ಸಹನಾಶೀಲ ಮನೋಧರ್ಮ ನಿಮ್ಮದಾಗಿರಲಿ…

ಸಹನಾಶೀಲ ಮನೋಧರ್ಮ ನಿಮ್ಮದಾಗಿರಲಿ…

ಸಹನೆ- ಈಗ ಮನುಷ್ಯರಲ್ಲಿ ಬಹು ಅಪರೂಪವಾಗುತ್ತಿರುವ ಒಂದು ಗುಣ. ‘ತಾಳಿದವನು ಬಾಳಿಯಾನು' ಎಂಬ ಒಂದು ಗಾದೆ ಮಾತಿದೆ. ತಾಳ್ಮೆಯಿಂದ, ಸಹನೆಯಿಂದ ಕಾಯುವವನ ಕೆಲಸವು ಸ್ವಲ್ಪ ತಡವಾಗಿಯಾದರೂ, ಸರಿಯಾದ ರೀತಿಯಲ್ಲಿ ನಡೆಯುತ್ತದೆ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಸಮಯ ಮಿತಿ ಇದೆ. ಈಗ ಎಲ್ಲರೂ ‘ಫಾಸ್ಟ್ ಫುಡ್' ರೀತಿಯ ಜಗತ್ತಿನಲ್ಲಿದ್ದಾರೆ. ಎಲ್ಲವೂ ಬೇಗ ಬೇಗನೇ ಆಗಬೇಕು ಎಂಬ ಆಸೆ ಇದೆ. ಒಂದು ಗಿಡ ನೆಟ್ಟ ಕೂಡಲೇ ಮರು ದಿನವೇ ಅದು ಮರವಾಗಿ ಹಣ್ಣು ಅಥವಾ ಹೂವು ಕೊಡುವುದಿಲ್ಲ. ವರ್ಷಗಟ್ಟಲೆ ಕಾಯಬೇಕು. ಅದಕ್ಕೆ ಸರಿಯಾದ ಪೋಷಣೆ ಮಾಡಬೇಕು. (ಇದು ಹುಟ್ಟಿದ ಪುಟ್ಟ ಮಗುವಿಗೂ ಅನ್ವಯ). ಹೀಗೆ ನೆಟ್ಟು ತಾಳ್ಮೆಯಿಂದ ಪೋಷಿಸಿ ಬೆಳೆಸಿದ ಗಿಡ ಬಹುವರ್ಷಗಳ ಕಾಲ ನಮಗೆ ಫಲ ನೀಡುತ್ತದೆ.

ಈಗ ಯಾರಿಗೂ ಕಾಯಲು ಸಮಯವಿಲ್ಲ. ಒಂದೇ ವರ್ಷದಲ್ಲಿ ಫಲ ಬಿಡುವ ಗಿಡದ ಬಗ್ಗೆಯೇ ಮಾತನಾಡುತ್ತಾರೆ. ವಿಜ್ಞಾನಿಗಳೂ ಅಂತಹ ಗಿಡಗಳ ಶೋಧ ಮಾಡುತ್ತಾರೆ. ಆ ಗಿಡಗಳು ಬೇಗನೇ ಫಲ ಬಿಟ್ಟರೂ, ಆ ಗಿಡದ ಆಯುಷ್ಯ ಬಹು ಬೇಗನೇ ಮುಗಿದು ಹೋಗುತ್ತದೆ. ಅದು ಅಷ್ಟಾಗಿ ಬಲಿಷ್ಟವಾಗುವುದಿಲ್ಲ. ನಮ್ಮ ಅಸಹನೆಯ ಫಲವಾಗಿ ಗಿಡಗಳು ಸರಿಯಾಗಿ ಮರವಾಗುವ ಮೊದಲೇ ತಮ್ಮ ಆಯುಷ್ಯವನ್ನು ಮುಗಿಸುತ್ತದೆ. ಬೇಯಿಸಲು ಇಟ್ಟ ಇಡ್ಲಿಯ ಹಾಗೆ. ಬೇಯಲು ಹದಿನೈದು ನಿಮಿಷ ಬೇಕೆಂದು ಅಂದಾಜು ಮಾಡಿದರೆ, ಕಾಯಲು ತಾಳ್ಮೆಯಿಲ್ಲದೇ ಐದೇ ನಿಮಿಷಕ್ಕೆ ತೆಗೆದರೆ ನಮಗೆ ಅರೆಬೆಂದ ಹಿಟ್ಟು ಮಾತ್ರ ಸಿಗುತ್ತದೆ. ಸಹನೆಯ ಬಗ್ಗೆ ತಿಳಿಹೇಳುವ ಒಂದು ಪುಟ್ಟ ಕಥೆಯನ್ನು ಸಂಗ್ರಹಿಸಿ ಇಲ್ಲಿ ನೀಡಿರುವೆ. ಓದಿ. 

ಅದೊಂದು ಪುಟ್ಟ ಊರು. ಅಲ್ಲಿ ದೊಡ್ಡದಾದ ಭವ್ಯ ಮಂದಿರ ನಿರ್ಮಾಣದ ಕೆಲಸವು ಭರದಿಂದ ಸಾಗುತ್ತಿತ್ತು. ದೇವರ ಮೂರ್ತಿ, ಬೃಹತ್ ಗೋಪುರಗಳು, ಕಲ್ಲಿನ ಕಂಬಗಳು, ನೆಲಹಾಸುಗಳು ಹೀಗೆ ಹತ್ತು ಹಲವಾರು ಕಾರ್ಯಗಳು ಇನ್ನೂ ನಡೆಯಬೇಕಿದ್ದವು. ಶಿಲೆಯಿಂದಲೇ ದೇಗುಲದ ನಿರ್ಮಾಣ ಕಾರ್ಯ ಮಾಡುತ್ತಿರುವುದರಿಂದ ಹಲವಾರು ಕಲ್ಲುಗಳು ಬಂದು ರಾಶಿ ಬಿದ್ದಿದ್ದವು. ಈ ಕೆಲಸವನ್ನು ಮಾಡಲು ಹಲವಾರು ಶಿಲ್ಪಿಗಳೂ ಆಗಮಿಸಿದ್ದರು. ಮುಖ್ಯ ಶಿಲ್ಪಿಯೊಬ್ಬ ದೇವರ ಮೂರ್ತಿಯನ್ನು ಕತ್ತನೆ ಮಾಡುವ ಯೋಚನೆಯಿಂದ ಅಖಂಡ ಶಿಲೆಯೊಂದನ್ನು ಆಯ್ಕೆ ಮಾಡಿಕೊಂಡ. ಶಿಲ್ಪಿಯ ಬಲವಾದ ಉಳಿಯ ಪೆಟ್ಟಿನಿಂದ ಆ ಶಿಲೆ ತತ್ತರಿಸಿಹೋಯಿತು. ಶಿಲೆಯು ಆ ಶಿಲ್ಪಿಯ ಪೆಟ್ಟುಗಳಿಂದ ಬಚಾವಾಗಲು ದಾರಿ ಹುಡುಕ ತೊಡಗಿತು. ಆಗ ಅದಕ್ಕೆ ಪಕ್ಕದಲ್ಲಿ ತುಂಡಾಗಿ ವ್ಯರ್ಥವಾಗಿ ಬಿದ್ದಿದ್ದ ಕಲ್ಲುಗಳು ಕಾಣಿಸಿದವು. ತಾನೂ ತುಂಡಾದರೆ ತನಗೆ ಈ ಉಳಿಯ ಪೆಟ್ಟಿನಿಂದ ಮುಕ್ತಿ ಖಚಿತ ಎಂದು ಭಾವಿಸಿ, ಉಳಿಯ ಮುಂದಿನ ಪೆಟ್ಟು ಬೀಳುತ್ತಲೇ ಸೀಳು ಬಿಟ್ಟಿತು. 

ಶಿಲೆಯು ಸೀಳಾದದನ್ನು ಗಮನಿಸಿ ಶಿಲ್ಪಿಯು ನೊಂದು ಅದನ್ನು ಮೆಟ್ಟಲಿನ ನಿರ್ಮಾಣಕ್ಕೆ ಬಳಸಿಕೊಂಡ. ನಂತರ ಅವನು ಬೇರೊಂದು ಶಿಲೆಯನ್ನು ಆಯ್ದುಕೊಂಡ. ಅದನ್ನು ನುಣುಪುಗೊಳಿಸುವ ಕಾರ್ಯ ಶುರುಮಾಡಿದಾಗ ಆ ಶಿಲೆಯು ನೋವಾದರೂ ತಡೆದುಕೊಂಡು ಕೊಂಡಿತು. ಆದರೆ ಮತ್ತೆ ಮತ್ತೆ ಉಳಿಯ ಪೆಟ್ಟು ಬಿದ್ದಾಗ ಅದರ ಸಹನೆಯ ಕಟ್ಟೆ ಒಡೆಯಿತು. ‘ಇನ್ನು ತಾಳಲಾರೆ' ಎಂದು ನರಳಿತು. ಆ ಕಲ್ಲೂ ತನ್ನ ಬದಿಯಲ್ಲಿ ಸೀಳು ಬಿದ್ದು ವ್ಯರ್ಥವಾಗಿದ್ದ ಕಲ್ಲುಗಳನ್ನು ಗಮನಿಸಿತು. ಮೊದಲಿನ ಶಿಲಾ ಕಲ್ಲಿನಂತೆ ಈ ಕಲ್ಲೂ ಬಿರುಕು ಬಿಟ್ಟಿತು. ಶಿಲ್ಪಿ ಮತ್ತೆ ತುಂಬಾ ನೊಂದು ಕೊಂಡ. ಇನ್ನು ಸ್ವಲ್ಪ ಪೆಟ್ಟುಗಳನ್ನು ಸಹಿಸಿಕೊಂಡಿದ್ದರೆ ಉತ್ತಮ ವಿಗ್ರಹವಾಗುತ್ತಿತ್ತಲ್ಲಾ, ಎಂದು ಮರುಗಿದ. ಆ ಕಲ್ಲನ್ನು ಕಂಬದ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇನೆ ಎಂದು ಮನದಲ್ಲೇ ನಿರ್ಧಾರ ಮಾಡಿದ.

ಶಿಲ್ಪಿ ಮತ್ತೊಂದು ಅಖಂಡ ಶಿಲೆಯನ್ನು ಕೈಗೆತ್ತಿಕೊಂಡ. ಆ ಶಿಲೆಯು ಶಿಲ್ಪಿ ನೀಡಿದ ಎಲ್ಲಾ ಉಳಿಯ ಪೆಟ್ಟುಗಳನ್ನು ಸಮಾಧಾನದಿಂದ, ಸಮಚಿತ್ತದಿಂದ ಸ್ವೀಕರಿಸಿತು. ತನ್ನ ಮೇಲೆ ಉಳಿಯಿಂದ ಆಗುತ್ತಿದ್ದ ಗಾಯಗಳನ್ನು ಸಹನೆಯಿಂದ ತಡೆದುಕೊಂಡಿತು. ಕೆಲವೇ ಸಮಯದಲ್ಲಿ ಆ ಶಿಲೆಯು ಒಂದು ಸುಂದರ ದೇವರ ಮೂರ್ತಿಯಾಗಿ ಪರಿವರ್ತನೆಯಾಯಿತು. ಒಂದು ಶುಭದಿನದಂದು ದೇವಾಲಯದ ಉದ್ಘಾಟನೆಯಾಗಿ, ಅಲ್ಲಿ ಆ ಶಿಲೆಯ ದೇವರ ಮೂರ್ತಿಯ ಪ್ರತಿಷ್ಟಾಪನೆಯಾಯಿತು. ಸಹಸ್ರಾರು ಭಕ್ತಾದಿಗಳು ತನು ಮನಗಳಿಂದ ಆ ಮೂರ್ತಿಗೆ ಪೂಜೆ ಸಲ್ಲಿಸತೊಡಗಿದರು. ದೇವಾಲಯದ ಅರ್ಚಕರೂ ಪ್ರತೀ ದಿನ ಹಾಲು, ನೀರು ಮುಂತಾದ ದ್ರವ್ಯಗಳಿಂದ ಆ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡತೊಡಗಿದರು. ಹೀಗೆ ಸಹನೆಯಲ್ಲಿ ನೋವನ್ನು ತಡೆದುಕೊಂಡ ಮೂರ್ತಿ ಪೂಜನೀಯ ಸ್ಥಾನ ಪಡೆಯಿತು.

ಉಳಿದ ಎರಡು ಶಿಲೆಗಳ ಕಥೆ ಏನಾಯಿತು ನೋಡುವ ಬನ್ನಿ. ಮೊದಲ ಏಟಿಗೇ ನೋವು ಎಂದು ಸೀಳು ಬಿಟ್ಟ ಕಲ್ಲು ಮೆಟ್ಟಾಲಾಗಿತ್ತು. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರೂ ಆ ಶಿಲೆಯನ್ನು ತುಳಿದೇ ಪ್ರವೇಶ ಮಾಡುತ್ತಿದ್ದರು. ಹೀಗೆ ನಿರಂತರ ತುಳಿತದಿಂದ ನೊಂದ ಕಲ್ಲು ತಾನೇ ಕೈಯಾರೆ ತಂದುಕೊಂಡ ಹೀನ ಸ್ಥಿತಿಗೆ ನೊಂದುಕೊಂಡಿತು. ಆದರೇನು ಮಾಡುವುದು ಸಮಯ ಮಿಂಚಿಹೋಗಿತ್ತು.

ಬಿರುಕು ಬಿಟ್ಟ ಎರಡನೇ ಕಲ್ಲನ್ನು ದೇವಾಲಯದ ಕಂಬದ ನಿರ್ಮಾಣದಲ್ಲಿ ಬಳಸಲಾಗಿತ್ತು. ದೇವಾಲಯಕ್ಕೆ ಬಂದ ಭಕ್ತಾದಿಗಳು ತಮ್ಮ ಕೈಯಲ್ಲಿ ಉಳಿದ ಎಣ್ಣೆ, ಪ್ರಸಾದಗಳನ್ನೆಲ್ಲಾ ಆ ಕಂಬಕ್ಕೆ ತಿಕ್ಕಲಾರಂಬಿಸಿದರು. ಇದರಿಂದ ಆ ಕಲ್ಲೂ ಬಹಳವಾಗಿ ನೊಂದುಕೊಂಡಿತು. ಇನ್ನು ಸ್ವಲ್ಪ ಸಮಯ ನಾನು ಉಳಿಯ ಪೆಟ್ಟನ್ನು ತಾಳಿಕೊಂಡಿದ್ದರೆ, ಸರ್ವರೂ ಪೂಜಿಸುವಂತಹ ದೇವರ ಪ್ರತಿಮೆಯಾಗಿರುತ್ತಿದ್ದೆ. ತಾಳ್ಮೆ ಕಳೆದುಕೊಂಡು ನಾನು ನನ್ನ ಕೈಯಾರೆ ಸಿಕ್ಕಿದ್ದ ಅವಕಾಶವನ್ನು ಹಾಳು ಮಾಡಿಕೊಂಡೆ ಎಂದು ಮರುಗಿತು. 

ಎರಡೂ ಶಿಲೆಗಳು ಕಷ್ಟಗಳು ಬಂದಾಗ (ಉಳಿಯ ಪೆಟ್ಟು) ತಾಳಿಕೊಳ್ಳಲಿಲ್ಲ. ಮಾನವರಾದ ನಾವೂ ಅಷ್ಟೇ ಅಲ್ಲವೇ? ಸ್ವಲ್ಪ ಕಷ್ಟಗಳು ಬಂದ ಕೂಡಲೇ ಕೈಚೆಲ್ಲಿ ಬಿಡುತ್ತೇವೆ. ಆತ್ಮಹತ್ಯೆ ಮೊದಲಾದ ಜೀವ ಕಳೆದುಕೊಳ್ಳುವ ಕೆಟ್ಟ ಆಲೋಚನೆಗಳನ್ನು ಮಾಡುತ್ತೇವೆ. ಸಹನೆಯೇ ದೇವತ್ವ. ಸಹನೆಗಿಂತ ದೊಡ್ದ ಶಕ್ತಿ ಯಾವುದೂ ಇಲ್ಲ. ಬೆಂಕಿಯಲ್ಲಿ ಬಿದ್ದು ಕರಗಿದಾಗಲೇ ಅಪ್ಪಟ ಚಿನ್ನ ಹೊರಬರುತ್ತದೆ. ನಮ್ಮ ಜೀವನವೂ ಹಾಗೆಯೇ. ಕಷ್ಟಗಳು ಬಂದಾಗ ಸಹಿಸಿಕೊಂಡರೆ ಉತ್ತಮ ದಿನಗಳು ಬಂದೇ ಬರುತ್ತವೆ. ಕಾಯುವ ತಾಳ್ಮೆ ಬೇಕು. ಜೀವನ ಒಂದು ಚಕ್ರದಂತೆ. ಮೇಲೇರಿದವ ಕೆಳಗಿಳಿಯಲೇ ಬೇಕು, ಹಾಗೆಯೇ ಕೆಳಗೆ ಇದ್ದವ ಖಂಡಿತವಾಗಿಯೂ ಮೇಲೇರುತ್ತಾನೆ. ಆದರೆ ನಿಮಗೆ ಸಹನೆ ಬೇಕಷ್ಟೇ. ಆಗ ಮಾತ್ರ ನಿಮಗೆ ಜೀವನದಲ್ಲಿ ಉತ್ತಮವಾದದ್ದೇ ಸಿಗುತ್ತದೆ. ಸಹನೆಯ ಜೊತೆ ಪ್ರಾಮಾಣಿಕತೆ ಹಾಗೂ ದುಡಿಮೆ ಇದ್ದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.

(ಆಧಾರ)  

 ಚಿತ್ರ ಕೃಪೆ: ಅಂತರ್ಜಾಲ ತಾಣ