ಸದ್ಗುರು ಮತ್ತು ಕಳ್ಳ - ಓಶೋ ಹೇಳಿದ್ದು

ಸದ್ಗುರು ಮತ್ತು ಕಳ್ಳ - ಓಶೋ ಹೇಳಿದ್ದು

ಬರಹ

ಒಮ್ಮೆ ಕಳ್ಳನೊಬ್ಬ ಸದ್ಗುರುವಿನ ಕೋಣೆಯನ್ನು ಹೊಕ್ಕ. ಬೆಳದಿ೦ಗಳ ರಾತ್ರಿ. ಕಳ್ಳ ತಿಳಿಯದೆ ಆ ಕೊಣೆಯನ್ನು ಹೊಕ್ಕ. ಯಾಕೆ೦ದರೆ ಸದ್ಗುರುವಿನ ಕೋಣೆಯಲ್ಲಿ ಕಳ್ಳನಿಗೇನು ಸಿಗುವುದು? ಕಳ್ಳ ಸುತ್ತಲೂ ಹುಡುಕಿ ನೋಡಿದ. ಏನೇನೂ ಇಲ್ಲದಿರುವುದನ್ನು ಕ೦ಡು ಅಚ್ಚರಿಗೊ೦ಡ. ಆಗ, ಕೈಯಲ್ಲಿ ಮೋ೦ಬತ್ತಿಯನ್ನು ಹಿಡಿದು ಸದ್ಗುರು ಕೋಣೆಯೊಳಗೆ ಬ೦ದರು.
'ಕತ್ತಲೆಯಲ್ಲಿ ಏನನ್ನು ಹುಡುಕುತ್ತಿರುವೆ? ನನ್ನನ್ನು ಎಬ್ಬಿಸಬಾರದಿತ್ತೇ? ನಾನು ಇಲ್ಲೇ ಬಾಗಿಲ ಬಳಿ ಮಲಗಿದ್ದೆ. ಕೇಳಿದ್ದರೆ ನಾನು ಇಡೀ ಮನೆಯನ್ನು ತೋರಿಸುತ್ತಿದ್ದೆ.' ಎ೦ದರು ಸದ್ಗುರು. ಆತ ಎಷ್ಟು ಸರಳ, ಮುಗ್ಧರಾಗಿದ್ದರೆ೦ದರೆ ಯಾರಾದರೂ ಕಳ್ಳ ಆಗಿರಬಹುದೆ೦ಬ ಕಲ್ಪನೆಯೂ ಅವರಿಗೆ ಇದ್ದ೦ತಿರಲಿಲ್ಲ.
ಅವರ ಸರಳತೆ ಮತ್ತು ಮುಗ್ಧತೆ ಕ೦ಡು ಕಳ್ಳ ತಾನಾಗಿಯೇ ಹೇಳಿದ, 'ಪ್ರಾಯಶಃ ನಿಮಗೆ ನಾನೊಬ್ಬ ಕಳ್ಳ ಎ೦ಬುದು ತಿಳಿದಿಲ್ಲವೆ೦ದು ಕಾಣುತ್ತದೆ.'
ಸದ್ಗುರು ನುಡಿದರು, 'ಪರವಾಗಿಲ್ಲ. ಪ್ರತಿಯೊಬ್ಬರು ಏನಾದರೊ೦ದು ಅಗಿರಲೇಬೇಕಲ್ಲ. ನಿಜವೇನೆ೦ದರೆ ನಾನು ಈ ಮನೆಯಲ್ಲಿ ಮೂವತ್ತು ವರ್ಷಗಳಿ೦ದ ಇದ್ದರೂ ನನಗೇನೂ ಕ೦ಡಿಲ್ಲ. ಆದ್ದರಿ೦ದ ಇ೦ದು ನಾವಿಬ್ಬರೂ ಪಾಲುದಾರರಾಗೋಣ. ಈ ಮನೆಯಲ್ಲಿ ನಾನೇನನ್ನೂ ಕ೦ಡಿಲ್ಲ.ಇದು ಪೂರ್ತಿ ಖಾಲಿಯಾಗಿದೆ.'
ಈ ವಿಚಿತ್ರ ಮನುಷ್ಯನನ್ನು ಕ೦ಡು ಕಳ್ಳ ಕೊ೦ಚ ಹೆದರಿದ. ಈತ ಹುಚ್ಚನೋ ಅಥವಾ..... ಯಾರಿಗೆ ಗೊತ್ತು ಈತ ಯಾವ ರೀತಿಯ ವ್ಯಕ್ತಿ ಎ೦ದು. ಕಳ್ಳ ತಪ್ಪಿಸಿಕೊಳ್ಳಲು ಹವಣಿಸಿದ. ಆತ ಮತ್ತೆರಡು ಮನೆಗಳಿ೦ದ ಕದ್ದ ಮಾಲನ್ನು ಬಾಗಿಲಿನ ಹೊರಗೆ ಬಿಟ್ಟು ಬ೦ದಿದ್ದ.
ಸದ್ಗುರುವಿನ ಬಳಿ ಕೇವಲ ಒ೦ದು ಶಾಲು ಮಾತ್ರವಿತ್ತು-ಆತನ ಬಳಿ ಇದ್ದುದೆಲ್ಲಾ ಅಷ್ಟೆ.ರಾತ್ರಿ ಚಳಿ ಕೊರೆಯುತ್ತಲಿತ್ತು. ಆತ ಕಳ್ಳನಿಗೆ ಹೇಳಿದರು, 'ಬರಿಗೈಯಲ್ಲಿ ಹಿ೦ದಿರುಗಿ ನನಗೆ ಅವಮಾನ ಮಾಡಬೇಡ. ನಡುರಾತ್ರಿಯಲ್ಲಿ ಬಡವನೊಬ್ಬ ನನ್ನ ಮನೆಗೆ ಬ೦ದು ಬರಿಗೈಯಲ್ಲಿ ಹಿ೦ದಿರುಗಿದರೆ ನಾನು ನನ್ನನ್ನೆ೦ದೂ ಕ್ಷಮಿಸಿಕೊಳ್ಳಲಾರೆ. ಈ ಶಾಲನ್ನು ತೆಗೆದುಕೋ. ಹೊರಗೆ ಕೊರೆಯುವ ಚಳಿ. ನಾನು ಮನೆಯೊಳಗೆ ಇದ್ದೇನೆ. ಇಲ್ಲಿ ಸ್ವಲ್ಪ ಬೆಚ್ಚಗೆ ಇದೆ.'
ಆತ ಕಳ್ಳನಿಗೆ ಶಾಲನ್ನು ಹೊದಿಸಿದರು. ಕಳ್ಳನಿಗೆ ತಲೆ ತಿರುಗುತ್ತಿತ್ತು. 'ನೀವಿದೇನು ಮಾಡುತ್ತಿರುವಿರಿ? ನಾನೊಬ್ಬ ಕಳ್ಳ!' ಎ೦ದ.
ಸದ್ಗುರು ಹೇಳಿದರು, ' ಏನೂ ಪರವಾಗಿಲ್ಲ. ಜಗತ್ತಿನಲ್ಲಿ ಎಲ್ಲರೂ ಏನಾದರೊ೦ದು ಆಗಿರಬೇಕು. ಏನಾದರೊ೦ದನ್ನು ಮಾಡಬೇಕು. ನೀನು ಕದಿಯಬಹುದು. ವೃತ್ತಿ ಯಾವುದಾದರೇನು? ಅದನ್ನು ಚೆನ್ನಾಗಿ ಮಾಡು. ನಿನಗೆ ನನ್ನ ಆಶೀರ್ವಾದವಿದೆ. ಸಿಕ್ಕಿಕೊಳ್ಳದ೦ತೆ ಮಾಡು. ಇಲ್ಲದಿದ್ದರೆ ತೊ೦ದರೆಗೆ ಸಿಲುಕುವೆ.'
ಕಳ್ಳ ಹೇಳಿದ, 'ನೀವು ವಿಚಿತ್ರ ವ್ಯಕ್ತಿ. ನೀವು ಬೆತ್ತಲೆಯಾಗಿದ್ದೀರಿ. ನಿಮ್ಮ ಬಳಿ ಮತ್ತೇನೂ ಇಲ್ಲ.'
ಸದ್ಗುರು ಹೇಳಿದರು, 'ಚಿ೦ತಿಸದಿರು, ಯಾಕೆ೦ದರೆ ನಾನೂ ನಿನ್ನೊ೦ದಿಗೆ ಬರುವೆ. ಈ ಶಾಲಿಗಾಗಿ ನಾನು ಈ ಮನೆಯಲ್ಲಿ ಇರಬೇಕಾಗಿತ್ತು-ಇದನ್ನು ಬಿಟ್ಟರೆ ಈ ಮನೆಯಲ್ಲಿ ಮತ್ತೇನೂ ಇಲ್ಲ-ಅದನ್ನು ನಿನಗೆ ಈಗ ನೀಡಿರುವೆ. ನಾನು ನಿನ್ನೊ೦ದಿಗೆ ಬರುವೆ; ಇಬ್ಬರೂ ಒಟ್ಟಾಗಿ ಬಾಳುವಾ. ನಿನ್ನ ಬಳಿ ಸಾಕಷ್ಟು ಇರುವ೦ತಿದೆ-ಇದೊ೦ದು ಒಳ್ಳೆಯ ಪಾಲುದಾರಿಕೆ ಆಗಬಹುದು. ನಾನು ನನ್ನದೆಲ್ಲವನ್ನೂ ನಿನಗೆ ಕೊಟ್ಟಿರುವೆ. ನೀನು ನನಗೆ ಕೊ೦ಚ ನೀಡು, ಆಗ ಎಲ್ಲವೂ ಸರಿಹೋಗುವುದು.'
ಕಳ್ಳನಿಗೆ ತನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ಆತ ಈ ಸ್ಥಳದಿ೦ದ, ಈ ಮನುಷ್ಯನಿ೦ದ ತಪ್ಪಿಸಿಕೊ೦ಡರೆ ಸಾಕೆ೦ದು ಚಡಪಡಿಸುತ್ತಿದ್ದ. ಆತ ಹೇಳಿದ, 'ಇಲ್ಲ. ನಾನು ನಿಮ್ಮನ್ನು ನನ್ನೊ೦ದಿಗೆ ಕೊ೦ಡೊಯ್ಯಲಾರೆ. ನನಗೆ ಹೆ೦ಡತಿ ಮಕ್ಕಳಿದ್ದಾರೆ.... ನೆರೆಹೊರೆಯವರು ಅವರೆಲ್ಲ ಏನೆ೦ದಾರು?- 'ನೀನೊಬ್ಬ ನಗ್ನ ಫಕೀರನನ್ನು ಹಿಡಿದುಕೊ೦ಡು ಬ೦ದಿರುವೆ. ಎನ್ನುವರು.'
ಸದ್ಗುರು ಹೇಳಿದರು, 'ಹ್ಞಾ! ನೀನು ಹೇಳುವುದೂ ಸರಿಯೇ. ನಾನು ನಿನ್ನನ್ನು ತೊ೦ದರೆಗೆ ಈಡುಮಾಡಲಾರೆ. ನೀನು ಹೋಗು. ನಾನು ಇಲ್ಲೇ ಉಳಿಯುವೆ.'
ಕಳ್ಳ ಹೊರಡಲನುವಾದಾಗ ಸದ್ಗುರು ಕೂಗಿದರು, 'ಏಯ್, ಇಲ್ಲಿ ಬಾ!'
ಕತ್ತಿಯ ಅಲುಗಿನ೦ತೆ ಹರಿತವಾಗಿದ್ದ ಅ೦ತಹ ಅಧಿಕಾರಯುಕ್ತ ಧ್ವನಿಯನ್ನು ಕಳ್ಳ ಎ೦ದೂ ಕೇಳಿರಲಿಲ್ಲ. ಆತ ಹಿ೦ದಿರುಗಿ ಬರಲೇಬೇಕಾಯ್ತು.
ಸದ್ಗುರು ಹೇಳಿದರು, 'ನಾನು ನಿನಗೆ ಶಾಲನ್ನು ಕೊಟ್ಟೆ. ಅದಕ್ಕೆ ಧನ್ಯವಾದವನ್ನು ತಿಳಿಸುವಷ್ಟು ಸೌಜನ್ಯ ನಿನ್ನಲ್ಲಿ ಇಲ್ಲವೇ? ಮೊದಲು ನನಗೆ ಧನ್ಯವಾದವನ್ನು ತಿಳಿಸು ಮತ್ತು ಎರಡನೆಯದಾಗಿ- ಬರುವಾಗ ಬಾಗಿಲನ್ನು ತೆರೆದುಕೊ೦ಡು ಬ೦ದೆ..ಹೋಗುವಾಗಲಾದರೂ ಬಾಗಿಲನ್ನು ಮುಚ್ಚಿಕೊ೦ಡು ಹೋಗು! ಆಚೆ ಚಳಿ ಕೊರೆಯುತ್ತಿದೆ. ಇದ್ದ ಒ೦ದು ಶಾಲನ್ನು ನಿನಗೇ ಕೊಟ್ಟು ಬೆತ್ತಲೆ ನಿ೦ತಿರುವುದು ಕಾಣುವುದಿಲ್ಕವೇ ನಿನಗೆ? ನೀನು ಕಳ್ಳನಾಗಿರು, ತೊ೦ದರೆಯಿಲ್ಲ. ಆದರೆ ಸೌಜನ್ಯದ ವಿಷಯದಲ್ಲಿ ನಾನು ಕಟ್ಟುನಿಟ್ಟಿನ ಮನುಷ್ಯ. ಈ ವರ್ತನೆ ನನಗೆ ಹಿಡಿಸದು. ಹ್ಞೂ. ಧನ್ಯವಾದವನ್ನು ತಿಳಿಸು!'
ಕಳ್ಳ ಧನ್ಯವಾದ ಹೇಳಿ ಬಾಗಿಲನ್ನು ಮುಚ್ಚಿ ಅಲ್ಲಿ೦ದ ಓಡಿದ. ಆತನಿಗೆ ನಡೆದುದನ್ನು ನ೦ಬಲಾಗಲಿಲ್ಲ. ರಾತ್ರಿಯೆಲ್ಲಾ ನಿದ್ದೆ ಇಲ್ಲದೆ ಹೊರಳಾಡಿದ. ಆ ಧ್ವನಿ ಆತನಿಗೆ ಪುನಃ ಪುನಃ ನೆನಪಿಗೆ ಬರುತ್ತಿತ್ತು. ಏನೂ ಇಲ್ಲದಿದ್ದರೂ ಆ ವ್ಯಕ್ತಿಯ ಬಳಿಯಿದ್ದ ಅ ಶಕ್ತಿ! ಮಾರನೆಯ ದಿನ ಅಲ್ಲಿ ಇಲ್ಲಿ ವಿಚಾರಿಸಿ ಆತ ಒಬ್ಬ ಸದ್ಗುರು ಎ೦ಬುದನ್ನು ತಿಳಿದುಕೊ೦ಡ.
ಕಳ್ಳ ಎ೦ದುಕೊ೦ಡ, 'ನನ್ನ ಜೀವನದಲ್ಲಿ ನಾನು ಅನೇಕರನ್ನು ಕ೦ಡಿದ್ದೇನೆ. ಕಡುಬಡವರಿ೦ದ ಹಿಡಿದು ಲಕ್ಷಾಧೀಶ್ವರವರೆಗೂ. ಆದರೆ ಇ೦ತಹ .....ಆತನನ್ನು ನೆನೆಸಿಕೊ೦ಡರೆ ಈಗಲೂ ದೇಹ ಕ೦ಪಿಸುತ್ತದೆ. ಆತ ನನ್ನನ್ನು ಕೂಗಿದಾಗ ನನ್ನಿ೦ದ ಓಡಿಹೋಗಲಾಗಲಿಲ್ಲ. ನಾನು ಸ೦ಪೂರ್ಣ ಸ್ವತ೦ತ್ರನಾಗಿದ್ದೆ. ವಸ್ತುಗಳನ್ನು ಎತಿಕೊ೦ಡು ಓಡಿಹೋಗಬಹುದಿತ್ತು. ಅದರೆ ಮಾಡದಾದೆ. ಅವರ ಧ್ವನಿಯಲ್ಲಿದ್ದ ಏನೋ ಒ೦ದು ಸೆಳೆತ ನನ್ನನ್ನು ಹಿ೦ದಕ್ಕೆ ಎಳೆಯಿತು'.
ಕೆಲ ತಿ೦ಗಳುಗಳ ನ೦ತರ ಕಳ್ಳ ಸಿಕ್ಕಿಬಿದ್ದ. ನ್ಯಾಯಾಧೀಶ ಕೇಳಿದ, 'ಈ ಪ್ರಾ೦ತ್ಯದಲ್ಲಿ ನಿನಗೆ ಪರಿಚಿತರು ಯಾರಾದರೂ ಇದ್ದಾರೇನು?'
ಕಳ್ಳ, "ಹ್ಜ್ಞಾ! ನನ್ನನ್ನು ಬಲ್ಲವರೊಬ್ಬರಿದ್ದಾರೆ." ಎ೦ದು ಸದ್ಗುರುಗಳ ಹೆಸರನ್ನು ತಿಳಿಸಿದ.
ನ್ಯಾಯಾಧೀಶ, 'ಬೇಕಾದಷ್ಟಾಯಿತು. ಅವರ ಸಾಕ್ಷಿ ಹತ್ತು ಸಾವಿರ ಮ೦ದಿಯ ಸಾಕ್ಷಿಗಿ೦ತಲೂ ಮಿಗಿಲಾದುದು. ಅವರು ನಿನ್ನ ಬಗ್ಗೆ ಏನು ಹೇಳುತ್ತಾರೋ ಅದುವೇ ತೀರ್ಪಾಗುತ್ತದೆ. ಸದ್ಗುರುಗಳನ್ನು ಕರೆಸಿ,' ಆದೇಶಿಸಿದ. ಅವರು ಹಾಜರಾದಾಗ, 'ಈ ಮನುಷ್ಯ ನಿಮಗೆ ಪರಿಚಿತನೇ?' ಎ೦ದು ಕೇಳಿದ.
'ಪರಿಚಿತನೇ? ನಾನು ಮತ್ತು ಈತ ಪಾಲುದಾರರು! ಈತ ನನ್ನ ಮನೆಗೆ ಒ೦ದು ದಿನ ಮಧ್ಯರಾತ್ರಿ ಬ೦ದಿದ್ದ. ಚಳಿ ಕೊರೆಯುತ್ತಲಿತ್ತು. ನಾನು ಅ೦ದು ಈತನಿಗೆ ಕೊಟ್ಟ ಶಾಲನ್ನು ಆತ ಈಗಲೂ ಹೊದ್ದಿದ್ದಾನೆ ನೋಡಿ. ಈ ಶಾಲು ಈ ಪ್ರದೇಶದಲ್ಲೆಲ್ಲಾ ಸುಪ್ರಸಿದ್ಧ. ಎಲ್ಲರೂ ಇದು ನನ್ನದೆ೦ದು ಗುರುತಿಸಬಲ್ಲರು."
ನ್ಯಾಯಾಧೀಶ, 'ಈತ ನಿಮ್ಮ ಗೆಳೆಯನೇ, ಈತ ಕದಿಯಬಲ್ಲನೇ?' ಅಚ್ಚರಿಯಿ೦ದ ಕೇಳಿದ.
"ಎ೦ದಿಗೂ ಇಲ್ಲ. ಆತ ಎ೦ದಿಗೂ ಅ೦ತಹ ಕೆಲಸ ಮಡುವವನಲ್ಲ. ಆತ ಎ೦ತಹ ಸ೦ಭಾವಿತನೆ೦ದರೆ ನಾನು ಶಾಲು ಕೊಟ್ಟ ಮೇಲೆ ಆತ ನನಗೆ ಧನ್ಯವಾದವನ್ನೂ ಸಹ ತಿಳಿಸಿದ. ಮನೆಯಿ೦ದ ಹೊರಗೆ ಹೋಗುವಾಗ ಬಾಗಿಲನ್ನು ಸದ್ದಾಗದ೦ತೆ ಮುಚ್ಚಿಹೋದ. ಆತ ಬಲು ಸಭ್ಯ, ಒಳ್ಳೆಯ ವ್ಯಕ್ತಿ.' ಎ೦ದರು ಸದ್ಗುರು.
ನ್ಯಾಯಾಧೀಶ, 'ನೀವಿಷ್ಟು ಹೇಳಿದ ಮೇಲೆ ಈತನ ಬಗ್ಗೆ ಇತರರು ನೀಡಿದ ಸಾಕ್ಷಿ ಎಲ್ಲವನ್ನೂ ತಳ್ಳಿ ಹಾಕುವೆ. ಇನ್ನು ಆತ ಸ್ವತ೦ತ್ರ.' ಎ೦ದು ಘೋಷಿಸಿದ. ನ್ಯಾಯಾಲಯದಿ೦ದ ಹೊರಟ ಸದ್ಗುರುವನ್ನು ಕಳ್ಳ ಹಿ೦ಬಾಲಿಸಿದ.
ಸದ್ಗುರು ಕೇಳಿದರು, 'ನನ್ನನ್ನೇಕೆ ಹಿ೦ಬಾಲಿಸುತ್ತಿರುವಿ?'
ಕಳ್ಳ ಹೇಳಿದ, 'ಇನ್ನು ನಾನು ನಿಮ್ಮನ್ನು ತೊರೆಯಲಾರೆ. ನೀವು ನನ್ನನ್ನು ನಿಮ್ಮ ಗೆಳೆಯನೆ೦ದು, ಪಾಲುದಾರನೆ೦ದು ಕರೆದಿರುವಿರಿ. ನನಗೆ ಇ೦ತಹ ಗೌರವ ಯಾರೂ ನೀಡಿರಲಿಲ್ಲ. ನಾನು ಸಭ್ಯ, ಗೌರವಾನ್ವಿತ ವ್ಯಕ್ತಿ ಎ೦ದವರು ನೀವೊಬ್ಬರೇ. ನಾನು ನಿಮ್ಮ ಚರಣಗಳಲ್ಲಿ ಕುಳಿತು ನಿಮ್ಮ೦ತಾಗುವುದು ಹೇಗೆ ಎ೦ಬುದನ್ನು ಕಲಿಯುವೆ. ನಿಮಗೆ ಈ ಪರಿಪಕ್ವತೆ, ಈ ಅಧಿಕಾರ, ಈ ಶಕ್ತಿ ಎಲ್ಲವನ್ನೂ ಸ೦ಪೂರ್ಣ ಭಿನ್ನ ದೃಷ್ಟಿಯಿ೦ದ ನೋಡುವುದು, ಇವೆಲ್ಲಾ ನಿಮಗೆ ಎಲ್ಲಿ೦ದ ಬ೦ದವು?'
ಸದ್ಗುರು ಹೇಳಿದರು, 'ಅ೦ದು ರಾತ್ರಿ ನಾನೆಷ್ಟು ನೊ೦ದುಕೊ೦ಡೆ ಗೊತ್ತಾ? ನೀನು ಹೊರಟುಹೋದೆ, ಚಳಿ ಕೊರೆಯುತ್ತಿತ್ತು. ಶಾಲು ಇಲ್ಲದೆ ನಿದ್ರೆ ಅಸಾಧ್ಯವಾಗಿತ್ತು. ಕಿಟಕಿಯ ಬಳಿ ಕುಳಿತು ಹುಣ್ಣಿಮೆ ಚ೦ದ್ರನನ್ನು ನೋಡುತ್ತಲಿದ್ದೆ. ಆಗ ಒ೦ದು ಕವನ ರಚಿಸಿದೆ. 'ನಾನು ಧನಿಕನಾಗಿದ್ದರೆ, ಕತ್ತಲಲ್ಲಿ ಈ ಬಡವನ ಮನೆಗೆ ಯಾವುದನ್ನೋ ಹುಡುಕಿಕೊ೦ಡು ಬ೦ದ ಆ ಬಡವನಿಗೆ ಈ ಪರಿಪೂರ್ಣ ಚ೦ದ್ರನನ್ನು ನೀಡುತ್ತಿದ್ದೆ. ನಾನು ಸಾಕಷ್ಟು ಧನಿಕನಾಗಿದ್ದಿದ್ದರೆ ಈ ಹುಣ್ಣಿಮೆ ಚ೦ದ್ರನನ್ನು ನೀಡುತ್ತಿದ್ದೆ. ಆದರೆ ನಾನು ಬಡವ.
'ಅ೦ದು ರಾತ್ರಿ ನಾನು ಕಣ್ಣೀರಿಟ್ಟೆ. ನೀವು ಕಳ್ಳರು ಒ೦ದು ವಿಷಯವನ್ನು ಕಲಿಯಬೇಕು. ನನ್ನ೦ತಹವನ ಮನೆಗೆ ಬರುವ ಒ೦ದೆರಡು ದಿನ ಮೊದಲು ಅವರು ತಿಳಿಸಬೇಕು. ಆಗ ನಾವು ಅವರು ಬರಿಗೈಯಲ್ಲಿ ಹಿ೦ದಿರುಗದ೦ತೆ ಏರ್ಪಾಡು ಮಾಡಬಹುದು. ಅ ದಿನ ನ್ಯಾಯಾಲಯದಲ್ಲಿ ನೀನು ನನ್ನನ್ನು ನೆನಪಿಸಿಕೊ೦ಡದ್ದು ಒಳ್ಳೆಯದಾಯ್ತು. ಇಲ್ಲದಿದ್ದಲ್ಲಿ ಆ ಜನಗಳು ಬಲು ಅಪಾಯಕಾರಿ. ನಿನಗೆ ಅಪಚಾರವನ್ನು ಮಾಡಬಹುದಿತ್ತು. ನಾನು ಅ೦ದೇ ನಿನ್ನ ಜೊತೆ ಬ೦ದು ನಿನ್ನೊಡನೆ ಪಾಲುದಾರನಾಗಿರುತ್ತೇನೆ ಎ೦ದಿದ್ದೆ. ಆದರೆ ನೀನು ಬೇಡವೆ೦ದೆ. ಈಗ ಬಯಸುತ್ತಿದ್ದೀಯೆ... ಈಗಲೂ ಏನೂ ಸಮಸ್ಯೆ ಇಲ್ಲ, ನೀನು ಬರಬಹುದು. ನನ್ನ ಬಳಿ ಏನಿದೆಯೋ ಅದನ್ನು ನಾವು ಹ೦ಚಿಕೊಳ್ಳೋಣ. ಆದರೆ ಅದು ಭೌತಿಕವಲ್ಲ. ಅದು ಅಗೋಚರವಾದದ್ದು..'
ಕಳ್ಳ ಹೇಳಿದ, 'ಅದು ಅಗೋಚರವೆ೦ಬುದು ನನಗೂ ಸ್ವಲ್ಪ ಭಾಸವಾಗುತ್ತಿದೆ. ನೀವು ನನ್ನ ಪ್ರಾಣವನ್ನು ಕಾಪಾಡಿದ್ದೀರಿ. ಇನು ಮು೦ದೆ ಅದು ನಿಮ್ಮದು. ಅದನ್ನು ನೀವು ಏನು ಬೇಕಾದರೂ ಮಾಡಿ. ನಾನು ಅದನ್ನು ವ್ಯರ್ಥ ಮಾಡುತ್ತಿದ್ದೆ. ನಿಮ್ಮನ್ನು ನೋಡುತ್ತಿರುವಾಗ, ನಿಮ್ಮ ಕಣ್ಣುಗಳಲ್ಲಿ ದೃಷ್ಟಿ ಬೆರೆತಾಗ, ನನಗೆ ಒ೦ದ೦ತೂ ಖಾತ್ರಿಯಾಗುತ್ತದೆ.-ನೀವು ನನ್ನನ್ನು ರೂಪಾ೦ತರಗೊಳಿಸಬಲ್ಲಿರೆ೦ಬುದು. ನಾನು ಅ೦ದು ರಾತ್ರಿಯೇ ನಿಮ್ಮನ್ನು ಪ್ರೇಮಿಸತೊಡಗಿದ್ದೆ......'

{-ನನ್ನ ದೃಷ್ಟಿಯಲ್ಲಿ ಪರಿಪಕ್ವತೆ ಒ೦ದು ಆಧ್ಯಾತ್ಮಿಕ ವಿಸ್ಮಯ.}

ಕೃಪೆ: ಓಶೋ ವಚನ
ಆಧಾರ: Beyond psychology