ಸಣ್ಣ ಜೋಳದ ಕೃಷಿಯೇ ಚೆನ್ನ
ರೈತರ ಸರಣಿ ಆತ್ಮಹತ್ಯೆಗಳಿಂದಾಗಿ ಸುದ್ದಿ ಮಾಡಿತ್ತು ಮಹಾರಾಷ್ಟ್ರದ ವಿದರ್ಭ. ಅಲ್ಲಿನ ರೈತರು ಈಗ ಬೆಳೆಸುತ್ತಿರುವುದು ರೊಕ್ಕದ ಬೆಳೆ ಸೋಯಾಬೀನ್ಸ್. ಈ ನಡುವೆ, ಆ ಪ್ರದೇಶದ 48 ಮನೆಗಳಿರುವ ಪುಟ್ಟ ಹಳ್ಳಿ ದೊರ್-ಲಿ ಇನ್ನೊಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿದೆ. ಸ್ಥಳೀಯ ಪಾರಂಪರಿಕ ಬೆಳೆ ಸಣ್ಣ ಜೋಳದ ಕೃಷಿಯನ್ನು ಪುನರಾರಂಭಿಸುವ ಮೂಲಕ.
ಇದೇ ದೊರ್-ಲಿ ಐದು ವರುಷ ಮುಂಚೆ ಇನ್ನೊಂದು ಕಾರಣಕ್ಕಾಗಿ ಸುದ್ದಿ ಮಾಡಿತ್ತು: ಆ ಹಳ್ಳಿಯ ಎಲ್ಲರೂ ತಮ್ಮದೆಲ್ಲವನ್ನೂ (ಜಮೀನು, ಜಾನುವಾರು, ಮನೆ ಇತ್ಯಾದಿ) ಮಾರಿ, ಹಳ್ಳಿ ತೊರೆಯಲು ಸಿದ್ಧರಾಗಿದ್ದರು! ಯಾಕೆಂದರೆ, ಮೂರು ವರುಷಗಳಿಂದ ಕೃಷಿಯಲ್ಲಿ ತೀವ್ರ ನಷ್ಟ ಅನುಭವಿಸಿದ್ದರು ಅಲ್ಲಿನ ರೈತರು. ಅವರ ಎದುರು ಇದ್ದುದು ಎರಡೇ ದಾರಿಗಳು: ಎಲ್ಲವನ್ನು ಮಾರಿ ಹಳ್ಳಿ ತೊರೆಯುವುದು ಅಥವಾ ಆತ್ಮಹತ್ಯೆ.
ಈಗ ವರುಷಗಳು ಉರುಳಿವೆ. ದೊರ್-ಲಿ ಹಳ್ಳಿಗರ ಬದುಕು ಮುಂದಕ್ಕೆ ಸಾಗಿದೆ. ಆದರೆ ಬದುಕು ಅಲುಗಾಡಿಸಿದ ಅನುಭವಗಳನ್ನು ಹಳ್ಳಿಗರು ಮರೆತಿಲ್ಲ. ಅವರ ಸಾಲಗಳ ಹೊರೆಯೂ ಕಡಿಮೆಯಾಗಿಲ್ಲ. ಈ ಸನ್ನಿವೇಶದಲ್ಲಿ ತಮ್ಮ ಕೃಷಿ ವಿಧಾನಗಳ ಪುನರಾವಲೋಕನ ಮಾಡಿದ್ದಾರೆ ರೈತರು. ಆಗ ಅವರಲ್ಲಿ ಮೂಡಿಬಂದ ನಿರ್ಧಾರ: ಪಾರಂಪರಿಕ ಬೆಳೆಯಾದ ಸಣ್ಣ ಜೋಳ ಬೆಳೆಸುವುದು. ಅದರಂತೆ 20 ಹೆಕ್ಟೇರ್ ಪ್ರದೇಶದಲ್ಲಿ (ಅಂದರೆ ಹಳ್ಳಿಯ ಕೃಷಿ ಜಮೀನಿನ ಶೇ.10ರಷ್ಟು ಭಾಗದಲ್ಲಿ) ಪಾರಂಪರಿಕ ಬೆಳೆಯಾದ ಸಣ್ಣ ಜೋಳ ಬೆಳೆದಿದ್ದಾರೆ.
“ಕಳೆದ ವರುಷದ ಬರಗಾಲ ನಮ್ಮ ಕಣ್ಣು ತೆರೆಸಿತು. ಅಧಿಕ ಒಳಸುರಿ ಬೇಕಾಗುವ ರೊಕ್ಕದ ಬೆಳೆಗಳನ್ನು ಮಾತ್ರ ಬೆಳೆದು ನಾವು ಬದುಕಲು ಸಾಧ್ಯವಿಲ್ಲವೆಂಬ ಸತ್ಯ ತಿಳಿಯಿತು” ಎನ್ನುತ್ತಾರೆ ದೊರ್-ಲಿ ಹಳ್ಳೀಯ ಚಂದ್ರಕಾಂತ್ ದೊರ್-ಲಿಕರ್. ಆ ಬರಗಾಲದ ಬಿರುಸಿನಿಂದಾಗಿ ಕೈಗೆ ಬಂದ ಫಸಲು ತೀರಾ ಕಡಿಮೆ. ಜೊತೆಗೆ ಹಳ್ಳಿಯ ಜಮೀನಿನಲ್ಲಿ ಬೆಳೆದಿದ್ದ ಮೇವಿನ ಹುಲ್ಲು ಒಣಗಿ ಹೋಯಿತು. ಹಳ್ಳಿಯಲ್ಲಿರುವ 240 ಜಾನುವಾರು ಬದುಕಿಸಲಿಕ್ಕಾಗಿ ದೊರ್-ಲಿ ಹಳ್ಳಿಗರು ಮೇವು ಖರೀದಿಸ ಬೇಕಾಯಿತು - ಭಾರೀ ಬೆಲೆ ತೆತ್ತು.
ಅದೇ ಸಂದರ್ಭದಲ್ಲಿ ಆಹಾರಧಾನ್ಯಗಳ ಬೆಲೆಯೂ ಒಂದೂವರೆ ಪಟ್ಟು ಹೆಚ್ಚಿತು. “ಆಗ ನಮಗೆಲ್ಲರಿಗೂ ಸಣ್ಣ ಜೋಳದ ಮಹತ್ವ ಗೊತ್ತಾಯಿತು. ಅದರ ಸಸಿಗಳು ಉದ್ದ. ಹಾಗಾಗಿ ಸಾಕಷ್ಟು ಮೇವು ಸಿಗ್ತದೆ. ಅಷ್ಟೇ ಅಲ್ಲ, ಬೇರೆ ಆಹಾರಧಾನ್ಯಗಳ ಮಾರುಕಟ್ಟೆ ಬೆಲೆಯ ಮೂರನೇ ಒಂದು ಬೆಲೆಗೆ ಸಣ್ಣ ಜೋಳ ಸಿಗ್ತದೆ. ಆದ್ದರಿಂದ ಪ್ರತಿ ಮನೆಗೂ ಒಂದು ಎಕರೆಯಷ್ಟು ಜಮೀನಿನಲ್ಲಿ ಸಣ್ಣ ಜೋಳ ಬೆಳೆಯಲು ನಾವು ನಿರ್ಧಾರ ಮಾಡಿದ್ದು” ಎಂದು ವಿವರಿಸುತ್ತಾರೆ ದೊರ್-ಲಿಕರ್.
ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಒತ್ತಾಸೆಯೂ ಈ ನಿರ್ಧಾರಕ್ಕೆ ಕಾರಣ. ಸಿರಿಧಾನ್ಯಗಳ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಲಾಭರಹಿತ ಉದ್ದೇಶದ ಸಂಸ್ಥೆ ಅದು. ಸಾವಯವ ವಿಧಾನದಲ್ಲಿ ಸಣ್ಣ ಜೋಳ ಬೆಳೆಸುವ ರೈತರಿಗೆ, ಎಕರೆಗೆ 2,000 ರೂಪಾಯಿಗಳಂತೆ ಮೂರು ವರುಷಗಳ ಅವಧಿಗೆ ಸಹಾಯಧನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ದೊರ್-ಲಿ ಹಳ್ಳಿಯ ಒಟ್ಟು ಕೃಷಿ ಜಮೀನು 200 ಹೆಕ್ಟೇರ್. ಪ್ರತೀ ರೈತ ಕುಟುಂಬ ಒಂದರಿಂದ ನಾಲ್ಕು ಹೆಕ್ಟೇರ್ ಜಮೀನು ಹೊಂದಿದೆ.
ಆ ಪ್ರದೇಶದಲ್ಲಿ ಕೃಷಿ ಪುನರುಜ್ಜೀವನಕ್ಕಾಗಿ ಸಣ್ಣ ಜೋಳದ ಕೃಷಿಯ ಪುನರಾರಂಭ ಅತ್ಯಗತ್ಯ ಎಂಬುದು ವಿಜಯ ಜವಾನ್ಧಿಯಾ ಅವರ ಅಭಿಪ್ರಾಯ. ಅವರು ರೈತರ "ಶೇತ್ಕಾರಿ ಸಂಘಟನೆ”ಯ ಪ್ರಧಾನ ಮುಂದಾಳು. ಸಣ್ಣ ಜೋಳ ಬೆಳೆಸಿದರೆ ಕೃಷಿ ಕುಟುಂಬಕ್ಕೆ ಆಹಾರ ಭದ್ರತೆ ಮತ್ತು ಮೇವಿನ ಭದ್ರತೆ ಸಿಗುತ್ತದೆ; ಅಲ್ಲದೆ, ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು.
ಪ್ರತಿ ಹಂಗಾಮಿನಲ್ಲಿ ಸಣ್ಣ ಜೋಳದ ಬೆಳೆಯಿಂದ ಎಕರೆಗೆ 15 ಕ್ವಿಂಟಾಲಿಗಿಂತ ಅಧಿಕ ಇಳುವರಿ ಪಡೆಯಲು ಸಾಧ್ಯ. ಅದರೊಂದಿಗೆ ಪ್ರತಿಯೊಂದು ಕುಟುಂಬದ ಸರಾಸರಿ ಐದು ಜಾನುವಾರುಗಳಿಗೆ ಸಾಕಷ್ಟು ಮೇವು ಲಭ್ಯ. ಹತ್ತು ವರುಷಗಳ ಮುಂಚೆ ಸಣ್ಣ ಜೋಳದ ಕೃಷಿ ಅವಲಂಬಿಸಿದ ತಮ್ಮ ಬದುಕು ಹಸನಾಗಿತ್ತೆಂದು ನೆನಪು ಮಾಡಿಕೊಳ್ಳುತ್ತಾರೆ ರೈತ ಮೋಹನ್.
ದೊರ್-ಲಿ ಗ್ರಾಮದ ಸುಜಾತಳ ಅನುಭವದ ಪಾಠ ಕೇಳಿ: "ಸಣ್ಣ ಜೋಳದ ಕೃಷಿ ತೊರೆದು ರೊಕ್ಕದ ಬೆಳೆಗಳ ಮೋಹಕ್ಕೆ ಸಿಲುಕಿದ್ದರಿಂದ ಆದ ಅನಾಹುತಗಳು ಹತ್ತುಹಲವು. ಹಳ್ಳಿಯ ಜಾನುವಾರುಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಯಿತು. ನೀರಾವರಿ ಬೆಳೆಗಳನ್ನು ಬೆಳೆಸಿದ್ದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯಿತು. ಈಗ ನಮಗೆ ಅರ್ಥವಾಗಿದೆ ಹಳೆಯ ತಲೆಮಾರಿನವರ ಸಣ್ಣ ಜೋಳವೇ ಚೆನ್ನ ಅನ್ನೋದು.”
ಇದು ನಮಗೂ ಪಾಠ, ಅಲ್ಲವೇ?
ಫೋಟೋ 1 ಮತ್ತು 2: ಸಣ್ಣ ಜೋಳದ ಬೆಳೆ …. ಕೃಪೆ: ಅಗ್ರಿಫಾರ್ಮಿಗ್.ಇನ್ ಮತ್ತು ಡ್ರೀಮ್ಸ್ ಟೈಮ್.ಕೋ