ಸತ್ಯಕ್ಕೊಂದು ಸಂತಾಪ
‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ ನುಡಿಯಲ್ಲಿ “ ಹರಿವ ಹೊಳೆ, ಅಯಾಚಿತ ಹುಟ್ಟು, ಅಕಲ್ಪಿತ ಸಾವಿನ ನಡುವಿನ ನೋವು ನಲಿವು, ವಿಕಲ್ಪ, ದೈನ್ಯ, ಸ್ವಪ್ನ, ವಿಭಾವ ಅಭಾವಗಳ ವಿಲಕ್ಷಣ ಜೀವನ ಪ್ರವಾಹದ ಅಲೆಗಳ ಸಂಗ್ರಹದಂತಿರುವ ಈ ವಿಶಿಷ್ಟ ಕಾದಂಬರಿ ಕೇವಲ ೧೭೨ ಪುಟಗಳಲ್ಲಿ ನಾಲ್ಕು ತಲೆಮಾರಿನ ಕಥನವನ್ನು ಸಾಂದ್ರವಾಗಿ ಚಿತ್ರವತ್ತಾಗಿ ಹೇಳುತ್ತದೆ. ಉಳಿವಿಗಾಗಿನ ಸಂಘರ್ಷ ಮತ್ತು ಘನತೆಗಾಗಿನ ಸಂಘರ್ಷ-ಇವೆರಡರ ಜಂಟಿ ಕಾರ್ಯಾಚರಣೆಯೇ ಈ ಪ್ರವಾಹದ ಮುಖ್ಯ ಪ್ರಾಣ. ಇಲ್ಲಿ ಬರುವ ಪಾತ್ರಗಳೆಲ್ಲ ಈ ಎರಡು ಸಂಘರ್ಷಗಳ ನಡುವೆ ಅಲ್ಪತ್ರಾಣಗಳಾಗಿ ಚಡಪಡಿಸುತ್ತಾ ಈಸುತ್ತವೆ. ಉಸಿರುಗಟ್ಟಿಸುವ ಕಾರ್ಪಣ್ಯದಿಂದ ಅಭದ್ರತೆಯಾದ ಭೂಮಿಕೆಗಳಲ್ಲಿ ಒರೆಗೆ ಹಚ್ಚಲ್ಪಡುತ್ತವೆ.
ಶಿವರಾಮ ಕಾರಂತರು ಹೇಳುವ “ಅಭಾವದಿಂದ ಬರುವ ಕುಯುಕ್ತಿಯ ಆವರಣ". ಇದು ವಾತ್ಸಲ್ಯ ವಂಚಿತ ‘ನಿರ್ಮಾನುಷ' ಬಯಲು. ಇಂಥಲ್ಲಿ ಅಕಾಲ ವಿರಕ್ತಿ ಒಂದು ರಕ್ಷಣಾ ವಿಧಾನವೂ ಹೌದು. ಇದನ್ನೆಲ್ಲಾ ಎನಿತೂ ಪಕ್ಷಪಾತವಿಲ್ಲದೆ ನಿರ್ಲಿಪ್ತ ನಿರ್ವಿಕಾರ ದನಿಯಲ್ಲಿ ತೋರಿಸುವ ಈ ಕೃತಿಯ ಒಕ್ಕಣೆ, ನಮಗೆ ಸಾಕಷ್ಟು ಬಿಟ್ಟ ಸ್ಥಳಗಳನ್ನು ತುಂಬಲು ಕೊಡುತ್ತದೆ. ವ್ಯಕ್ತಿಗಳಷ್ಟೇ ಮಹತ್ವದ ಭೂಮಿಕೆಯನ್ನು ಇಲ್ಲಿಯ ಊರುಗಳು, ಬಸ್ ನಿಲ್ದಾಣಗಳು, ಅಡಿಗೆ ಕೋಣೆಗಳು, ಸಮುದ್ರ ತೀರಗಳು, ಆಸ್ಪತ್ರೆಗಳು ನಿರ್ವಹಿಸಿತ್ತವೆ. ಒಂದು ನಮೂನೆಯ ಉದ್ ವಾಸ್ತವದ (Surreal) ರೀತಿಯ ಈ ಕಥನಕ್ಕೆ ಸಂಭ್ರಮ ಪಡದ, ರಂಪ ಮಾಡಿಕೊಳ್ಳದ ವಿಶೇಷ ಗುಣ ಇದೆ. ಹೀಗಾಗಿ ಇದು ಪಾತ್ರ ಪ್ರಸಂಗಗಳನ್ನು ಮೀರಿದ, ಸಾರ್ವತ್ರಿಕ ಮನುಕುಲದ ಹಾಡಿನ ದನಿಯಾಗಿ ನಮ್ಮನ್ನು ವಿಚಲಿತಗೊಳಿಸುತ್ತದೆ. ಎಲ್ಲ ಭೌತಿಕ ವಸ್ತುಗಳ ಅರ್ಥಹೀನತೆಯನ್ನು ಮನಗಾಣುತ್ತಾ ಈ ಕೃತಿ ಅನಿರ್ಬಂಧಿತ ನಿಷ್ಕಾರುಣ ಮೋಹಕ್ಕಾಗಿ ಹಂಬಲಿಸುತ್ತದೆ. ನಮ್ಮನ್ನು ಆರಾಮ ಖುರ್ಚಿಗಳಾಚೆಗೆ ತಳ್ಳುವ ಈ ವಿಶಿಷ್ಟ ಕಾದಂಬರಿಗಾಗಿ ಪ್ರಿಯ ಶ್ರೀನಾಥ್ ಅವರನ್ನು ನಮ್ಮೆಲ್ಲರ ನೆಚ್ಚಿನ ಕವಿ ಗಂಗಾಧರ ಚಿತ್ತಾಲರ ಈ ಸಾಲುಗಳೊಂದಿಗೆ ಅಭಿನಂದಿಸುತ್ತೇನೆ.
ಹರಿವ ನೀರಿದು, ಮರಳಿ ಮೂಲದೆಡೆ
ಹರಿಯಲಾರದ ನಿರತ ಏಕಮುಖಗಾಮಿ ಹೊಳೆ
ಹರಿದಷ್ಟು ಮರೆಯೊಳಡಗುವ ನಿರಂತರ ಪಾತ್ರ
ಹರಿದಷ್ಟು ಸುತ್ತುವರಿದು ಇದೀಗ ಈ ಕ್ಷಣವಾಗಿಯೇ ಮಾತ್ರ.”
ಎಂದಿದ್ದಾರೆ.