ಸದ್ದಿಲ್ಲದೆ ಮುಗಿಯಿತೇ ಸಂಕ್ರಾಂತಿಯ ಸಡಗರ

ಸದ್ದಿಲ್ಲದೆ ಮುಗಿಯಿತೇ ಸಂಕ್ರಾಂತಿಯ ಸಡಗರ

ಬರಹ

ನೆನ್ನೆ ಸಂಕ್ರಾಂತಿ ಇತ್ತೇ , ಬಂದಿದ್ದೂ ತಿಳಿಯಲಿಲ್ಲ ಹೋಗಿದ್ದೂ ತಿಳಿಯಲಿಲ್ಲ.
ಸಂಕ್ರಾಂತಿಯ ನೆವಕ್ಕೊಂದು ಸಿಹಿ ತಿಂಡಿ, ಜೊತೆಗೊಂದು ರಜೆ, ಕೊನೆಗೆ ಟಿವಿ ಚಾನೆಲ್‌ಗಳ ಸಿನಿಮಾ ಪೈಪೋಟಿಯಲ್ಲೊಂದೆರೆಡು ಒಳ್ಳೆಯು ಸಿನಿಮಾಗಳು
ಇವುಗಳ ನಡುವೆ ಸಂಕ್ರಾಂತಿ ಎಂಬ ಹಬ್ಬದ ಆಚರಣೆ ಮುಗಿದೇ ಹೋಯ್ತು. ಎಳ್ಳು ಬೆಲ್ಲ ಮನೆಯಲ್ಲಿ ತಂದಿಟ್ಟಿದ್ದು ಹಾಗೆಯೇ ಇದೆ. ಬೆಳಗ್ಗೆ ಮಾಡಿಟ್ಟ ಪೊಂಗಲ್ ಹಾಗೆಯೇ ಉಳಿದಿತ್ತು
ಸುಮಾರು ಹತ್ತು ವರ್ಷದ ಹಿಂದೆ ಈ ಸಂಕ್ರಾಂತಿ ಬಂದರೆ ನಮಗೆಲ್ಲಾ ಸಂತೋಷವೋ ಸಂತೋಷ
ಹಿಂದಿನ ದಿನವೇ ಮನೆಯನ್ನೆಲ್ಲಾ ಕ್ಲೀನ್ ಮಾಡಿ , ಬಾಗಿಲು ಕಿಟಕಿಗಳನ್ನೆಲ್ಲಾ ಒರೆಸಿ, ಬೇಕಾದ ಸಾಮಾನುಗಳನ್ನು ತಂದಿಡುತ್ತಿದ್ದೆವು
ಬೆಳಗ್ಗೆ ಬೇಗನೆ ಅಂದರೆ ಐದು ಘಂಟೆಗೆಲ್ಲಾ ನಮ್ಮ ಸ್ನಾನವಾಗಿರುತ್ತಿತ್ತು ಅಕ್ಕ ಅಡಿಗೆಗೆ ಅಮ್ಮನಿಗೆ ಸಹಾಯ ಮಾಡುತಿದ್ದರೆ ನಾನು ಪೂಜೆಗೆ ಅಣಿ ಮಾಡುತ್ತಾ ಕುಳಿತಿರುತ್ತಿದ್ದೆ , ನಡು ನಡುವಲ್ಲಿ ತಂಟೆ, ಕೀಟಲೆ, ಪೇಪರ್ ಓದಾಟ. ಅಮ್ಮ ಕೊಂಡೆ ಹತ್ತು ವರ್ಷಗಳಾದ ಹಳೆಯ ನ್ಯಾಷನಲ್ ಟೇಪ್‌ರೆಕಾರ್ಡ್ನ್‌ ನಲ್ಲಿ ಕ್ಯಾಸೆಟ್ ಇಟ್ಟು ಅದನ್ನು ಬಡಿಯುತ್ತಾ ಹಾಡಿಸುತ್ತಾ ದೇವರ ಹಾಡುಗಳನ್ನು ಹಾಕಿಕೊಂಡು ಸಂತೋಷ ಪಡುತ್ತಿದ್ದೆವು
ಎಷ್ಟೋ ಬಾರಿ ಅದು ಹಾಡಲೊಲ್ಲೆ ಎಂದಾಗೆಲ್ಲಾ ನಾನೆ ಹಾಡಿ ಕಿರುಚಿ ಅಮ್ಮ ಅಕ್ಕನಿಂದ ಬೈಸಿಕೊಂಡು ಸ್ವಲ್ಪ ಹುಸಿ ಮುನಿಸಿನೊಂದಿಗೆ ಪೂಜೆಗೆ ಕೂರುತ್ತಿದ್ದೆ.
ಮನೆಯಲ್ಲಿ ಕಡಲೆಕಾಯಿ, ಗೆಣಸು, ಅವರೇಕಾಳಿನ ಘಮ ಘಮ, ಪೊಂಗಲ್
ಕಬ್ಬು ಮಾವಿನ ತೋರಣವನ್ನು ಒಪ್ಪವಾಗಿ ಜೋಡಿಸಿ ಕಟ್ಟುವುದರಲ್ಲೂ ಏನೋ ಸಂಭ್ರಮ .
ಪೂಜೆ ಸುಮಾರು ಒಂದು ಘಂಟೆ ಕಾಲ ನಡೆಯುತ್ತಿತು
ಆಮೇಲೆ
ಎಳ್ಲು ಬೆಲ್ಲ ಕೊಟ್ಟು ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆವು
ನಂತರ ಮಾಡಿದ ತಿಂಡಿಗಳ ಹಂಚಿಕೆ ಅಕ್ಕ ಪಕ್ಕದವರ ಮನೆಗೆ.

ಊಟದ ಸಡಗರ ಸ್ವಲ್ಪಹೊತ್ತು

ಊಟವೆಲ್ಲಾ ಮುಗಿಸಿ ಆರಾಮಾಗಿ ಟಿ.ವಿ ನೋಡುತ್ತಾ ಕುಳಿತಿರುತ್ತಿದ್ದೆವು
ಆದರೂ ನಮ್ಮ ಗಮನವೆಲ್ಲಾ ಘಡಿಯಾರದಲ್ಲಿ ಸಂಜೆ ನಾಲ್ಕಾಗುವುದು ಯಾವಾಗ ಎಂಬ ಕಡೆಗೆ
ನಾಲ್ಕಾಗುತ್ತಿದ್ದಂತೆ
ಶುರು
ನಮ್ಮ ಸಿಂಗಾರ

ಹಬ್ಬದ ನೆವದಲ್ಲಿ ಚೆಂದದ ಸೀರೆ ಉಟ್ಟು, ಇದ್ದ ಬದ್ದ ಒಡವೆಗಳನ್ನೆಲ್ಲಾ ಹೇರಿಕೊಂಡು ಸಿಂಗರಿಸಿಕೊಂಡು ಅದರಲ್ಲೂ ಪೈಪೋಟಿ ನಮ್ಮ ವಾರಿಗೆಯ ಹುಡುಗಿಯರು ಹೇಗೆ ಡ್ರೆಸ್ ಮಾಡಿಕೊಂಡಿದ್ದಾರೆ. ಅದನ್ನೆಲ್ಲಾ ಗಮನಿಸಿಯಾದ ಮೇಲೆಯೇ ನನ್ನ ಸಿಂಗಾರ ಕೊನೆಯಾಗುತ್ತಿತ್ತು.
ನಂತರ ಹೊರಡುತ್ತಿತ್ತು ಮನೆ ಮನೆಗೆ ಮೆರವಣಿಗೆ. ಎಳ್ಳು ಬೆಲ್ಲ ಹಂಚಿ ಅವರಿಂದಲೂ ಎಳ್ಳು ಬೆಲ್ಲ ಪಡೆದು ಬರುವಷ್ಟರಲ್ಲಿ ರಾತ್ರಿ ಎಂಟಾಗುತ್ತಿತ್ತು
ಬಂದ ನಂತರ ಆರತಿ ಅದೂ ಇದೂ ಆಗಿ ಹಬ್ಬ ಕರಗುತ್ತಿತ್ತು

ನೆನ್ನೆ ಹಬ್ಬ ಅವೆಲ್ಲಾ ಕಳೆದುಕೊಂಡು ಕಳಾಹೀನವಾದಂತ ಅನಿಸಿತು
ತಿಂಗಳಿಗೆ ಮೂರು ಹೊಸ ಬಟ್ಟೆ ಕೊಂಡು ಕೊಂಡು ಹೊಸಬಟ್ಟೆ ಹಬ್ಬದ ದಿನ ಮಾತ್ರ ಎಂಬ ಆ ಸಂತೋಷವೇ ಇಲ್ಲವಾಗಿದೆ
ಹಬ್ಬದ ಹಿಂದಿನ ದಿನ ಕೆಲಸದಲ್ಲಿ ಎಷ್ಟು ತೊಡಗಿದ್ದೆ ಎಂದರೆ ಮರುದಿನ ಹಬ್ಬ ಎಂಬುದೂ ಮರೆತೇ ಹೋಗಿತ್ತು
ಹಿಂದಿನ ದಿನದ ಕೆಲಸದ ಒತ್ತಡದಿಂದ ಹಬ್ಬದ ದಿನ ಎದ್ದುದ್ದು ಏಳು ಘಂಟೆಗೆ, ಆಗಲೇ ಅಮ್ಮನ ಸುಪ್ರಭಾತ ಶುರುವಾಗಿತ್ತು ಹಬ್ಬದ ದಿನವೂ ಬೇಗ ಏಳೋದಿಲ್ಲ.
ಹೇಗೋ ಗೊಂದಲ , ಸಿಡುಕು, ಧಾವಂತ ತಲೆ ಸಿಡಿತದೊಂದಿಗೆ ಅಡಿಗೆ ಮಾಡಿ ಪೂಜೆ ಮುಗಿಸಿ , ಊಟಕ್ಕೆ ಕುಳಿತಾಗ ಮೂರು ಘಂಟೆ
ಆಗಲೆ ನಾಲ್ಕು ಘಂಟೆಗೆ ಮುಂಗಾರು ಮಳೆ, ಮಿಲನ, ಅಜೇಯ, ರಾಮಶ್ಯಾಮ ಭಾಮ ಮುಂತಾದ ಚಿತ್ರಗಳನ್ನು ವಿವಿಧ ಚಾನೆಲ್‌ಗಳಲ್ಲಿ ಹಾಕೋಗು ಗೊತ್ತಿದ್ದರಿಂದ ಅರ್ಧಗಂಟೆ ನಿದ್ದೆ ಮಾಡಿ ಎದ್ದು ನೋಡುವುದು ಎಂದು ನಿರ್ಧಾರ ಮಾಡಿಯಾಗಿತ್ತು
ಸಾಯಂಕಾಲ ಟಿವಿಯ ಮುಂದು ಹಾಜಾರಾದೆವು, ಇರುವುದು ಎರೆಡು ಟಿ.ವಿ , ಬರುತ್ತಿರುವುದು ನಾಲ್ಕಾರು ಸಿನಿಮಾಗಳು , ಕೊನೆಗೆ ಕಚ್ಚಾಟದಲ್ಲಿ ಯಾವ ಸಿನಿಮಾವನ್ನು ಸರಿಯಾಗಿ ನೋಡದಾದೆವು.
ಮತ್ತೆ ಆರೂ ಕಾಲಿಗೆ ಘಜನಿ ಎಂಬ ಮಹಾ ಘಾತಕ ಚಿತ್ರ ನೋಡಲಾರಂಭಿಸಿ ತಲೆ ಕೆಟ್ಟು ಹಾಸಿಗೆ ಸೇರಿದರೆ ಸಾಕಪ್ಪ ಎಂದನಿಸಿತ್ತು.
ರಾತ್ರಿ ಊಟ ಯಾರು ಮಾಡಿದರು ಮಾಡಲಿಲ್ಲ ಎಂದೂ ನೋಡಲಿಲ್ಲ
ಮಗಳನ್ನು ಮಲಗಿಸಿ ಮಲಗಿಕೊಂಡಿದ್ದೇ ತಡ ನಿದ್ದೆ ಅಡರಿತು
ಹಬ್ಬ ಕಳೆದೇ ಹೋಗಿತ್ತು