ಸಾಮಾಜಿಕ ನ್ಯಾಯ ರಾಜಕಾರಣ: ವಿ.ಪಿ.ಸಿಂಗ್ ಮಾದರಿ

ಸಾಮಾಜಿಕ ನ್ಯಾಯ ರಾಜಕಾರಣ: ವಿ.ಪಿ.ಸಿಂಗ್ ಮಾದರಿ

ಬರಹ

ಸಾಮಾಜಿಕ ನ್ಯಾಯ ರಾಜಕಾರಣ: ವಿ.ಪಿ.ಸಿಂಗ್ ಮಾದರಿ

ಮೊನ್ನೆ ಶಿವಮೊಗ್ಗದಲ್ಲಿ ’ವಿ.ಪಿ.ಸಿಂಗ್ ನಮನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನನಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದ ’ಬಹುಮತ’ ಸಂಘಟನೆಯ ಸಂಚಾಲಕರಾದ ಗೆಳೆಯ ಎಚ್. ಹಾಲಪ್ಪನವರು ಸ್ಮರಣಿಕೆಯಾಗಿ ವಿ.ಪಿ.ಸಿಂಗ್ ಅವರ ಭಾವಚಿತ್ರವೊಂದನ್ನು ನೀಡಿದಾಗ, ನಾನು ಸ್ವಲ್ಪ ತಬ್ಬಿಬ್ಬಾದೆ. ನನ್ನ ಮನೆಯಲ್ಲಿ ರಾಷ್ಟ್ರ ಜೀವನದ ಸಾರ್ವತ್ರಿಕ ನಾಯಕರೆನಿಸಿದ ಗಾಂಧಿ, ಲೋಹಿಯಾ, ಅಂಬೇಡ್ಕರರ ಭಾವಚಿತ್ರಗಳಿವೆ. ಅವು ಕೂಡಾ ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿ ಸ್ಮರಣಿಕೆಗಳಾಗಿ ನೀಡಲ್ಪಟ್ಟವೇ. ನಮ್ಮ ಮನೆಯ ಷೋ-ಕೇಸಿನಲ್ಲಿ, ಇವುಗಳ ಜೊತೆ ವಿ.ಪಿ. ಸಿಂಗ್ ಅವರ ಚಿತ್ರ ಸಮಾನ ಗೌರವದಿಂದ ನಿಲ್ಲಬಲ್ಲದೇ? ಅವರು ನಿಜವಾಗಿಯೂ ಇವರೆಲ್ಲರ ಜೊತೆ ನಮ್ಮ ಮನೆಗಳಲ್ಲಿ ನೆನೆಯಬೇಕಾದ ವ್ಯಕ್ತಿ ಎನಿಸಿದ್ದಾರೆಯೆ? ಇತ್ಯಾದಿ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹಾದು ಹೋದವು. ಚಿತ್ರವನ್ನು ಸದ್ಯಕ್ಕಾದರೂ ಮನೆಯ ಮೂಲೆಯೊಂದರಲ್ಲಿ ಬಿಸಾಡಲು ಒಪ್ಪದ ನನ್ನ ದ್ವಂದ್ವ ಮನಃಸ್ಥಿತಿಯಲ್ಲಿ, ಈ ವಿಶ್ವನಾಥ ಪ್ರತಾಪ ಸಿಂಗರ ರಾಜಕೀಯ ಜೀವನವನ್ನೊಮ್ಮೆ ನಾನು ಮೆಲುಕು ಹಾಕುವುದು ಅನಿವಾರ್ಯವಾಯಿತು..

ವಿ.ಪಿ. ಸಿಂಗ್ ನಮ್ಮ ಕಾಲದ ದೊಡ್ಡ ದುರದೃಷ್ಟದ ರಾಜಕಾರಣಿ. ಅವರ ರಾಜಕೀಯ ಜೀವನವೇ ಹಲವಾರು ದುರದೃಷ್ಟಕರ ತಿರುವುಗಳಿಂದ ಕೂಡಿದುದಾಗಿತ್ತು. ಅವರ ರಾಜಕೀಯ ಜೀವನ ಕೊನೆಗೊಂಡದ್ದೂ ರಾಷ್ಟ್ರಜೀವನದ ಒಂದು ದುರದೃಷ್ಟಕರ ತಿರುವುನಲ್ಲಿಯೇ. ಈ ದುರದೃಷ್ಟದ ಆಟ ಅವರನ್ನು ಸಾವಿನಲ್ಲೂ ಬೆಂಬತ್ತಿ ಬಂದಿತ್ತು. ರಾಷ್ಟ್ರ ಅವರನ್ನು ನೆನೆಯಬೇಕಾದ ರೀತಿಯಲ್ಲಿ ನೆನೆಯಲಾಗಲಿಲ್ಲ. ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಅವರ ಸಾವಿನ ಸುದ್ದಿಯ ಪ್ರಾಮುಖ್ಯತೆಯನ್ನು ಹಿನ್ನೆಲೆಗೆ ಸರಿಸಿತ್ತು. ಇದು ಒಂದು ರೀತಿಯಲ್ಲಿ ತಾರ್ಕಿಕ ನ್ಯಾಯವೇ ಅಗಿತ್ತೇನೋ! ತಾವು ಪ್ರಧಾನ ಮಂತ್ರಿ ಆಗಿದ್ದಾಗ ಅವರು ತಮ್ಮ ಗೃಹ ಮಂತ್ರಿ ಮುಫ್ತಿ ಮಹಮ್ಮದ್ ಸಯ್ಯೀದ್ ಅವರ ಹಿರಿಯ ಮಗಳು ರುಬೈಯಾ ಸಯ್ಯೀದ್‌ಳನ್ನು ಅಪಹರಣದಿಂದ ಪಾರು ಮಾಡಲು, ಅಪಹರಣಕಾರರ ಬೇಡಿಕೆಯನ್ನು ಮನ್ನಿಸಿ ಭಾರತದಲ್ಲಿ ಬಂಧನದಲ್ಲಿದ್ದ ಪಾಕಿಸ್ತಾನಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು. ಅವರ ಈ ಅಸಹಾಯಕ ಅಥವಾ ದುರ್ಬಲ ಘಳಿಗೆಯ ನಿರ್ಧಾರವೇ ಭಾರತದಲ್ಲಿ ಮುಂದೆ ಇಸ್ಲಾಮೀ ಭಯೋತ್ಪಾದನೆ ವ್ಯಾಪಕವಾಗಿ ಬೆಳೆಯಲು ನಾಂದಿಯಾಯಿತೆಂದು ಆಪಾದಿಸಲಾಗುತ್ತಿದೆ. ಆದರೆ ಹೀಗೆ ಆಪಾದಿಸುವ ರಾಜಕೀಯ ಧೋರಣೆಯನ್ನು ಪ್ರತಿನಿಧಿಸುವ ಸರ್ಕಾರವೇ, ಮುಂದೆ ವಿಮಾನ ಅಪಹರಣದ ಸಂಬಂಧವಾಗಿ ಇನ್ನಷ್ಟು ಅಪಾಯಕಾರಿ ಇಸ್ಲಾಮಿ ಭಯೋತ್ಪಾದಕರನ್ನು ಕಾಬೂಲ್‌ವರೆಗೆ ಸುಕ್ಷೇಮವಾಗಿ ಬಿಟ್ಟು ಬರಲು ತನ್ನ ವಿದೇಶಾಂಗ ಮಂತ್ರಿಯನ್ನೇ ಕಳಿಸಬೇಕಾದ ಪರಿಸ್ಥಿತಿಗೆ ಸಿಕ್ಕಿತು ಎಂಬುದು ಬೇರೆ ಮಾತು.

ಬಹುಶಃ ವಿ.ಪಿ. ಸಿಂಗ್ ಅವರಿಗೆ ಆಗ-ಸುಮಾರು ಎರಡು ದಶಕಗಳ ಹಿಂದೆ-ಇಸ್ಲಾಮಿ ಭಯೋತ್ಪಾದನೆ ಈ ಪ್ರಮಾಣ ಮತ್ತು ತೀವ್ರತೆಯಲ್ಲಿ ಬೆಳೆಯಬಹುದೆಂಬ ಕಲ್ಪನೆ ಇದ್ದಿರಲಾರದು ಮತ್ತು ಅದನ್ನು ಸಮಚಿತ್ತದ ರಾಜತಾಂತ್ರಿಕ ನಡೆಗಳ ಮೂಲಕ ಕ್ರಮೇಣ ನಿಯಂತ್ರಿಸಬಹದು ಎಂಬ ನಂಬಿಕೆ ಇದ್ದಿರಬಹುದು. ಆ ನಂಬಿಕೆಯನ್ನು ನಿಜಗೊಳಿಸಬಲ್ಲ ರಾಜಕೀಯ ಪ್ರಬುದ್ಧತೆಯೂ ಅವರಲ್ಲಿತ್ತು. ಅವರ ಪ್ರಧಾನ ಮಂತ್ರಿತ್ವದ ಕಾಲಕ್ಕೆ ಸಿಖ್ ಉಗ್ರಗಾಮಿಗಳ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದ್ದ ಪಂಜಾಬನ್ನು ತಣಿಸಲು ಅವರು ಪ್ರಧಾನಿಯಾದ ಕೂಡಲೇ ಅಮೃತಸರದ ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ’ಆಪರೇಷನ್ ಬ್ಲೂಸ್ಟಾರ್’ ಸೇನಾ ಕಾರ್ಯಾಚರಣೆಯ ತಪ್ಪಿಗಾಗಿ ಮುಕ್ತ ಮನಸ್ಸಿನಿಂದ ಸಿಖ್ಖರ ಕ್ಷಮೆ ಕೋರುವ ಮೂಲಕ ಆ ರಾಜ್ಯದಲ್ಲಿನ ಸುಮಾರು ಒಂದು ದಶಕದ ಪ್ರತ್ಯೇಕತಾವಾದಿ ಉಗ್ರಗಾಮಿ ಚಟುವಟಿಕೆಗಳನ್ನು ತಹಬಂದಿಗೆ ತಂದರು. ಕೂಡಲೇ ಅಲ್ಲಿ ಚುನಾವಣೆಗನ್ನು ಘೋಷಿಸುವ ಧೈರ್ಯ ಮಾಡಿ ಪಂಜಾಬ್ ಮತ್ತೆ ರಾಷ್ಟ್ರಜೀವನದ ಮುಖ್ಯ ಪ್ರವಾಹಕ್ಕೆ ಸೇರುವಂತೆ ಮಾಡಿದರು. ಅಷ್ಟೇ ಅಲ್ಲ, ರಾಜೀವ್ ಗಾಂಧಿ ಅವರ ಅಪ್ರಬುದ್ಧ ರಾಜಕೀಯ ನಿರ್ಧಾರದಿಂದಾಗಿ(ಅದಕ್ಕಾಗಿ ಅವರು ಮಂದೆ ತಮ್ಮ ಪ್ರಾಣವನ್ನೇ ತೆರಬೇಕಾಯಿತೆಂಬುದು ಬೇರೆ ವಿಷಯ) ಶ್ರೀಲಂಕಾಗೆ ತೆರಳಿ ಅಲ್ಲಿನ ಯುದ್ಧರಂಗದಲ್ಲಿ ಅನಗತ್ಯವಾಗಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ಶಾಂತಿಪಾಲನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ದಿಟ್ಟ ರಾಜಕೀಯ ನಿರ್ಧಾರ ಕೈಗೊಂಡು, ವಿ.ಪಿ.ಸಿಂಗ್ ತಾವೊಬ್ಬ ಅನುಪಮ ರಾಜಕೀಯ ಮುತ್ಸದ್ದಿಯೆಂದು ಅಧಿಕಾರದ ಅನತಿ ಕಾಲದಲ್ಲೇ ಸಾಬೀತು ಮಾಡಿದ್ದರು.

ಆದರೆ ಇಂದು ವಿ.ಪಿ.ಸಿಂಗ್ ರಾಷ್ಟ್ರ ಕಂಡ ಅಪರೂಪದ ರಾಜಕೀಯ ಮುತ್ಸದ್ದಿ ಎಂಬುದನ್ನು ರಾಷ್ಟ್ರೀಯ ಅಭಿಪ್ರಾಯ ನಿರೂಪಕರೆನಿಸಿರುವ ನಮ್ಮ ರಾಷ್ಟ್ರೀಯ ಮಾಧ್ಯಮಗಳು ನಿರಾಕರಿಸುತ್ತಿವೆ. ಅವರ ಸಾವನ್ನು ಅವು ನಿರ್ಲಕ್ಷಿಸಿದ ರೀತಿಯೇ ಅವುಗಳ ಪೂರ್ವಾಗ್ರಹಗಳನ್ನು ಸೂಚಿಸುವಂತಿವೆ. ರಾಜೀವ್ ಗಾಂಧಿ ಪ್ರಧಾನಮಂತ್ರಿತ್ವದ ಕಾಲದ ಭ್ರಷ್ಟಾಚಾರದ ಪ್ರಕರಣಗಳ ವಿರುದ್ಧ ದಿಟ್ಟ ಹೋರಾಟ ಆರಂಭಿಸಿದ ವಿ.ಪಿ.ಸಿಂಗ್ ಅವರಿಗೆ ಬೇಷರತ್ ಹಾಗೂ ವ್ಯಾಪಕ ಬೆಂಬಲ ನೀಡಿ ಅವರನ್ನು ಮಹಾತ್ಮ ಗಾಂಧಿ ವೇಷದಲ್ಲೂ ಮಂಡಿಸಿ ರಾಷ್ಟ್ರ ನಾಯಕರನ್ನಾಗಿ ಈ ಮಾಧ್ಯಮಗಳು ಬಿಂಬಿಸಿದವು. ಆದರೆ ಅದೇ ಮಾಧ್ಯಮಗಳು ಅವರು ಪ್ರಧಾನ ಮಂತ್ರಿಯಾಗಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ, ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಮೀಸಲಾತಿ ಒದಗಿಸುವ ಮಂಡಲ್ ವರದಿಯನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡ ಕೂಡಲೇ ಅವರ ವಿರುದ್ಧ ತಿರುಗಿ ಬಿದ್ದು, ಅವರನ್ನು ದೊಡ್ಡ ಖಳನಾಯಕನಂತೆ ಬಿಂಬಿಸತೊಡಗಿದವು. ಅವರ ಇತರ ಸಾಧನೆಗಳೆಲ್ಲ ಮರೆತೇ ಹೋದವು...

ಹಾಗೆ ನೋಡಿದರೆ, ಮಂಡಲ್ ಆಯೋಗವೇನೂ ವಿ.ಪಿ.ಸಿಂಗ್ ರಚಿಸಿದ್ದಲ್ಲ. ೧೯೭೭ರ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರ ನೇಮಿಸಿದ್ದ ಆಯೋಗವದು. ವರದಿ ಸಿದ್ಧವಾಗಿ ವರ್ಷಗಳೇ ಕಳೆದಿದ್ದರೂ. ಯಾವ ಪ್ರಧಾನ ಮಂತ್ರಿಯೂ ಅದನ್ನು ಪರಿಶೀಲಿಸಿ ಜಾರಿ ಮಾಡುವ ಮನಸ್ಸು ಮಾಡಿರಲಿಲ್ಲ. ವಿ.ಪಿ.ಸಿಂಗ್ ಅದನ್ನು ತಮ್ಮ ರಾಜಕೀಯ ಮುತ್ಸದ್ದಿತನದಲ್ಲಿ ಮಾಡಿದರು. ಸರ್ಕಾರ ನಡೆಸುವ ವ್ಯವಸ್ಥೆಯಲ್ಲಿ ಕಣ್ಣಿಗೆ ರಾಚುವಂತೆ ಇದ್ದ ಸಾಮಾಜಿಕ ಅಸಮತೋಲನವನ್ನು ಸರಿ ಪಡಿಸಲು ಯತ್ನಿಸಿ, ವ್ಯವಸ್ಥೆಯ ಇನ್ನಷ್ಟು ಪ್ರಜಾಪ್ರಭುತ್ವೀಕರಣದ ಪ್ರಯತ್ನ ಮಾಡಿದರು. ಆದರೆ ಅದೇ ಅವರಿಗೆ ಮುಳುವಾಯಿತು. ಈ ಪ್ರಯತ್ನವನ್ನು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅವರ ಏಜೆಂಟರೂ ಆದ ರಾಷ್ಟ್ರೀಯ ಮಾಧ್ಯಮಗಳು-ವಿಶೇಷವಾಗಿ ಇಂಗ್ಲಿಷ್ ದಿನಪತ್ರಿಕೆಗಳು-ವಿಚ್ಛಿದ್ರಕಾರಿ ರಾಜಕಾರಣ ಎಂಬಂತೆ ಬಿಂಬಿಸಿ, ರಾಷ್ಟ್ರಾದ್ಯಂತ ಅಶಾಂತಿ ಹರಡಲು ಕಾರಣರಾದರು. ಆದರೆ ಇಂದು ಅದೇ ಮಂಡಲ್ ವರದಿಯನ್ನು, ಅದರ ಇತ್ತೀಚಿನ ವಿಸ್ತರಣೆಯನ್ನು(ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ) ಬೆಂಬಲಿಸಲು ಆಗ ಅಶಾಂತಿ ಹಬ್ಬಿಸಿದ ರಾಜಕೀಯ ಪಕ್ಷವೂ ಸೇರಿದಂತೆ ರಾಷ್ಟ್ರದ ಪ್ರತಿಯೊಂದು ರಾಜಕೀಯ ಪಕ್ಷವೂ ಮುಗಿ ಬೀಳುತ್ತಿರುವುದನ್ನು ನೋಡಿದರೆ, ವಿ.ಪಿ.ಸಿಂಗ್ ಅವರ ದೂರದೃಷ್ಟಿಯ ರಾಜಕೀಯ ಮುತ್ಸದ್ದಿತನದ ಅರಿವಾದೀತು.

ಆದರೆ ಇಂದು ವಿ.ಪಿ.ಸಿಂಗ್ ಅವರನ್ನು, ಅವರ ಅಭಿಮಾನಿಗಳೆನಿಸಿಕೊಂಡವರು ಕೇವಲ ಮಂಡಲ್ ವರದಿ ಜಾರಿಗೊಳಿಸಿದ ನಿರ್ಧಾರ ಕೈಗೊಂಡದ್ದಕ್ಕಾಗಿ ಮಾತ್ರ ಕ್ರಾಂತಿಕಾರಿ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರ ಎಂದು ಹಾಡಿ ಹೊಗಳುತ್ತಿದ್ದಾರೆ. ಇದು ವಿ.ಪಿ.ಸಿಂಗ್ ಅವರಿಗೆ ಅವರ ವಿರೋಧಿಗಳು ಮಾಡುತ್ತಿರುವ ಅನ್ಯಾಯಕ್ಕಿಂತ ದೊಡ್ಡ ಅನ್ಯಾಯ. ಇವರು ಸಾಮಾಜಿಕ ನ್ಯಾಯ ಎಂಬ ಆವೃತ ರಾಜಕೀಯ ಕಲ್ಪನೆಯನ್ನು, ಹಿಂದುಳಿವೆಯೆಂದು ಹೇಳಲಾದ ಜಾತಿಗಳಿಗೆ ಉದ್ಯೋಗ ಮೀಸಲಾತಿ ಮತ್ತು ಆ ಜಾತಿಗಳ ನಾಯಕರಿಗೆ ರಾಜಕೀಯ ಅಧಿಕಾರ ನೀಡಿಕೆ ಎಂಬ ಬಹು ಸೀಮಿತ ರಾಜಕೀಯ ಕಾರ್ಯಕ್ರಮದ ಮಟ್ಟಕ್ಕೆ ಕುಬ್ಜಗೊಳಿಸುತ್ತಿರುವ ರಾಜಕೀಯ ಸ್ವಾರ್ಥಿಗಳಾಗುತ್ತಿದ್ದಾರೆ. ಸಾಮಾಜಿಕ ನ್ಯಾಯ ಎಂದರೆ ಏನು ಮತ್ತು ಏಕೆ ಎಂಬುದನ್ನೇ ಮರೆತಿರುವ ಇವರು, ತಾವು ಯಾರ ಸ್ಥಾನಗಳನ್ನು ಆಕ್ರಮಿಸಿಕೊಳ್ಳಲು ಹೊರಟಿರುವರೋ ಅವರು ಸೃಷ್ಟಿಸಿರುವ ಭ್ರಷ್ಟ ಮತ್ತು ಅದಕ್ಷ ವ್ಯವಸ್ಥೆಯ ’ಉತ್ಪತ್ತಿ’ಯಲ್ಲಿ ಸಮಪಾಲನ್ನು ಆಗ್ರಹಿಸುತ್ತಿರುವರಷ್ಟೆ! ಸಾಮಾಜಿಕ ನ್ಯಾಯವೆಂದರೆ, ಸಮಾಜದ, ರಾಷ್ಟ್ರದ ಪುನಾರಚನೆ, ತಳ ಮಟ್ಟದ ಪ್ರಜಾಪ್ರಭುತ್ವೀಕರಣ, ಭ್ರಷ್ಟಾಚಾರ ನಿವಾರಣೆ ಮತ್ತು ಆ ಮೂಲಕ ಹೊಸ ಸಮಾಜವೊಂದರ ನಿರ್ಮಾಣ. ಇದರ ಒಂದು ಭಾಗವಾಗಿ ಮತ್ತು ಅವಿಭಾಜ್ಯ ಅಂಗವಾಗಿ ಮಾತ್ರ ಮೀಸಲಾತಿ ಮತ್ತು ರಾಜಕೀಯ ಅಧಿಕಾರದ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ವಿ.ಪಿ.ಸಿಂಗ್ ಸಾಮಾಜಿಕ ನ್ಯಾಯ ಕಲ್ಪನೆಯನ್ನು ತಮ್ಮದೇ ರಾಜಕಿಯ ಜೀವನದ ಉದಾಹರಣೆಯಾಗಿ ಮಂಡಿಸಿದ್ದು ಹೀಗೆ. ಅಲ್ಲದೆ, ಸ್ವತಃ ಅವರೇ, ನಮ್ಮ ದೇವರಾಜ ಅರಸರಂತೆ ಅಥವಾ ಸಾಮಾಜಿಕ ನ್ಯಾಯಕ್ಕೊಂದು ಆಳದ ತಾತ್ವಿಕತೆ ಒದಗಿಸಿದ ಲೋಹಿಯಾರಂತೆ ಹಿಂದುಳಿದ ವರ್ಗಗಳಿಗೇನೂ ಸೇರಿದವರಾಗಿರಲಿಲ್ಲ ಎಂಬುದನ್ನೂ ಇಲ್ಲಿ ನೆನಪಿನಲ್ಲಿಡಬೇಕು.

೧೯೫೦ರ ಹೊತ್ತಿಗೆ ಮಾಂಡಾ ಸಂಸ್ಥಾನದ ಉತ್ತರಾಧಿಕಾರಿಯಾದ ವಿ.ಪಿ.ಸಿಂಗ್ ತಮ್ಮ ಒಡೆತನದ ನೂರಾರು ಎಕರೆ ಜಮೀನನ್ನು ಭೂದಾನ ಚಳುವಳಿಯ ಅಂಗವಾಗಿ ಬಡಬಗ್ಗರಿಗೆ ಹಂಚಿದರು. ಅರವತ್ತರ ದಶಕದಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು ೧೯೮೦ರ ಹೊತ್ತಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ, ಆ ರಾಜ್ಯದ ಒಂದು ಭಾಗದಲ್ಲಿ ಅತಿಯಾಗಿದ್ದ ಢಕಾಯಿತರ ಹಾವಳಿಯನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ನಿವಾರಿಸುವುದಾಗಿ ಜನತೆಗೆ ಮಾತು ಕೊಟ್ಟರು. ಅದು ಸಾಧ್ಯವಾಗದೆ, ಜಿಲ್ಲಾಧಿಕಾರಿಯಾಗಿದ್ದ ಅವರ ಸೋದರನೇ ಈ ಹಾವಳಿಗೆ ಬಲಿಯಾದಾಗ ಜನತೆಗೆ ಕೊಟ್ಟ ಮಾತನ್ನು ನಡೆಸಲಾಗದ್ದಕ್ಕಾಗಿ ಅವರು ಅಧಿಕಾರ ತ್ಯಜಿಸಿದರು. ಕೆಲವು ವರ್ಷಗಳ ನಂತರ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿದ ಸಿಂಗ್ ವಾಣಿಜ್ಯ ಮಂತ್ರಿಯಾಗಿ, ರಕ್ಷಣಾ ಮಂತ್ರಿಯಾಗಿ ತಮ್ಮ ಪಕ್ಷದ ಬೆಂಬಲಿಗರೇ ಆದ ತೆರಿಗೆಗಳ್ಳ ಕೈಗಾರಿಕೋದ್ಯಮಿಗಳ ವಿರುದ್ಧ, ಸ್ವತಃ ತಮ್ಮ ಗೆಳೆಯ ಹಾಗೂ ಪ್ರಧಾನಿ ರಾಜೀವ್ ಗಾಂಧಿಯವರ ಪಾತ್ರವಿತ್ತೆಂದು ಹೇಳಲಾದ ಬೋಫರ್ಸ್ ಫಿರಂಗಿ ಖರೀದಿ ಹಗರಣ ಸೇರಿದಂತೆ ಶಸ್ತ್ರಾಸ್ತ್ರ ಖರೀದಿಯ ಹಲವು ಅವ್ಯವಹಾರಗಳ ವಿರುದ್ಧ ದೊಡ್ಡ ಕಾರ್ಯಾಚರಣೆಯನ್ನೇ ನಡೆಸಿ ಜನಮನ ಗೆದ್ದರು.

ಆನಂತರ, ಅನತಿ ಕಾಲದಲ್ಲೇ ಭ್ರಷ್ಟಾಚಾರ ವಿರೋಧಿ ಆಂದೋಲನದ ವಿಶ್ವಾಸಾರ್ಹ ನಾಯಕರಾಗಿ ಬೆಳೆದ ಅವರು ಭಾರತದ ಒಕ್ಕೂಟ ಸ್ವರೂಪಕ್ಕೆ ತಕ್ಕನಾದ ರಾಷ್ಟ್ರೀಯ ರಂಗ ಎಂಬ ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ ರಾಷ್ಟ್ರದ ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳ-ವಿಶೇಷವಾಗಿ ಡಿ.ಎಂ.ಕೆ., ತೆಲುಗು ದೇಶಂ, ಅಸ್ಸಾಂ ಗಣ ಪರಿಷತ್ ಮುಂತಾದ ಪ್ರಾದೇಶಿಕ ಪಕ್ಷಗಳ-ರಾಜಕೀಯ ಒಕ್ಕೂಟ ರಚಿಸಿದರು. ಅದರ ಪರಿಣಾಮವಾಗಿ ೧೯೮೯ರಲ್ಲಿ ಪ್ರಧಾನ ಮಂತ್ರಿಯಾಗಿ, ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಬಹು ವ್ಯಾಪಕವಾದ ರಾಷ್ಟ್ರೀಯ ಸಹಮತದ ರಾಜಕೀಯ ವಾತಾವರಣವೊಂದನ್ನು ನಿರ್ಮಿಸಿದರು. ಪ್ರಾದೇಶಿಕ ಒಕ್ಕೂಟದ ಈ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೋಮುವಾದಿಗಳು ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಶ್ರೀರಾಮ ಜನ್ಮಭೂಮಿ ಆಂದೋಲನ ಆರಂಭಿಸಿ ಸಿಂಗರನ್ನು ತಹಬಂದಿಗೆ ತರಲು ಯತ್ನಿಸಿದರು. ಅದು ಸಾಧ್ಯವಾಗದೆ, ಕೊನೆಗೆ ಮಂಡಲ್ ವರದಿಯ ಶಿಫಾರ್ಸುಗಳ ವಿಷಯದಲ್ಲಿ ರಾಷ್ಟ್ರಾದ್ಯಂತ ದೊಡ್ಡ ಗೊಂದಲವೆಬ್ಬಿಸಿದಾಗ ಅವರು ಕೋಮುವಾದಿಗಳೊಂದಿಗೆ ಮತ್ತು ಯಥಾಸ್ಥಿತಿವಾದಿಗಳೊಂದಿಗೆ ರಾಜಿಗೆ ಒಪ್ಪದೆ, ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಎದುರಿಸಿ ರಾಜೀನಾಮೆ ನೀಡಿದರು. ಆ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಕೇಳಿದ ’ನೀವು ಎಂತಹ ರಾಷ್ಟ್ರ ಕಟ್ಟ ಬಯಸುತ್ತೀರಿ?’ ಎಂಬ ಪ್ರಶ್ನೆ ಇಂದೂ ನಮ್ಮ ರಾಜಕೀಯ ವಲಯಗಳಲ್ಲಿ, ಇನ್ನಷ್ಟು ಪ್ರಸ್ತುತತೆಯೊಂದಿಗೆ ಅನುರಣಿಸುತ್ತಿದೆ ಎಂದರೆ, ರಾಷ್ಟ್ರ ರಾಜಕಾರಣಕ್ಕೆ ವಿ.ಪಿ.ಸಿಂಗ್ ಅವರ ಕೊಡುಗೆಯ ಮಹತ್ವವೇನು ಎಂಬುದು ಅರ್ಥವಾದೀತು. ಕೇವಲ ಎರಡು ವರ್ಷ ಕೇಂದ್ರ ಮಂತ್ರಿ ಮತ್ತು ಎರಡು ವರ್ಷಗಳಿಗೂ ಕಡಿಮೆ ಅವಧಿಗೆ ಪ್ರಧಾನಮಂತ್ರಿಯಾಗಿದ್ದ ವಿ.ಪಿ.ಸಿಂಗ್, ರಾಷ್ಟ್ರ ರಾಜಕಾರಣವನ್ನು ನಿಯಂತ್ರಿಸುವ ಶಕ್ತಿಗಳ ಸಾಮಾಜಿಕ ನೆಲೆಗಳನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿದ್ದರು! ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿನ ದೊಡ್ಡ ಕ್ರಾಂತಿಯಿದು.

ಮಂಡಲ್ ವರದಿಯನ್ನು ಸಾಕಷ್ಟು ಸಿದ್ಧತೆಯಿಲ್ಲದೆ ತಮ್ಮ ರಾಜಕೀಯ ಉಳಿವಿಗಾಗಷ್ಟೇ ಮಂಡಿಸಿದರು ಎಂದು ಟೀಕಿಸುವವರಿಗೆ ಗೊತ್ತಿಲ್ಲದ ವಿಷಯವೆಂದರೆ, ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗಲೇ ಮಂಡಲ್ ವರದಿಯನ್ನು ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದರೆಂಬುದು. ಇಂತಹ ರಾಜಕಾರಣದ ಮುಂದುವರೆದ ಭಾಗವಾಗಿಯೇ ಅವರು ಮುಂದೆ ಅಪ್ಪಟ ಹಳ್ಳಿಗನೆಂದು ತಾವು ನಂಬಿದ್ದ ದೇವೇಗೌಡರನ್ನು ಪ್ರಧಾನಿ ಮಾಡಲು ಶ್ರಮಿಸಿದರು. ಆನಂತರ ಬೇಸತ್ತು ಸಂಸದೀಯ ರಾಜಕಾರಣ ತೊರೆದ ಮೇಲೂ, ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಜನವಿರೋಧಿ ಆರ್ಥಿಕ ನೀತಿ ಮತ್ತು ಕಾರ್ಯಕ್ರಮಗಳ ವಿರುದ್ಧ, ಈ ಮಧ್ಯೆ ತಮ್ಮ ದೇಹಕ್ಕೆ ತಗುಲಿದ್ದ ಕ್ಯಾನ್ಸರ್ ವಿರುದ್ಧ ಹೋರಾಡಿದಷ್ಟೇ ತೀವ್ರವಾಗಿ ಹೋರಾಡಿದರು. ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಹಾಸಿಗೆ ಹಿಡಿಯುವವರೆಗೆ, ಬಡ ಜನರನ್ನು ಅವರು ವಾಸಿಸುತ್ತಿದ್ದ ಕೊಳಚೆ ಪ್ರದೇಶಗಳಿಂದ ಮತ್ತು ರೈತರನ್ನು ಅವರ ಹೊಲಗದ್ದೆಗಳಿಂದ ಒಕ್ಕಲೆಬ್ಬಿಸುವ ಯೋಜನೆಗಳ ವಿರುದ್ಧ ಸಹಮನಸ್ಕರೊಂದಿಗೆ ಸೇರಿ ಪ್ರತಿಭಟಿಸಿದರು, ಬಂಧನಕ್ಕೂ ಒಳಗಾದರು. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದಿದರು, ಕವಿತೆ ಬರೆದರು, ಚಿತ್ರ ಬಿಡಿಸಿದರು, ಪ್ರಾಣಿಗಳನ್ನು ಸಲುಹಿದರು. ಅವರು ಕೇವಲ ರಾಜಕಾರಣಿಯಂತೆ ಅಲ್ಲ, ಓರ್ವ ಸಂಪೂರ್ಣ ವ್ಯಕ್ತಿಯಾಗಿ ಬಾಳಿದರು.

ಇಷ್ಟು ವ್ಯಾಪಕವಾದದ್ದು, ಆವೃತವಾದದ್ದು, ತತ್ವಬದ್ಧವಾದದ್ದು, ಪ್ರಾಮಾಣಿಕವಾದದ್ದು, ನಿಸ್ವಾರ್ಥಮಯವಾದದ್ದು ವಿ.ಪಿ.ಸಿಂಗ್ ಅವರ ಸಾಮಾಜಿಕ ನ್ಯಾಯದ ರಾಜಕಾರಣ. ಇವರ ಆದರ್ಶದ ಹೆಸರು ಹೇಳಿಕೊಂಡು ಸಾಮಾಜಿಕ ನ್ಯಾಯದ ಕೂಗು ಹಾಕುವವರು ಇಂತಹ ರಾಜಕಾರಣದ ಶೇಕಡಾ ಒಂದರಷ್ಟನ್ನಾದರೂ ಅನುಸರಿಸಿದರೆ, ಅವರ ರಾಜಕಾರಣಕ್ಕೆ ಮತ್ತು ಸಾಮಾಜಿಕ ನ್ಯಾಯ ಕಲ್ಪನೆಗೆ ಒಂದು ಘನತೆ ಒದಗೀತು. ಇಂದು ಸಾಮಾಜಿಕ ನ್ಯಾಯದ ಮಾತುಗಳನ್ನಾಡಿಕೊಂಡು ರಾಜಕಾರಣ ಮಾಡುತ್ತಿರುವ ಬಹುಪಾಲು ಎಲ್ಲರೂ-ಉತ್ತರದ ಇಬ್ಬರು ಯಾದವರು, ದಕ್ಷಿಣದ ಕರುಣಾನಿಧಿ, ನಮ್ಮ ದೇವೇಗೌಡರು, ಬಂಗಾರಪ್ಪ ಇತ್ಯಾದಿ-ಅದನ್ನು ನಿರ್ಲಜ್ಜವಾಗಿ ಕೌಟುಂಬಿಕ ನ್ಯಾಯ ರಾಜಕಾರಣದ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಇನ್ನು ’ಅಹಿಂದ’ದ ಸ್ವಯಂಘೋಷಿತ ನಾಯಕ ಸಿದ್ಧರಾಮಯ್ಯನವರಿಗೆ ಸಾಮಾಜಿಕ ನ್ಯಾಯವೆಂದರೆ ದೇವೇಗೌಡರ ರಾಜಕೀಯ ನಾಶ ಮತ್ತು ತಮಗೆ ಮುಖ್ಯಮಂತ್ರಿ ಪಟ್ಟ ಎಂದೇ ಭಾವಿಸಿದಂತಿದೆ! ಇವೆರಡರ ಹೊರತಾಗಿ ಸದ್ಯಕ್ಕೆ ಇನ್ನಾವ ಉದ್ದೇಶಗಳೂ ಇರದಂತೆ ತೋರುವ ಇವರ ರಾಜಕಾರಣ, ಸಹಜವಾಗಿಯೇ ಯಾವುದೇ ಜಾಗತಿಕ, ರಾಷ್ಟ್ರೀಯ, ಪ್ರಾದೇಶಿಕ ರಾಜಕೀಯ ಅಥವಾ ಸಾಮಾಜಿಕ ಅಥವಾ ಆರ್ಥಿಕ ವಿದ್ಯಮಾನಗಳಿಗೆ ಸ್ಪಂದಿಸಲಾರದು. ಹೋರಾಟದ ಮಾತಂತೂ ದೂರವೇ ಉಳಿಯಿತು. ಅಷ್ಟೇ ಅಲ್ಲ, ತಾನೊಂದು ರಾಜಕೀಯ ಪಕ್ಷದ ಋಣದಲ್ಲಿದ್ದೇನೆ ಎಂಬ ಪ್ರಾಥಮಿಕ ವಿನಯ-ಸೌಜನ್ಯಗಳನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳಲಾರದು. ಹೀಗಾಗಿ ರಾಜಕಾರಣ ಬೇಸರವಾದಾಗ ಬದುಕು ನಡೆಸಲು ಬೇರಾವ ಹವ್ಯಾಸಗಳನ್ನೂ ಇವರು ಬೆಳೆಸಿಕೊಳ್ಳಲಾರರು. ಅಧಿಕಾರದ ಹಪಾಹಪಿಯಲ್ಲಿ ಇಂತಹ ರಾಜಕೀಯ ಜಡತ್ವಕ್ಕೆ ಈಡಾಗಬಲ್ಲ ವ್ಯಕ್ತಿ ಮುಖ್ಯಮಂತ್ರಿಯಾಗಿ ಸಾಧಿಸುವುದು ಅಷ್ಟರಲ್ಲೇ ಇದೆಯೆಂದು ಜನರು ಭಾವಿಸಲಾರಂಭಿಸಿದರೆ, ಅದು ಜನರ ತಪ್ಪಾಗಲಾರದು. ಇದನ್ನು ಸಿದ್ಧರಾಮಯ್ಯ ಆದಷ್ಟು ಬೇಗ ಅರಿತರೆ, ಅವರಿಗೆ ಮತ್ತು ರಾಜ್ಯ ರಾಜಕಾರಣಕ್ಕೆ ಒಳ್ಳೆಯಾದೀತು ಹಾಗೂ ವಿ.ಪಿ.ಸಿಂಗ್ ಅವರು ಮಾಡಿದ ಕ್ರಾಂತಿಗೂ ಒಂದು ಅರ್ಥ ಬಂದೀತು.

ಇಷ್ಟೆಲ್ಲ ಯೋಚಿಸಿದ ನಾನು ಕೊನೆಗೆ, ವಿ.ಪಿ.ಸಿಂಗ್ ಅವರ ಭಾವಚಿತ್ರವನ್ನು ನನ್ನ ಗ್ರಂಥ ಭಂಡಾರದ ಕೋಣೆಯಲ್ಲಿರಿಸಲು ನಿರ್ಧರಿಸಿದೆ. ಅದಿನ್ನೂ ಮನೆಯ ಹಜಾರಕ್ಕೆ ಬರಲು ಕಾಲವಿದೆ ಎಂದೆನ್ನಿಸಿದ್ದರಿಂದ!