ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇನ್ನುವ ನಿಟ್ಟಿನಲ್ಲಿ ಸಹಿ ಸಂಗ್ರಹ

ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇನ್ನುವ ನಿಟ್ಟಿನಲ್ಲಿ ಸಹಿ ಸಂಗ್ರಹ

ಗೆಳೆಯರೇ,
ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸೋಣ ಅನ್ನುವ ವಿಷಯವಾಗಿ ನಾನು ಬರೆದಿರುವ ಈ ಅಂಕಣವನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಈ ಅಭಿಯಾನಕ್ಕೆ ತಮ್ಮ ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡುತ್ತಿದ್ದೇನೆ.
ಕನ್ನಡಿಗರಾಗಿ ಈ ಪಿಟಿಶನ್ನಿಗೆ ಸಹಿ ಹಾಕುವುದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು. ನಮ್ಮ ನಾಡಿನ ಜನರಿಗೆ ಆದ್ಯತೆಯ ಮೇರೆಗೆ ಎಲ್ಲ ದರ್ಜೆಯ ಕೆಲಸಗಳೂ ಸಿಗಬೇಕು. ಈ ವಿಷಯವಾಗಿ ನಮಗೆ ಯಾವುದೇ ಮಡಿವಂತಿಕೆ ಬೇಕಿಲ್ಲ. ಪ್ರಪಂಚದ ಅತ್ಯಂತ ಏಳಿಗೆ ಹೊಂದಿರುವ ದೇಶಗಳಲ್ಲಿಯೂ ಸ್ಥಳೀಯರಿಗೆ ಮೀಸಲಾತಿ ಇದೆ.
ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕಾದದ್ದು ಸ್ವಾಭಾವಿಕ, ನ್ಯಾಯಸಮ್ಮತ ಮತ್ತು ಧರ್ಮ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಅನ್ನುವ ಸಾಮಾನ್ಯ ಕನ್ನಡಿಗರ ಬಯಕೆಗೆ ಪೂರಕವಾಗಿರೋ ವರದಿ ಅಂದರೆ "ಸರೋಜಿನಿ ಮಹಿಷಿ ವರದಿ". 1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1986ರಲ್ಲೇ ಸಲ್ಲಿಸಿದೆ. ನೋವಿನ ಸಂಗತಿಯೆಂದರೆ ವರದಿ ಬಂದು 26 ವರ್ಷವಾದರೂ ಅದು ಪೂರ್ತಿ ಜಾರಿಯಾಗಿಲ್ಲ.

ಬೆಂಗಳೂರಿನಲ್ಲಿ ಹಿರಿಯ ನಾಗರೀಕರಾದ ಶ್ರೀಮತಿ ವಿನುತಾ ರವರು ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕೆಂದು ಅನ್ನುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಹಲವಾರು ಸಂಘಸಂಸ್ಥೆಗಳನ್ನು ಭೇಟಿ ಮಾಡಿ, ಜನಾಭಿಪ್ರಾಯ ಮೂಡಿಸಿ ಈ ವರದಿ ಕಾಯ್ದೆಯಾಗಬೇಕೆನ್ನುವ ಬಯಕೆ ವಿನುತಾ ರವರದು. ನಿಜಕ್ಕೂ ಇಂತಹವರು ಕನ್ನಡ ಯುವ ಪೀಳಿಗೆಗೆ ಆದರ್ಶವೇ ಸರಿ.
ಈ ಹಿಂದೆ ಅವರು ಮೊಬೈಲ್ ಎಸ್.ಎಂ.ಎಸ್ ಅಭಿಯಾನ ನಡೆಸಿ ಸುಮಾರು ೧೦೦೦೦ಕ್ಕೂ ಹೆಚ್ಚು ಎಸ್.ಎಂ.ಎಸ್ ಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಅಂತರ್ಜಾಲದಲ್ಲಿ ಆನ್ಲೈನ್ ಸಹಿ ಸಂಗ್ರಹದ ಮೂಲಕ ತಮ್ಮ ಈ ಅಭಿಯಾನಕ್ಕೆ ಇನ್ನಷ್ಟು ಬಲ ದಕ್ಕಿಸಿಕೊಳ್ಳಬೇಕೆನ್ನುವ ಹಂಬಲ ಅವರದಾಗಿದೆ.
ಈ ಆನ್ಲೈನ್ ಸಹಿ ಸಂಗ್ರಹದ ಮೂಲಕ ಮಾಡುವ ಮೂರು ಹಕ್ಕೊತ್ತಾಯಗಳು ಈ ರೀತಿಯಾಗಿವೆ:
೧) ಇಂದಿಗೆ ಹೊಂದುವಂತೆ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಲು ತಜ್ಞರ ಸಮಿತಿ ರಚಿಸಬೇಕು.
೨) ಹೊಸ ಸಮಿತಿಯ ಶಿಫಾರಸ್ಸಿನನ್ವಯ ಪರಿಷ್ಕರಿಸಿದ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು.
೩) ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಸಾಮಾನ್ಯ ಕನ್ನಡಿಗರಿಗೆ ವಿನುತಾ ರವರಿಗಿಂತ ಬೇರೆ ಸ್ಪೂರ್ತಿ ಬೇಕಿದೆಯೇ?
ನಮಗೆ ನಿಜವಾಗಿಯೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕು ಅನ್ನುವ ಅಭಿಮಾನವಿದ್ದರೇ, ನಾವು ಈ ಸಹಿ ಸಂಗ್ರಹಕ್ಕೆ ನಮ್ಮ ಕೈ ಜೋಡಿಸಬೇಕು. ನಮ್ಮ ಗೆಳೆಯರು, ನೆಂಟರಿಷ್ಟರು, ಪರಿಚಯಸ್ಥರಿಗೆ ಇದರ ಬಗ್ಗೆ ಹೇಳಿ ಅವರೂ ಸಹಿ ಹಾಕುವಂತೆ ಮಾಡಬೇಕು.
ಈ ಕೊಂಡಿಯಲ್ಲಿ ಆನ್ಲೈನ್ ಪಿಟಿಶನ್ ಇದೆ. ಇಲ್ಲಿ ಸಹಿ ಹಾಕಿ, ಹಾಕಿಸಿ ಕರ್ನಾಟಕದ ಪರವಾದ, ಕನ್ನಡಿಗರಿಗೋಸ್ಕರ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.
http://chn.ge/SRi5MV