ಸಾಮ್ಯತೆ
ಕುಟ್ಟಣಿ 'ಕೊಟ್ಟ ಕೊಟ್ಟ ಕೊಟ್ಟವನು ಕೆಟ್ಟ' ಅನ್ನುತ್ತಿರಲು
ಬಾಯಲ್ಲಿ ನಿನ್ನೆಯಿಂದ ಅಡಕೆ ನವಲುತ್ತಿರಲು
ಗಾಳಿಗೆ ಹೊಯ್ದಾಡುವಂತಿರುವ ಹೂವಿನಂತಹ ತಲೆ
ಬೆಳ್ಳಿಯಂತೆ ಫಳಫಳಿಸುವ ತಲೆಗೂದಲು
ಇಲ್ಲಿ ನೋಡಿ ಇನ್ನೊಂದು ಅಂತಹದೇ ನಡುಗುವ ತಲೆ
ಕಡಗದಿ ನೆಲ ಕುಟ್ಟುವ ಗಡ ಗಡ ಸದ್ದು
ಬಾಯಲಿ ನವಲುತಿರುವ ಪೇಪರಿನ ಚೂರು
ತಲೆ ತುಂಬಾ ಮಿರಮಿರ ಹೊಳೆಯುತಿರುವ ಕಪ್ಪನೆ ಕೇಶರಾಶಿ
ಕೈ ಬಾಯಿ ಸನ್ನೆಯಲೇ ಇಬ್ಬರದೂ ಸಂವಾದ
ಇಬ್ಬರಿಗೂ ಅಕ್ಕ ಪಕ್ಕದವರ ಅರಿವೇ ಇಲ್ಲ
ಅರೆಮನಸ್ಕರಾಗಿ ಒಂದೆಡೆ ನಿಲ್ಲದ ಮನ
ಇವರ ಮನ ಹಿಡಿದಿಡುವುದೊಂದೇ ಆದ ಗಾನ
ಅರುವತ್ತರ ಅರುಳು ಮರುಳಿನ ಅಜ್ಜಿಯದು ಮಗುವಿನ ಮನಸು
ಇಬ್ಬರಿಗೂ ಈಗ ಹೇಳಿದ್ದು ಮರುಘಳಿಗೆಯಲಿ ಮರೆವು
ಒಬ್ಬರದು ಸುಕ್ಕುಗಟ್ಟಿಹ ಚರ್ಮ, ಉಡುಗುತ್ತಿರುವ ಚೈತನ್ಯ
ಇನ್ನೊಂದರದು ಕೋಮಲ ತೊಗಲು, ಪುಟಿದೇಳುತಿಹದು ಅನನ್ಯ
ಇಬ್ಬರಲೂ ಕಾಣುವಿರಿ ಬೊಚ್ಚು ಬಾಯಿ
ಇಬ್ಬರೂ ತೂಗುವರೇ ತಕ್ಕಡಿಯಲಿ ಒಂದೇ ಸಮ
ಬದುಕಿನ ಇಳಿಜಾರಿನಲಿ ಕಾಣುತಿಹಳು ಕಂದನಲಿ ಶ್ರೀಹರಿಯ ಸ್ವರೂಪ
ಜೀವಪಥದೇರಿನಲಿಹ ಕೂಸಿಗೆ ಹಾಲು ಸಿಗಲಿಲ್ಲವೆಂಬ ಕೋಪ