ಸದ್ಗುರು ಮಹಾರಾಜ್

ಸದ್ಗುರು ಮಹಾರಾಜ್

ಬರಹ

ಪ.ಪೂ.ಶ್ರೀ ಶ್ರೀ ವಿರಜಾನಂದಜೀ ಮಹಾರಾಜ್

ಪ.ಪೂ.ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರು ಮೂಲತಃ ಬೆಂಗಳೂರಿನವರಾಗಿದ್ದು, ಅವರ ಪೂರ್ವಾಶ್ರಮದ ಹೆಸರು - ಶ್ರೀ ಕೃಷ್ಣಮೂರ್ತಿ. ಅವರು ಆದಿಶಂಕರರು, ಭಗವಾನ್ ರಮಣಮಹರ್ಷಿಗಳು, ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಶಾರದಾದೇವಿ, ಸ್ವಾಮಿ ವಿವೇಕಾನಂದರು, ಭಗವಾನ್ ಸಾಯಿಬಾಬಾ - ಹೀಗೆ ಹಲವಾರು ಗುರುಗಳ ದಿವ್ಯಕೃಪೆಯಿಂದಾಗಿ ತಮ್ಮ ವಿದ್ಯಾಭ್ಯಾಸ (ಆಂಗ್ಮಭಾಷೆಯಲ್ಲಿ ಎಂ.ಎ. ಪದವಿ) ಮುಗಿದ ಬಳಿಕ ಲೌಕಿಕ ಕೆಲಸಗಳಿಗೆ ಕೈಹಚ್ಚದೆ ಆಧ್ಯಾತ್ಮವಿದ್ಯೆಯ ಕಡೆಗೆ ಒಲವು ನೀಡಿದರು. ಹೊಳೆನರಸೀಪುರದಲ್ಲಿರುವ ಪ.ಪೂ.ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮೀಜಿಯವರು ಸಂಸ್ಥಾಪಿಸಿದ ಅಧ್ಯಾತ್ಮಪ್ರಕಾಶ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಸಂಸ್ಥಾಪಕರ ನೇರಶಿಷ್ಯರಾಗಿದ್ದ ಪೂಜ್ಯ ವೇ||ಬ್ರ||ಶ್ರೀ|| ಲಕ್ಷ್ಮೀನರಸಿಂಹಮೂರ್ತಿಗಳವರಿಂದ ಪ್ರಸ್ಥಾನತ್ರಯ ಭಾಷ್ಯಾಭ್ಯಾಸ ಮಾಡಿದರು. ನಂತರ ಬೆಂಗಳೂರಿಗೆ ಹಿಂತಿರುಗಿ ಭಗವಾನ್ ರಮಣಮಹರ್ಷಿಗಳ ಉಪದೇಶಾಮೃತದ ಅಧ್ಯಯನ ಮಾಡಿದರು. ಅಂತೆಯೇ ದಿವ್ಯತ್ರಯರ ಜೀವನ ಮತ್ತು ಉಪದೇಶಗಳನ್ನೂ ಸಹ ಅಧ್ಯಯನ ಮಾಡಿದರು. ಅವರೆಲ್ಲರ ಜೀವನ ಹಾಗೂ ಉಪದೇಶಗಳನ್ನು ಕುರಿತು ಕರ್ನಾಟಕರಾಜ್ಯದ ಮೂಲೆ ಮೂಲೆಗಳಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸಂಚರಿಸುತ್ತಾ ಅನೇಕ ಉಪನ್ಯಾಸಮಾಲಿಕೆಗಳನ್ನು ನೀಡಿದರು. ಆ ವೇಳೆಗೆ ಅವರು ಕನಕಪುರ ತಾಲ್ಲೂಕಿನ ಪುಟ್ಟಗ್ರಾಮವಾದ ದೊಡ್ಡಮುದವಾಡಿಯಲ್ಲಿರುವ ಶ್ರೀ ದತ್ತಸದಾನಂದಾಶ್ರಮದಲ್ಲಿ ತಪಗೈಯುತ್ತಿದ್ದ ಸ್ವಾಮಿ ಸಹಜಾನಂದ ಸರಸ್ವತೀ ಮಹಾರಾಜ್ ರವರ ನಿಕಟ ಸಂಪರ್ಕಕ್ಕೆ ಬಂದಿದ್ದರು. ಉಪನ್ಯಾಸಗಳನ್ನು ನೆಡೆಸಿದ್ದರಿಂದ ಬಂದ ಕಾಣಿಕೆಯನ್ನೆಲ್ಲಾ ಆ ಆಶ್ರಮದ ಅಭಿವೃದ್ಧಿಗಾಗಿ ವಿನಿಯೋಗಿಸಿದರು. ಸಹಜವಾಗಿಯೇ ವೈರಾಗ್ಯಮನೋಭಾವವನ್ನು ಹೊಂದಿದ್ದ ಪೂಜ್ಯರು ೧೯೯೬ರ ಫೆಬ್ರವರಿ ೧೭ರಂದು ಮಹಾಶಿವರಾತ್ರಿಯ ಶುಭದಿನದಂದು ಪೂಜ್ಯ ಸ್ವಾಮಿ ಸಹಜಾನಂದಜೀ ಮಹಾರಾಜ್ ರವರಿಂದ ವಿಧಿಪೂರ್ವಕವಾಗಿ ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿದರು.

ಮುಂದುವರಿಯುವುದು........

ಚಿತ್ರಕೃಪೆ: ಶ್ರೀ ಪ್ರಶಾಂತ, ಹೊಳೆನರಸೀಪುರ.