ಸಮಯಪಾಲನೆ ಮತ್ತು ಸ್ವಚ್ಛತೆ
‘ಇವನ್ಯಾಕೋ ಗಾಂಧೀ ತರಹ ಮಾತಾಡ್ತಾನೆ' ಎನ್ನೋದು ನಮ್ಮ ಶಾಲಾ ದಿನಗಳಲ್ಲಿ ಕೇಳಿಬರುತ್ತಿದ್ದ ಸಾಮಾನ್ಯವಾದ ಮಾತಾಗಿತ್ತು. ಪಾಪದ, ಅವನಷ್ಟಕ್ಕೇ ಇರುವ, ಎಲ್ಲರೊಂದಿಗೆ ಬೆರೆಯದೆ ಇದ್ದರೂ ಉತ್ತಮ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗೆ ‘ಗಾಂಧಿ' ಎನ್ನುವ ಉಪನಾಮ ಸಾಮಾನ್ಯವಾಗಿತ್ತು. ನಂತರದ ದಿನಗಳಲ್ಲಿ ಮೋಹನದಾಸ ಕರಮಚಂದ ಗಾಂಧಿ ಎನ್ನುವ ವ್ಯಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ‘ಅಹಿಂಸೆ'ಯ ಮಂತ್ರವನ್ನು ಬೋಧಿಸಿ ಜನರನ್ನು ಒಗ್ಗೂಡಿಸಿ ಬ್ರಿಟೀಷರನ್ನು ಭಾರತದಿಂದ ಓಡಿಸಿದರು. ಸ್ವಾತಂತ್ರ್ಯವನ್ನು ಗಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದರು ಎನ್ನುವುದು ಎಲ್ಲರಿಗೂ ತಿಳಿದೇ ಇರುವ ಮಾತು. ಈ ಮೂಲಕ ಅವರು ‘ಮಹಾತ್ಮ ಗಾಂಧಿ' ಆದರು.
ಗಾಂಧಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಬಹಳಷ್ಟು ಜನರಲ್ಲಿ ವಿಚಾರ ಬೇಧ ಇದ್ದರೂ ಅವರು ಪಾಲಿಸಿದ ಎರಡು ಸಂಗತಿಗಳ ಬಗ್ಗೆ ಮಾತ್ರ ನಾನು ಇಲ್ಲಿ ಹೇಳಲೇ ಬೇಕಾಗಿದೆ. ಅದು ಅವರ ಸಮಯ ಪರಿಪಾಲನೆ ಮತ್ತು ಸ್ವಚ್ಛತಾ ಆಂದೋಲನ. ಇದರ ಬಗ್ಗೆ ಅವರ ಜೀವನದಲ್ಲಿ ನಡೆದ ಒಂದು ಪುಟ್ಟ ಘಟನೆಯನ್ನು ನಿಮ್ಮ ಮುಂದೆ ಹೇಳಲು ಬಯಸುವೆ.
ಗಾಂಧಿಯವರು ಗುಜರಾತಿನ ಸಾಬರಮತಿ ಆಶ್ರಮದಲ್ಲಿ ವಾಸಿಸುತ್ತಿರುವಾಗ ಸಮಯ ಪಾಲನೆಯ ಬಗ್ಗೆ ಬಹಳ ಬಿಗಿಯಾದ ನಿಯಮಗಳನ್ನು ಆಚರಣೆಗೆ ತಂದಿದ್ದರು. ಸಮಯಕ್ಕೆ ಸರಿಯಾಗಿ ಏಳುವುದು, ಊಟ, ತಿಂಡಿ, ನಿದ್ರೆ ಎಲ್ಲದರಲ್ಲೂ ಸಮಯ ಪಾಲನೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿತ್ತು. ಮದ್ಯಾಹ್ನ ಸರಿಯಾಗಿ ಒಂದು ಗಂಟೆಗೆ ಊಟದ ಕೋಣೆಗೆ ಬರಬೇಕು ಎನ್ನುವುದು ಆ ನಿಯಮಗಳ ಪೈಕಿ ಒಂದು. ಒಂದು ಗಂಟೆಯ ಬಳಿಕ ಆ ಕೋಣೆಯ ಬಾಗಿಲನ್ನು ಹಾಕಲಾಗುತ್ತಿತ್ತು. ನಂತರ ಬಂದವರಿಗೆ ಉಪವಾಸವೇ ಗತಿ.
ಒಂದು ದಿನ ಏನಾಯಿತೆಂದರೆ ಗಾಂಧಿಯವರು ತಮ್ಮನ್ನು ಸಂದರ್ಶಿಸಲು ಬಂದ ವಿದೇಶೀ ಅತಿಥಿಗಳ ಜೊತೆ ಮಾತನಾಡುತ್ತಿದ್ದರು. ಈ ಮಾತುಕತೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ವಿದೇಶೀ ಗಣ್ಯರನ್ನು ಬೀಳ್ಕೊಟ್ಟು ಮರಳಿ ಆಶ್ರಮದ ಊಟದ ಕೊಠಡಿಗೆ ಬರುವಾಗ ಗಂಟೆ ಒಂದು ದಾಟಿತ್ತು. ಬಾಗಿಲು ಮುಚ್ಚಲಾಗಿತ್ತು. ಗಾಂಧಿಯವರು ಅದನ್ನು ನೋಡಿ ಮರಳಿ ತಮ್ಮ ಕೊಠಡಿಗೆ ತೆರಳುವಷ್ಟರಲ್ಲಿ ಓರ್ವ ಆಶ್ರಮವಾಸಿ ಗಾಂಧಿಯವರು ಊಟ ಮಾಡದೇ ಮರಳುತ್ತಿದ್ದುದ್ದನ್ನು ಗಮನಿಸಿ ಅವರಿಗಾಗಿ ಬಾಗಿಲು ತೆರೆಯಲು ಮುಂದಾದ. ಆಗ ಗಾಂಧಿ ಹೇಳಿದರು ‘ನಿಯಮಗಳು ನನ್ನನ್ನು ಸೇರಿಸಿಯೇ ಮಾಡಿದ್ದು. ನನಗಾಗಿ ಪ್ರತ್ಯೇಕ ನಿಯಮಗಳಿಲ್ಲ. ನಾನು ಇಂದು ತಡವಾಗಿ ಬಂದಿರುವೆ ಎಂದರೆ ನಾನು ಸಮಯಪಾಲನೆಯ ನಿಯಮವನ್ನು ಮುರಿದಿದ್ದೇನೆ ಎಂದು ಅರ್ಥ. ಈ ಕಾರಣಕ್ಕೆ ನಾನು ಉಪವಾಸ ಮಾಡಲೇ ಬೇಕು. ಅದೇ ನನಗೆ ನಾನು ನೀಡುವ ಶಿಕ್ಷೆ' ಎಂದರು. ಇದು ಗಾಂಧಿಯವರ ಸಮಯಪಾಲನೆಯ ಒಂದು ನಿದರ್ಶನ.
ಸಾಬರಮತಿ ಆಶ್ರಮದಲ್ಲಿ ಗಾಂಧಿಯವರು ನಿಯಮಿತವಾಗಿ ಕಸವನ್ನು ಪೊರಕೆ ಹಿಡಿದು ಸ್ವಚ್ಛ ಮಾಡುತ್ತಿದ್ದರು. ಮನಸ್ಸಿನ ಕೊಳೆಯ ಜೊತೆಗೆ ಹೊರಗಿನ ಕೊಳೆಯನ್ನೂ ತೊಳೆದುಹಾಕಬೇಕು ಎನ್ನುವುದು ಅವರ ಮನದ ಮಾತಾಗಿತ್ತು. ಈ ಎರಡು ಸಂಗತಿಗಳನ್ನು ಎಲ್ಲಾ ವಿದ್ಯಾರ್ಥಿಗಳು ಮನಸ್ಸಿನಲ್ಲಿಟ್ಟು ಬದುಕಿನಲ್ಲಿ ಉತ್ತಮ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎನ್ನುವುದು ನನ್ನ ಆಶಯ.
ಗಾಂಧಿಯವರ ಹುಟ್ಟು ಹಬ್ಬದ ದಿನವೇ ಹುಟ್ಟಿದ ಮತ್ತೊರ್ವ ಮಹಾನ್ ವ್ಯಕ್ತಿ ಎಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ. ಸರಳತೆಯ ಮಂತ್ರವನ್ನು ಹೇಳಿಕೊಟ್ಟು, ಅದರಂತೆಯೇ ಜೀವನ ಪರ್ಯಂತ ಬದುಕಿ ತೋರಿಸಿದ ಮಹಾನ್ ವ್ಯಕ್ತಿ ಇವರು. ಪಾಕಿಸ್ತಾನದ ಕುಟಿಲ ಯುದ್ಧ ನೀತಿಗೆ ಬೆದರದೆ ಸೈನ್ಯವನ್ನು ಮುನ್ನುಗ್ಗಿಸಿ ವಿಜಯ ಸಾಧನೆ ಮಾಡಿದವರು. ‘ಜೈ ಜವಾನ್ ಜೈ ಕಿಸಾನ್' ಎಂಬ ಮಂತ್ರವನ್ನು ಬೋಧಿಸಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೂ, ಗಾಂಧಿಯವರಿಗೂ ಹುಟ್ಟು ಹಬ್ಬದ ಅನಂತ ನಮನಗಳು
ಚಿತ್ರ ಕೃಪೆ: ಅಂತರ್ಜಾಲ ತಾಣ