ಸತ್ಯಾನ್ವೇಷಣೆ

ಸತ್ಯಾನ್ವೇಷಣೆ

ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!

     ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ ಶಿಖರ, ಜ್ಞಾನದ ಶಿಖರವಾಗಿರುತ್ತದೆ. ವಾಸ್ತವತೆಯನ್ನು ಆಧರಿಸಿ ನಮ್ಮ ಮಾತುಗಳಿದ್ದರೆ ಅದು ವಾಸ್ತವವಾಗಿ ಗೋಚರಿಸುತ್ತವೆ. ಸತ್ಯ ಮತ್ತು ಜ್ಞಾನಗಳು ಒಂದೇ ಆಗಿರುತ್ತವೆ. ಸತ್ಯದ ಜ್ಞಾನದ ಆಧಾರದಲ್ಲಿ ನಮ್ಮ ಮಾತುಗಳಿದ್ದರೆ ಅವು ನಿಜವಾಗುತ್ತವೆ. ವಾಸ್ತವತೆ ಅಥವ ಸತ್ಯ ಎಂದರೆ ಯಾವುದು? ಏನು? ಸತ್ಯ ಎಂದರೇನೆಂದು ತಿಳಿಯದೆ ನಮ್ಮ ಜ್ಞಾನವನ್ನು ಸತ್ಯದೊಂದಿಗೆ ಅಥವ ಸತ್ಯವನ್ನು ಜ್ಞಾನದೊಂದಿಗೆ ಗುರುತಿಸುವುದಾದರೂ, ತಿಳಿಯುವುದಾದರೂ ಹೇಗೆ? ಮತ್ತೆ ನಾವು ವಿಚಿತ್ರ ತರ್ಕದ ಸುಳಿಗೆ ಸಿಕ್ಕಿಬಿಟ್ಟೆವು. ಸತ್ಯ ಅನ್ನುವುದು ಹೇಗಿದೆಯೋ ಹಾಗೆ ಗೊತ್ತಾಗಬೇಕು, ಹೇಗೆ ಕಾಣಿಸುತ್ತದೆಯೋ ಹಾಗಲ್ಲ!

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ

ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |

ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ

ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

     ನಮ್ಮ ಮುಂದೆ ವಿಧ-ವಿಧವಾದ ಸತ್ಯಗಳು ಕಂಡುಬರುತ್ತವೆ. ಒಬ್ಬರು ಹೇಳುತ್ತಾರೆ, "ಇದೇ ಸತ್ಯ". ಇನ್ನೊಬ್ಬರು, "ಅದು ಸತ್ಯ" ಎನ್ನುತ್ತಾರೆ. "ಎಲ್ಲವೂ ಸತ್ಯ" ಎಂದು ಮತ್ತೊಬ್ಬರು ಹೇಳುತ್ತಾರೆ. ಆದರೆ ಅಂತಿಮ ಸತ್ಯ ಯಾವುದು? ಅಂತಿಮ ಸತ್ಯ ಯಾವುದು ಎಂಬುದನ್ನು ಅರಿಯಲು ನಮಗೆ ಅಗತ್ಯವಾದ ಸ್ಪಷ್ಟವಾದ ಜ್ಞಾನ ಹೊಂದಿರಬೇಕಾಗುತ್ತದೆ. ಇಡೀ ಪ್ರಪಂಚವೇ ಮಾಯೆ, ಅದೇ ಅಂತಿಮ ಸತ್ಯವಲ್ಲ ಅನ್ನುತ್ತಾರೆ. ಹಾಗಾದರೆ ಈ ಪ್ರಪಂಚದಲ್ಲಿನ ಯಾವುದನ್ನೇ ಆಗಲಿ ಸತ್ಯವೆಂದು ಹೇಗೆ ಹೇಳುವುದು? ನಾವು ಏನು ಮಾತನಾಡುತ್ತೇವೋ ಅದೂ ಸತ್ಯವಾಗಲಾರದು! ಓಹ್! ಎಷ್ಟೊಂದು ಗೋಜಲಾಯಿತು, ಈ ಸಿಕ್ಕು ಬಿಡಿಸುವುದಾದರೂ ಹೇಗೆ? ಸತ್ಯವೆಂದರೇನು ಎಂಬ ಜ್ಞಾನ ಇಲ್ಲಿ ಅಗತ್ಯವಾಗುತ್ತದೆ. ನಮಗೆ ಜ್ಞಾನ ಬೇಕು, ಏಕೆಂದರೆ ಅದೇ ಸತ್ಯದೆಡೆಗೆ ನಮ್ಮನ್ನು ಕರೆದೊಯ್ಯುವುದು. ಯಾವುದು ಜ್ಞಾನ ಮತ್ತು ಯಾವುದು ಸತ್ಯ ಎಂಬ ಕ್ಲಿಷ್ಟ ವಿಷಯದೆಡೆಗೆ ನಾವೀಗ ಹೊರಳುತ್ತಿದ್ದೇವೆ.

     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!

ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ

ನಿಜವ ನಂಬಲು ಹಿಂಜರಿಕೆಯೇಕೆ |

ಜಿಜ್ಞಾಸೆಯಿರಲಿ ಹೇಗೆ ಏನು ಏಕೆ

ಹಿರಿಯ ನಿಜವರಿತು ನಡೆವ ಮೂಢ ||

     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.

     ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಅವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ. ಇದನ್ನು 'ಮತಿ' ಎಂದೂ ಹೇಳುತ್ತಾರೆ. ಸತ್ಯ ಅನ್ನುವುದು ಅತ್ಯಂತ ಉನ್ನತ ಸ್ತರದಲ್ಲಿ ನಮ್ಮ ಮೆದುಳು ಗ್ರಹಿಸಬಹುದಾದಕ್ಕಿಂತ ಮೇಲಿರುತ್ತದೆ, ಯಾವುದು ಮೇಲುನೋಟಕ್ಕೆ ಕಂಡುಬರುತ್ತದೋ ಅದಕ್ಕಿಂತ ಭಿನ್ನವಾಗಿರಬಹುದು. ಅಂತಹ ಸ್ಥಿತಿಯಲ್ಲಿ ನಾವು ಏನು ಮಾತನಾಡುತ್ತೇವೋ, ಏನನ್ನು ಕೇಳುತ್ತೇವೋ ನಮಗೇ ಗೊತ್ತಾಗುವುದಿಲ್ಲ.

     ಹಿಂದಿನ ಒಂದು ಲೇಖನದಲ್ಲಿ ಬದುಕುವ ಆಸೆ ನಮ್ಮನ್ನು ಬದುಕಿಸುತ್ತದೆ ಎಂಬ ಬಗ್ಗೆ ಚರ್ಚಿಸಿದೆವು. ಈಗಿನ ಸ್ಥಿತಿಗಿಂತ ಉನ್ನತ ಸ್ಥಿತಿಗೆ ಏರುತ್ತೇವೆಂಬ ಒಳ ಆಸೆ ನಮ್ಮಲ್ಲಿ ಜಾಗೃತವಾಗಿದ್ದು ಬದುಕಿಗೆ ಪ್ರೇರಿಸುತ್ತದೆ ಎಂಬ ಸತ್ಯವನ್ನು ಅರಿತೆವಲ್ಲವೇ? ಇದರ ಮುಂದುವರೆದ ಸ್ಥಿತಿಯೇ ಆತ್ಮ ಪರಮಾತ್ಮನಾಗುವ, ಪರಮಾತ್ಮನೆಡೆಗೆ ಧಾವಿಸುವ, ಪರಮಾತ್ಮನನ್ನು ಅರಿಯುವ ಕ್ರಿಯೆಯಾಗಿದ್ದು, ಇದು ಸುಪ್ತವಾಗಿರುತ್ತದೆ. ಇದೇ ಸತ್ಯಾನ್ವೇಷಣೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿದ್ದು ಅವರವರ ಸಾಧನೆ ಅನುಸರಿಸಿ ಮುನ್ನಡೆಯುತ್ತಿರುತ್ತದೆ. ಇದು ನಿರಂತರ ಕ್ರಿಯೆಯಾಗಿದೆ. ಈ ದೇವರನ್ನು ಕಾಣುವ, ಕಾಣಬೇಕೆನ್ನಿಸುವ, ಅರಿಯಬೇಕೆನ್ನಿಸುವ, ಸತ್ಯ ತಿಳಿಯಬೇಕೆನ್ನುವ ವಿಚಾರವನ್ನು ನಮ್ಮ ತಲೆಯಲ್ಲಿ ತುರುಕಿದವರು ಯಾರು? ಈ ವಿಷಯದಲ್ಲಿ ಅನೇಕ ಮಹಾಮಹಿಮರು, ಸಾಧು-ಸಂತರು, ದಾರ್ಶನಿಕರು, ಧಾರ್ಮಿಕರು ಅನೇಕ ರೀತಿಯ ಮಾರ್ಗದರ್ಶನಗಳು, ವಿಚಾರಗಳನ್ನು ನೀಡಿದ್ದಾರೆ, ನೀಡುತ್ತಿರುತ್ತಾರೆ. ಸಾಧಕರು ಇವೆಲ್ಲವನ್ನೂ ಜ್ಞಾನ ಗಳಿಸುವ ಸಲುವಾಗಿ ತಿಳಿದುಕೊಳ್ಳುತ್ತಾರೆ, ಮನನ ಮಾಡಿಕೊಳ್ಳುತ್ತಾರೆ, ಮಥಿಸುತ್ತಾರೆ, ಧ್ಯಾನಿಸುತ್ತಾರೆ, ಅಂತಿಮವಾಗಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತಿಳಿದಷ್ಟಕ್ಕೇ ಸಾಕು ಅಂದುಕೊಳ್ಳುವವರು, ತಿಳಿದದ್ದೇ ಸತ್ಯ ಎಂದ ವಾದಿಸುವವರು, 'ನಮ್ಮ ಗುರುಗಳು ಹೇಳಿದ್ದಾರಲ್ಲಾ, ಅವರು ಹೇಳಿದ ಮೇಲೆ ಮುಗಿಯಿತು, ಅದು ಸತ್ಯವೇ' ಎಂದು ವಿಚಾರ ಮಾಡದಿರುವವರು, ತಿಳಿಯುವ ಕುತೂಹಲವನ್ನೇ ತೋರದವರು, ಎಲ್ಲಾ ಸುಳ್ಳು ಅನ್ನುವವರು, ತಿಳಿಯಲು ಇಚ್ಛಿಸದವರು, ಹೀಗೆ ವಿವಿಧ ವಿಚಾರಿಗಳಿರುತ್ತಾರೆ. ಆದರೆ, ಒಂದಂತೂ ನಿಜ, ಯಾವ ಪ್ರಮಾಣದಲ್ಲೇ ಆಗಲಿ, 'ಇದು ಏನು?' ಎಂದು ತಿಳಿಯುವ ಕುತೂಹಲವಂತೂ ಸುಪ್ತವಾಗಿ ವಿವಿಧ ಪ್ರಮಾಣಗಳಲ್ಲಿ ಅಂತರ್ಗತವಾಗಿರುವುದಂತೂ ಸತ್ಯ. ನಾವೀಗ ಚರ್ಚಿಸುತ್ತಿರುವುದು ಸುಪ್ತ ಕುತೂಹಲವನ್ನು ತಣಿಸಿಕೊಳ್ಳಬಯಸುವ ಮನೋಸ್ಥಿತಿಯವರ ಕುರಿತು.

     ಸತ್ಯವನ್ನು ತಿಳಿಯುವ ಬಯಕೆ ಅಂತರಂಗದಲ್ಲಿ ಸುಪ್ತವಾಗಿರುತ್ತದೆ ಎಂದೆವು. ಈ ಬಯಕೆ ಬಂದಿದ್ದಾದರೂ ಹೇಗೆ? ಎಲ್ಲಿಂದ ಬಂದದ್ದು? ಎಂಬುದು ಯಾರಿಗೂ ಗೊತ್ತಿಲ್ಲ. ಅದು ನಮ್ಮ ಪ್ರಯತ್ನದಿಂದ ಬಂದದ್ದಂತೂ ಅಲ್ಲ. ಏಕೆಂದರೆ ಜ್ಞಾನವಿದ್ದರೆ ತಾನೇ ಪ್ರಯತ್ನದ ಪ್ರಶ್ನೆ ಉದ್ಭವಿಸುವುದು! ಹಾಗಾದರೆ ಈ ಜ್ಞಾನದ ಉಗಮವಾದರೂ ಹೇಗಾಯಿತು? ಯಾವುದರ ಬಗ್ಗೆ ಮೂಲಕಾರಣ ಗೊತ್ತಿಲ್ಲವೋ ಅದನ್ನು 'ಈಶ್ವರಾನುಗ್ರಹ' ಅಥವ 'ದೇವರ ಕೃಪೆ' ಅನ್ನೋಣವೇ? ತಿಳಿಯಬೇಕೆಂಬ ಒಳತುಡಿತವಿದೆ. ಹೇಗೆ ತಿಳಿಯಬೇಕು ಮತ್ತು ಅದು ಏನು ಎಂಬುದರ ಬಗ್ಗೆ ನಿಜವಾದ ಸಾಧಕ ತನ್ನದೇ ಆದ ಪಥದಲ್ಲಿ ಮುಂದಡಿಯಿಡುತ್ತಾನೆ. ಈ ಅಂತರ್ಗತ ತುಡಿತವೇ ಜೀವಿಯನ್ನು ಸತ್ಯಾನ್ವೇಷಣೆಗೆ ಮುನ್ನಡೆಯುವಂತೆ ಮಾಡುವ ಶಕ್ತಿಯಾಗಿದೆ. ಸತ್ಯ ಯಾವುದು, ಅಸತ್ಯ ಯಾವುದು ಎಂದು ವಿವೇಚಿಸುವ ಕ್ರಿಯೆಯನ್ನು 'ಮತಿ' ಎನ್ನುತ್ತಾರೆ.

     ಈಗ ಇನ್ನೊಂದು ಅಂಶವನ್ನೂ ಗಮನಿಸಬೇಕಿದೆ. ಸತ್ಯವನ್ನು ತಿಳಿಯುವ ಸುಪ್ತ ಆಸೆ ಅಂತರ್ಗತವಾಗಿ ಇರುತ್ತದೆ ಎಂದಾದರೆ ಆ ಸತ್ಯ ಅನ್ನುವುದು ಇದೆ ಎಂಬುದನ್ನು ಒಪ್ಪಬೇಕಾಗುತ್ತದೆ. ಹಾಗೆ ಒಪ್ಪಿ ಮುಂದುವರೆಯುವುದೇ ಸತ್ಯದಲ್ಲಿ ಇರುವ ನಂಬಿಕೆ ಅಥವ ಶ್ರದ್ಧೆಯನ್ನು ವ್ಯಕ್ತಪಡಿಸಿದಂತೆ! ಈ ಮತಿ ಮತ್ತು ಶ್ರದ್ಧೆ ಅನ್ನುವುದು ಒಂದಕ್ಕೊಂದಕ್ಕೆ ಪೂರಕವಾದುದು. ಸತ್ಯ ಇದೆ ಎಂದು ಹೇಗೆ ನಂಬುವುದು? ಅದು ನಮ್ಮ ಮನಸ್ಸಿನಲ್ಲಿ ಇರುವ ನಂಬಿಕೆಯಾಗಿದೆ. ಸತ್ಯವನ್ನು ತಿಳಿಯುವ ಒಳಬಯಕೆಯೇ ನಂಬಿಕೆಯಾಗಿ, ಶ್ರದ್ಧೆಯಾಗಿ ತನ್ನನ್ನು ತಾನು ಅರಿಯುವ ಕ್ರಿಯೆಯಾಗಿ ಮುಂದುವರೆಯುತ್ತದೆ. ಹೀಗಾಗಿ ನಂಬಿಕೆ ಅನ್ನುವುದು ಚಿಂತನೆ ಮತ್ತು ಅರಿವಿಗಿಂತ ಉನ್ನತವಾದುದಾಗುತ್ತದೆ. ಅದು ಕುರುಡು ನಂಬಿಕೆಯೆಂದು ನಾವು ಹೇಳುವಂತಹದಲ್ಲ, ಬದಲಾಗಿ ಸತ್ಯ ಇದೆ ಅನ್ನುವ ನಿಗ್ರಹಿಸಲಾಗದ ಭಾವನೆಯಾಗಿದೆ. ಅದು ಇರಲೇಬೇಕು. ಸತ್ಯದೆಡೆಗೆ ತುಡಿಯುವ ಒಳಮನಕ್ಕಿಂತ ಅಂದರೆ ಮತಿಗಿಂತ, ಸತ್ಯವಿದೆಯೆಂದು ನಂಬುವ ಶ್ರದ್ಧೆ ಅನ್ನುವುದು ಹಿರಿದೆಂದು ತಿಳಿದವರು ಹೇಳುತ್ತಾರೆ. ಸಾಮಾನ್ಯವಾದ ನಂಬಿಕೆಗಿಂತ ಇಲ್ಲಿ ಪ್ರಸ್ತಾಪಿಸಿದ ಅಚಲ ನಂಬಿಕೆಯಿದ್ದರೆ ಅದು 'ನಮ್ಮನ್ನು ನಾವು ಅರಿಯುವುದಕ್ಕೆ' ಸಹಕಾರಿಯಾಗುತ್ತದೆ. ಎಂತಹ ಉನ್ನತವಾದ ಪಾಂಡಿತ್ಯವಿದ್ದರೂ ನಂಬಿಕೆಯಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ.

     ಅಚಲ ನಂಬಿಕೆ ಬರಬೇಕೆಂದರೆ ನಿಷ್ಠೆ ಇರಬೇಕಾಗುತ್ತದೆ. ನಂಬಿದ ಸತ್ಯದಲ್ಲಿ ನಿಷ್ಠೆ ಹೊಂದಿದವನು ಸತ್ಯದೊಂದಿಗೆ ಒಂದಾಗಿರುತ್ತಾನೆ. ನಿಷ್ಠೆಯಿದ್ದಲ್ಲಿ ಶ್ರದ್ಧೆ ಇರುತ್ತದೆ, ಶ್ರದ್ಧೆ ಇರುವಲ್ಲಿ ಸತ್ಯದೆಡೆಗೆ ಧಾವಿಸುವ ತವಕವಾದ ಮತಿ ಇರುತ್ತದೆ. ಈ ನಿಷ್ಠೆ ಅನ್ನುವುದಾದರೂ ಏನು? ನಿಷ್ಠೆ ಅಂದರೆ ನಂಬಿದ್ದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಒಪ್ಪದ ಮನೋಸ್ಥಿತಿ ಅನ್ನಬಹುದು. ಮನಸ್ಸು ತಾನು ನಂಬಿದ ಸತ್ಯವನ್ನು ಮಾತ್ರ ಕುರಿತು ಯೋಚಿಸುತ್ತದೆ, ಮತ್ತೇನನ್ನೂ ಯೋಚಿಸುವುದಿಲ್ಲ. ಮನಸ್ಸಿನ ಕ್ರಿಯೆಯೇ ಒಂದು ರೀತಿಯಲ್ಲಿ ಟ್ಯೂನ್ ಮಾಡಿದಂತೆ ಆಗಿಬಿಟ್ಟಿರುತ್ತದೆ. ಅಚಲ ನಂಬಿಕೆ ಇಂತಹ ನಿಷ್ಠೆಯನ್ನು ಸೃಷ್ಟಿಸುತ್ತದೆ.

     ಮುಂದಿನ ಭಾಗದಲ್ಲಿ ಮತ್ತಷ್ಟು ವಿಚಾರಗಳನ್ನು ಗಮನಿಸೋಣ. ಈ ಭಾಗವನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ: ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ. ಮತಿಗೆ  ಸತ್ಯವಿದೆಯೆಂದು ನಂಬುವ ಶ್ರದ್ಧೆ/ನಂಬಿಕೆ ಸಾಥ್ ನೀಡುತ್ತದೆ. ಶ್ರದ್ಧೆಗೆ ನಿಷ್ಠೆ ಬೆನ್ನೆಲುಬಾಗುತ್ತದೆ. ಪ್ರಾರಂಭದ ವಾಕ್ಯದೊಂದಿಗೇ ಮುಕ್ತಾಯಗೊಳಿಸುವೆ: ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!

-ಕ.ವೆಂ.ನಾಗರಾಜ್.

*****************

ಚಿತ್ರಕೃಪೆ: http://www.theeurekalife.com/wp-content/uploads/2013/07/practice-Gods-pr...