ಸಮಾಜ ಸುಧಾರಣೆ ಹೇಗೆ?
ಸಮಾಜ ಸುಧಾರಣೆ ಹೇಗೆ?
2010 ನೆ ಇಸ್ವಿ ಡಿಶೆಂಬರ್ 11ನೆ ತಾರೀಖಿನ ದಿನ ಬೆಂಗಳೂರು TV 9 ದೂರದರ್ಶನ ವಾಹಿನಿಯಲ್ಲಿ ಒಂದು ಚರ್ಚೆ ನಡೆಯಿತು. ಇಂದಿನ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಹದಗೆಟ್ಟಿದೆ. ಭ್ರಷ್ಠಾಚಾರ, ಲಂಚ, ಅನೀತಿ ತಾಂಡವವಾಡುತ್ತಿವೆ. ಇಂಥ ಸಮಾಜವನ್ನು ಹೇಗೆ ಸುಧಾರಣೆ ಮಾಡಬೇಕು ಎಂಬ ಪ್ರಶ್ನೆಗೆ ಚರ್ಚೆಯಲ್ಲಿ ಬಾಗವಹಿಸಿದ್ದ ಮಹನೀಯರು ಕೆಲವು ಸಲಹೆಗಳನ್ನು ಸೂಚಿಸಿದರು. ಇದರ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಈ ರೀತಿ ಇವೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪ್ರವೃತ್ತರಾಗಿರುವವರು 25 ವರ್ಷವಯಸ್ಸನ್ನು ದಾಟಿದವರು ಎಂದು ಹೇಳಬಹುದು. ಅವರನ್ನು ಸುಧಾರಿಸುವುದು ಕಷ್ಟ. ಅವರ ಮನಸ್ತತ್ವಗಳು, ಅವರು ಪಾಲಿಸಿಕೊಂಡುಬರುತ್ತಿರುವ ರೀತಿನೀತಿಗಳು ಬಲಗೊಂಡಿರುತ್ತವೆ. ಅವುಗಳನ್ನು ಬದಲಾಯಿಸಲು ಸುಲಭವಲ್ಲ. ನಾವೇನಿದ್ದರೂ ಮುಂದಿನ ಜನಾಂಗದ ಕಡೆ ಗಮನಹರಿಸಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.:ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ನಾಣ್ಣುಡಿ ಇದೆಯಲ್ಲವೇ. ಪ್ರಥಮತಃ ತಂದೆ-ತಾಯಿಯರು ತಮ್ಮ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಬೇಕು."ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು", ಮಕ್ಕಳಿಗೆ ಆಯಾಯ ವಯಸ್ಸಿಗೆ ತಕ್ಕಂತೆ ನೀತಿನಿಯಮಗಳನ್ನು ಕಲಿಸಬೇಕು. ಈ ಸಂದರ್ಭದಲ್ಲಿ ಒಂದು ಉತ್ತಮವಾದ ಪದ್ಯವನ್ನು ಎಲ್ಲ ತಂದೆತಾಯಿಯರೂ ಗಂಭೀರವಾಗಿ ಚಿಂತಿಸಬೇಕು.
ಮಕ್ಕಳಿಗೆ ತಂದೆ ಬಾಲ್ಯದೊಳ್
ಅಕ್ಕರ ವಿದ್ಯೆಗಳನ್ನರಿಸದಿರ್ದೊಡೆ ಕೊಂದಂ
ಲಕ್ಕದನಮಿರಲು ಕೆಡಗುಂ
ಚಿಕ್ಕಂದಿನ ವಿದ್ಯೆ ಪೊರೆಗುಂ ಚೂಡಾರತ್ನ
ಪಾಠಶಾಲೆ ಮಕ್ಕಳ ಜೀವನದಲ್ಲಿ ಎರಡನೆಯ ಪ್ರಧಾನ ಕ್ಷೇತ್ರ. ಪಾಠಶಾಲೆಗಳ ಪಠ್ಯಪುಸ್ತಕಗಳು ಉತ್ತಮಮಟ್ಟದ್ದವಾಗಿರಬೇಕು. 50-60 ವರ್ಷಗಳ ಹಿಂದೆ ನೀತಿಬೋಧಕ ಕತೆಗಳನ್ನೊಳಗೊಂಡ "ನೀತಿ ಚಿಂತಾಮಣಿ" ಎಂಬ ಪುಸ್ತಕ ಇತ್ತು. ಪ್ರತಿಯೊಂದು ಕತೆಯೂ ಒಂದು ನೀತಿಯನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುತ್ತಿತ್ತು. ಹೊಟ್ಟೆಕಿಚ್ಚು ಪಡಬಾರದು, ಇತರರನ್ನು ಹಿಂಸಿಸಬಾರದು, ದ್ವೇಷಿಸಬಾರದು, ಅವಶ್ಯಕತೆಗಿಂತ ಹೆಚ್ಚು ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳಬಾರದು, ಪ್ರಾಣಿಗಳನ್ನು ಪಶುಪಕ್ಷಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಇತರರಿಗೆ ಸಹಾಯ ಮಾಡಬೇಕು, ಹಿರಿಯರನ್ನು, ಗುರುಗಳನ್ನು ಗೌರವಿಸಬೇಕು-ಇತ್ಯಾದಿ ನೀತಿಗಳನ್ನು ತಿಳಿಸುವ ಕತೆಗಳಿರುತ್ತಿದ್ದವು.
ಶ್ರದ್ಧೆಯಿಂದ ಕೆಲಸಮಾಡುವ ಉತ್ತಮ ಚರಿತೆಯನ್ನೊಳಗೊಂಡ ಉಪಾಧ್ಯಾಯರುಗಳನ್ನು ನೇಮಿಸಬೇಕು. ಬಡಕುಟುಂಬಗಳಿಂದ ಬರುವ, ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ, ಮಕ್ಕಳಿಗೆ ಉಚಿತ ಪುಸ್ತಕಗಳನ್ನು, ಸಮವಸ್ತ್ರಗಳನ್ನು, ಉಪಾಹಾರವನ್ನು ಒದಗಿಸಬೇಕು. ಗ್ರಾಮಾಂತರಪ್ರದೇಶಗಳಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು. ಆ ವಿದ್ಯಾರ್ಥಿನಿಲಯಗಳನ್ನು ನೋಡಿಕೊಳ್ಳುವ ಸಿಬ್ಬಂದಿಯವರಿಗೆ ವಿಶೇಷ ತರಬೇತಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಉತ್ತಮರೀತಿಯಲ್ಲಿ ನೋಡಿಕೊಳ್ಳುವಂತೆ ಏರ್ಪಾಟುಮಾಡಬೇಕು. ಪಾಠಶಾಲೆಗಳಲ್ಲಾಗಲೀ,ವಿದ್ಯಾರ್ಥಿನಿಲಯಗಳಲ್ಲಾಗಲೀ ಮಕ್ಕಳಿಗೆ ತಮ್ಮಲ್ಲಿ ಸ್ನೇಹ, ವಿಶ್ವಾಸ ಗಳು ಮೂಡುವ ವಾತಾವರಣ ಕಲ್ಪಿಸಬೇಕು. ಜಾತಿಮತಭೇದಗಳು ತಲೆದೋರದಂತೆ ಎಚ್ಚರಿಕೆ ವಹಿಸಬೇಕು. ಪ್ರಾಥಮಿಕ-ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಿದ್ದಿ ಬೆಳಸಿದರೆ, ಪ್ರೌಡಶಾಲೆಗಳಲ್ಲಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಸುಲಭವಾಗುತ್ತದೆ. ಇಂತಹ ವಿದ್ಯಾರ್ಥಿಗಳು ಜೀವನ ಕ್ಷೇತ್ರದಲ್ಲಿ ಕಾಲಿಟ್ಟಾಗ ಅವರು ಸತ್ಪ್ರಜೆಗಳಾಗಿ ತಾವೂ ಪ್ರಗತಿಹೊಂದಿ, ದೇಶವನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದರಲ್ಲಿ ಯಶಸ್ವಿಯಾಗುತ್ತಾರೆ.
ಶೈಕ್ಷಣಿಕ ಕ್ಷೇತ್ರವನ್ನು ರಾಜಕಾರಣಿಗಳಿಂದ ದೂರವಿಡಬೇಕು. ಪಠ್ಯಪುಸ್ತಕಗಳು, ಬೋಧನಾಕ್ರಮ ಇತ್ಯಾದಿ ವಿಷಯಗಳನ್ನು ಈ ಕ್ಷೇತ್ರದ ನುರಿತ ತಜ್ಞರು ನಿರ್ಧರಿಸಬೇಕು.