ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಅಪಾರ ಕುಸಿತ

ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಅಪಾರ ಕುಸಿತ

ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ೧ ರಿಂದ ೧೦ನೇ ತರಗತಿ ಶಾಲಾ ದಾಖಲಾತಿಯಲ್ಲಿ ೪ ಲಕ್ಷದಷ್ಟು ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು ಆತಂಕದ ಸಂಗತಿಯಾಗಿದೆ. ಕಳೆದ ವರ್ಷ ೧.೬೫ ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿಕೊಂಡಿದ್ದರೆ, ಈ ವರ್ಷ ಈ ಸಂಖ್ಯೆ ೧.೧೫ ಕೋಟಿಗೆ ಇಳಿದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕೂಡ ಸರ್ಕಾರಿ ಶಾಲೆಗಳ ಪ್ರವೇಶಾತಿ ಕುಸಿತವಾಗಿತ್ತು ಎಂಬುದು ಗಮನಾರ್ಹವಾಗಿದೆ.

ಪಾಲಕರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಯಾವ ಶಾಲೆಗೆ, ಯಾವ ಮಾಧ್ಯಮಕ್ಕೆ ಸೇರಿಸಬೇಕು ಎಂಬುದನ್ನು ೧ನೇ ತರಗತಿಯಲ್ಲಿ ನಿರ್ಧರಿಸಿರುತ್ತಾರೆ. ೧ನೇ ತರಗತಿ ದಾಖಲಾತಿ ಪ್ರಮಾಣ ಹೆಚ್ಚಾದರೆ ಮರು ವರ್ಷದಿಂದ ಮುಂದಿನ ತರಗತಿಯಲ್ಲೂ ಬಹುತೇಕವಾಗಿ ಅದೇ ಸಂಖ್ಯೆ ಮುಂದುವರೆಯುತ್ತದೆ. ಆದರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ೧ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿತ್ತು. ವಾಸ್ತವ ಹೀಗಿದ್ದರೂ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆಯು ಈಗ ದೊಡ್ಡ ಪ್ರಮಾಣದಲ್ಲಿ ಪ್ರವೇಶಾತಿ ಕಡಿಮೆಯಾಗಿರುವುದಕ್ಕೆ ಕಾರಣಗಳನ್ನು ಹುಡುಕುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.

ಕೋವಿಡ್ ಮಹಾಮಾರಿ ದಾಳಿ ಇಟ್ಟ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಸಾಕಷ್ಟು ಏರಿಕೆ ಕಂಡು ಬಂದಿತ್ತು. ಕರೋನಾ ಹಾವಳಿಯಿಂದಾಗಿ ಸಾಕಷ್ಟು ಪಾಲಕರ ಆದಾಯದಲ್ಲಿ ಗಣನೀಯ ಇಳಿಕೆಯಾಗಿತ್ತು. ಆರ್ಥಿಕ ಸಂಕಷ್ಟದ ಪರಿಣಾಮವಾಗಿ ೨೦೨೦-೨೧ ಮತ್ತು ೨೦೨೧-೨೨ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಪಡೆದಿದ್ದರು. ತದ ನಂತರದ ವರ್ಷಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದಿದ್ದು, ಪಾಲಕರ ಆದಾಯದಲ್ಲಿ ಹೆಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳ ಬದಲಾಗಿ ಖಾಸಗಿ ಶಾಲೆಗಳತ್ತ ಮಕ್ಕಳನ್ನು ಕಳುಹಿಸಲು ಪಾಲಕರು ಆಸಕ್ತಿ ತೋರಿರಬಹುದಾಗಿದೆ. ಇದಲ್ಲದೆ, ಕೆಲವೊಂದಿಷ್ಟು ಹೊರತುಪಡಿಸಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿದೆ. ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಕೊಡಿಸಬೇಕೆಂಬ ಒಲವಿನ ಕಾರಣದಿಂದಾಗಿ ಪಾಲಕರು ಖಾಸಗಿ ಶಾಲೆಗಳತ್ತ ಸಹಜವಾಗಿ ಮುಖ ಮಾಡಿರುವುದನ್ನು ಗಮನಿಸಬಹುದಾಗಿದೆ.

ಇಂಗ್ಲಿಷ್ ಮಾಧ್ಯಮದತ್ತ ಸೆಳೆತ ಬಹುತೇಕ ಪಾಲಕರಲ್ಲಿ ಮನೆ ಮಾಡಿರುವ ವಾಸ್ತವವನ್ನು ಯಾರೂ ಅಲ್ಲಗಳೆಯಲಾಗದು. ಶಿಕ್ಷಣಕ್ಕಾಗಿ ಸರ್ಕಾರ ಅಪಾರ ಹಣ ವ್ಯಯ ಮಾಡುತ್ತಿದ್ದು, ಈ ಸಂಪನ್ಮೂಲ ನಿರುಪಯುಕ್ತ ಆಗಬಾರದು. ಕನ್ನಡ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ. ಕನ್ನಡದ ಅಸ್ಮಿತೆಗೆ ಧಕ್ಕೆಯಾಗದಂತೆ ಮಿಶ್ರ ಮಾಧ್ಯಮ ಬಳಕೆಯು ಈ ನಿಟ್ಟಿನಲ್ಲಿ ಸೂಕ್ತ ಪರ್ಯಾಯವಾಗಬಹುದಾಗಿದೆ. ಸಮಾಜ ವಿಜ್ಞಾನ-ಇತಿಹಾಸವನ್ನು ಕನ್ನಡದಲ್ಲಿ, ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಸುವುದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ತಮ ಕೈಗೊಳ್ಳಬಹುದಾಗಿದೆ. ಇಂತಹ ಸಾಧ್ಯತೆಗಳತ್ತ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನಹರಿಸಬೇಕಾಗಿದೆ. ಪುಕ್ಕಟೆ ಬಸ್, ವಿದ್ಯುತ್ ಸೇರಿದಂತೆ ಉಚಿತ ಗ್ಯಾರಂಟಿ ಯೋಜನೆಗಳತ್ತ ಆಸಕ್ತಿ ತೋರುತ್ತಿರುವ ಜನರು ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಉಚಿತ ಶಿಕ್ಷಣದತ್ತ ಮಾತ್ರ ಒಲವು ತೋರದಿರುವುದು ವಿಪರ್ಯಾಸ ಎಂಬಂತೆ ಕಂಡುಬಂದರೂ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಅವರ ಒಲವು, ಕಾಳಜಿ ಮಾತ್ರ ಶ್ಲಾಘನೀಯ ಹಾಗೂ ಪ್ರಶ್ನಾತೀತವಾಗಿದೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೨-೦೮-೨೦೨೩