ಸರೋವರ ಮಾಯವಾಯಿತು!(ಇ-ಲೋಕ-30)(9/7/2007)
ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಸರೋವರದ ನೀರು ಖಾಲಿಯಾದುದನ್ನು ಜನ ಗಮನಿಸಿದರು.ಈ ಸಂಗತಿ ಗಮನಕ್ಕೆ ಬಂದುದು ಮೇ ತಿಂಗಳಲ್ಲಿ. ಇದಕ್ಕೆ ಕಾರಣವೇನು ಎಂದು ತಜ್ಞರು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೊನೆಗೂ ಅದರ ಹಿಂದಿನ ಕಾರಣ ಪತ್ತೆಯಾಗಿದೆ. ಸರೋವರದ ನೀರು ಸರೋವರದಿಂದ ಇಳಿದು ಹೋಗದಂತೆ ತಡೆಯುತಿದ್ದ ಹಿಮಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತಂತೆ. ಈ ಕಾರಣದಿಂದ, ಸರೋವರದ ನೀರು, ಸಮೀಪದ ಸಮುದ್ರ ಸೇರಿ, ಸರೋವರ ಖಾಲಿಯಾಯಿತು ಎನ್ನುವುದು ಈಗ ಸಿದ್ಧವಾಗಿದೆ.ಸರೋವರದ ಸಮೀಪ ಇರುವ ಹಿಮರಾಶಿ,ಸರೋವರದ ಜಲಮೂಲವಂತೆ. ಈಗ ಈ ಹಿಮರಾಶಿ ಕರಗಿ,ಸರೋವರ ಮತ್ತೆ ತುಂಬಿ ಕೊಳ್ಳುತ್ತಿದೆ. ಸರೋವರ ಹತ್ತು-ಹನ್ನೆರಡು ಎಕರೆ ವಿಸ್ತೀರ್ಣಕ್ಕೆ ಹಬ್ಬಿಕೊಂಡಿದೆ. ಭೂಮಿಯ ವಾತಾವರಣ ಬಿಸಿಯೇರುತ್ತಿರುವುದು, ಸರೋವರದ ಹಿಮಗೋಡೆ ಕರಗಲು ಕಾರಣವಾಗಿರಬಹುದು, ಎನ್ನುವುದು ತಜ್ಞರ ಗುಮಾನಿ.
ಜನ ಕಾಯುತ್ತಿರುವೆಡೆ ಬಸ್ ಟ್ರಿಪ್ ಏರ್ಪಡಿಸಲು ಮೊಬೈಲ್ ಸಾಧನ ಬಳಕೆ
ನಗರಗಳಲ್ಲಿ ಕೆಲ ಪ್ರದೇಶಗಳಲ್ಲಿ ಅಸಾಧ್ಯ ಜನಸಂದಣಿ ಏರ್ಪಟ್ಟು, ಅಲ್ಲಿ ಜನರು ಸಾರಿಗೆ ವ್ಯವಸ್ಥೆ ಸಿಗದೆ ಪೇಚಾಡುವ ಪರಿಸ್ಥಿತಿ ಬರುತ್ತದೆ. ಆಗ ಅ ಕಡೆ ಹೆಚ್ಚು ಬಸ್ ಟ್ರಿಪ್‍ಗಳನ್ನು ಏರ್ಪಡಿಸಿದರೆ, ಜನರಿಗೆ ಅನುಕೂಲ ತಾನೇ? ಇಂತಹ ಸಂಚಾರ ವ್ಯವಸ್ಥೆ ಜಾರಿಗೆ ತಂದರೆ, ಬಸ್‍ಗಳು ನಿಗದಿತ ವೇಳಾ ಪಟ್ಟಿಯ ಅನುಸಾರವೇ ಓಡಾಡಬೇಕಿಲ್ಲ. ಇಂತಹ ಸಾರಿಗೆ ನಿಯಂತ್ರಣಕ್ಕೆ ಮೊಬೈಲ್ ಫೋನ್‍ಗಳನ್ನು ಬಳಸುವುದು ಪ್ರಖ್ಯಾತ ಮಸಾಚುಸೆಟ್ ವಿಶ್ವವಿದ್ಯಾಲಯದ ಸಂಶೋಧಕರ ಗುರಿ.ಮೊಬೈಲ್ ಸೇವೆ ನೀಡುವ ಕಂಪೆನಿಗಳ ಮೂಲಕ ಮೊಬೈಲ್ ಹೊಂದಿರುವ ಜನರು ನಗರದ ಯಾವ ಪ್ರದೇಶಗಳಲ್ಲಿ ಎಷ್ಟು ಸಾಂದ್ರವಾಗಿದ್ದಾರೆ ಎಂದು ತಿಳಿಯಲು ಸಾಧ್ಯ. ಈ ಮಾಹಿತಿಯನ್ನು ವಿಶ್ಲೇಷಿಸಿದರೆ, ಎಲ್ಲಿ ಜನಸಂದಣಿ ಹೆಚ್ಚಿದೆ ಎಂದರಿಯಬಹುದು.ಈ ಮಾಹಿತಿಯನ್ನು ಬಳಸಿಕೊಂಡು ಇಂತಹ ಸೇವೆ ನೀಡಬಹುದು.
ಇಟೆಲಿಯಲ್ಲಿ ಈ ರೀತಿಯ ಪ್ರಯೋಗ ಮೊದಲಾಗಿ ನಡೆಯಬಹುದು.ಅಟಾಕ್ ಎನ್ನುವ ಇಟೆಲಿ ಕಂಪೆನಿ ಇದೀಗಲೇ ಅಂತರ್ಜಾಲ ಮೂಲಕ ಟ್ರ್‍ಆಫಿಕ್ ಜಾಮ್ ಬಗ್ಗೆ ಜನರಿಗೆ ತಿಳಿಸುತ್ತಿದೆ. ಅದರೆ ಈ ಮಾಹಿತಿ ಮುಖ್ಯ ರಸ್ತೆಗಳಿಗೆ ಮಾತ್ರಾ ಸೀಮಿತವಾಗಿದೆ. ಎಮ್ ಐ ಟಿಯ ಸಂಶೋಧನೆ ಬಳಸಿಕೊಂಡು ನಗರದ ಸಣ್ಣ ರಸ್ತೆಗಳ ಬಗ್ಗೆಯೂ ಮಾಹಿತಿ ಒದಗಿಸುವುದು ಕಂಪೆನಿಯ ಯೋಜನೆ. ಅದು ನೀಡುವ ಇನ್ನೊಂದು ಸೇವೆ ಮೊಬೈಲ್ ಮೂಲಕ ಲಭ್ಯವಿದೆ. ಈ ಸೇವೆಯೆಂದರೆ,ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್‍ಗಳು ವ್ಯಕ್ತಿ ಕಾಯುತ್ತಿರುವೆಡೆ ಯಾವ ವೇಳೆಗೆ ಬರಲಿದೆ ಎನ್ನುವುದನ್ನು ತಿಳಿಸುವ ವ್ಯವಸ್ಥೆ. ಬಸ್‍ಗೆ ಅಳವಡಿಸಿರುವ ಅದಿರುವ ಜಾಗ ತಿಳಿಸುವ ಜಿ ಪಿ ಎಸ್ ವ್ಯವಸ್ಥೆಯನ್ನಿದು ಬಳಸುತ್ತದೆ.
ಏರುತ್ತಿರುವ ವಿದ್ಯುತ್ ಬೇಡಿಕೆಗೆ ಕಾರಣವೇನು?
ಮನೆ ಮತ್ತು ಕಚೇರಿಗಳಲ್ಲಿ ವಿದ್ಯುತ್ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಒಂದೇ ಸವನೆ ಏರುತ್ತಿದೆ. ಇದರ ಹಿಂದೆ ಇಲೆಕ್ಟ್ರಾನಿಕ್ ಸಾಧನ ಸಲಕರಣೆಗಳ ಪಾತ್ರ ಹೆಚ್ಚಿನದು. ಈಗ ಮನೆಗಳಲ್ಲೂ ಕಂಪ್ಯೂಟರ್ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಕಚೇರಿಗಳಲ್ಲಂತೂ, ಕಂಪ್ಯೂಟರ್ ಜಾಲವೇರ್ಪಡಿಸಿ, ಹತ್ತಾರು ಕಂಪ್ಯೂಟರುಗಳನ್ನು ಜಾಲಕ್ಕೆ ಜೋಡಿಸಿರುತ್ತಾರೆ. ಕಂಪ್ಯೂಟರುಗಳನ್ನು ಬಂದು ಮಾಡಿ ಇಡುವ ಸಂಪ್ರದಾಯವೇ ಇಲ್ಲಿಲ್ಲ. ಅಗತ್ಯವಿರಲಿ ಇಲ್ಲದಿರಲಿ, ಕಂಪ್ಯೂಟರುಗಳು ಚಾಲೂ ಇರುತ್ತವೆ. ಮನೆಯ ಟಿವಿಗಳೂ ಚಪ್ಪಟೆ ತೆರೆಯವಾದರೆ, ಹಳೆಯ ಟಿವಿಗಳಿಗಿಂತ ಹೆಚ್ಚು ವಿದುಚ್ಛಕ್ತಿ ಬಳಸುತ್ತವೆ.ಇವುಗಳನ್ನು ಸ್ಟಾಂಡ್‍ಬೈ ರೀತಿಯಲ್ಲಿ ಇಟ್ಟು ಬಳಸುವುದೇ ಈಗಿನ ಪದ್ಢತಿ. ಓಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಟಿವಿಗಳ ಬಳಕೆಯೂ ಆಗುತ್ತಿವೆ. ದೊಡ್ದ ತೆರೆಯ ಟಿವಿಗಳಂತೂ ಬಕಾಸುರ ಹಸಿವಿನವು!ಇವುಗಳ ಜತೆ ಮೋಡೆಮ್,ಸೆಟ್ ಟಾಪ್ ಬಾಕ್ಸ್‍ಗಳು,ಬಟ್ಟೆ ಒಗೆಯುವ ಯಂತ್ರಗಳು, ಫ್ರಿಜ್‍ಗಳು ಇವುಗಳ ಬಳಕೆ ಹೆಚ್ಚುತ್ತಿದ್ದು, ವಿದ್ಯುತ್ ಬೇಡಿಕೆ ಎರಲು ಕಾರಣವಾಗಿವೆ.
ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಯಿಂದ ಸಾಧನಗಳ ದಕ್ಷತೆ ಹೆಚ್ಚಿದ ಕಾರಣ ವಿದ್ಯುತ್ ಬಳಕೆ ಕಡಿಮೆಯಾಗಬೇಕಲ್ಲಾ ಎಂದು ನಿಮಗೆ ಸಂಶಯ ಬರಬಹುದು. ಸಾಧನಗಳ ದಕ್ಷತೆ ಹೆಚ್ಚುತ್ತಿರುವುದು ಹೌದಾದರೂ, ಅವುಗಳು ವಿಶಿಷ್ಟ ಸೌಲಭ್ಯಗಳನ್ನು ನೀಡುವ ಕಾರಣ ಅವುಗಳ ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ಉದಾಹರಣೆಗೆ ಟಿವಿ ತೆರೆಯನ್ನೆ ತೆಗೆದುಕೊಳ್ಳಿ. ದೊಡ್ದ ತೆರೆ, ಪ್ರಕಾಶಮಾನವಾದ ಚಿತ್ರಗಳು,ಅತ್ಯುತ್ತಮ ಮಟ್ಟದ ಧ್ವನಿ ವ್ಯವಸ್ಥೆ ಇವೆಲ್ಲಾ ಹೆಚ್ಚಿನ ಶಕ್ತಿಯ ಬಳಕೆಗೆ ಕಾರಣವಾಗುತ್ತವೆ.ಬೇರೆಲ್ಲಾ ಸಾಧನಗಳು ಹಾಗಿರಲಿ, ಹೊಸ ನಮೂನೆಯ ಡಿಜಿಟಲ್ ರೇಡಿಯೋ ಸೆಟ್‍ಗಳು ಹಳೆಯ ರೇಡಿಯೋಗಳಿಗಿಂತ ನಾಲ್ಕು ಪಟ್ಟು ವಿದ್ಯುತ್ ಬಳಸುತ್ತವೆ. ಅಗತ್ಯವಿಲ್ಲದಿರುವಾಗಲಾದರೂ ಸಾಧನಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸಿದರೇ ಎಷ್ಟೋ ಮಟ್ಟಿನ ಉಳಿತಾಯ ಸಾಧ್ಯ.
ಡಿಜಿಟಲ್ ಮಾಹಿತಿಯು ಅಮರವೇ?
ಪುಸ್ತಕವನ್ನು ಬಹಲ ಕಾಲ ರಕ್ಷಿಸುವುದು ಕಷ್ಟವೇ. ಆದರೆ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಇರಿಸಿದರೆ ನಮಗೆ ಬೇಕಾದಾಗ ಅವನ್ನು ಪಡೆಯಬಹುದು ಎಂದು ಅಂದು ಕೊಂಡರೆ ಅದು ನಿಜವಲ್ಲ. ಕಂಪ್ಯೂಟರೀಕರಣಗೊಳಿಸಿದ ಮಾಹಿತಿಯಲ್ಲಿ ಎರಡು ವಿಧದ ಸಮಸ್ಯೆಯಿದೆ. ಮೊದಲನೆಯದು ಅದನ್ನು ಉಳಿಸಲು ಬಳಸಿದ ಮಾಧ್ಯಮದ್ದು. ಎರಡನೆಯದು ಅದನ್ನು ಕಂಪ್ಯೂಟರಿನಲ್ಲಿ ತೋರಿಸಲು ಬಳಕೆಯಾಗುವ ತಂತ್ರಾಂಶದ್ದು.
ಬ್ರಿಟಿಶ್ ಗ್ರಂಥಾಲಯದ ಬಳಿ ಒಂಭೈನೂರು ವರ್ಷ ಹಳೆಯ ಗ್ರಂಥಗಳಿವೆ. ಅವುಗಳ ಗಣಕೀಕರಣದ ನಂತರ ಸುಮಾರು ಆರು ನೂರು ಟೆರಾಬೈಟುಗಳಷ್ಟು ಮಾಹಿತಿಯೂ ಅಲ್ಲಿದೆ. ಇವನ್ನು ಉಳಿಸಲು ಮೊದಲಿಗೆ ಫ್ಲಾಪಿಯಂತಹ ಮಾಧ್ಯಮ ಬಳಕೆಯಾಗುತ್ತಿದ್ದರೆ,ಸದ್ಯ ಡಿವಿಡಿಯಂತಹ ಮಾಧ್ಯಮ ಬಳಕೆಯಾಗುತ್ತಿದೆ. ಈಗಿನ ಕಂಪ್ಯೂಟರುಗಳಲ್ಲಿ ಫ್ಲಾಪಿ ಡ್ರೈವ್‍ಗಳೇ ಇಲ್ಲ. ಇದು ಸಮಸ್ಯೆ ತಂದೊಡ್ಡುತ್ತಿದೆಯಾದರೂ, ಅದನ್ನು ಗ್ರಂಥಾಲಯವು ಸಮರ್ಥವಾಗಿಯೇ ಎದುರಿಸಿದೆ.
ತಂತ್ರಾಂಶದ ಸಮಸ್ಯೆ ಗ್ರಂಥಾಲಯಕ್ಕೆ ತಲೆನೋವಾಗಿದೆಯಂತೆ. ಮೊದಲಲ್ಲಿ ಬಳಕೆಯಾಗುತ್ತಿದ್ದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವಾಗಲೀ,ಕಡತಗಳನ್ನು ಕಂಪ್ಯೂಟರುಗಳಲ್ಲಿ ಉಳಿಸಿದ ತಂತ್ರಾಂಶಗಳಾಗಲೀ ಈಗ ಬಳಕೆಯಲ್ಲಿಲ್ಲ. ಉದಾಹರಣೆಗೆ ವಿಂಡೋಸ್-95 ವ್ಯವಸ್ಥೆಯಲ್ಲಿ ಆಫೀಸ್-97 ತಂತ್ರಾಂಶ ಬಳಕೆಯಾಗುತ್ತಿತ್ತು.ಈಗಿನ ವಿಸ್ಟಾದಲ್ಲಿ ಆಫೀಸ್ ತಂತ್ರಾಂಶ ಕಡತಗಳನ್ನು ಉಳಿಸುವ ಬಗೆಯೇ ಬೇರೆ. ಈಗಿನ ಆಫೀಸ್ ತಂತ್ರಾಂಶ ಹಳೆಯ ಆಫೀಸ್ ಕಡತಗಳನ್ನು ತೆರೆಯಲಾರದು!
ಈಗ ಬ್ರಿಟಿಶ್ ಗ್ರಂಥಾಲಯ ಮೈಕ್ರೋಸಾಫ್ಟಿಗೆ ಶರಣು ಹೋಗಿದೆ. ಕಂಪೆನಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿ, ಹೊಸ ವ್ಯವಸ್ಥೆಯಲ್ಲಿ ಹಳೆಯ ಕಡತಗಳನ್ನು ತೆರೆಯುವ ತಂತ್ರಾಂಶವನ್ನು ಸಿದ್ಧಪಡಿಸಲು ಹೇಳಿದೆ. ಅಂತೂ ಮೈಕ್ರೋಸಾಫ್ಟ್ ಕಂಪೆನಿ ಬಯಸಿದ್ದೂ ಹಾಲು..ಸಿಕ್ಕಿದ್ದೂ ಹಾಲು!
*ಅಶೋಕ್‍ಕುಮಾರ್ ಎ