಮಾರಾಧನೆಗೆ ನಿತ್ಯ ಮರಳು ಸಾಕ್ಷಿಯಾಗಿತ್ತು. ಅದೊಂದು ದಿನ ಇಬ್ಬರೂ ಮರುದಿನ ದೇವಾಲಯದಲ್ಲಿ ವಿವಾಹವಾಗಲು ನಿಶ್ಚಯಿಸಿ ಎಂದಿನಂತೆ ಅದೇ ಮರಳ ರಾಶಿಯ ಮೇಲೆ ಕೈಕೈ ಹಿಡಿದು ಕುಳಿತಿದ್ದರು. ಅವಳ ತಲೆಗೆ ಅವನ ಹೆಗಲು ಆಸರೆ ನೀಡಿದರೆ ಅವನ ಕೈ ಅವಳ ತಲೆ ನೇವರಿಸುತ್ತಿತ್ತು. ಇಬ್ಬರ ಕಣ್ಣಲ್ಲೂ ಭವ್ಯ ಭವಿಷ್ಯದ ಚಿಗುರು ಟಿಸಿಲೊಡೆದಿತ್ತು. ಅಯ್ಯೋ, ಒಮ್ಮೆಲೇ ಅನಿರೀಕ್ಷಿತ ಬೃಹತ್ ಅಲೆಗಳು ವಾಯುವೇಗದಲ್ಲಿ ದಡಕ್ಕಪ್ಪಳಿಸಿ ಇಬ್ಬರನ್ನೂ ಸಮುದ್ರದ ಗರ್ಭಕ್ಕೆ ಸೆಳೆದೊಯ್ದಿತು. ಅವರ ಕನಸುಗಳೆಲ್ಲ ನುಚ್ಚುನೂರಾಗಿ ಕೊಚ್ಚಿ ಹೋಗಿತ್ತು. ಎಲ್ಲದಕ್ಕೂ ಕೇವಲ ಮರಳು ಸಾಕ್ಷಿಯಾಗಿತ್ತು. !

***

ಮೂತ್ರ ವಿಸರ್ಜನೆ

ರಾತ್ರಿಯ ಬಸ್ ನಗರದೆಡೆಗೆ ಶರವೇಗದಲ್ಲಿ ಸಾಗಿತ್ತು. ಹೊರಗೆ ಸುತ್ತಲೂ ದಟ್ಟ ಮರಗಳ ಸಾಲು. ಸಮೀಪದಲ್ಲಿ ಯಾವುದೇ ಊರು ಇದ್ದಂತಿಲ್ಲ. ಎಲ್ಲೆಡೆ ನೀರವ ಮೌನ. ಅಮವಾಸ್ಯೆಯ ಕಾರ್ಗತ್ತಲನ್ನು ಸೀಳಿಕೊಂಡು ಬಸ್ ಓಡುತ್ತಿತ್ತು. ಮೂರನೇ ಸೀಟಿನಿಂದ ೭೦ರ ಪ್ರಾಯದ ಹಿರಿಯ ನಾಗರಿಕರೊಬ್ಬರು ನಿಧಾನವಾಗಿ ಡ್ರೈವರ್ ಬಳಿ ಬಂದು ಮೂತ್ರ ವಿಸರ್ಜನೆಗೆ ಅವಸರವಾಗಿದ್ದು ಕೊಂಚ ನಿಲ್ಲಿಸುವಂತೆ ಸಂಜ್ಞೆ ಮೂಲಕ ಬೆರಳೆತ್ತಿ ತೋರಿಸಿದರು. ಅವರ ಮೊಗದಲ್ಲಿ ಒಂಥರಾ ಯಾತನೆ. ಬಹುಷಃ ಬಹಳ ಸಮಯದಿಂದ ಮೂತ್ರಬಾಧೆ ಎಂದು ತೋರುತ್ತದೆ. ಡ್ರೈವರ್ ಕನಿಕರದಿಂದ ಬಸ್ ನಿಲ್ಲಿಸಿದ. ಅಜ್ಜ ಕೆಳಗಿಳಿದು ಬಸ್ಸಿನ ಪಕ್ಕ ಹೋಗುವಷ್ಟರಲ್ಲಿಯೇ ಹಿಂಬದಿಯಿಂದ ಇನೋವಾ ಕಾರೊಂದು ಬಂದು ನಿಂತಿತು. ಅದರಲ್ಲಿದ್ದ ಏಳೆಂಟು ಜನ ಯುವಕರು ಚಾಕು, ಪಿಸ್ತೂಲುಗಳೊಂದಿಗೆ ಬಸ್ ಹತ್ತಿ ಎಲ್ಲರನ್ನೂ ಬೆದರಿಸಿ ಹಣ, ಒಡವೆ, ಮೊಬೈಲ್ ಎಲ್ಲವನ್ನೂ ಗಂಟು ಕಟ್ಟಿಕೊಂಡು ಕೆಳಗಿಳಿದು ಇನೋವಾ ಹತ್ತಿದರು. ಅವರೊಂದಿಗೆ ಕೊನೆಯದಾಗಿ ಹತ್ತಿದ ಮೂತ್ರ ಬಾಧಿತ ಅಜ್ಜ ಡ್ರೈವರ್ ಕಡೆ ನೋಡಿ ನಗುತ್ತಾ ಟಾಟಾ ಮಾಡಿದರು ! ಇನೋವಾ ಮರೆಯಾಯಿತು. ಬಸ್ಸಿನಲ್ಲಿ ಹಾಹಾಕಾರವೆದ್ದಿತು.

-ಕೆ. ಶ್ರೀನಿವಾಸ ರಾವ್, ಹರಪನಹಳ್ಳಿ 

***

ಪ್ರತಿಸೃಷ್ಟಿ

ತದ್ರೂಪಿ ಸೃಷ್ಟಿಯ ಸಂಶೋಧನೆಯಲ್ಲಿ ಪ್ರಚಂಡ ಯಶಸ್ಸು ಗಳಿಸಿದ್ದ ಮಹಾವಿಜ್ಞಾನಿಯೊಬ್ಬನ ಆಯಸ್ಸು ಮುಗಿಯುತ್ತಾ ಬಂದಿತ್ತು. ತನ್ನದೇ ತದ್ರೂಪಿ ಸಂಶೋಧನೆಯಲ್ಲಿನ ಅವನ ಸಾಧನೆ ಎಷ್ಟು ಪರಿಪೂರ್ಣವಾಗಿತ್ತೆಂದರೆ, ಅದರಲ್ಲಿ ದೋಷ ಹುಡುಕಲು ಯಾರಿಗೂ ಸಾಧ್ಯವೇ ಇರಲಿಲ್ಲ.

ಒಂದು ದಿನ ಮೃತ್ಯು ದೇವತೆ ತನಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದೆ ಎಂಬುದು ಅವನಿಗೆ ಹೇಗೋ ತಿಳೀದು ಹೋಯಿತು. ಮೃತ್ಯುವಾದರೂ ಅಲ್ಲಿದ್ದ ಹದಿಮೂರು ಮಂದಿ ವಿಜ್ಞಾನಿಗಳನ್ನು ಕಂಡು ಗೊಂದಲಗೊಂಡು, ಅವನನ್ನು ಗುರುತಿಸಲಾಗದೆ ಮರಳಿ ಹೋಯಿತು.

ಆದರೆ ಮತ್ತೆ ಕೆಲವೇ ಕ್ಷಣಗಳಲ್ಲಿ ಅದು ಮರಳಿ ವಿಜ್ಞಾನಿಯ ಮನೆಯಲ್ಲಿತ್ತು. ಬಂದ ತತ್ ಕ್ಷಣ ತದ್ರೂಪಿಗಳನ್ನುದ್ದೇಶಿಸಿ ಅದು ಹೀಗೆ ಹೇಳಿತು,

“ಸ್ವಾಮೀ ! ಎಂಥ ಧೀಮಂತರು ನೀವು ! ನಿಮ್ಮದೇ ತದ್ರೂಪಿಗಳನ್ನು ಕರಾರುವಾಕ್ ಲೆಕ್ಕಾಚಾರದಲ್ಲಿ ಹೇಗೆ ಸೃಷ್ಟಿಸಿಬಿಟ್ಟಿದ್ದೀರಿ. ಆದರೂ ನಿಮ್ಮ ಈ ಸೃಷ್ಟಿಕಾರ್ಯದಲ್ಲಿ ಒಂದು ತಪ್ಪನ್ನು ಒಂದೇ ಒಂದು ಚಿಕ್ಕ ಪ್ರಮಾದವನ್ನು ಕಂಡು ಹಿಡಿದುಬಿಟ್ಟೆ.”

ವಿಜ್ಞಾನಿ ತಕ್ಷಣ ನಿಂತಲ್ಲಿಂದಲೇ ಮುಂದೆ ನೆಗೆದು ಕಿರುಚಿದ. “ಸಾಧ್ಯವೇ ಇಲ್ಲ ! ಪ್ರಮಾದ? ಎಂಥ ಪ್ರಮಾದ?’

“ಇದುವೇ ಆ ಪ್ರಮಾದ” ಎಂದ ಮೃತ್ಯುದೇವತೆ ತದ್ರೂಪಿಗಳನ್ನು ಅಲ್ಲೇ ಬಿಟ್ಟು ವಿಜ್ಞಾನಿಯನ್ನು ಎತ್ತಿ ಹೊತ್ತೊಯ್ದಿತು.

-ಜಯರಾಘವ

(ಸಂಗ್ರಹ)