ಸಾಂಪ್ರದಾಯಿಕ ಆಹಾರಕ್ಕಾಗಿ ಕೆಸು ಬೆಳೆಸಿ

ಸಾಂಪ್ರದಾಯಿಕ ಆಹಾರಕ್ಕಾಗಿ ಕೆಸು ಬೆಳೆಸಿ

ನಮ್ಮ ಹಿರಿಯರು ಬಾಳೆಕಾಯಿ, ಕೆಸು, ಸುವರ್ಣಗಡ್ಡೆ, ಬಳ್ಳಿ ಗೆಣಸು, ಮುಂಡಿ, ಚಗಚೆಸೊಪ್ಪು ಮುಂತಾದ ಆಯಾ ಋತುಮಾನಗಳಲ್ಲಿ ಲಭ್ಯವಾಗುವ ತರಕಾರಿಗಳನ್ನೇ ಆಹಾರಕ್ಕಾಗಿ ಬಳಕೆ ಮಾಡುತ್ತಿದ್ದರು. ಆರೋಗ್ಯವಾಗಿಯೂ ಇರುತ್ತಿದ್ದರು. ಸಾಮಾನ್ಯವಾಗಿ ಹಳ್ಳಿಗಳಲ್ಲೆಲ್ಲಾ ಮಳೆಗಾಲದಲ್ಲಿ ಬೇರೆ ಬೇರೆ ನಮೂನೆಯ ಕೆಸುಗಳನ್ನು ಅಡುಗೆಗಾಗಿ ಬಳಕೆ ಮಾಡುವುದು ವಾಡಿಕೆ. ಕೆಸುವಿನ ಸೊಪ್ಪು, ದಂಟು ಗಡ್ಡೆ, ಅದರ ಬುಡದಲ್ಲಿ ಹರಿಯುವ ಬಳ್ಳಿ ಎಲ್ಲವೂ ಅಡುಗೆಗೆ ಬಳಕೆಯಾಗುವ ವಸ್ತುಗಳು. ನೀರು ಕೆಸು, ಕರಿ ಕೆಸು, ಹಾಲು ಕೆಸು, ಗಡ್ಡೆ ಕೆಸು ಮುಂತಾದ ಬೇರೆ ಬೇರೆ ವಿಧಗಳು ಕೆಸುವಿನಲ್ಲಿವೆ. ಕೆಸುವಿನಲ್ಲಿ  ಒಂದು ರೀತಿಯ ತುರಿಕೆಯ ( Calcium oxalate, Salt of Oxalic acid) ಅಂಶ ಇದ್ದು, ಕೆಲವು ವಿಧಗಳಲ್ಲಿ ಇದು ಕಡಿಮೆ. ಇದನ್ನು ನೆಟ್ಟು ಬೆಳೆಸಿ ಕೃಷಿಮಾಡುತ್ತಾರೆ. ಕೆಸುವಿನ ಎಲೆ-ಅದರ ಆಕಾರ- ದಂಟು ಮತ್ತು ಅದರ ಬಣ್ಣಗಳನ್ನಾಧರಿಸಿ ಬೇರೆ ಬೇರೆ ಹೆಸರಿನಿಂದ ವಿಂಗಡಣೆ ಮಾಡಲಾಗಿದೆ. ಕರಾವಳಿಯಲ್ಲಿ ಹೆಚ್ಚಾಗಿ ಕರಿ ಕೆಸುವನ್ನು  ಮತ್ತು ಗಡ್ಡೆ ಕೆಸುವನ್ನು ಕೃಷಿಯಾಗಿ ಬೆಳೆಸುತ್ತಾರೆ. ತೇವಾಂಶ ಇರುವಲ್ಲಿ ಬೆಳೆಯುವ ನೀರು ಕೆಸುಗಳನ್ನು ಅವು ಬೆಳೆದಲ್ಲಿಂದಲೇ ಎಲೆ, ಕಾಂಡ ಮತ್ತು ಬಳ್ಳಿಗಳನ್ನು ತೆಗೆದು ಅಡುಗೆಗೆ ಬಳಸುತ್ತಾರೆ.

ಕೆಸು (Aroids) ವಂಶದಲ್ಲಿ Araceae ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯ. ಇದರಲ್ಲಿ ಕರಿ ಕೆಸು Taro (Colocasia esculenta)  ಸುವರ್ಣಗಡ್ಡೆ Elephant Foot Yam, ಆನೆ ಕಿವಿಯಂತ ದೊಡ್ಡ ಎಲೆ ಹೊಂದಿದ ಕೆಸು Tannia (Xanthosoma sagittifolium) ಮುಂಡಿಯಯಂತಹ ಕೆಸುವನ್ನು Swamp taro (Cyrtosperma chamissonis) ಸೇರಿಸಲಾಗಿದೆ. ನೀರು ಕೆಸು ಅಥವಾ ಕಾಟು ಕೆಸುವನ್ನು Giant Taro (Alocasia spp) ಅಡಿ ಸೇರಿಸಲಾಗಿದೆ. ಇದರಲ್ಲಿ ಅಲಂಕಾರಕ್ಕಾಗಿ ಬೆಳೆಸುವ ಬಣ್ಣದ ಕೆಸುವೂ ಸೇರಿದೆ. ಜಗತ್ತಿನ ಉಷ್ಣ ವಲಯ ಹಾಗೂ ಸಮಶೀತೋಷ್ಣ  ವಲಯಗಳಲ್ಲಿ ಕೆಸುವನ್ನು ಬೆಳೆಸಿ ಬಳಸುವುದನ್ನು ಕಾಣಬಹುದು.

ಕೇರಳ ಮತ್ತು ಕರ್ನಾಟಕದ ಕರಾವಳಿ ಮತ್ತು ಅಲ್ಪಸ್ವಲ್ಪ ಮಲೆನಾಡಿನಲ್ಲಿ ಮಾತ್ರವೇ ಇದರ ವ್ಯವಸಾಯ ಕಂಡು ಬರುತ್ತದೆ. ತಮಿಳುನಾಡು, ಆಂಧ್ರ, ಗುಜರಾತ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್‌ನಲ್ಲೂ ಇದನ್ನು ಬೆಳೆಸಿ ಬಳಸುವುದನ್ನು  ಕಾಣಬಹುದು.

ಕೆಸುವಿನಲ್ಲಿ ಬೆಳೆಸಲ್ಪಡುವ ವಿಧಗಳು: ಕರಿಕೆಸು ಎಂಬ ಹೆಸರಿನ ದಂಟು ಕಪ್ಪು ಉಳ್ಳ ಸಸ್ಯ. ಈ ಸಸ್ಯಕ್ಕೆ ತುರಿಕೆ ಕಡಿಮೆ. ಇದರಲ್ಲಿ ಮೊಳಕೆಗಳು ಬಂದು ಸಸ್ಯಾಭಿವೃದ್ದಿಯಾಗುತ್ತದೆ. ಗಡ್ಡೆ, ದಂಟು ಮತ್ತು ಸೊಪ್ಪು ಬೇರೆ ಬೇರೆ ಅಡುಗೆಗೆ ಬಳಕೆಯಾಗುತ್ತದೆ. ಇದನ್ನು ಕರಾವಳಿಯಲ್ಲಿ ಹೊಸ ಅಕ್ಕಿ ಊಟದ ದಿನದಂದು ತಪ್ಪದೇ ಪದಾರ್ಥ ಮಾಡುತ್ತಾರೆ. ಇದು ಬಳ್ಳಿ ಬಿಡದ ಸಸ್ಯ. (ಚಿತ್ರ ೧)

ಇಂತಹ ಲಕ್ಷಣವನ್ನೇ ಹೋಲುವ ಬೇರೆ ಕೆಸುಗಳೂ ಇವೆ. ಇದರ ಬಣ್ಣ ಸೂಕ್ಷ್ಮವಾಗಿ ಗಮನಿಸಿದಾಗ ವ್ಯತ್ಯಾಸವಿರುತ್ತದೆ. ಸಸ್ಯಗಳು ಬುಡದಲ್ಲಿ ಬಳ್ಳಿಗಳನ್ನು ಬಿಡುತ್ತವೆ. ಬಳ್ಳಿ ಗಂಟುಗಳ ಮೂಲಕ ಸಸ್ಯಾಭಿವೃದಿಯಾಗುತ್ತದೆ. ಇದು ತುರಿಸುತ್ತದೆ.

ಗಡ್ಡೆ ಕೆಸು: ದೊಡ್ಡ ಎಲೆ, ದೊಡ್ಡ ಸಸ್ಯವಾದ ಇದನ್ನು ಗಡ್ಡೆಗಾಗಿಯೇ ನೆಟ್ಟು ಬೆಳೆಸುತ್ತಾರೆ. ಇದರಲ್ಲಿ ಒಂದೊಂದು ಗಿಡಕ್ಕೆ ೫-೧೦ ಕಿಲೋ ತನಕ ಗಡ್ಡೆಗಳಾಗುತ್ತದೆ. ಗಡ್ಡೆ ಬಿಡುವ ಸಸ್ಯಕ್ಕೂ ಬಿಡದಿರುವಂತದ್ದಕ್ಕೂ ಮೇಲು ನೋಟಕ್ಕೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೆ ಗಾಯ ಮಾಡಿದಾಗ ಗಾಯದಲ್ಲಿ ಹಾಲು ಒಸರುವ ಗಿಡ ಮಾತ್ರ ಗಡ್ಡೆ ಬಿಡುತ್ತದೆ. ದೊಡ್ದ ಎಲೆ, ಮತ್ತು ಗಡ್ಡೆಗೆ ಉತ್ತಮ ಮಾರುಕಟ್ಟೆ ಇದೆ. (ಚಿತ್ರ ೨)

ನೀರು ಕೆಸು: ಈ ಕೆಸುವನ್ನು ಕಾಟು ಕೆಸು ಎನ್ನುತ್ತಾರೆ. (ಚಿತ್ರ ೩) ಇದರಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಹೆಚ್ಚು ಮಳೆಯಾಗಿ ನೆಲ ತೇವವಾಗಿರುವ ಸಮಯದಲ್ಲಿ ಇದರಲ್ಲಿ ತುರಿಕೆಯ ಅಂಶ ಕಡಿಮೆ. ಈ ಸಮಯದಲ್ಲಿ ಇದರ ಎಲೆಯನ್ನೂ, ದಂಟನ್ನೂ ಬಳ್ಳಿಯನ್ನೂ ಅಡುಗೆಗಾಗಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಕಲ್ಲುಕೆಸು, ಮರಕೆಸು, ಮುಂತಾದವುಗಳಿದ್ದು ಅದನ್ನೂ ಕೆಲವು ಸಂದರ್ಭಗಳಲ್ಲಿ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಸಣ್ಣ ಎಲೆ ಬಿಡುವ ನೀರು ಕೆಸುವನ್ನು ಕರಾವಳಿಯಲ್ಲಿ ಸುರುಳಿ ಸುತ್ತಿ ಕಟ್ಟು ಹಾಕಿ ತೇಟ್ಲ ಮಾಡುತ್ತಾರೆ. (೪,೫)

ಕೆಸು ಉಷ್ಣ ಎನ್ನುತ್ತಾರೆ. ಕಾರಣ ಇದರಲ್ಲಿ ಅಧಿಕ ಪೊಷಕಾಂಶಗಳಿವೆ. ಆದ ಕಾರಣ ಹೆಚ್ಚು ತಿಂದರೆ ಜೀರ್ಣಕ್ಕೆ ಕಷ್ಟವಾಗುತ್ತದೆ. ಕೆಸುವಿನ ಎಲೆ ಮತ್ತು ದಂಟಿನಲ್ಲಿ ಸೆಲ್ಯುಲೋಸ್ ಹಾಗೂ ಗಡ್ಡೆಯಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಇದೆ. ಇದನ್ನು ಮುಂಗಾರು ಮಳೆ ಪ್ರಾರಂಭದ ದಿನಗಳಲ್ಲಿ ನಾಟಿ ಮಾಡಬೇಕು. ಸಾಮಾನ್ಯವಾಗಿ ಎಲ್ಲಾ ಕೆಸುವಿಗೂ ೬ ತಿಂಗಳು ಅವಧಿ. ಹಾಗೆಂದು ಅವು ಬಹುವಾರ್ಷಿಕ ಬೆಳೆಗಳು.

ಕೆಸುವಿನಲ್ಲಿ ಕೇರಳದ ತಿರುವನಂತಪುರಂನಲ್ಲಿರುವ ಕೇಂದ್ರೀಯ ಗೆಡ್ಡೆ ಗೆಣಸು ಸಂಶೋಧನಾ ಸಂಸ್ಥೆ ಮತ್ತು ತಮಿಳುನಾಡು ಕೃಷಿ ವಿಶ್ವ ವಿದ್ಯಾನಿಲಯಗಳು ಶ್ರೀಪಲ್ಲವಿ, ಶ್ರೀ ರಶ್ಮಿ, ಶ್ರೀ ಕಿರಣ್, ಸತಮುಖಿ, ಪಂಚಮುಖಿ, ಸಿ ಓ -೧. ತಳಿಗಳನ್ನು ಆರಿಸಿದೆ. ಇದು ಗಡ್ಡೆಗೆ ಹಾಗೂ ಪದಾರ್ಥಕ್ಕೆ ಬಳಸಲು ಯೋಗ್ಯ. ಇವರು ಗುರುತಿಸಿದ ತಳಿಗಳಲ್ಲದೆ ಹಲವಾರು ತಳಿಗಳು ಭಾರತದ ವಿವಿಧ ಭಾಗಳಲ್ಲಿ ಬೆಳೆದು ಬಳಸಲ್ಪಡುತ್ತಿವೆ.

ಕೆಸುವಿನ ದಂಟಿನ ಸಾಂಬಾರು ಮತ್ತು ಪಲ್ಯ ಮಡುತ್ತಾರೆ. ಕೆಸುವಿನ ಸೊಪ್ಪನ್ನು ಬೇಯಿಸಿ ತೆಂಗಿನ ಕಾಯಿ ಹಾಕಿ ಚಟ್ನಿ ಮಾಡಿದರೆ ಅದು ಪಾಲಕ್ ಚಟ್ನಿಗಿಂತ ರುಚಿಯಾಗಿರುತ್ತದೆ. ಇದರಿಂದ ಹಬೆಯಲ್ಲಿ ಬೇಯಿಸಿದ ಪತ್ರೋಡೆ, ಕಲ್ಲಿನಲ್ಲಿ ಕಾಯಿಸಿದ ಪತ್ರೋಡೆ ಮಾಡುವುದು ವಾಡಿಕೆ. ಮಳೆಗಾಲದಲ್ಲಿ ಮಾತ್ರವೇ ಲಭ್ಯವಿರುವ ಮರದ ಪೊಟರೆ ಅಥವಾ ಹ್ಯೂಮಸ್ ಅಂಶದಲ್ಲಿ ಮಾತ್ರ ಬೆಳೆಯುವ ಮರಕೆಸು ಭಾರೀ ಔಷಧೀಯ ಎನ್ನಲಾಗುತ್ತದೆ. ಗಡ್ಡೆಯನ್ನು ಬೇಯಿಸಿ ಬೇರೆ ಬೇರೆ ಅಡುಗೆಗೆ ಬಳಕೆ ಮಾಡುತ್ತಾರೆ.

ಕೆಸು ಬೆಳೆಸಲು ಉತ್ತಮ ನೀರು ಬಸಿಯಲ್ಪಡುವ ಮಣ್ಣು ಬೇಕು. ಏರು ಮಡಿಯಲ್ಲಿ ಕೆಸುವಿನ ಗಾತ್ರಕ್ಕನುಗುಣವಾಗಿ ಸಾಕಷ್ಟು ಸಾವಯವ ಗೊಬ್ಬರಗಳನ್ನು ಹಾಕಿ ಬೆಳೆಸಬೇಕು. ಪೊಟ್ಯಾಶಿಯಂ ಅಂಶ ಹೆಚ್ಚು ಇದ್ದಾಗ ತುರಿಕೆ ಕಡಿಮೆ ಇರುತ್ತದೆ. ತುರಿಕೆ ನಿವಾರಣೆಗೆ ಹುಣಸೆ ಹುಳಿ ಅಥವಾ ಇನ್ಯಾವುದೇ ಹುಳಿ ಪರಿಹಾರ. ಫಲವತ್ತತೆ ಇರುವ ಮಣ್ಣು ಮತ್ತು ಧಾರಾಳ ನೀರು ದೊರೆತಲ್ಲಿ ಕೆಸುವಿನ ಕ್ಷಾರೀಯ ಗುಣ ಕಡಿಮೆಯಿರುತ್ತದೆ. ರೋಗ ಮುಕ್ತ ಗಡ್ಡೆಗಳನ್ನು ಆರಿಸಿ ನೆಟ್ಟು ಬೆಳೆಸಿದರೆ ಕೆಸು ಲಾಭದ ಬೆಳೆ.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ