ಸಸಿ ನೆಡಲು ರಸ್ತೆ ಬದಿ ಬಿಟ್ಟು ಕಾಡಿಗೆ ಹೋಗೋಣ

ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಅರಣ್ಯ ಇಲಾಖೆ ಬೇರೆ ಬೇರೆ ಸಸಿ ಉತ್ಪಾದಿಸಿ ಮಕ್ಕಳ ಮೂಲಕ ಮನೆ ಮನೆಗೆ ಹಂಚುತ್ತಿದ್ದರು. ಅವರೂ ಸಾಕಷ್ಟು ಸಸಿ ನೆಟ್ಟು ಬೆಳೆಸುತ್ತಿದ್ದರು. ಇದು ಬಹು ಕೋಟಿ ಮೀರಿರಬಹುದು. ಒಂದು ವೇಳೆ ಅವೆಲ್ಲಾ ಉಳಿಯುತ್ತಿದ್ದರೆ ಇಂದು ಅರಣ್ಯ ಪ್ರದೇಶ ೩೩% ಕ್ಕಿಂತ ಹೆಚ್ಚಾಗುತ್ತಿತ್ತು. ವಿಪರ್ಯಾಸವೆಂದರೆ ಸಸಿ ನೆಟ್ಟು ಬೆಳೆಸಿದಂತೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಲೇ ಇದೆ.ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಅಲ್ಲದೆ ಖಾಸಗಿಯವರೂ ಸಸಿ ಬೆಳೆಸಿ- ನೆಟ್ಟು ಅರಣ್ಯ ಪ್ರದೇಶ ಹೆಚ್ಚಿಸಲು ಮುಂದೆ ಬರುತ್ತಿದ್ದಾರೆ. ಬಹುಷಃ ಇವರೆಲ್ಲರ ಪ್ರಯತ್ನ ಇನ್ನೂ ಅರಣ್ಯ ಪ್ರದೇಶ ಕಡಿಮೆಯಾಗುವುದೋ, ಹೆಚ್ಚಾಗುವುದೋ ಕಾದು ನೋಡಬೇಕಿದೆ. ಸಾಲು ಮರದ ತಿಮ್ಮಕ್ಕ, ತುಳಸೀ ಗೌಡ ಇವರೆಲ್ಲಾ ಅರಣ್ಯ ಬೆಳೆಸಿ ಹೆಸರು ಮಾಡಿದರು. ನಮ್ಮ ಅರಣ್ಯ ಇಲಾಖೆ ಮೂರು ನಾಲ್ಕು ದಶಕಗಳಿಂದ ನಿರಂತರ ಇಷ್ಟೊಂದು ಸಸಿ ಉತ್ಪಾದಿಸಿ ನೆಟ್ಟಿದ್ದರೂ ಅವರ ಹೆಸರು ಎಲ್ಲೂ ಉಳಿಯಲಿಲ್ಲವಲ್ಲಾ!
ಕೆಲವು ವರ್ಷಗಳ ಹಿಂದೆ ಮುಡಿಪುವಿನಿಂದ ಬಾಳೆಪುಣಿ - ಸುಳ್ಯಮೆ-ಪೊಯ್ಯೆತ್ತ ಬೈಲು ರಸ್ತೆಯಲ್ಲಿ ಪ್ರಯಾಣ ಮಾಡಿದ್ದೆ. ಹೊಸತಾಗಿ ಆದ ಉತ್ತಮ ರಸ್ತೆ. ಸ್ವಲ್ಪ ಕಡಿದಾದ ರಸ್ತೆ. ಕರ್ನಾಟಕದ ಗಡಿ ಬಾಳೆಪುಣಿಯ ತನಕ ಸುಮಾರು ೩ ಕಿಲೋ ಮೀ. ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಸಿ ನಾಟಿ ಮಾಡಿದ್ದಾರೆ. ಅದು ರಸ್ತೆಯಿಂದ ಸುಮಾರು ೫-೬ ಅಡಿ ದೂರಕ್ಕೆ. ಗಿಡದಿಂದ ಗಿಡಕ್ಕೆ ಕನಿಷ್ಟ ೧೦ ಅಡಿ ಅಂತರ ಇರಬಹುದು. ಹಲಸು – ರೆಂಜೆ ಮುಂತಾದ ಸಸಿಗಳನ್ನು ನೆಡಲಾಗಿದೆ. ಇದನ್ನು ನೋಡಿದಾಗ ಬಹುಶಃ ಅರಣ್ಯ ಇಲಾಖೆಯಲ್ಲಿ ಮಾಡಿದ ಸಸಿಗಳು ಮಿಗತೆಯಾಗಿದ್ದವೇನೋ ಅನ್ನಿಸಿತು. ಏಕೆಂದರೆ ಹಲಸಿನ ಸಸಿ, ಅಥಾವಾ ರೆಂಜೆ ಬೆಳೆದು ವಿಶಾಲ ವಿಸ್ತೀರ್ಣಕ್ಕೆ ಹಬ್ಬುವ ಗಿಡಗಳು. ಇವು ಬೆಳೆದು ತನ್ನ ಗೆಲ್ಲನ್ನು ರಸ್ತೆಗೇ ಚಾಚಬೇಕಷ್ಟೇ. ಒಂದು ಬದಿ ದರೆ ಮತ್ತೊಂದೆಡೆ ಇಳಿಜಾರು. ಬೆಳಕಿರುವ ಕಡೆ ಗಿಡದ ಗೆಲ್ಲು ಚಾಚಬೇಕಾದುದು ನೈಸರ್ಗಿಕ ನಿಯಮ. ಹಾಗಿರುವಾಗ ಅದು ರಸ್ತೆಯನ್ನೇ ಆವರಿಸಬೇಕು. ಸರಿ ರಸ್ತೆಗೆ ನೆರಳಾಗಲಿ ಎಂದು ನೆಟ್ಟರೋ ಎನೋ ಎಂದು ಭಾವಿಸಿದೆ.?
ಇಲ್ಲಿ ನೆಡಲಾದ ಸಸಿಗಳ ಬಗ್ಗೆ ಟೀಕೆ ಅಲ್ಲ. ಆದರೆ ಈ ಸಸಿಗಳಿಗೆ ಬದುಕುವ ಆಯುಷ್ಯ ಎಷ್ಟು ಎಂಬುದೇ ಪ್ರಶ್ನೆ. ಈ ದಾರಿ ಮುಂದೆ ಅಗಲೀಕರಣ ಆಗುವಂತದ್ದೇ ಆಗಿದ್ದರೆ ಈ ಸಸ್ಯಗಳು ಇನ್ನೇನು ಮರವಾಗುತ್ತಿವೆ ಎನ್ನುವಾಗ ಅದನ್ನು ತೆಗೆಯಲೇ ಬೇಕಾದೀತು. ಬಹಳಷ್ಟು ಕಡೆ ರಸ್ತೆ ಅಗಲೀಕರಣ ಮಾಡುವಾಗ ನೆಟ್ಟು ಬೆಳೆಸಿದ ಸಸಿ, ಮರ ಮಟ್ಟುಗಳು ಕಡಿಯುವುದು ಅನಿವಾರ್ಯವಾಗುತ್ತದೆ.
ರಸ್ತೆ ಬದಿಗಳಲ್ಲಿ ಸಸಿ ನೆಟ್ಟರೆ ಇದೇ ಕಷ್ಟ. ಹಾಗೆಂದು ರಸ್ತೆ ಬಿಟ್ಟು ಎಲ್ಲಿ ಸಸಿ ನೆಡುವುದು. ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಸ್ಥಳವಾದರೆ ಅದರಲ್ಲಿ ಹೋಗಿ ಸಸಿ ನೆಡಲಿಕ್ಕಾಗುತ್ತದೆಯೇ ಆದೂ ಆಗುವುದಿಲ್ಲ. ಇದು ಬಾಳೆಪುಣಿ ಎಂಬ ಊರಿನದೊಂದೇ ಸಮಸ್ಯೆ ಅಲ್ಲ. ಇದೊಂದು ಉದಾಹರಣೆ ಅಷ್ಟೇ. ನಮ್ಮ ಎಲ್ಲಾ ಊರುಗಳ ರಸ್ತೆ ಬದಿಯಲ್ಲಿ ಸಸಿ ನೆಟ್ಟದ್ದುಂಟು. ನಾಮಫಲಕ ಹಾಕಿದ್ದುಂಟು. ಸಸಿ ನೆಟ್ಟು ಹೆಸರು ಮಾಡಿದ್ದುಂಟು. ಆದರೆ ಅದು ಮರವಾಗುವಾಗ ಅದರ ಸೌಭಾಗ್ಯ ನೋಡುವಷ್ಟು ಅದು ಉಳಿಯುವುದೇ ಇಲ್ಲ.
ನಮ್ಮ ರಸ್ತೆಗಳು ಅಗಲೀಕರಣ ಆಗಲಿಕ್ಕಿದೆ. ಇನ್ನೂ ಇನ್ನೂ ಹೆಚ್ಚು ಹೆಚ್ಚು ವಾಹನಗಳು ಸಂಚರಿಸಲಿಕ್ಕಿದೆ. ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಹಾಕಿ ಸರಿಗೆ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಲಿಕ್ಕಿದೆ. ಅದನ್ನು ಉನ್ನತ ಮಟ್ಟಕ್ಕೆ ಏರಿಸಲಿಕ್ಕಿದೆ. ಆಗೆಲ್ಲಾ ಈ ಮರಗಳೇ ಮೊದಲು ಬಲಿಯಾಗುವವುಗಳು. ಇದೆಲ್ಲಾ ನೋಡುವಾಗ ರಸ್ತೆ ಬದಿಯಲ್ಲಿ ಸಸಿ ನೆಡಬೇಕೆಂದು ಯಾರಿಗೂ ಅನ್ನಿಸಲಿಕ್ಕಿಲ್ಲ. ರಸ್ತೆಗೂ ನೆರಳು ಬೇಕು. ವಾತಾವರಣ ಬಿಸಿಯಾಗುವಲ್ಲಿ ಟಾರು ರಸ್ತೆಗಳ ಪಾತ್ರವೂ ಇರುವ ಕಾರಣ ರಸ್ತೆಗಳಿಗೂ ನೆರಳು ಇದ್ದರೆ ಉತ್ತಮ. ಆದನ್ನು ದೂರ ದೃಷ್ಟಿ ಇಟ್ಟುಕೊಂಡು ನೆಡಬೇಕು.
ಸಸಿ ಎಲ್ಲಿ ನೆಡಬೇಕು?: ಮಾನವ ಹಸ್ತಕ್ಷೇಪ ಇಲ್ಲದ ಸ್ಥಳದಲ್ಲಿ ಸಸಿ ನೆಟ್ಟರೆ ಅದು ಶಾಶ್ವತವಾಗಿ ಉಳಿಯುತ್ತದೆ. ಅದು ಎಲ್ಲಿ ಎಂದರೆ ಕಾಡುಗಳಲ್ಲಿ. ಸರಕಾರೀ ಖಾಲಿ ಸ್ಥಳದಲ್ಲಿ ನೆಟ್ಟರೂ ಸಹ ಅದು ಮುಂದೊಂದು ದಿನ ಕಡಿಯಲ್ಪಟ್ಟು ನಾಶವಾಗುತ್ತದೆ. ಆದ ಕಾರಣ ಸಸಿ ನೆಡಬೇಕೆಂಬ ಮನಸ್ಸಿದ್ದು ಅದು ಉಳಿಯುಬೇಕೆಂಬ ಆಸೆ ಇದ್ದದ್ದೇ ಆದರೆ ಕಾಡನ್ನು ಅರಣ್ಯ ಪ್ರದೇಶವೆಂದು ಗುರುತಿಸಲ್ಪಟ್ಟ ಸ್ಥಳದಲ್ಲೇ ಬೆಳೆಸಬೇಕು. ಅದಕ್ಕೆ ಜನ ರಸ್ತೆ ಬಿಟ್ಟು ಹಳ್ಳಿಗಳಿಗೆ ನಡೆಯಬೇಕು. ನಮ್ಮ ರಾಜ್ಯದಲ್ಲಿ ಅರಣ್ಯ ಭೂಮಿಗಳೆಂದು ಗುರುತಿಸಲ್ಪಟ್ಟ ಸ್ಥಳಗಳು ಹಲವಾರು ಕಡೆಗಳಲ್ಲಿ ಇವೆ. ಅಲ್ಲಿಗೆ ನಾವು ಪರಿಸರ ದಿನಾಚರಣೆಯ ದಿನದಂದೋ, ವನಮಹೋತ್ಸವದ ದಿನದಂದೋ ಹೋಗೋಣ ಅಲ್ಲಿ ಸಸಿ ನೆಡೋಣ. ಅದು ನಮ್ಮ ಮಕ್ಕಳು ಮೊಮ್ಮಕ್ಕಳ ಕಾಲದ ತನಕವೂ ಉಳಿಯುತ್ತದೆ.
ನಮ್ಮ ಕಾಡುಗಳಲ್ಲಿ ಮರ ಮಟ್ಟು ಬೆಳೆಯಬೇಕಾದ ಅವಶ್ಯಕತೆ ಇದೆ. ಇಲ್ಲಿ ಕಾಡು ಬರಿದಾಗಿರುವ ಕಾರಣದಿಂದಲೇ ನಮ್ಮ ವಾತಾವರಣದ ಬಿಸಿ ಹೆಚ್ಚಾಗಿರುವುದು. ಕಾಡು ಪ್ರಾಣಿಗಳು, ಜೀವ ಜಂತುಗಳು ಕಾಡು ಬಿಟ್ಟು ಹೊರ ಬಂದಿರುವುದು. ಕಾಡಿನ ನೈಜ ಚಿತ್ರಣ ಬದಲಾಗಿ ಜೀವ ವೈವಿಧ್ಯಗಳಿಗೆ ಹಾನಿ ಆಗಿದೆ. ಅದನ್ನು ಮೊದಲಾಗಿ ಸರಿ ಮಾಡೋಣ. ಹಳ್ಳಿಗಳ ಜನ ಕೃಷಿ ಅರಣ್ಯ ಬೆಳೆಸುವ – ಅರಣ್ಯ ಇಲಾಖೆ ಸಾಮಾಜಿಕ ಸಹಜ ಅರಣ್ಯ ಸೃಷ್ಟಿಸುವ ಕೆಲಸ ಮತ್ತೆ ಮಾಡಲಿ. ಕೃಷಿ ಭೂಮಿಯಲ್ಲಿ ಕೃಷಿ ಬೆಳೆಗಳೇ ಕಾಡುಗಳು. ಅರಣ್ಯಕ್ಕೆ ಅರಣ್ಯವೇ ಸಾಟಿ.
ಮೆಚ್ಚಬೇಕಾದ ಕೆಲಸ: ನಮ್ಮ ಅರಣ್ಯ ಇಲಾಖೆ ಕಳೆದ ಕೆಲವು ವರ್ಷಗಳಿಂದ ಕಾಡು ಜಾತಿಯ ಮರಮಟ್ಟುಗಳಾದ ಹೆಬ್ಬಲಸು, ಮಾವು, ಹಲಸು, ನೇರಳೆ, ಹೀಗೆ ಬೇರೆ ಬೇರೆ ಹಣ್ಣು ಕೊಡಬಲ್ಲ ಸಸಿಗಳನ್ನು ಉತ್ಪಾದಿಸಿ ಒದಗಿಸುತ್ತಿದೆ. ಇದು ಪ್ರಶಂಸನೀಯ ಕೆಲಸ. ಇಂದು ನಮ್ಮ ಕಾಡುಗಳಲ್ಲಿ ಇಂತಹ ಮರಮಟ್ಟುಗಳು ಕಡಿಮೆಯಾಗಿವೆ. ಈ ಕಾರಣದಿಂದ ಅವ್ಯವಸ್ಥೆಗಳೂ ಆಗಿವೆ. ಮುಖ್ಯವಾಗಿ ಕಾಡು ಪ್ರಾಣಿಗಳು ಕಾಡು ಬಿಟ್ಟಿರುವುದೂ ಅದೇ ಕಾರಣಕ್ಕೆ. ಈ ಜಾತಿಯ ಸಸಿಗಳನ್ನು ಕಾಡಿನಲ್ಲಿ ನೆಟ್ಟು ಬೆಳೆಸುವುದರಿಂದ ಕಾಡಿನ ಜೀವಂತಿಕೆ ಹೆಚ್ಚುತ್ತದೆ.
ಕಾಡುಗಳು ಹೇಗಿರಬೇಕು ಎಂದರೆ ಅಲ್ಲಿ ಬದುಕುವ ಎಲ್ಲಾ ಜೀವಿಗಳಿಗೆ ಅಲ್ಲಿ ಸಾಕಷ್ಟು ಆಹಾರ ದೊರೆಯುವಂತಿರಬೇಕು. ಅದನ್ನು ಮನಗಂಡು ಆ ಸಸಿಗಳನ್ನು ಬೆಳೆಸುವ ಪ್ರಯತ್ನ ನಡೆಯಬೇಕು. ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು.
ಇದರ ಜೊತೆಗೆ ಕೆಲವರು ಅರಣ್ಯ ಸಂರಕ್ಷಣೆಯ ಗುತ್ತಿಗೆ ಪಡೆದವರಂತೆ, ಕೆಲವು ಕಂಪೆನಿಗಳಿಂದ ಚಂದಾ ಎತ್ತಿ, ಅಬ್ಬರದ ಪ್ರಚಾರದಲ್ಲಿ ದೊಡ್ದ ದೊಡ್ಡ ಹೆಸರುಗಳ ಮೂಲಕ ಸಸಿ ಬೆಳೆಸಲು ಮುಂದಾಗಿದ್ದು, ಇವೆಲ್ಲವೂ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಕಂಪೆನಿಗಳು ದಾನಿಗಳಿಂದ ಹಣ ಸಂಗ್ರಹಿಸುವ ದಂಧೆಯಾಗಿದ್ದು, ಅದನ್ನು ಪ್ರೋತ್ಸಾಹಿಸುವ ಬದಲು ನಮ್ಮದೇ ಅರಣ್ಯ ಇಲಾಖೆಯನ್ನು ಪ್ರೋತ್ಸಾಹಿಸಿ ಅವರ ಮೂಲಕ ಒಳ್ಳೆಯದನ್ನು ಮಾಡೋಣ.
ಪೂರಕ ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ