ಸಹಾಯ
ಬರಹ
ಹೇ ಚಲಿಸುವ ಮುಳ್ಳೇ ಕೇಳುತ್ತಿರುವೆ ನಿನ್ನಿಂದೊಂದು ಸಹಾಯ
ನನಗಾಗಿ ಒಮ್ಮೆ ನಿಂತು ಕೆಲ ವರುಷ ಹಿಂದೆ ಹೋಗುವೆಯಾ?
ಶುದ್ಧ ಶುಭ್ರ ನೀಲ ಆಕಾಶದ ಕೆಳಗೆ
ಅವಳಂತೆ ಚುಂಬಿಸುವ ಬಿಳಿಯ ಕೆನೆಯ ಅಲೆಯೆಡೆಗೆ
ತುಂತುರು ಮಳೆಯ ಮಾಮರದ ಚಿಗುರಿನೆಡೆಗೆ ನನ್ನನ್ನೊಯ್ಯುವೆಯಾ?
ಅವಳನ್ನೇ ನೋಡುತ ಕೂತ ಧ್ಯಾನಿ ಎಡೆಗೆ
ಚಲಿಸುವ ಅವಳ ಕಾಲಕೆಳಗಿನ ನನ್ನ ನೆರಳಿನೆಡೆಗೆ
ದನಿಯೊಳು ದನಿಯಾದ ಅವಳ ಒಲವಿನ ನುಡಿಯೆಡೆಗೆ
ನಮ್ಮ ಆ ಸರಸಕೆ ಸಾಕ್ಷಿಯಾದ ಆ ತಂಪಾದ ಸಂಜೆ ಎಡೆಗೆ ನನ್ನನ್ನೊಯ್ಯುವೆಯಾ?
ಕಾದು ಸುಸ್ತಾದಾಗ ದೂರದಲ್ಲಿ ಅವಳನ್ನು ಕಂಡಾಗ ಮಾಡಿದ ನಗುವಿನೆಡೆಗೆ
ಪ್ರಿತಿಗಾಗಿ ಹೇಳಿದ ಸುಳ್ಳು ಕಾರಣಗಳ ಸರಮಾಲೆಯೆಡೆಗೆ
ಮನಸು ಬಿಚ್ಚಿ ಮಾತಾಡಿದ ಮಾತಿನೆಡೆಗೆ
ನಾನೇ ಕಳೆದು ಹೋಗಿ ಅವಳನ್ನ ಪಡಕೊಂಡ ಕ್ಷಣದೆಡೆಗೆ ನನ್ನನ್ನೊಯ್ಯುವೆಯಾ?