ಸಭ್ಯತೆ ಮೀರದ ವಿರೋಧವಿರಲಿ
ರಾಜ್ಯ ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರುಮುಖದಲ್ಲಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ಹಳಿಯಲು ಬೈಗುಳಗಳ ಭರಾಟೆಯನ್ನೇ ನಡೆಸಿದ್ದಾರೆ. 'ವೇಶ್ಯೆ, ಪಿಂಪ್, ತಾಕತ್ತು, ಧಮ್, ನಾಲಿಗೆ ಕತ್ತರಿಸುತ್ತೇನೆ, ಹುಷಾರ್, ನಾಲಾಯಕ್, ಪಾದದ ಧೂಳು, ಬಚ್ಚಾ' ಬರೀ ಇಂತಹ ಮಾತುಗಳೇ ಪರಸ್ಪರರ ಬಾಯಲ್ಲಿ ಕೇಳಿ ಬರುತ್ತಿವೆ. ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಹೆಸರನ್ನು ಬೈಗುಳದ ರೂಪದಲ್ಲಿ ಬಳಸುವುದಕ್ಕೂ ಜನಪ್ರತಿನಿಧಿಗಳು ಹೇಸುತಿಲ್ಲ. ರಾಜಕಾರಣಿಗಳು ದುಡುಕಿ ಮಾತನಾಡುವುದು ಹೊಸತೇನೂ ಅಲ್ಲ. ಏನು ಅಲ್ಲ ಆದರೆ, ಸಾರ್ವಜನಿಕ ಸಭ್ಯತೆಯನ್ನು ಲೆಕ್ಕಿಸದಂತೆ ಮಾತನಾಡುವ ಚಾಳಿ ಹೆಚ್ಚಾಗುತ್ತಿರುವುದು ಕಳವಳದ ಸಂಗತಿ. ಇಂಥ ನಡವಳಿಕೆಗಳ ಮೂಲಕ ಜನರ ಎದುರು ನಗೆ ಪಾಟಲಿಗೀಡಾಗುತ್ತಿದ್ದೇವೆ ಎನ್ನುವ ಪ್ರಜ್ಞೆ ಯಾರಿಗೂ ಇದ್ದಂತಿಲ್ಲ. ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಗಳು ಅಸಹಜವೇನಲ್ಲ. ಆದರೆ, ಹಾಗಾಗುತ್ತಿಲ್ಲ, ಎಲ್ಲರ ಬಾಯಲ್ಲೂ ಕೊಳಕು ಮಾತುಗಳೇ ಹರಿದಾಡುತ್ತಿವೆ. ಸಚಿವರು, ಶಾಸಕರೇ ಕೊಳಕು ಮಾತುಗಳನ್ನಾಡಲು ನಿಂತರೆ, ಅವರ ಹಿಂಬಾಲಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಲಗಾಮು ಇಲ್ಲದಂತಾಗುತ್ತದೆ. ಜನಪ್ರತಿನಿಧಿಯ ಮಾತುಗಳು ಸಾರ್ವಜನಿಕ ಸಭ್ಯತೆಯಿಂದ ಕೂಡಿರಬೇಕು. ಹಾಗೂ ನಾಗರಿಕರಿಗೆ ಮಾದರಿಯಾಗಿರಬೇಕು. ಆದರೆ, ರಾಜ್ಯದ ರಾಜಕಾರಣಿಗಳು ಬೈದಾಡಿಕೊಳ್ಳಲು ಬಳಸುತ್ತಿರುವ ಭಾಷೆ ಕೊಳಕು ಅಭಿರುಚಿಯದ್ದಾಗಿದೆ ಹಾಗೂ ಅವರು ಪ್ರತಿನಿಧಿಸುವ ಸ್ಥಾನಗಳ ಮರ್ಯಾದೆ ಕಳೆಯುವಂತಿದೆ. ನಾಲಗೆಯ ಮೇಲೆ ನಿಯಂತ್ರಣವಿಲ್ಲದೆ ಹಾಗೂ ಮಾತಿನ ಸೂಕ್ಷ್ಮ ಅರಿಯದ ರಾಜಕಾರಣಿಗಳೇ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣದ ಪಠ್ಯ ಗೊತ್ತುಪಡಿಸಲು ವಿಪರೀತ ಉತ್ಸಾಹ ವ್ಯಕ್ತಪಡಿಸುತ್ತಿರುವುದು ತಮಾಷೆಯಾಗಿದೆ. ನೈತಿಕ ಶಿಕ್ಷಣದ ಅಗತ್ಯ ಇರುವುದು ಯಾರಿಗೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವುದು ಈಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಅಗತ್ಯವಾಗಿದೆ. ಸಾಮಾಜಿಕ ಜೀವನದಲ್ಲಿರುವವರು ಯುವ ಪೀಳಿಗೆಗೆ ಆದರ್ಶ ಮಾದರಿಯಾಗಬೇಕು. ಅದು ಬಿಟ್ಟು ಹೀಗೆ ಬಾಯಿಗೆ ಬಂದಂತೆ ನಾಲಗೆ ಹರಿಬಿಟ್ಟರೆ ಯುವಜನತೆಗೆ ಏನು ಸಂದೇಶ ಕೊಡುತ್ತಿದ್ದೇವೆ, ಏನು ಸಂದೇಶ ಕೊಟ್ಟಂತಾಗುತ್ತದೆ ಎಂಬುದನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೦-೦೧-೨೦೨೩