ಸಸ್ಯ ಸಗ್ಗ
ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ. ಜೊತೆಗೆ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್. ಗಣೇಶಯ್ಯ ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ.
ಮೂಲತಃ ಕೋಲಾರ ಜಿಲ್ಲೆಯ ಕೋಟಗಾನ ಗ್ರಾಮದವರಾದ ಪ್ರೊ. ಕೆ.ಎನ್. ಗಣೇಶಯ್ಯ ವೃತ್ತಿಯಲ್ಲಿ ಕೃಷಿ ವಿಜ್ಞಾನಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದವರು. ಜಿಕೆವಿಕೆಯಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗಣೇಶಯ್ಯ ಲೇಖಕರಾಗಿಯೇ ಕರ್ನಾಟಕದ ಜನತೆಗೆ ಪರಿಚಿತರು. ಇವರ ಇನ್ನೊಂದು ಪ್ರತಿಭೆಯ ಅನಾವರಣ ಈ ಕೃತಿಯಲ್ಲಾಗಿದೆ. ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಗಣೇಶಯ್ಯನವರು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿ. ಇವರ ಹೆಸರನ್ನು ಅಂಡಮಾನ್ ನಲ್ಲಿರುವ ಎರಡು ಸಸ್ಯಗಳಿಗೆ ಇಟ್ಟು ಗೌರವಿಸಲಾಗಿದೆ.
ತಮ್ಮ ಸಂಶೋಧನೆಯ ವಿವಿಧ ಆಯಾಮಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು ‘ಹಸಿರು ಹೊನ್ನು' ತಂದುಕೊಟ್ಟಿದೆ.
ಗಣೇಶಯ್ಯನವರ ಈ ಕೃತಿಯ ಬಗ್ಗೆ ವಿಜ್ಞಾನಿಯೂ, ಬರಹಗಾರರೂ ಆಗಿರುವ ಮೋಹನ್ ತಲಕಾಲುಕೊಪ್ಪ ಇವರು ಬರೆಯುವುದು ಹೀಗೆ “ ತಮ್ಮ ವೃತ್ತಿ ಜೀವನದ ಅಮೂಲ್ಯ ಕ್ಷಣಗಳನ್ನು ಈ ಸಸ್ಯ ಸಂಶೋಧನೆಯಲ್ಲಿ ಕಂಡುಕೊಂಡ ಅಪೂರ್ವ ಸತ್ಯಗಳನ್ನು ‘ಸಸ್ಯ ಸಗ್ಗ'ದಲ್ಲಿ ಅತ್ಯಾಕರ್ಷಕವಾಗಿ ಕಟ್ಟಿಕೊಡುವಲ್ಲಿ ಡಾ. ಗಣೇಶಯ್ಯನವರು ಸಫಲರಾಗಿದ್ದಾರೆ. ಸಸ್ಯಗಳ ವರ್ತನೆಯನ್ನು ವಿಕಾಸವಾದದ ಹಿನ್ನಲೆಯಲ್ಲಿ ಅಧ್ಯಯನ ಮಾಡುವಾಗ ಕಂಡುಕೊಂಡ ಸತ್ಯಗಳನ್ನು ಜಿಜ್ಞಾಸೆ/ಸಂಭಾಷಣೆಗಳ ಮೂಲಕ ಪ್ರಜ್ಞಾಪೂರ್ವಕವಾಗಿ ರೂಪಿಸಿದ್ದರೂ ಯಾವುದನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಡುವಂತೆ ಕಾಣುವುದಿಲ್ಲ. ಒಂದು ವಿಶಿಷ್ಟ ರಭಸ ಅವರ ಬರವಣಿಗೆಯ ಉದ್ದಕ್ಕೂ ಕಾಣಿಸುತ್ತದೆ.
ಪುಸ್ತಕದಲ್ಲಿ ಎಂಟು ಅಧ್ಯಾಯಗಳು ಹಾಗೂ ಇಪ್ಪತ್ತೆಂಟು ಉಪ ಅಧ್ಯಾಯಗಳಿವೆ. ‘ಪುಷ್ಪಲೀಲೆ' ಎಂಬ ಅಧ್ಯಾಯದಲ್ಲಿ ಅವರ ನಿಡುಗಾಲದ ಮಿತ್ರ ವಿಜ್ಞಾನಿ ಡಾ.ಉಮಾ ಶಂಕರ್ ಅವರ ಭೇಟಿ, ಅವರೊಡನೆ ಗೆಳೆತನ ಬೆಳೆದದ್ದು, ಕಾಡು ಪ್ರಭೇದಗಳನ್ನು ಕೃಷಿಕರಣಗೊಳಿಸುವಾಗ ವಿಕಾಸ ಪ್ರಕ್ರಿಯೆಯಲ್ಲಿ ಉಂಟಾದ ಬದಲಾವಣೆಗಳನ್ನು ಊಹಿಸಿ ಅದಕ್ಕೆ ಪುರಾವೆಗಳನ್ನು ಒದಗಿಸಿದ್ದು, ಇಬ್ಬರೂ ಡಾರ್ವಿನ್ನನ ವಿಕಾಸವಾದದತ್ತ ಆಕರ್ಷಿತರಾದ ವಿಚಾರಗಳು ಬಹಳ ಚೆನ್ನಾಗಿ ಮೂಡಿವೆ... ‘ಹಸಿರು ರಕ್ತ' ಅಧ್ಯಾಯದಲ್ಲಿ ಶೀಷ ಮರದಲ್ಲಿ ಬೆಳೆಯುವ ಕಾಯಿಗಳಲ್ಲಿ ಸ್ವಾರ್ಥದಿಂದ ಅಗ್ರಜ ಬೀಜ ಉಳಿದ ಸೋದರ ಬೀಜಗಳನ್ನು ಕೊಲೆಗೈಯುವ ಕ್ರಿಯೆ ಸಖೇದಾಶ್ಚರ್ಯ ಉಂಟು ಮಾಡುತ್ತದೆ. ಸಸ್ಯ ಪ್ರಭೇಧಗಳಲ್ಲಿ ಮನುಷ್ಯರಲ್ಲಿ ಇರುವಂತಹ ಹಿಂಸೆ, ಸ್ವಜನ ಪಕ್ಷಪಾತ, ಕ್ರೌರ್ಯ ಎಲ್ಲವನ್ನೂ ಇಲ್ಲಿ ಅನಾವರಣಗೊಳಿಸುತ್ತಾರೆ.”
ಸಸ್ಯ ಸಗ್ಗ ಪುಸ್ತಕದಲ್ಲಿ ೩೭೬ ಪುಟಗಳಿವೆ. ಪುಸ್ತಕವನ್ನು ಓದುತ್ತಿದ್ದಂತೆಯೇ ಸಸ್ಯ ಜಗತ್ತಿನ ಹಲವಾರು ಸೋಜಿಗ ಸಂಗತಿಗಳು ನಿಮ್ಮ ಮುಂದೆ ಬಂದು ನಿಂತ ಹಾಗೆ ಭಾಸವಾಗುತ್ತದೆ.