ಸಸ್ಯ ಪ್ರಪಂಚ
"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು ನಾವಿನ್ನೂ ಕರಗತ ಮಾಡಿಕೊಂಡಿಲ್ಲ .....ಕಾಡು, ನಮ್ಮ ಉಪಯೋಗಕ್ಕಾಗಿಯೇ ನಿರ್ಮಿತವಾದ ಧನರಾಶಿಯೆಂದು ನಾವೂ ಸರಕಾರವೂ ಕೂಡಿಯೇ ಭಾವಿಸಿದ್ದೇವೆಯೇ ಹೊರತು ಈ ಸಂಪತ್ತು ಬೆಳೆಸಲು ನಾವೇನು ಮಾಡಬೇಕು? ಎಂದು ಯೋಚಿಸುವ ಗೋಜಿಗೇ ಹೋಗಿಲ್ಲ" ಎಂಬ ನೇರ ಮಾತುಗಳೊಂದಿಗೆ ಪುಸ್ತಕದ ಮೊದಲ ಅಧ್ಯಾಯ "ನಮ್ಮ ವನಸಿರಿ"ಯನ್ನು ಆರಂಭಿಸುತ್ತಾರೆ ಕಾಮತರು.
"ಜನರಲ್ಲಿ ಅರಣ್ಯದ ಮಹತ್ವವನ್ನು ಬಿಂಬಿಸುವುದು ಅತಿ ಅಗತ್ಯವಾಗಿದೆ. ಮಾಧ್ಯಮಿಕ ಶಾಲೆಯಿಂದಲೇ ಆ ಬಗ್ಗೆ ಒಂದೆರಡು ಪಾಠಗಳ ವ್ಯವಸ್ಥೆ ಇರಬೇಕು. ರಜೆಯಲ್ಲಿ ಕಾಡಿದ್ದ ಪ್ರದೇಶಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದರೆ ಅವರಿಗೆ ನಿಸರ್ಗದ ಬಗ್ಗೆ ಪ್ರೀತಿ ಆದರ ಹುಟ್ಟುವುದು" ಎಂದು ಅದೇ ಅಧ್ಯಾಯದಲ್ಲಿ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುತ್ತಾರೆ.
ಎರಡನೆಯ ಅಧ್ಯಾಯ "ಸಸ್ಯ ಗಡಿಯಾರ". ಇದರಲ್ಲಿ ಎರಡು ಫೋಟೋಗಳು. ಅರೆ ಅರಳಿದ ಮೊಗ್ಗಿನ ಪಕ್ಕದಲ್ಲಿ ಬೆಳಿಗ್ಗೆ ೮.೪೫ ಗಂಟೆ ತೋರಿಸುವ ಪೋಟೋ ಮತ್ತು ಪೂರ್ತಿ ಅರಳಿದ ಹೂವಿನ ಪಕ್ಕದಲ್ಲಿ ಬೆಳಿಗ್ಗೆ ೧೦ ಗಂಟೆ ತೋರಿಸುವ ಪೋಟೋ. ಇವು ಕಾಮತರ ಸೃಜನಶೀಲತೆಗೆ ಸಾಕ್ಷಿ. ಅಧ್ಯಾಯದ ಆರಂಭದ ಪಾರಾದ ಲಹರಿ ನೋಡಿ:"ಕೋಳಿ ಕೂಗಿದ್ದು ಕೇಳಲಾಗದಿದ್ದರೂ ಸೂರ್ಯೋದಯ ನೋಡಲಾಗದಿದ್ದರೂ ಹೂವುಗಳು ತಮ್ಮ ಚಟುವಟಿಕೆಗಳನ್ನು ಕಾಲಕ್ಕನುಸಾರವಾಗಿ ಪ್ರಾರಂಭಿಸಿ ದಿನ ಮುಗಿಯುವುದರೊಳಗಾಗಿ ಪೂರೈಸಿಕೊಳ್ಳುತ್ತವೆ. ಕುಕ್ಕುಟ ಕುಟುಂಬಕ್ಕೆ ಎಚ್ಚರವಾಗುವ ಪೂರ್ವದಲ್ಲಿಯೇ ಅರಳಿ ಕಂಪನ್ನು ಸೂಸುವ ಹೂಗಳಿವೆ. ಗೃಹಿಣಿಯರೊಂದಿಗೇ ಕಣ್ಣು ಬಿಡುವ ಹೂಗಳು ಕೆಲವು. ಸೂರ್ಯದೇವನನ್ನು ನಗುಮಮುಖದಿಂದ ಬರಮಾಡಿಕೊಳ್ಳುವ ಹೂವುಗಳು ಹಲವು. ಬೆಳಕು ಹರಿದ ನಂತರ, ಏಳಲೋ ಬೇಡವೋ ಎಂದು ನಿಧಾನವಾಗಿ ಕಣ್ಣು ತೆರೆಯುವ ಗೃಹಸ್ಥನಂತೆ ಅರಳುವ ಹೂಗಳೂ ಇವೆ..... ವಿಳಂಬವಾಗಿ ಏಳುವ ಮಕ್ಕಳಂತೆ ಅರಳುವ ಹೂಗಳೂ ಇಲ್ಲದಿಲ್ಲ." ಈ ಅಧ್ಯಾಯದಲ್ಲಿ "೧೯ನೇ ಶತಕದಲ್ಲಿ ಯುರೋಪಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹನ್ನೆರಡು ಗಂಟೆಯ ವರೆಗೆ ಅರಳುವ ವಿವಿಧ ಜಾತಿಯ ಹೂಗಳನ್ನು ಅನುಕ್ರಮವಾಗಿ ನೆಟ್ಟು ಬೆಳೆಸಿ ಗಡಿಯಾರದಂತೆ ಬಳಸಲಾಗುತ್ತಿತ್ತು" ಎಂಬ ಮಾಹಿತಿ ನೀಡುತ್ತಾರೆ.
"ಸಸ್ಯಲೋಕದ ಕುಬ್ಜರು" ಮೂರನೆಯ ಅಧ್ಯಾಯ. "ಮರಗಳು ಸಸ್ಯಲೋಕದ ಆನೆಗಳಂತೆ ಇದ್ದರೆ, ಇವು ಇರುವೆಗಳಂತೆ" ಎಂಬ ತನ್ನ ಹೇಳಿಕೆಯು ಓದುಗನಿಗೆ ಮನದಟ್ಟಾಗಲಿಕ್ಕಾಗಿ ಪಕ್ಕದ ಪುಟದಲ್ಲೊಂದು ಪೋಟೋ - ಸೆಂಟಿಮೀಟರ್ ಅಳತೆಗೋಲಿನ ಪಕ್ಕದಲ್ಲಿ ಕುಬ್ಜ ಸಸ್ಯ.
"ಗಿಡ, ಮರ ಕೋಟ್ಯಂತರ ವರ್ಷಗಳ ಹಿಂದೆ", "ಪರ್ಣಲೋಕದಲ್ಲಿ ಪರ್ಯಟನೆ", "ಮುಳ್ಳಿನ ಮಹಾತ್ಮೆ", "ರೂಪಾಂತರ ಹೊಂದಿದ ಪರ್ಣ – ಹೂವು" ಇವು ಪುಸ್ತಕದ ಮುಂದಿನ ನಾಲ್ಕು ಅಧ್ಯಾಯಗಳು. ನಮ್ಮನ್ನು ಪರ್ಣಲೋಕದ ಪ್ರಯಾಣದಲ್ಲಿ ಮುನ್ನಡೆಸುವ ಕಾಮತರು, ಎಲೆಗಳ ಆಕಾರ ವೈವಿಧ್ಯ ಬಗ್ಗೆ ಕಲ್ಪನಾಲೋಕಕ್ಕೆ ಹೀಗೆ ಕರೆದೊಯ್ಯುತ್ತಾರೆ, "ಪರ್ಣಗಳಿಗೆ ಆಕಾರ ಕೊಡುವಾಗ ಬ್ರಹ್ಮನು ತನ್ನ ರಾಜ್ಯದ ಕಲಾಕಾರರನ್ನೆಲ್ಲ ಆಹ್ವಾನಿಸಿ ಅವರು ಕಲ್ಪಿಸಬಹುದಾದಂತೆ ಎಲ್ಲ ನಕ್ಷೆಗಳ ಚಿತ್ರ ಬಿಡಿಸಲು ಹೇಳಿರಬೇಕು. ಅವುಗಳಲ್ಲಿ ಒಂದಕ್ಕಿಂತ ಇನ್ನೊಂದು ಅಂದವಾಗಿದ್ದರಿಂದ ಒಮ್ಮೆಲೇ ಮನಸೋತು ಅವುಗಳನ್ನು ಪರ್ಣನಿರ್ಮಾಣದಲ್ಲಿ ಬಳಸಿರಬೇಕು."
ಪುಸ್ತಕದ ಕೊನೆಯ ಅಧ್ಯಾಯ "ಅರಣ್ಯರೋದನ". ಕೃಷ್ಣಾನಂದ ಕಾಮತರು ಸುತ್ತು ಬಳಸಿ ಬರೆದಿಲ್ಲ; ಅರಣ್ಯಲೂಟಿಯ ಬಗ್ಗೆ ತಮ್ಮ ಆಕ್ರೋಶವನ್ನು ಬರಹದಲ್ಲಿ ಆವಾಹನೆಗೊಳಿಸಿದ ಪರಿ ನೋಡಿ: ".... ಕಾಗದದ ಕಾರಖಾನೆ, ರೇಯಾನ್ ಕಂಪೆನಿ, ಪ್ಲೈವುಡ್ ತಯಾರಕರು, ಕಾಡಿನ ಗುತ್ತಿಗೆದಾರರು, ಕಟ್ಟಿಗೆ ಕೊರೆಯುವವರು ಮುಂತಾದವರಿಗೆಲ್ಲ ಧಾರಾಳವಾಗಿ ಅರಣ್ಯಸಂಪತ್ತು ಸೂರೆ ಮಾಡಲು ಅನುಮತಿ ಕೊಟ್ಟು, ತಾವು ಅಭಿವೃದ್ಧಿ ಹೊಂದುವಂತೆ ರಾಜಕಾರಣಿ, ಅಧಿಕಾರಿಗಳು ನೋಡಿಕೊಂಡರು. ಇದರಿಂದಾಗಿ ಭರದಿಂದ ಅರಣ್ಯಗಳು ಸೊರಗಿ ಹೋಗಿದ್ದರಿಂದ ಈಗ ಸಾಮಾಜಿಕ ಕಾಡು ಎಂಬ ಕೋಟ್ಯಂತರ ರೂಪಾಯಿಗಳ ಹೊಸ ಯೋಜನೆಯನ್ನು ಸರಕಾರ ಜಾರಿಯಲ್ಲಿ ತರಲಾರಂಭಿಸಿದೆ. ಈ ಯೋಜನೆಯ ಲಾಭ ತಲುಪುವುದು ರಾಜಕಾರಣಿಗಳಿಗೆ, ಸಂಬಂಧಿತ ಅಧಿಕಾರಿಗಳಿಗೆ ಮತ್ತು ಸಾಹುಕಾರರಿಗೆ ಎಂದು ಬೇರೆ ಹೇಳಬೇಕಿಲ್ಲ. ಈ ಕಾರ್ಯಕ್ರಮದಲ್ಲಿ ಫಲವತ್ತಾಗಿರದ ಭೂಮಿಯಲ್ಲಿ ಕಾಡು ಬೆಳೆಸುವುದಕ್ಕಾಗಿ ಸಸಿಗಳನ್ನು ಕೇಳಿದವರಿಗೆಲ್ಲ ಕಾಸಿಲ್ಲದೇ ಹಂಚುವ ವ್ಯವಸ್ಥೆ ಇದೆ. ಈ ಯೋಜನೆಯಲ್ಲಿ ಕೋಟ್ಯಂತರ ಹಣ ಹೇಗೆ ಅಪವ್ಯಯವಾಗುತ್ತದೆ ಎಂದು ಅರಿಯಲು ಕೋಲಾರ ಜಿಲ್ಲೆಯ ಅರಣ್ಯಾಧಿಕಾರಿಯೊಬ್ಬರ ಪ್ರಕರಣ ಸಾಕು. ಈ ಅಧಿಕಾರಿಯ ಆಡಳಿತದಲ್ಲಿ ಹತ್ತು ಸಸಿ ಉತ್ಪಾದನೆ ಕೇಂದ್ರಗಳಿವೆ. ಅವುಗಳಲ್ಲಿ ಒಂದು ಕೇಂದ್ರಕ್ಕೆ ಖರ್ಚಾದದ್ದು ೧೬,೫೦೦ ರೂಪಾಯಿಗಳಾದರೂ ಅದನ್ನು ೪೭,೫೦೦ಕ್ಕೆ ಏರಿಸಿ ೩೧,೦೦೦ ರೂಪಾಯಿಗಳನ್ನು ಜೇಬಿಗಿಳಿಸಿದ್ದಾನೆ ಈ ಅರಣ್ಯ ರಕ್ಷಕ! ..... ಇಂತಹ ಅಧಿಕಾರಿಗಳ ನೇತೃತ್ವದಲ್ಲಿ ನಮ್ಮ ಅರಣ್ಯಗಳು ಅಭಿವೃದ್ಧಿ ಹೊಂದುವದು ಒಂದು ಹಗಲುಗನಸು."
ನಾವೇನು ಮಾಡಬೇಕೆಂಬುದನ್ನು ಅಧ್ಯಾಯದ ಕೊನೆಯ ಪಾರಾದಲ್ಲಿ ತಿಳಿಸುತ್ತಾರೆ ಕಾಮತರು: "ಏಶಿಯಾಡ್ ಕ್ರೀಡಾಕೂಟ, ಅಲಿಪ್ತ ಶೃಂಗವೆಂಬ ಮಹಾಕೂಟ, ವಿಶ್ವ ಕನ್ನಡ ಸಮ್ಮೇಳನಗಳೆಂಬ ನಿಷ್ಪ್ರಯೋಜಕ ಪ್ರದರ್ಶನಗಳ ಮೇಲೆ ಪೋಲಾದ, ಆಗಬಹುದಾದ ಕೋಟಿಗಟ್ಟಲೆ ಹಣವನ್ನು ಮುಂದಾದರೂ ನಿಲ್ಲಿಸಿ, ಅದರ ಒಂದು ಪಾಲನ್ನು ಅರಣ್ಯ-ತೋಪುಗಳನ್ನು ನಿರ್ಮಿಸುವುದರಲ್ಲಿ ತೊಡಗಿಸಿದರೆ, ರಾಜ್ಯದ, ದೇಶದ ಅಭಿವೃದ್ಧಿ ನಿಧಾನವಾಗಿಯಾದರೂ ಖಂಡಿತ ಸಾಧಿಸುವುದರಲ್ಲಿ ಸಂಶಯವೇ ಇಲ್ಲ."
ಅಂತಿಮವಾಗಿ ಅವರು ಕೇಳುವ ಪ್ರಶ್ನೆ:"ಈ ಅರಣ್ಯರೋದನಕ್ಕೆ ಕಿವಿಕೊಡುವವರು ಯಾರಾದರೂ ಇದ್ದಾರೆಯೇ?"