ಸದನದ ಮಾತು ಬೆಳಕಾಗಲಿ ; ಅಧಿವೇಶನ ಅರ್ಥಪೂರ್ಣವಾಗಲಿ
ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣ, ಆಡಳಿತ ಪಕ್ಷದ ಶ್ಲಾಘನೆ ಹಾಗೂ ಪ್ರತಿಪಕ್ಷಗಳ ಟೀಕೆ ಇದೆಲ್ಲ ಅಧಿವೇಶನದಲ್ಲಿ ಇರುವುದೇ. ಆದರೆ ಇದರ ನಂತರ ನಡೆಯುವ ಚರ್ಚೆ ಅರ್ಥಪೂರ್ಣವಾಗಿರಬೇಕು. ವಿಧಾನ ಮಂಡಲ ಅಧಿವೇಶನಗಳಿರುವುದೇ ಜನಪ್ರತಿನಿಧಿಗಳ ಚರ್ಚೆಗಾಗಿ. ಈ ಚರ್ಚೆಗಳು ಅಂತಿಮವಾಗಿ ಜನಹಿತ ಕಾರ್ಯಗಳಲ್ಲಿ ಪರ್ಯವಸನ ಆಗಬೇಕು. ಸರಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರು ಮಾತನಾಡಬಹುದು. ಆದರೆ ಇದನ್ನು ಪ್ರತಿಪಕ್ಷಗಳು ಒರೆಗೆ ಹಚ್ಚದೇ ಬಿಡುವುದಿಲ್ಲ. ಈ ಬಾರಿ ಇದರ ಜೊತೆಗೆ ಹಲವಾರು ಗಂಭೀರ ವಿಚಾರಗಳಿವೆ. ಹಿಜಾಬ್ - ಕೇಸರಿ ಸಂಘರ್ಷ ಇದರಲ್ಲಿ ಪ್ರಮುಖವಾದದ್ದು. ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್ ಗಟ್ಟಿಯಾಗಿ ಹಿಡಿದುಕೊಂಡಿರುವುದರಿಂದ ಆ ವಿಚಾರದಲ್ಲಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲಿದೆ. ಕೇಂದ್ರದ ಬಜೆಟ್ ನಲ್ಲಿ ಪ್ರಸ್ತಾಪವಾದ ನದಿ ಜೋಡಣೆ ಯೋಜನೆಯು ರಾಜ್ಯದ ಪಾಲಿಗೆ ಮಾರಕವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದ್ದು, ಈ ಬಗ್ಗೆಯೂ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು. ಇದರ ಜೊತೆಗೆ ಎಂದಿನಂತೆ ಬೆಲೆಯೇರಿಕೆ, ಕೃಷಿ ಸಮಸ್ಯೆಗಳೆಲ್ಲ ಇದ್ದೇ ಇರುತ್ತದೆ.
ಇದೀಗಷ್ಟೇ ಒಂದು ಹಂತಕ್ಕೆ ನಿಂತಿರುವ, ಕೋರ್ಟ್ ನಲ್ಲಿರುವ ಹಿಜಾಬ್-ಕೇಸರಿ ಸಂಘರ್ಷದ ವಿಚಾರ ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಆದರೆ ಈ ಗದ್ದಲ ಅನವಶ್ಯಕ ರಾಜಕೀಯ ಕೆಸರಾಟಕ್ಕೆ ಕಾರಣವಾಗದಿರಲಿ. ಈ ಚರ್ಚೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಲು ಕಾರಣವಾಗಬೇಕೇ ಹೊರತು ದ್ವೇಷದ ಕಿಡಿ ಮತ್ತಷ್ಟು ಹೊತ್ತಿ ಉರಿಯಲು ಮೂಲವಾಗದಿರಲಿ. ಜನಮನದಲ್ಲಿ ಭಾವೈಕ್ಯ, ಸೌಹಾರ್ದತೆ ಬೆಳೆ ಬೆಳೆಯಲು, ಮಕ್ಕಳ ಶಿಕ್ಷಣ ಸಾಂಗವಾಗಿ ನಡೆಯಲು ಏನಾಗಬೇಕಿದೆಯೋ ಅದನ್ನು ಸಾಧಿಸಲು ಆಡಳಿತ - ಪ್ರತಿಪಕ್ಷಗಳು ಜತೆಗೂಡಿ ನಡೆಯಲಿ. ಕೆಲವೊಮ್ಮೆ ಶಾಸಕರ ಮಾತುಗಳೇ ವಿವಾದ ಉಲ್ಬಣಿಸಲು ಕಾರಣವಾಗುತ್ತವೆ. ಇಂಥ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಸಂವೇದನಾಶೀಲತೆ ಜನಪ್ರತಿನಿಧಿಗಳಿಗೆ ಇರಬೇಕು. ನೀರಾವರಿಯ ವಿಷಯದಲ್ಲಿ ರಾಜ್ಯಕ್ಕೆ ಬಹಳ ಕಾಲದಿಂದಲೂ ಅನ್ಯಾಯವಾಗುತ್ತಿದೆ. ನದಿ ಜೋಡಣೆಯು ರಾಜ್ಯಕ್ಕೆ ಅನ್ಯಾಯವಾಗಲು ಕಾರಣವಾಗಿದ್ದರೆ ಎಲ್ಲ ಪಕ್ಷಗಳು ಅದನ್ನು ತಡೆಯಲು, ರಾಜ್ಯಕ್ಕೆ ಲಾಭದಾಯಕವಾಗುವಂತೆ ರೂಪಿಸುವ ಹಕ್ಕೊತ್ತಾಯಕ್ಕೆ ದಾರಿಗಳನ್ನು ಚರ್ಚಿಸಬಹುದು.
ಸದನಕ್ಕೆ ಗೈರುಹಾಜರಿ, ಚರ್ಚೆಯೇ ಇಲ್ಲದೆ ವಿಧೇಯಕಗಳನ್ನು ಪಾಸು ಮಾಡುವುದು, ದಾರಿ ತಪ್ಪಿಸುವ ಮಾತುಗಾರಿಕೆ, ಇವೆಲ್ಲ ಅನಪೇಕ್ಷಿತ. ಸದನದ ಚರ್ಚೆ ಎಂಬುದು ಮುತ್ಸದ್ದಿಗಳು, ಅನುಭವಿಗಳ ನಡುವೆ ನಡೆದಾಗ ಅದನ್ನು ಕೇಳಿಸಿಕೊಳ್ಳುವುದೇ ಅಪೂರ್ವ ಅನುಭವ. ಅಲ್ಲಿ ರಾಜಕೀಯ-ಸಾಮಾಜಿಕ ಇತಿಹಾಸ, ಜನಹಿತಕ್ಕೆ ಸಂಬಂಧಿಸಿದ ಅಂಶಗಳು, ಆರೋಗ್ಯಕರ ಪೈಪೋಟಿ ಎಲ್ಲವೂ ಮೇಳೈಸಿರುತ್ತವೆ. ವಿಷಯ ಪರಿಣಿತರು, ತಾನು ಎತ್ತುತ್ತುರುವ ವಿಚಾರದ ಬಗ್ಗೆ ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಬಂದವರು. ಸದನದ ಪಟುಗಳ ಮಾತುಗಳು ಮಾಹಿತಿಪೂರ್ಣವಾಗಿದ್ದು ನಮ್ಮ ತಿಳುವಳಿಕೆಯನ್ನೂ ತಿದ್ದುವುದಲ್ಲದೆ, ಸರಕಾರದಿಂದ ಆಗಬೇಕಾದ ಕೆಲಸಗಳತ್ತ ನಿಖರವಾಗಿ ಬೊಟ್ಟು ಮಾಡುತ್ತದೆ. ಇವ್ಯಾವುದೂ ಇಲ್ಲದೆ ಹೋದರೆ ಗೊಂದಲ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ನಮ್ಮ ಶಾಸಕರು, ಸಚಿವರು ಸದನದಲ್ಲಿ ಆಡುವ ಮಾತುಗಳೇ ತಮ್ಮ ಅಲ್ಪಜ್ಞಾನ, ಉಡಾಫೆ, ಉದ್ಧಟತನಗಳ ಕಾರಣದಿಂದ ಸಾರ್ವಜನಿಕ ಗೇಲಿಗೆ, ಟ್ರೋಲ್ ಗೆ ಒಳಗಾಗುವಂತಿರುತ್ತವೆ. ಪ್ರತಿ ಕಲಾಪಕ್ಕೆ ನಮ್ಮ ಬೊಕ್ಕಸದಿಂದ ಕೋಟಿಗಟ್ಟಲೆ, ಪ್ರತಿ ನಿಮಿಷಕ್ಕೆ ಲಕ್ಷಗಟ್ಟಲೆ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವಿನಿಯೋಗವಾಗುತ್ತದೆ. ನನ್ನ ತೆರಿಗೆಯ ‘ಹಣಕ್ಕೆ’ ಪ್ರತಿಯಾಗಿ ಏನು ಕೊಟ್ಟಿರಿ ಎಂದು ಸಾಮಾನ್ಯ ಪ್ರಜೆ ಕೇಳಿದರೆ ಉತ್ತರಿಸುವ ನೈತಿಕತೆ ಜನಪ್ರತಿನಿಧಿಗಳಲ್ಲಿ ಇರಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ. ೧೪-೦೨-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ