ಸಮತೋಲಿತ ಬಜೆಟ್ ; ದೂರಗಾಮಿ ಯೋಜನೆಗಳತ್ತ ಗಮನ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೩೯.೪೫ ಲಕ್ಷ ಕೋಟಿ ರೂ. ಗಳ ಗಾತ್ರದ ೨೦೨೨-೨೩ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಮುಂದಿನ ೨೫ ವರ್ಷಗಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಬಜೆಟ್ ಎಂದು ಅವರು ಹೇಳಿದ್ದಾರೆ. ಇದು ಜನಸ್ನೇಹಿ, ಪ್ರಗತಿಪರ ಹಾಗೂ ರೈತರ ಆದಾಯ ದುಪ್ಪಟ್ಟು ಮಾಡಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ನುಡಿ.
ಮೇಲ್ನೋಟಕ್ಕೆ, ಈ ಬಜೆಟ್ ನಲ್ಲಿ ಯಾವುದೇ ದೊಡ್ಡ ಮೊತ್ತದ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ಪಂಚರಾಜ್ಯ ಚುನಾವಣೆಗಳು ಸದ್ಯದಲ್ಲೇ ಇದ್ದು, ಮತದಾರರ ಓಲೈಕೆಗಾಗಿ ಘೋಷಿಸಿರಬಹುದಾದ ಯೋಜನೆಗಳೂ ಇದರಲ್ಲಿ ಕಾಣಿಸುತ್ತಿಲ್ಲ. ಮಧ್ಯಮ ವರ್ಗದ ಜನಪ್ರಿಯ ಕ್ರಮವಾದ ಆದಾಯ ತೆರಿಗೆ ಪರಿಷ್ಕರಣೆಯನ್ನೂ ಮಾಡಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷದ ಬಜೆಟ್ ೪.೬ % ಹೆಚ್ಚಿನ ಗಾತ್ರದ್ದಾಗಿದೆ. ಆದರೆ ಕೊರತೆಯ ಪ್ರಮಾಣ ೧೬.೬೧ ಲಕ್ಷ ಕೋಟಿ ರೂ. ಗಳಷ್ಟಿದೆ. ೬.೯%ದಷ್ಟಿರುವ ವಿತ್ತೀಯ ಕೊರತೆಯನ್ನು ಮುಂದಿಟ್ಟುಕೊಂಡು, ಇರುವ ಹಣಕಾಸನ್ನು ಬಳಸಿಕೊಂಡು ಗರಿಷ್ಟ ದೂರಗಾಮಿ ಉಪಯೋಗ ತೆಗೆಯಲು ಮಾಡಿದ ಹಂಚಿಕೆಯಂತಿದೆ.
ರೈತರ ಕೈಬಿಡಲು ಬಯಸದ ಕೇಂದ್ರ ಸರಕಾರ ಎಂಎಸ್ ಪಿ ಅಡಿ ರೈತರಿಗೆ ನೇರ ಹಣ ವರ್ಗಾವಣೆಗೆ ೨.೩೭ ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದು ಕಳೆದ ವರ್ಷದ ರೈತ ಬಿಕ್ಕಟ್ಟಿನಿಂದ ಪಾರಾಗಲು ಅಗತ್ಯವಾಗಿತ್ತು. ರಾಸಾಯನಿಕ ರಹಿತ ನೈಸರ್ಗಿಕ ಕೃಷಿಗೆ ಉತ್ತೇಜನ, ಗಂಗಾನದಿ ಶುದ್ಧೀಕರಣಕ್ಕೆ ಅದರ ಸುತ್ತಮುತ್ತ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿರುವುದು ಪರಿಸರ ಕಾಳಜಿಯ ದೃಷ್ಟಿಯಿಂದ ಸ್ವಾಗತಾರ್ಹ. ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ, ೨೦೨೩ರಲ್ಲಿ ಆರ್ ಬಿ ಐ ನಿಂದಲೇ ಡಿಜಿಟಲ್ ಕರೆನ್ಸಿ ಬಿಡುಗಡೆ, ಡಿಜಿಟಲ್ ಬ್ಯಾಂಕ್ ಸ್ಥಾಪನೆ, ೫ಜಿ ಇಂಟರ್ನೆಟ್ ಮೂಲ ಸೌಕರ್ಯ ಮುಂತಾದುವುಗಳ ಮೂಲಕ ಸರ್ವ ವಿಭಾಗಗಳನ್ನು ಡಿಜಿಟಲೀಕರಣಗೊಳಿಸುವ ದೂರಗಾಮಿ ಯೋಜನೆಗಳು ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ನಡೆಗಳು.
ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಸುಗಮಗೊಳಿಸುವ ಬಗ್ಗೆ ಹೇಳಲಾಗಿದೆ. ಇದು ಈ ವಲಯದ ಚಲನೆಗೆ ಅತೀ ಅಗತ್ಯ. ಸ್ಟಾರ್ಟಪ್ ಗಳಿಗೆ ತೆರಿಗೆ ವಿನಾಯಿತಿ, ತುರ್ತು ಸಾಲ ಸೌಲಭ್ಯ ೨೦೨೩ರವರೆಗೂ ವಿಸ್ತರಣೆ ಮಾಡಲಾಗಿದೆ. ದೇಶೀಯವಾಗಿ ರಕ್ಷಣಾ ಸಾಮಗ್ರಿ ಖರೀದಿಗೆ ಅನುದಾನ ಹೆಚ್ಚಳ ಮಾಡಿರುವುದು ಆತ್ಮನಿರ್ಭರ ಚಿಂತನೆಗೆ ಪೂರಕವಾಗಿದೆ.
ತೆರಿಗೆ ಆದಾಯದ ಹೆಚ್ಚಳಕ್ಕೆ ಗಣನೀಯ ಕ್ರಮಗಳನ್ನು ಕೈಗೊಂಡಿಲ್ಲವಾದರೂ, ಕೆಲವು ವಸ್ತುಗಳಿಗೆ ಆಮದು ಸುಂಕ ಹೆಚ್ಚಿಸಿರುವುದು ಗಮನಾರ್ಹವಾಗಿದೆ. ಒಟ್ಟಾರೆಯಾಗಿ ಉದ್ಯಮ ವಲಯಕ್ಕೆ ಇದು ಹೆಚ್ಚೇನೋ ನೀಡದ ಬಜೆಟ್ ಆಗಿದ್ದರೂ ಯಾವುದೇ ಹೆಚ್ಚಿನ ಹೊರೆಯನ್ನು ಹೊರಿಸಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಈ ಬಜೆಟ್, ಲಾಕ್ ಡೌನ್ ಗಳಿಂದಾಗಿ ಕುಸಿದಿರುವ ಆರ್ಥಿಕತೆಗೆ ತಕ್ಷಣದ ಶಕ್ತಿ ತುಂಬುವ ಇಂಜಕ್ಷನ್ ನಂತೆ ಕೆಲಸ ಮಾಡುವ ಬಜೆಟ್ ಅಲ್ಲ. ಇದು ಹಲವು ವರ್ಷಗಳ ಗುರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾವಧಾನವಾಗಿ ರೂಪಿಸಲಾದ ಬಜೆಟ್ ಎಂಬುದು ಗಮನಾರ್ಹ. ಇದಕ್ಕೆ ಅದರದೇ ಆದ ಮಿತಿಗಳೂ, ಹಾಗೇ ಸಾಧ್ಯತೆಗಳೂ ಇದೆ ಎಂಬುದೇ ನಿಜ.
ಕೃಪೆ: ವಿಜಯ ಕರ್ನಾಟಕ ಪತ್ರಿಕೆ, ಸಂಪಾದಕೀಯ, ದಿ. ೦೨-೦೨-೨೦೨೨