ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್
ಮಾಯಾಬಜಾರ್ ೧೯೫೭ರಲ್ಲಿ ತೆರೆಕಂಡ ತೆಲುಗು ಪೌರಾಣಿಕ ಚಿತ್ರ. ಇತ್ತೆಚೆಗೆ ಸಿಂಗಪುರದ ವಸಂತಂ ಚಾನೆಲ್ಲಿನಲ್ಲಿ ಅದರ ತಮಿಳು ಡಬ್ಬಿಂಗ್ ೨೬ ಆಗಸ್ಟ್ ಶುಕ್ರವಾರ ರಾತ್ರಿ ಹಾಕಿದ್ರು. ಬೇಗ ಊಟ ಮುಗಿಸಿ ಮಾಯಾಬಜಾರು ನೋಡಲು ಕಾದು ಕೂತಿದ್ದೆ. ಈ ಚಿತ್ರ ನಾನು ನೋಡಿದ್ದು ೧೯೬೭ರಲ್ಲಿ, ಕನ್ನಡ ಡಬ್ಬಿಂಗ್, ಮೈಸೂರಿನ ಲಕ್ಷ್ಮಿ ಟಾಕೀಸಿನಲ್ಲಿ. ಮೊದಲ ಬಾರಿಗೆ ನಾನು, ಅಕ್ಕ-ಅಣ್ಣನ ಮೂವರೇ ಪಿಕ್ಚರ್ಗೆ ಹೋಗಿದ್ವು. ಅಣ್ಣ(ಅಪ್ಪ) ಮೂವರ ಕೈಗೆ ಐದು ಪೈಸೆ ಇತ್ತು, ಟಿಕೆಟ್ ಕೊಡಿಸಿ, ಹತ್ತಾರು ಬಾರಿ ಹತ್ತರ ನನ್ನಕ್ಕನಿಗೆ ಮಕ್ಳು ಜೋಪಾನ ಎಂದು ಹೇಳಿದ್ರು. ಅವ್ಳೋ ಎಲ್ಲಿ ಓಡಿ ಬಿಡ್ತೀವೋ ಎಂದು ಸೀಟಿನ ಮೇಲೇ ಕೂತಾಗಲೂ ಹಿಡ್ಕೊಂಡಿದ್ದು. ಅಣ್ಣ, ಐದು ಪೈಸೆ ಕೊಟ್ಟಿದ್ರಲ್ಲಾ ಅದು ಖರ್ಚು ಮಾಡೋಕ್ಕೆ ನಂಗೆ ಹಿಂದೇಟು, ಆಹಾ, ನಿಧಿ ಸಿಕ್ಕ ಹಾಗಿತ್ತು. ಭದ್ರವಾಗಿ ಕೈಯಲ್ಲಿ ಹಿಡಿದು ಮೃದುವಾಗಿ ಅದನು ಸವರಿದ್ದೂ, ಸವರಿದ್ದೇ. ಅದೆಲ್ಲೇ ಸವೆದು ಹೋಗುತ್ತೋ, ಕಳೆದು ಹೋಗುತ್ತೋ ಎಂಬ ಭೀತಿ ಬೇರೆ! ನನ್ನಣ್ಣನೋ ಮಹಾ ತಿಂಡಿಪೋತ-ಅವನಿಗಿತ್ತ ಐದು ಪೈಸೆಯಲಿ, ಎರಡು ಕೆಂಪು ಐಸ್ಕ್ಯಾಂಡಿ ತೆಗೆದುಕೊಂಡು ತುಟಿ ಎಲ್ಲಾ ಕೆಂಪು ಮಾಡಿಕೊಂಡು, ನಮ್ಮಿಬ್ಬರಿಗೂ ಕೊಡದೆ ನಾಲಿಗೆ ಚಾಚಿ, ಅಣಕಿಸಿ ತಿಂದಿದ್ದ. ಆ ಅಣಕು, ಕೊಡೋಲ್ಲಾ ಹೋಗೇ, ನಂಟಿನ, ನೆನಪಿನ ಚಿತ್ರ ಮಾಯಾಬಜಾರ್!
ಮಹಾಭಾರತ ತಿಳಿದವರಿಗೆ ಉತ್ತರೆ-ಅಭಿಮನ್ಯು ಎಲ್ಲರಿಗೂ ಗೊತ್ತಿರುವ ವಿಷಯವೇ...ಬಲರಾಮನ ಮಗಳು ಶಶಿರೇಖ ಇದು ಕೇಳರಿಯೆ? ಶಶಿರೇಖ-ಅಭಿಮನ್ಯು ಪ್ರಣಯ, ಘಟೋದ್ಗಜನ ಸಹಾಯ ಈ ಚಿತ್ರದ ಪಾಮುಖ್ಯತೆ. ಶಶಿರೇಖೆಯನು ಹೊರತು ಪಡಿಸಿ ಮಿಕ್ಕ ಪಾತ್ರಗಳು ಮಹಾಭಾರತದಿಂದ ಆಯ್ದದ್ದು.
ವಿವಾಹ ಭೋಜನವಿದು....ಯಾರು ಮರೀತಾರೆ, ಬಾಯಲ್ಲಿ ನೀರೂರಿಸುವಂತಹ ಪಕ್ವಾನ್ನಗಳು. ಆ ಎಂದು ಬಾಯ್ದೆರೆದ ಘಟೋದ್ಗಜನ ಬಾಯೊಳಗೆ ಸಾಲು ಸಾಲಾಗಿ ನುಸುಳುವ ಲಾಡು, ಜಿಲೇಬಿ, ಒಬ್ಬಟ್ಟುಗಳು. ಅಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ ಎಂದು ಗಂಡುಬೀರಿಯಂತೆ ಕುಣಿವ ಹೆಣ್ಣು ಘಟೋದ್ಗಜಿಯ ನೃತ್ಯ...ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ ಎಂದು ಇಂದೂ ಗುನುಗುನಿಪ ಹಾಡು. ಆ ಮಾಯೆಯ ಬಜಾರಿನಲ್ಲಿ ನಾವೂ ಬಂದಿ ಅಲ್ಲವೇ?
ಕೋಟೆಯ ಬುರುಜಿನ ಮೇಲೆ ಕೊಂಬಿನ ಕಹಳೆ ದೃಶ್ಯದೊಂದಿಗೆ ಚಿತ್ರ ಪ್ರಾರಂಭಗೊಳ್ಳುತ್ತದೆ. ಯಾದವರ ಅರಮನೆಯಲಿ ಸಂಭ್ರಮದ ಸುಗ್ಗಿ, ಶಶಿರೇಖೆಗೆ ಆರತಿ, ಇದೇ ವೇಳೆಯಲಿ ರಾಜಸೂಯ ಯಾಗ ಮುಗಿಸಿ ಬಂದ ಸಾತ್ಯಕಿ ಒಂದು ಮಾಯಾಪೆಟ್ಟಿಗೆಯನು ಉಡುಗೊರೆಯಾಗಿ ನೀಡಿದರೆಂದು ತರುತ್ತಾನೆ. ಅವರವರ ಭಾವಕ್ಕೆ ಎಂಬಂತೆ, ಪೆಟ್ಟಿಗೆಯಲಿ ಇಟ್ಟ ಕನ್ನಡಿ "ತೆರೆದವರ ಮನದಲಿ ಇರುವುದನು ತೋರಿಪ ದರ್ಶನ-ದರ್ಪಣವದು". ಶ್ರೀಕೃಷ್ಣನಿಗೆ ಶಕುನಿಮಾಮ ಕಂಡಲ್ಲಿ, ಬಲರಾಮನ ಪತ್ನಿ ರೇವತಿಗೆ ಆಭರಣಗಳು ಕಂಡರೆ, ಬಲರಾಮನಿಗೆ ಧುರ್ಯೋದನ ಕಾಣುತ್ತಾನೆ. ಶಶಿರೇಖಳಿಗೆ ಅದನಿತ್ತ ಕೃಷ್ಣ ನೋಡೆಂದಾಗ ಅಲ್ಲಿ ಅವಳಿಗೆ "ನೀನೇ ನನ್ನನ್ನು ಸ್ಮರಿಸುತಿಹೆ" ಎಂದು ಅಭಿಮನ್ಯು ಕಾಣುತ್ತಾನೆ.
ಜೂಜಿನಲಿ ಸೋತು, ಪಾಂಡವರು ಕಾಡಿಗೆ ಹೋದ ನಂತರ ಬಲರಾಮನನು ಪಾಡಿಪೊಗಳಿ ಅಟ್ಟಕ್ಕೇರಿಸಿದ ದುರ್ಯೋಧನನ ಪುತ್ರನಾದ ಲಕ್ಷಣಕುಮಾರನಿಗೆ ಮದುವೆ ಮಾಡಲು ಬಲರಾಮ ನಿಶ್ಚಯಿಸುತ್ತಾನೆ. ಇದಕ್ಕೆ ರೇವತಿಯ ಸಮ್ಮತಿಯೂ ಸಿಗುತ್ತದೆ. ಇತ್ತ ಪ್ರಣಯಿಗಳ ಪೀಕಲಾಟಕ್ಕೆ ಕೃಷ್ಣ ಸಹಾಯಕ್ಕೆ ಬರುತ್ತಾನೆ. ಆ ಸಹಾಯವೇ "ಘಟೋದ್ಗಜನ" ಪ್ರವೇಶ. ಇದೊಂದು ಕಾಲ್ಪನಿಕ ಕಥೆಯಾದರೂ ಲೇಖಕರ ಅದ್ಭುತ ಕಲ್ಪನೆ "ಘಟೋದ್ಗಜನ ಸಹಾಯ ಹಸ್ತ".
ಎನ್.ಟಿ.ಆರ್ ಆಕ್ಟಿಂಗ್ ಇತ್ತೋ ಇಲ್ಲವೇ, ದೇವರು ಪಾತ್ರಗಳು ಮಾತ್ರ ಬಹಳ ಚೆನ್ನಾಗಿ ಮುಖಕ್ಕೆ ಒಪ್ಪುತ್ತಿತ್ತು. ಸಾವಿತ್ರಿ ಶಶಿರೇಖಳ ಪಾತ್ರದಲಿ ಸಾವಿತ್ರಿಯವರ ಅಭಿನಯ ಬೆಚ್ಚಿ ಬೀಳಿಸುವುದು. ಒಮ್ಮೆ ಮೂರ್ತಿವೆತ್ತ ಸ್ಮಿತವದನೆ, ಗಾಂಭೀರ್ಯ, ಮಂದಹಾಸದ ಚಿಲುಮೆಯಾದರೆ ಮಗದೊಮ್ಮೆ ಭೀಭತ್ಸ, ಹೆಣ್ಣಿನಲ್ಲಿ ಅಡಗಿದ್ದ ಗಂಡುಬೀರಿಯಾಗಿ ಅಬ್ಭಾ ನಟನಾದ್ಬುತವೇ ಎಂದು ಇಂದೂ ಬೆರಗಾಗುವಂತೆ ಮಾಡುತ್ತಾಳೆ. ಎಸ್.ವಿ.ರಂಗರಾವ್ ಘಟೋದ್ಗಜನ ಪಾತ್ರಕ್ಕೆ ಜೀವತುಂಬಿದ್ದಾರೆ.
ಮಾಯಾ ಶಶಿರೇಖಾಳಿಗೆ ತಂಗು ಮನೆಯಲ್ಲಿ ಒಮ್ಮೆ ಕೌರವರಿಗಾಗಿ ತಯಾರಿಸಿದ್ದ ರುಚಿಕರ ಭಕ್ಷ್ಯಗಳ ವಾಸನೆ ಮೂಗಿಗೆ ಬಡಿಯುತ್ತದೆ.ತಕ್ಷಣ ಶಶಿರೇಖಾ ತನ್ನ ಮೂಲ ರೂಪಕ್ಕೆ ಅಂದರೆ ಘಟೋತ್ಕಚನಾಗಿ ಬದಲಾಗಿ ಭೋಜನ ಶಾಲೆ ಹೊಕ್ಕುತ್ತಾನೆ.ಕೂತು ಒಂದೊಂದೇ ತಿನಿಸುಗಳನ್ನು ತಿನ್ನಲು ಕಷ್ಟವಾದಾಗ ದೇಹವನ್ನು ದೊಡ್ಡದಾಗಿ ಬೆಳೆಸುತ್ತಾನೆ ಮತ್ತು ಎಲ್ಲ ಭಕ್ಷ್ಯಗಳನ್ನೂ ಉಸಿರಾಡಲು ಗಾಳಿ ತೆಗೆದುಕೊಳ್ಳುವಂತೆ ಭಕ್ಷಿಸುತ್ತಾನೆ. ಲಾಡುಗಳೆಲ್ಲ ಅವನ ಬಾಯೊಳಕ್ಕೆ ಹೋಗುವ ಅದ್ಭುತ ದೃಶ್ಯವಂತೂ ನಿಮ್ಮನ್ನು ಮೈಮರೆಸುತ್ತದೆ.ಭೋಜನದ ನಂತರ ಘಟೋತ್ಕಚ ಪಕ್ಕದಲ್ಲಿಯ ಗದೆಗೆ ಕೈ ಹಾಕಿದಾಗ ಬೆಚ್ಚಿ ಬೀಳುತ್ತಾನೆ.ಏಕೆಂದರೆ ಗದೆ ತನ್ನ ಸಹಜ ಅಳತೆಯಲ್ಲೇ ಇರುತ್ತದೆ.ಅದು ಆಟಿಗೆಯಂತೆ ಕಾಣುತ್ತದೆ.ಏನೋ ನೆನಪಿಸಿಕೊಂಡವನಂತೆ ಘಟೋತ್ಕಚ ಮತ್ತೆ ತನ್ನ ಮೂಲ ರೂಪಕ್ಕೆ ಬಂದು ಗದೆ ಹಿಡಿಯುತ್ತಾನೆ.ಇಲ್ಲಿ ಅನಿಮೇಶನ್ ,ಗ್ರಾಫಿಕ್ಸ್ ಏನು ಇಲ್ಲ.ನೀವು ಬಾರ್ಟ್ಲಿಯನ್ನು ಎಷ್ಟು ಅಭಿನಂದಿಸುತ್ತೆರೋ ನಿಮಗೆ ಬಿಟ್ಟದ್ದು.!ಹೀಗೆ ಪ್ರತಿ ಸನ್ನಿವೇಶ ,ದೃಶ್ಯ ನಿಮ್ಮನ್ನು ಮಂತ್ರದಂತೆ ಕಟ್ಟಿ ಹಾಕುತ್ತದೆ.ನೀವು ಒಮ್ಮೆ ’ಮಾಯಾಬಜಾರ್’ ನೋಡಿ..ಆಮೇಲೆ ನೀವು ನೋಡುತ್ತಲೇ ಇರುತ್ತೀರಿ ಅಷ್ಟೇ!
ಪಾಪ ಲಕ್ಷಣಕುಮಾರನ ಪಾತ್ರದಲಿ ಬರೀ ಉತ್ತರನ ಪೌರುಷವಾದಲ್ಲಿ, ಅವನ ಬಹುಪರಾಕಿಗಳ ಪಾತ್ರದಲಿ ಬರುವ ಈರ್ವರು ಪರಾಕಿಗಳ "ಎಲೆ ಅಡಿಕೆಗೆ ಹಾಕುವ ರತ್ನಗಂಬಳಿ ಸುತ್ತುವ ದೃಶ್ಯ", ಮೆತ್ತನೆಯ ಹಾಸಿಗೆ ಎಂದು ಮಂಚದ ಮೇಲೆ ಮಲಗಲು ಹೋದವರಿಗೆ ಸಿಗುವ ತಿರುಗು ಸುತ್ತು ಥ್ರಿಲ್ಲಿಂಗ್. ರಾಕ್ಷಸಗಣ ಬಂದಂತೆ ಹಾಸ್ಯ. ಲಕ್ಷಣಕುಮಾರನ "ಬಹುಪರಾಕ್" ಈರ್ವರು ಪರಾಕಿಗಳು
ನೀನೇ ಭುವಿಯಲಿ ನಿಂದ ಅಭಿಮನ್ಯು-ಆಕಾಶದಲಿ ನಿಂದು ಯುದ್ಧಗೈವ ಘಟೋದ್ಗಜ, ಕೈತೋರಿದಾಕ್ಷಣ ಅವನ ಕೈಗೆ ಬರುವ ವಿವಿಧ ಆಯುಧಗಳು, ಸುಯ್ಯನೆ ಬರುವ ಬಾಣ, ಬರೀ ಆಯುಧಗಳ ಜಗಳಯಾದವ-ಪಾಂಡವರ ಸಂಬಂಧವೇ ಚಿತ್ರದ ವಿಷಯ. ಸಂಪೂರ್ಣ ಚಿತ್ರದಲ್ಲಿ ಪಾಂಡವರು ಇಲ್ಲದಂತೆ ತಯಾರಿಸಲ್ಪಟ್ಟ ಚಿತ್ರವಿದು.
ಇಂದಿಗೂ ಪ್ರತಿಸಲ ನೋಡುವಾಗಲೂ ಹೊಸ ಅನುಭವ ಕೊಡುವ ನಿತ್ಯ ನೂತನ ಚಿತ್ರ ಮಾಯಾಬಜಾರ್. ಮಾತುಗಳು, ಹಾಡುಗಳು, ಪದಪ್ರಯೋಗಗಳು, ಹಾಸ್ಯ ಅಂದು, ಇಂದು, ಮುಂದೂ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಿ, ಆನಂದಿಸುವ ಚಿತ್ರವದು.
Comments
ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್
In reply to ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್ by Chikku123
ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್
ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್
In reply to ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್ by gvmt
ಉ: ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್