ಸಾರ್ಥಕವಾಗದ ಸಾಹಿತ್ಯ ಸಮ್ಮೇಳನಗಳು

ಸಾರ್ಥಕವಾಗದ ಸಾಹಿತ್ಯ ಸಮ್ಮೇಳನಗಳು

ಬರಹ

ಇನ್ನೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಚಿತ್ರದುರ್ಗದಲ್ಲಿ ನಡೆದ ಈ ೭೫ನೇ ಸಮ್ಮೇಳನ ಬಹು ಯಶಸ್ವಿಯೆಂದು ಅದರ ಸಂಘಟಕರೂ, ಅವ್ಯವಸ್ಥೆಯ ಆಗರವಾಗಿತ್ತೆಂದು ಮಾಧ್ಯಮದವರೂ ಹೇಳತೊಡಗಿದ್ದಾರೆ. ಸಂಘಟನೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ಬಿಸ್ವಾಸ್ ಸ್ಥಳೀಯ ಪುಢಾರಿಗಳನ್ನು(ಇವರಲ್ಲಿ ಸ್ಥಳೀಯ ಪತ್ರಕರ್ತರೂ, ಅವರ ಗೆಣೆಕಾರರೂ ಸೇರಿರುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!) ಸಂಘಟನೆಯ ಕಾರ್ಯದಲ್ಲಿ (ಅಂದರೆ ಹಣಕಾಸಿನ ವ್ಯವಹಾರಗಳಲ್ಲಿ) ತೊಡಗಿಸಿಕೊಳ್ಳದೇ ಇದ್ದುದೇ, ಮಾಧ್ಯಮಗಳಲ್ಲಿ ಪ್ರತಿಕೂಲ ವರದಿಗಳಿಗೆ ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ. ಗೋಷ್ಠಿಯೊಂದು ಜನವೇ ಇಲ್ಲದೆ ಭಣಗುಟ್ಟಿತೆಂದು ಸೂಚಿಸುತ್ತಾ ಕನ್ನಡದ ಪ್ರಮುಖ ಪತ್ರಿಕೆಯೊಂದು ತನ್ನ ಮುಖ ಪುಟದಲ್ಲೇ ಖಾಲಿ ಕುರ್ಚಿಗಳ ಚಿತ್ರವೊಂದನ್ನು ಪ್ರಕಟಿಸಿತ್ತು. ಆದರೆ ಈ ಗೋಷ್ಠಿಗೆ ಹೋಗಿದ್ದ ನನ್ನ ಸ್ನೇಹಿತರೊಬ್ಬರ ಪ್ರಕಾರ ಈ ಗೋಷ್ಠಿ ಸಾಕಷ್ಟು ತುಂಬಿದ ಸಭಿಕರ ನಡುವೆಯೇ ಯಶಸ್ವಿಯಾಗಿ ನಡೆದಿದ್ದು, ಪತ್ರಿಕೆಯವರು ಹಿಂಭಾಗದಲ್ಲಿ ಖಾಲಿ ಇದ್ದ ಕುರ್ಚಿಗಳ ಚಿತ್ರ ತೆಗೆದು ಪ್ರಕಟಿಸಿದ್ದಾರಷ್ಟೆ! ನಾನೂ ಒಂದು ದಿನದ ಮಟ್ಟಿಗೆ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲೇನೂ ಅವ್ಯವಸ್ಥೆ ನನಗೆ ಕಾಣಲಿಲ್ಲ. ಆ ಹೊತ್ತಿಗೆ ಬಹುಶಃ ಊಟ - ವಸತಿಗಳಿಗೆ ಸಂಬಂಧಿಸಿದಂತೆ ಉದ್ಭವವಾಗಿದ್ದ ಅವ್ಯವಸ್ಥೆಯನ್ನು ಸರಿಪಡಿಸಲಾಗಿತ್ತೆಂದು ಕಾಣುತ್ತದೆ. ಅಂದು ನಡೆದ ಒಂದು ಅತಿ ಸಾಧಾರಣ ಕವಿಗೋಷ್ಠಿಯೊಂದನ್ನೂ, ಆನಂತರ ನಡೆದ ಸಮ್ಮೇಳನಾಧ್ಯಕ್ಷರೊಡನೆಯ ಸಂವಾದವನ್ನು ಬೃಹತ್ ಚಪ್ಪರದಡಿ ಸೇರಿದ್ದ ಬೃಹತ್ ಜನಸಮೂಹ ಶಾಂತ ರೀತಿಯಲ್ಲೇ ಕೇಳಿತು. ವಿಶೇಷವಾಗಿ ಎಲ್. ಬಸವರಾಜು ಅವರ ಸಹಜ ಹಾಗೂ ದಿಟ್ಟ ಮಾತುಗಾರಿಕೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಸಂತೋಷಿಸಿತು ಕೂಡಾ.

ಅದೇನೇ ಇರಲಿ, ಈಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಹೆಚ್ಚೆಚ್ಚು ಅದ್ದೂರಿಯಾಗುತ್ತಿವೆ. ಅವು ಕೋಟ್ಯಾಂತರ ರೂಪಾಯಿಗಳ ವ್ಯವಹಾರವಾಗಿ ಪರಿವರ್ತಿತವಾಗುತ್ತಿವೆ. ಹೀಗಾಗಿ ಬೃಹತ್ ಚಪ್ಪರ, ಬೃಹತ್ ವೇದಿಕೆ, ಅವುಗಳ ಬೃಹತ್ ಪ್ರಮಾಣದ ಅಲಂಕಾರ, ಲಕ್ಷಾಂತರ ಜನಕ್ಕೆ ಊಟ-ವಸತಿ, ಪುಸ್ತಕ ಮುದ್ರಣ, ಹಾರ ತುರಾಯಿ, ಸ್ಮರಣಿಕೆ ಇತ್ಯಾದಿಗಳ ಈ ಬೃಹತ್ ವ್ಯವಹಾರದಲ್ಲಿ ದಲ್ಲಾಳಿಗಳಾಗಲು ಸ್ಥಳೀಯ ಪುಢಾರಿಗಳು ಹಾತೊರೆಯುತ್ತಿರುತ್ತಾರೆ. ಅದರೆ ಈ ಬಾರಿಯ ಸಮ್ಮೇಳನದಲ್ಲಿ ಇವರೆಲ್ಲರನ್ನೂ ದೂರವಿಟ್ಟು, ಎಲ್ಲವನ್ನೂ ತಮ್ಮ ಕಛೇರಿಯ ಸುಪರ್ದಿಯಲ್ಲೇ ಕಟ್ಟುನಿಟ್ಟಾಗಿ ನಡೆಸಿದರೆಂದು ಹೇಳಲಾದ ಜಿಲ್ಲಾಧಿಕಾರಿ ಬಿಸ್ವಾಸ್ ಅವರೇನೋ, ಪ್ರತಿ ಗೋಷ್ಠಿಯನ್ನೂ ಕನಿಷ್ಠ ೨೦-೨೫ ಸಾವಿರ ಜನ ಕೂತು ಕೇಳಿದ್ದಾರೆ ಎಂದು ಹೇಳುತ್ತಾ ಸಮ್ಮೇಳನ ಯಶಸ್ವಿಯಾಗಿದೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಸಂತೆಯಂತಹ ಇಂತಹ ಸಮ್ಮೇಳನಗಳಲ್ಲಿ ಜನ ಸಾವಿರಾರು ಸಂಖ್ಯೆಯಲ್ಲಿ ಕೂತಿದ್ದರೆಂಬುದೇ ಸಮ್ಮೇಳನದ ಯಶಸ್ಸಿಗೆ ಮಾನದಂಡವಾಗಲಾರದು.

ಸಾಹಿತ್ಯ ಸಮ್ಮೇಳನವೆಂದರೆ ಇತ್ತೀಚೆಗೆ ಸಾಹಿತ್ಯದೊಂದಿಗೆ ಅಥವಾ ಸಾಹಿತ್ಯಕ್ಕಿಂತ ಹೆಚ್ಚಿಗೆ ಇತರ ಆಕರ್ಷಣೆಗಳು ಹೆಚ್ಚಾಗಿವೆ. ವಿಶೇಷವಾಗಿ, ಅತಿ ರಿಯಾಯ್ತಿ ದರದಲ್ಲಿ - ಪತ್ರಿಕೆಗಳು ಎಲ್ಲಕ್ಕಿಂತ ಮುಂಚೆ ಪ್ರಚಾರ ಮಾಡುವ - ಭರ್ಜರಿ ಊಟ ತಿಂಡಿಗಳ ಮತ್ತು ವಸತಿ ವ್ಯವಸ್ಥೆ, ಪರಸ್ಥಳ ಸಂದರ್ಶನದ ಸಂತೋಷ, ವೈವಿಧ್ಯಮಯ ಸರಕುಗಳ ಮಾರಾಟದ ಜನ ಜಂಗುಳಿಯ ಜಾತ್ರೆಯ ವಾತಾವರಣ, ಹಲವು ಸ್ನೇಹಿತರನ್ನು ಒಂದೆಡೆಯಲ್ಲೇ ಭೇಟಿ ಮಾಡುವ ಸದವಕಾಶ, ಸರ್ಕಾರಿ ನೌಕರರಿಗಂತೂ ವಿಶೇಷ ರಜೆಯೊಂದಿಗೆ ತಮ್ಮ ಹೆಂಡಿರು - ಮಕ್ಕಳೊಡನೆ ವಿಹಾರ ಮಾಡುವ ಸೌಲಭ್ಯ ಇತ್ಯಾದಿ. ಹೀಗಾಗಿ ಸಾವಿರಾರು, ಲಕ್ಷಾಂತರ ಜನ ಬರುತ್ತಾರೆ. ಇವರಲ್ಲಿ ಒಂದಲ್ಲ ಒಂದು ಭಾಗ, ಒಂದಲ್ಲ ಒಂದು ಸಮಯದಲ್ಲಿ ದಣಿವಾರಿಸಿಕೊಳ್ಳಲೆಂಬಂತೆ ಚಪ್ಪರದ ನೆರಳಿನಲ್ಲಿ ತಮ್ಮ ಸ್ನೇಹಿತರು ಅಥವಾ ಬಂಧು ಬಾಂಧವರೊಡಗೂಡಿ ಸಾವಿರಾರು ಸಂಖ್ಯೆಯಲ್ಲಿ ಕೂತು ಭಾಗವಹಿಸುವುದು ವಿಶೇಷ ಸಂಗತಿಯೇನಲ್ಲ. ಆದರೆ ಇದರ ಮೂಲಕ ಸಾರತಃ ಏನನ್ನು ಸಾಧಿಸಲಾಯಿತು ಎಂದು ಯೋಚಿಸಿದಾಗ ನಿರಾಸೆಯೇ ಆಗುತ್ತದೆ.

ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಅಖಿಲ ಭಾರತ (ಇದು ಅಖಿಲ ಭಾರತ ಏಕೋ, ಹೇಗೋ ತಿಳಿಯದು!) ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ಗುಣಮಟ್ಟ ತೀರಾ ಕಳಪೆಯಾಗತೊಡಗಿದೆ. ಈ ಕಳಪೆತನಕ್ಕೆ ಯಾರ ನಿಯಂತ್ರಣಕ್ಕೂ ಸಿಗದಷ್ಟು ಸಂಖ್ಯೆಯ ಗೋಷ್ಠಿಗಳು, ಅವುಗಳಿಗೆ ನಿಗದಿ ಮಾಡಲಾಗುವ ಅತಿ ಸ್ಥೂಲವೆನಿಸುವ ವಿಷಯಗಳು ಹಾಗೂ ಅದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವವರ ಆಯ್ಕೆಯಲ್ಲಿನ ಅಗ್ಗದ ರಾಜಕಾರಣ, ಕಾರಣವಾಗಿದೆ. ಕವಿಗೋಷ್ಠಿಗಳಂತೂ ಕುಕವಿಗಳ ಸಂತೆಯಂತಿರುತ್ತವೆ! ಅವುಗಳಲ್ಲಿ ಅಕಸ್ಮಾತ್ ಸೇರಿರುವ ಇಬ್ಬರೋ ಮುವ್ವರೋ ಒಳ್ಳೆಯ ಕವಿಗಳ ಪಾಡಂತೂ ನಾಯಿಪಾಡೇ ಆಗಿರುತ್ತದೆ! ಇದರಿಂದಾಗಿ ಅಲ್ಲಿ ಸೇರಿರುವ ಜನಸ್ತೋಮಕ್ಕೆ ಸಾಹಿತ್ಯದ ಬಗ್ಗೆ ಒಂದು ಸುಲಭ ಮತ್ತು ಕೆಟ್ಟ ಕಲ್ಪನೆಯನ್ನು ಕೊಟ್ಟಂತಾಗುತ್ತದೆ. ಇದು ಇಂದಿನ ಸಾಹಿತ್ಯ ಸಮ್ಮೇಳನಗಳ ದೊಡ್ಡ ಅಪಾಯವೂ ಆಗಿದೆ. ಜೊತೆಗೆ, ಬಹುಪಾಲು ಗೋಷ್ಠಿಗಳು ಸಾಹಿತ್ಯೇತರ ವಿಷಯಗಳಿಗೇ ಸಂಬಂಧಿಸಿದಂತಿರುವುದು ಇತ್ತೀಚಿನ ಸಮ್ಮೇಳನಗಳ ವಿಶೇಷತೆಯಾಗಿದೆ. ನಿಜ, ಸಾಹಿತ್ಯ ಪರಿಷತ್ತು ಈಗ ಕೇವಲ ಸಾಹಿತ್ಯ ಸಂಘಟನೆಯಾಗಿ ಉಳಿದಿಲ್ಲ. ಅದು ನುಡಿಯ ಜೊತೆಗೇ ನಾಡಿನ ಹಿತವನ್ನೂ ಕಾಯ್ದುಕೊಂಡು ಹೋಗುವ ಜವಾಬ್ದಾರಿಯನ್ನೂ ಹೊತ್ತಿದೆ. ವಾಸ್ತವವಾಗಿ ಅದು ಆರಂಭವಾದದ್ದೇ ನುಡಿ ಹಿತ ಕಾಯುವ ಮೂಲಕ ನಾಡ ಹಿತ ಕಾಯುವ ಉದ್ದೇಶದಿಂದ. ಹಾಗಾಗಿ ನಾಡಿನ ಹಿತ ಕಾಯುವ ಈ ಜವಾಬ್ದಾರಿಯನ್ನು ನುಡಿಯ ಹಿತ ಕಾಯುವ ಕೆಲಸದ ಒಂದು ಭಾಗವಾಗಿಯೇ ನಿರ್ವಹಿಸುವ ಎಚ್ಚರವನ್ನೂ ಪರಿಷತ್ತು ಕಾಯ್ದುಕೊಂಡು ಹೋಗಬೇಕಿದೆ. ಇಲ್ಲವಾದರೆ ಸಾಹಿತ್ಯ ಪರಿಷತ್ತಿನ ವಿಶಿಷ್ಟತೆಯೇ ನಾಶವಾಗಿ, ಅದೊಂದು ಈಗಾಗಲೇ ರಾಜ್ಯದಲ್ಲಿ ತಲೆಯೆತ್ತಿರುವ ಅನೇಕ ಸಾರ್ವತ್ರಿಕ ಪುಢಾರಿ ಸಂಘಟನೆಗಳಲ್ಲೊಂದು ಮಾತ್ರವಾಗಿ, ತನ್ನೆಲ್ಲ ಘನತೆಯನ್ನೂ ಕಳೆದುಕೊಳ್ಳುತ್ತದೆ.

ಕೆಲವು ದಿನಗಳ ಹಿಂದೆ ನನ್ನ ಗೆಳೆಯರೊಬ್ಬರು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಶಿಕ್ಷಣ ಮಾಧ್ಯಮ ವಿಷಯಗಳಿಗೆ ಸಂಬಂಧಿಸಿಯೋ ಏನೋ; ಲೋಕಾಭಿರಾಮವಾಗಿ ಮಾತನಾಡುತ್ತಾ, ಕರ್ನಾಟಕದಲ್ಲಿ ಎಲ್ಲ ವಿಷಯಗಳಲ್ಲೂ ಸಾಹಿತಿಗಳೇ ಪರಿಣತರಂತೆ ಮಾತಾಡುವ ಪ್ರವೃತ್ತಿಯ ಬಗ್ಗೆ ವ್ಯಂಗ್ಯವಾಡಿದರು. ನಿಜ, ಎಲ್ಲ ಸಾರ್ವತ್ರಿಕ ವಿಷಯಗಳಿಗೂ ಸಾಹಿತಿಗಳೇ ವಕ್ತಾರರಾಗುವುದು ಸರಿಯಲ್ಲ. ಆದರೆ ಇಂದು ಕರ್ನಾಟಕದಲ್ಲಿ ಸಾಹಿತಿಗಳನ್ನು ಬಿಟ್ಟು ಇತರೆ ವೃತ್ತಿವಂತರಾಗಲೀ, ಸಾರ್ವಜನಿಕರಾಗಲೀ ನಾಡು-ನುಡಿಗಳ ಬಗ್ಗೆ ವಿಶೇಷವಾಗಿ ಮತ್ತು ಗಂಭೀರವಾಗಿ ಚಿಂತಿಸಿ ಮಾತಾಡುವವರು ಎಷ್ಟು ಜನರಿದ್ದಾರೆ? ಇವರೆಲ್ಲ ತಮ್ಮ ವೃತ್ತಿ ವ್ಯವಹಾರಗಳಲ್ಲೇ ಮುಳುಗಿ, ಅದಷ್ಟೇ ಬದುಕು ಎಂಬ ಭ್ರಮೆ ಸೃಷ್ಟಿಸಿದ್ದಾರಲ್ಲಾ? ಈ ಭ್ರಮೆಯನ್ನು ತೊಡೆದು ಹಾಕಲಾದರೂ ಸಾಹಿತಿಗಳು ಕರ್ನಾಟಕದ ಸಾರ್ವಜನಿಕ ಜೀವನದ ಬೇಕು ಬೇಡಗಳ ಬಗ್ಗೆ ಮಾತನಾಡುವುದು ಅನಿವಾರ್ಯವಾಗಿದೆ ಅಲ್ಲವೆ?

ಹಾಗೆ ನೋಡಿದರೆ ಇದು ಕರ್ನಾಟಕ ಏಕೀಕರಣದ ದಿನಗಳಿಂದ ನಡೆದು ಬಂದ ಪರಂಪರೆಯಾಗಿದೆ. ಏಕೆಂದರೆ, ನುಡಿಯ ಹಿತದ ಜೊತೆಗೇ ನಾಡಿನ ಜನರ ಬದುಕಿನ ಹಿತವೂ ತಳಕು ಹಾಕಿಕೊಂಡಂತೆಯೇ ನಮ್ಮೆಲ್ಲ ಹಿರಿಯ ಸಾಹಿತಿಗಳ ಚಿಂತನ ನಡೆದು ಬಂದಿದೆ. ಹಾಗಾಗಿ ಸಾಹಿತ್ಯ ಸಮ್ಮೇಳನ ಸಂಪೂರ್ಣವಾಗಿ ಸಾಹಿತ್ಯ ಸಮ್ಮೇಳನವಾಗದಿದ್ದರೂ, ಸಾಹಿತಿಗಳ ಸಮ್ಮೇಳನವಂತೂ ಆಗಬೇಕಿದೆ. ಭಾಷೆ ಮತ್ತು ಸಾಹಿತ್ಯ ಕುರಿತ ಚರ್ಚೆ ಅದರ ಮುಖ್ಯ ಕಾಳಜಿಯಾಗಿರಬೇಕು. ಅದರ ಆಧಾರದ ಮೇಲೆ ಅಥವಾ ಆ ಮೂಲಕ ಇತರ ವಿಷಯಗಳ ಚರ್ಚೆ, ಪೂರಕ ಗೋಷ್ಠಿಗಳಾಗಿ ನಡೆಯಲಿ. ಹಾಗಾದಾಗ ಮಾತ್ರ ಸಾಹಿತ್ಯ ಪರಿಷತ್ತು ಒಂದು ವಿಶೇಷ ಪರಿಣಿತ ಸಂಸ್ಥೆ ಎನಿಸಿ, ಅದರ ಧ್ವನಿಗೂ ಒಂದು ತೂಕ ಮತ್ತು ಮಾನ್ಯತೆಗಳು ಸಿಕ್ಕಾವು. ಇಲ್ಲದೇ ಹೋದರೆ, ಅದು ಪ್ರತಿ ವರ್ಷ ಕಳ್ಳರೂ ಸೇರಿದಂತೆ ಎಲ್ಲರೂ ಸೇರುವ ಸಮ್ಮೇಳನವೆಂಬ ಬೃಹತ್ ಸಂತೆ ನಡೆಸಲು ಸರ್ಕಾರ ಮತ್ತು ಮಠಾಧಿಪತಿಗಳ ಮುಂದೆ ಹಲ್ಲು ಕಿರಿದು ನಿಲ್ಲುವ ಸಂಸ್ಥೆಯಾಗಿ ಮಾತ್ರ ಜನರ ಮುಂದೆ ಪಸ್ತುತಗೊಂಡು, ಹಾಸ್ಯಾಸ್ಪದವಾಗುತ್ತದೆ. ಏಕೆಂದರೆ, ಪರಿಷತ್ತು ಈ ಸಮ್ಮೇಳನಗಳನ್ನು ನಡೆಸುವುದರ ಹೊರತಾಗಿ ನಾಡು-ನುಡಿಗೆ ಸಂಬಂಧಿಸಿದಂತೆ ಇಂದಿಗೆ ಪ್ರಸ್ತುತವೆನಿಸುವ ಇನ್ನಾವ ಘನ ಕಾರ್ಯವನ್ನೂ ಮಾಡುತ್ತಿರುವಂತೆ ತೋರುತ್ತಿಲ್ಲ.

ಇದು ಕಷ್ಟಸಾಧ್ಯ. ಕಷ್ಟ ಏಕೆಂದರೆ, ಸಾಹಿತ್ಯ ಪರಿಷತ್ತಿನ ಇಂದಿನ ರಚನೆಯೇ ಹಾಗಿದೆ. ಇದರ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚಿನ ವರ್ಷಗಳಲ್ಲಿ ನಡೆಯುವ ತುರಸಿನ ಸ್ಪರ್ಧೆ ನೋಡಿದರೆ ಅದೊಂದು ರಾಜಕೀಯ ಚುನಾವಣೆಯ ಎಲ್ಲ ದುಷ್ಟ ಲಕ್ಷಣಗಳನ್ನೂ ಹೊತ್ತೇ ನಡೆಯುತ್ತದೆ ಎಂಬುದು ಯಾರಿಗಾದರೂ ಸ್ಪಷ್ಟವಾಗುವಂತಿದೆ. ಹಣದ ಪ್ರಭಾವ ಅಷ್ಟಿಲ್ಲದಿದ್ದರೂ, ಜಾತಿ-ಮತಗಳ ಹಾವಳಿಯಂತೂ ಇದ್ದೇ ಇದೆ. ಕಳೆದ ಚುನಾವಣೆಯಲ್ಲಿ ಯಾರ್‍ಯಾರಿಗೆ ಎಲ್ಲೆಲ್ಲಿ ಎಷ್ಟೆಷ್ಟು ಮತ್ತು ಏಕೆ ಮತಗಳು ಬಿದ್ದಿವೆ ಎಂಬುದೇ ಒಂದು ಕುತೂಹಲಕಾರಿ ಅಧ್ಯಯನದ ವಸ್ತುವಾಗಬಲ್ಲುದು! ಆದರೆ, ಅದೃಷ್ಟವಶಾತ್ ಈವರೆಗೆ ರಾಜ್ಯ ಮಟ್ಟದಲ್ಲಿ - ಶ್ರೀಮಾನ್ ಹರಿಕೃಷ್ಣ ಪುನರೂರರ ಹೊರತಾಗಿ - ಸಾಹಿತ್ಯಾಭಿರುಚಿಯ ದೃಷ್ಟಿಯಿಂದ ಅಯೋಗ್ಯರೆಂಬುವವರು ಯಾರೂ ಆಯ್ಕೆಯಾಗಿಲ್ಲ. ಆದರೆ ಇದೇ ಮಾತನ್ನು ಜಿಲ್ಲಾ ಮಟ್ಟದ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಬಗ್ಗೆ ಹೇಳುವಂತಿಲ್ಲ. ಇವರಲ್ಲಿ ಬಹಳಷ್ಟು ಜನ ಸಾಹಿತ್ಯ ಗಂಧವಿಲ್ಲದ ಸ್ಥಳೀಯ ಪುಢಾರಿಗಳು. ಇದಕ್ಕೆ ಮುಖ್ಯ ಕಾರಣ, ಸಾಹಿತ್ಯ ಪರಿಷತ್ತಿನ ಸದಸ್ಯ ಸ್ವರೂಪ ಅದರ ಕಾರ್ಯಾಚರಣೆಯ ಶೈಲಿಯಿಂದಾಗಿಯೇ ಕ್ರಮೇಣ ಅಸಾಹಿತ್ಯಕವಾಗುತ್ತಾ ಹೋದದ್ದು: ಸಾಹಿತ್ಯ ಮಾರ್ಯದೆಯುಳ್ಳ ಜನ ಇದರಿಂದ ದೂರವಾಗುತ್ತಾ, ಸದಸ್ಯರಾಗಲು ಹಿಂಜರಿಯುತ್ತಾ ಹೋಗಿ; ಬರೀ ವ್ಯಾಪಾರಿಗಳು, ಕಂಟ್ರಾಕ್ಟುದಾರರು ಮತ್ತು ಹಲವು ಜಾತಿವಾದಿ ಗುಂಪುಗಳು ಸಾಮೂಹಿಕವಾಗಿ ಸದಸ್ಯತ್ವ ಪಡೆಯುತ್ತಾ ಹೋದದ್ದು ಅಥವಾ ಅದನ್ನು ಕೆಲವರು ತಮ್ಮ ಚುನಾವಣಾ ಹಿತ ದೃಷ್ಟಿಯಿಂದ ಪ್ರಾಯೋಜಿಸುತ್ತಾ ಹೋದದ್ದು.

ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿ ಎಂತಹ ಪ್ರಭೃತಿಗಳು ಪದಾಧಿಕಾರಗಳಲ್ಲಿ ಬಂದು ಕೂತಿದ್ದಾರೆಂದರೆ, ಅವರಿಗೆ ಸ್ಥಳೀಯ ರಾಜಕಾರಣಿಗಳ, ಮಠಾಧಿಪತಿಗಳ ಮತ್ತು ಅಧಿಕಾರಿಗಳ ಒಡನಾಟ ಉಳಿಸಿಕೊಂಡು ಹೋಗಲು ಒಂದು ಮಾಧ್ಯಮವಾಗಿಯಷ್ಟೇ ಸಾಹಿತ್ಯ ಪರಿಷತ್ತಿನ ಅಗತ್ಯವಿರುತ್ತದೆ. ಹಾಗಾಗಿ ಇವರು ನಡೆಸುವ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಲ್ಲಿ ಹೆಚ್ಚಾಗಿ ತುಂಬಿರುವವರು ಸ್ಥಳೀಯ ಅಧಿಕಾರ ಕೇಂದ್ರಗಳ ’ಸಂಪರ್ಕ’ ಹೊಂದಿದ ಚೇಲಾ ’ಸಾಹಿತಿ’ಗಳೇ. ಇಲ್ಲಿ ಗೋಷ್ಠಿಗಳಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಾಗಿ ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡಲು ನೂಕುನುಗ್ಗಲು. ಆಹ್ವಾನ ಪತ್ರಿಕೆಗಳ ತುಂಬಾ ಇವರದೇ ಹಾವಳಿ! ಹೀಗಾಗಿ ಸಣ್ಣ ಊರುಗಳಲ್ಲಿ ಜನ ಅಲ್ಲಿಗೆ ಸಂತೆಗೆ ಹೋಗುವಂತೆ, ಸಾಹಿತ್ಯೋದ್ದೇಶವೊಂದರ ಹೊರತಾಗಿ ಇನ್ನೆಲ್ಲ ಉದ್ದೇಶಗಳೊಂದಿಗೆ ಸಂಭ್ರಮದಿಂದ ಹೋಗಿ ಬರುತ್ತಾರೆ. ದೊಡ್ಡ ಊರುಗಳಲ್ಲಿ ಅದೂ ಇಲ್ಲ. ಮಂತ್ರಿ ಮಹೋದಯರು ಮತ್ತು ಮಠಾಧಿಪತಿಗಳು ಭಾಗವಹಿಸುವ ಉದ್ಘಾಟನಾ ಅಥವಾ ಸಮಾರೋಪ ಕಾರ್ಯಕ್ರಮಗಳನ್ನು ಬಿಟ್ಟರೆ ಎಲ್ಲ ಭಣ ಭಣ!

ಇಂತಹ ಜಿಲ್ಲಾ ಘಟಕಗಳನ್ನು ಹೊಂದಿದ ಕೇಂದ್ರ ಸಮಿತಿ ತನ್ನ ಸಮ್ಮೇಳನದ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗುವುದಾದರೂ ಹೇಗೆ? ಇದಕ್ಕೊಂದೇ ದಾರಿ. ರಾಜ್ಯ ಮಟ್ಟದಲ್ಲಿನ್ನೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಗುಣಮಟ್ಟ ಗಾಬರಿ ಪಡುವಷ್ಟೇನೂ ಕಳಪೆಯಾಗಿಲ್ಲದಿರುವುದರಿಂದ (ಇದೂ ಕಳಪೆಯಾದಲ್ಲಿ ಬೇರೆ ಮಾರ್ಗಗಳನ್ನು ಹುಡುಕಬೇಕಾಗುತ್ತದೆ!) ಈ ಪ್ರತಿ ಅಭ್ಯರ್ಥಿಯೂ, ಜಿಲ್ಲಾ ಮಟ್ಟದಲ್ಲಿಯೂ ತನ್ನ ಆಯ್ಕೆಯ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸುವ ಮತ್ತು ಅಂತಹವರು ಮಾತ್ರ ಅಭ್ಯರ್ಥಿಗಳಾಗುವ ಹಾಗೆ ಚುನಾವಣಾ ನಿಯಮಗಳನ್ನು ಬದಲಾಯಿಸುವುದು ಒಳ್ಳೆಯದು. ಆಗ, ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುವ ಅಧ್ಯಕ್ಷರು ಮುಂದೆ ಸುಗಮ ಮತ್ತು ಗುಣ ಮಟ್ಟದ ಆಡಳಿತಕ್ಕಾಗಿ ಸುಮಾರು ತನ್ನದೇ ತಂಡವನ್ನೂ ಆಯ್ಕೆ ಮಾಡಿಕೊಂಡಂತಾಗುತ್ತದೆ. ಇಲ್ಲೇ ಹೋದಲ್ಲಿ ಬಹಳ ಕಡೆ ಈಗಾಗುತ್ತಿರುವಂತೆ ಕೆಳ ಹಂತದ ಸಮ್ಮೇಳನಗಳು ಹಾಸ್ಯಾಸ್ಪದವಾಗುತ್ತಾ ಹೋಗುತ್ತವೆ. ಅಲ್ಲದೆ, ಈ ಜಿಲ್ಲಾ ಸಮಿತಿಗಳು, ಸಮ್ಮೇಳನಗಳ ಅಧ್ಯಕ್ಷತೆಯ ಆಯ್ಕೆಯ ವಿಷಯದಲ್ಲೂ ತಮ್ಮ ಅಪ್ರಬುದ್ಧತೆಯನ್ನು ತೋರುತ್ತಾ, ಗೋಷ್ಠಿಗಳಿಗೆ - ವಿಶೇಷವಾಗಿ ಕವಿಗೋಷ್ಠಿಗಳಿಗೆ - ತಮ್ಮ ಚೇಲಾಗಳನ್ನು ತುಂಬುವ ಒತ್ತಡ ರಾಜಕಾರಣ ಮಾಡುವ ಮೂಲಕ ಅಖಿಲ ಭಾರತ ಸಮ್ಮೇಳನಗಳನ್ನೂ ಕುಲಗೆಡಿಸುತ್ತವೆ. ಈಗ ಆಗುತ್ತಿರುವುದೂ ಹಾಗೆಯೇ. ಹಾಗಾಗಿಯೇ, ರಾಜ್ಯದ ಅಧಿಕೃತ ನುಡಿಹಬ್ಬವೆನಿಸಿರುವ ಈ ಸಮ್ಮೇಳನದತ್ತ ಆಹ್ವಾನಿತರ ಹೊರತಾಗಿ ಇನ್ನಾವ ಗಣ್ಯ ಸಾಹಿತಿಯೂ ಸುಳಿಯದಂತಾಗಿದೆ.

ಜೊತೆಗೆ, ಅಖಿಲ ಭಾರತ ಸಮ್ಮೇಳನ ತನ್ನ ಹೆಸರಿಗೆ ತಕ್ಕಂತೆ ಅಖಿಲ ಭಾರತ ಮಟ್ಟಕ್ಕಲ್ಲದಿದ್ದರೂ, ರಾಜ್ಯ ಮಟ್ಟದ ಸಮ್ಮೇಳನವಾಗಿಯಾದರೂ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಸ್ಥಳೀಯ ಸಂಘಟಕರ ಅಥವಾ ಸಾಹಿತಿಗಳ ಒತ್ತಡಕ್ಕೆ ಮಣಿದು ಜಿಲ್ಲಾ ಮಟ್ಟದ ಸಾಹಿತ್ಯ - ಸಂಸ್ಕೃತಿ - ಅಭಿವೃದ್ಧಿ ವಿಷಯಗಳ ಗೋಷ್ಠಿಗಳಿಗೆ ಇಲ್ಲಿ ಅವಕಾಶ ನೀಡಬಾರದು. ಇವನ್ನೆಲ್ಲ ಜಿಲ್ಲಾ ಸಮ್ಮೇಳನಗಳಲ್ಲಿ ನಡೆಸಿಕೊಂಡು ಹೋಗಿ ಎಂದು ಕಟ್ಟುನಿಟ್ಟಾಗಿ ಸೂಚಿಸಬೇಕು. ಇದರಿಂದಾಗಿ ಗೋಷ್ಠಿಗಳ ವಿಪರೀತ ಸಂಖ್ಯೆ, ಪ್ರತಿನಿಧಿಗಳ ತಾರಾಟ ಮತ್ತು ಸಂಘಟನೆಯ ಭಾರ ಮತ್ತು ಖರ್ಚು ವೆಚ್ಚಗಳು ಕಡಿಮೆಯಾಗುವುದಲ್ಲದೆ, ಜಿಲ್ಲಾ ಸಮ್ಮೇಳನಗಳನ್ನು ನಿಯಮಿತವಾಗಿ ನಡೆಸುವ ಒತ್ತಡವೂ ಜಿಲ್ಲಾ ಸಮಿತಿಗಳಲ್ಲಿ ನಿರ್ಮಾಣವಾಗುತ್ತದೆ. ಈಗ ಅನೇಕ ಜಿಲ್ಲೆಗಳಲ್ಲಿ - ಉದಾ: ಚಿತ್ರದುರ್ಗದಲ್ಲಿ - ಜಿಲ್ಲಾ ಸಮ್ಮೇಳನಗಳು ನಡೆದೇ ಹಲವಾರು ವರ್ಷಗಳಾಗಿವೆ. ನಿಯಮಿತವಾಗಿ ಜಿಲ್ಲಾ ಸಮ್ಮೇಳನಗಳನ್ನು ನಡೆಸಲಾಗದ ಜಿಲ್ಲಾ ಸಮಿತಿಗಳ ಮಾನ್ಯತೆಯನ್ನು ಕೇಂದ್ರ ಪರಿಷತ್ತು ರದ್ದುಗೊಳಿಸುವ ಅಧಿಕಾರವನ್ನು ಪಡೆಯಬೇಕು. ಜಿಲ್ಲಾ ಸಮ್ಮೇಳನಗಳು ಅಖಿಲ ಭಾರತ ಸಮ್ಮೇಳನಕ್ಕೆ ಸಿದ್ಧತೆಯ - ಚರ್ಚಾ ವಿಷಯಗಳು ಮತ್ತು ಸಂಘಟನೆಯ ಸ್ವರೂಪ ಎರಡೂ ನೆಲೆಗಳಲ್ಲಿ - ರೂಪದಲ್ಲಿ ನಡೆಯಬೇಕು.

ರಾಜ್ಯ ಮಟ್ಟದ ಸಮ್ಮೇಳನ ಬೇಕಾದರೆ ಎರಡು ವರ್ಷಗಳಿಗೊಮ್ಮೆ ನಡೆಯಲಿ. ಅಲ್ಲಿ ಆಹ್ವಾನಿತರ ಹೊರತಾಗಿ ಬೇರಾರ ಊಟ - ವಸತಿಗಳ ವ್ಯವಸ್ಥೆಯ ಜವಾಬ್ದಾರಿಯನ್ನು ಪರಿಷತ್ತು ವಹಿಸಿಕೊಳ್ಳದಿರಲಿ. ಬೇಕಾದರೆ ಖಾಸಗಿಯವರಿಗೆ ಸರ್ಕಾರದ ಸಹಾಯ ಧನದ ವ್ಯವಸ್ಥೆ ಮಾಡಿ, ಪ್ರತಿನಿಧಿಗಳಾಗಿ ಬರಬಯಸುವವರಿಗೆ ಅವನ್ನು ನಿಗದಿತ ರಿಯಾಯ್ತಿ ದರಗಳಲ್ಲಿ ಒದಗಿಸುವಂತೆ ನೋಡಿಕೊಳ್ಳಲಿ. ಆಗ ನಿಜವಾಗಿ ನಾಡು - ನುಡಿಗಳ ಏಳಿಗೆಯಲ್ಲಿ ಸಕ್ರಿಯ ಆಸಕ್ತಿ ಇರುವವರು ಮಾತ್ರ ಸಮ್ಮೇಳನಗಳಿಗೆ ಬರುವಂತಾಗುತ್ತದೆ. ಸಂಘಟಕರೂ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶವಾದ ನಾಡು-ನುಡಿಗಳಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗೋಷ್ಠಿಗಳ ಕಡೆ ಗಮನವನ್ನು ಕೇಂದ್ರೀಕರಿಸಲು ಸಾದ್ಯವಾಗುತ್ತದೆ. ಆಗ ಈ ಚರ್ಚೆಗಳ ಗುಣಮಟ್ಟವೂ ಹೆಚ್ಚಿ, ಕಾರ್ಯಕ್ರಮಗಳು ಎಲ್ಲರ ವಿಶ್ವಾಸಾರ್ಹತೆಯನ್ನೂ ಗಳಿಸುವಂತಾಗಿ; ಸರ್ಕಾರ ಸಾಹಿತ್ಯ ಪರಿಷತ್ತಿನ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸುವ ಒತ್ತಡ ನಿರ್ಮಾಣವಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಮ್ಮೇಳನವನ್ನು, ಒಳಗಿನವರು ಹೇಳುವ ಯಶಸ್ಸು ಅಥವಾ ಹೊರಗಿನವರು ಹೇಳುವ ವೈಫಲ್ಯಗಳ ನೆಲೆಗಳಿಗಿಂತ ಹೆಚ್ಚಾಗಿ ಸಾರ್ಥಕತೆಯ ದೃಷ್ಟಿಯಿಂದ ನೋಡಿದಾಗ, ಅದೊಂದು ದಿಕ್ಕೆಟ್ಟ ಸಮ್ಮೇಳನದಂತೆ ಕಾಣುತ್ತದೆ. ಅದು ಎಲ್. ಬಸವರಾಜು ಅವರ ಉದ್ಘಾಟನಾ ಭಾಷಣದಿಂದಲೇ ಆರಂಭವಾಯಿತೆಂದು ಹೇಳಬಹುದು. ಸಮ್ಮೇಳನದ ಚೌಕಟ್ಟಿನಾಚೆ ಇಟ್ಟು ನೋಡಿದಾಗ ಖಂಡಿತ ಮೆಚ್ಚಬಹುದಾದ ಮಾತುಗಳಾಗಿ ಕಾಣುವ ಅವು, ಸಾಹಿತ್ಯ ಸಮ್ಮೇಳನವೊಂದರ ಉದ್ಘಾಟನಾ ಮಾತುಗಳಾಗಿ ನೋಡಿದಾಗ ಅನುಚಿತವೆನಿಸುತ್ತವೆ. ಅವರು ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷರಾಗಿ ಪ್ರಚಲಿತ ಸಾಹಿತ್ಯ - ಸಂಸ್ಕೃತಿಗಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಅದರ ಮುಂದುವರಿಕೆಯಾಗಿ ಅಥವಾ ಪೂರಕವಾಗಿ ರಾಜಕಾರಣಿಗಳ ಮತ್ತು ಮಠಾಧೀಶರ ಪಾತ್ರಗಳ ಬಗ್ಗೆ ಟೀಕೆ - ವ್ಯಾಖ್ಯಾನ ಮಾಡಿದ್ದರೆ, ಅವುಗಳಿಗೊಂದು ಹದವಿರುತ್ತಿತ್ತು, ಅದನ್ನು ನಾವು ಒಪ್ಪಬಹುದಿತ್ತು, ಸ್ವಾಗತಿಸಬಹುದಿತ್ತು. ಬದಲಿಗೆ, ಸಿದ್ಧ ಭಾಷಣವನ್ನು ಬಿಟ್ಟು ಎದುರಿಗಿದ್ದ ಜನರಾಶಿಯನ್ನು ನೋಡಿ ಸಮಯ ಸ್ಫೂರ್ತಿಗೆ ಒಳಗಾದಂತೆ ತಮ್ಮ ಆಲೋಚನಾ ಲಹರಿಯನ್ನು ಯದ್ವಾ ತದ್ವಾ ಹರಿಸ ಹೊರಟಿದ್ದು ಅವರ ಹಿರಿತನ ಮತ್ತು ವಿದ್ವತ್ತುಗಳಿಗೆ ತಕ್ಕುದಾಗಿರಲಿಲ್ಲ. ಈ ಅವಲಕ್ಷಣದೊಂದಿಗೆ ಆರಂಭವಾದ ಸಮ್ಮೇಳನ, ಊಟ-ವಸತಿಗಳ ಗಲಾಟೆ ಮತ್ತು ಕ್ಲೀಷಾತ್ಮಕ ವಿಷಯಗಳ ಬಗೆಗಿನ ಅತಿ ಸಾಮಾನ್ಯ ಗೋಷ್ಠಿಗಳೊಂದಿಗೆ, ನಾಡು-ನುಡಿಗಳ ಪ್ರವರ್ಧನೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಉದ್ದೇಶ ಸಾಧನೆಯಿಲ್ಲದೆ ಮುಗಿಯಿತಷ್ಟೆ.

ಆದುದರಿಂದ, ಕೋಟ್ಯಾಂತರ ರೂಪಾಯಿಗಳ ಸಾರ್ವಜನಿಕ ಹಣದಿಂದ ನಡೆಯುವ ಸಾಹಿತ್ಯ ಸಮ್ಮೇಳನವೊಂದರ ಯಶಸ್ಸನ್ನು, ಅದು ನಾಡು-ನುಡಿಯ ಪ್ರವರ್ಧನೆಯ ದೃಷ್ಟಿಯಿಂದ ಎಷ್ಟು ಸಾರ್ಥಕವಾಗಿದೆ ಎಂಬ ಅಳತೆಗೋಲಿನಿಂದಷ್ಟೇ ನಿರ್ಧರಿಸುವಂತಾಗಬೇಕು. ಈ ಸಾರ್ಥಕತೆ ಸಾಧ್ಯವಾಗುವುದು, ಜಾತ್ರೆಯಂತೆ ರೂಪಿತವಾಗಿ ಊಟ-ವಸತಿ ವ್ಯವಸ್ಥೆ, ಗೋಷ್ಠಿಗಳು, ಪುಸ್ತಕ ಪ್ರದರ್ಶನ, ಮಾರಾಟ - ಈ ಎಲ್ಲ ಹಂತಗಳಲ್ಲೂ ದೊಂಬಿಯಾದಂತಾಗುತ್ತಿರುವ ಸಮ್ಮೇಳನಗಳ ಬೃಹತ್ ಪ್ರಮಾಣ ಮತ್ತು ವೈಭವವನ್ನು ಕಡಿಮೆ ಮಾಡಿದಾಗ ಮಾತ್ರ. ಆಗ ಈ ಹಿಂದೆ ಸೂಚಿಸಿದಂತೆ ಹಣ ಮತ್ತು ಸಂಘಟನೆಯ ಅಗತ್ಯಗಳೂ ಕಡಿಮೆಯಾಗಿ, ರಾಜಕಾರಣಿ ಮತ್ತು ಮಠಾಧೀಶರ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತದೆ. ಜೊತೆಗೆ ಇವರಿಬ್ಬರನ್ನೂ ವೇದಿಕೆಗಳಿಂದ ದೂರವಿಡಲೂ ಸಾಧ್ಯವಾಗುತ್ತದೆ. ನಾನಿದನ್ನು ಇವರಿಬ್ಬರ ಬಗ್ಗೆ ಅವಮರ್ಯಾದೆಯಿಂದ ಹೇಳುತ್ತಿಲ್ಲ. ಅವರೂ ನಮ್ಮೆಲ್ಲರಂತೆ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವ ಎಲ್ಲ ಅಧಿಕಾರ, ಹಕ್ಕು, ಅರ್ಹತೆ ಎಲ್ಲವನ್ನೂ ಹೊಂದಿದ್ದಾರೆ. ಆದರೆ ಸಭಿಕರಾಗಿ ಅಥವಾ ತಾವು ಪರಿಣತರಾದ ವಿಷಯಗಳಿಗೆ ಸಂಬಂಧಪಟ್ಟ ಗೋಷ್ಠಿಗಳಿಗೆ ಆಹ್ವಾನಿತರಾದ ಭಾಷಣಕಾರರಾಗಿ ಮಾತ್ರ.

ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಸಮಾಜದ ಎಲ್ಲ ಗಣ್ಯರೂ ಯಾವುದೇ ಮುಜುಗರ ಅಥವಾ ಬಿಗುಮಾನವಿಲ್ಲದೆ ಸಭಿಕರ ಸಾಲಿನಲ್ಲಿ ಕೂತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಅವರು ಅಲ್ಲಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗಿನ ಆಸಕ್ತಿಯಿಂದ ಬಂದು ಕೂರುತ್ತಾರೆ. ಸಾಹಿತ್ಯ-ಸಂಸ್ಕೃತಿ ಚಿಂತಕರ ಮಾತುಗಳನ್ನು ಕೇಳಿ ಹೋಗುತ್ತಾರೆ. ಅಲ್ಲಿ ಸಾಹಿತ್ಯ-ಸಂಸ್ಕೃತಿ ಚಿಂತಕರಿಗಷ್ಟೇ ವೇದಿಕೆ. ಅಲ್ಲಿ ಅವರೇ ಅಗ್ರಗಣ್ಯರು. ವರ್ಷದಲ್ಲಿ ಒಮ್ಮೆಯಾದರೂ ಅವರಿಗೆ ಅಗ್ರ ಸ್ಥಾನ ನೀಡದಿದ್ದರೆ, ಅವರ ಮಾತುಗಳನ್ನು ಒಂದು ಮುಕ್ತ ವಾತಾವರಣದಲ್ಲಿ ಆಲಿಸಲಾಗದಿದ್ದರೆ ಒಂದು ನಾಡು ಮತ್ತು ಅದರ ಸಾಹಿತ್ಯ ಸಂಸ್ಕೃತಿಗಳಾದರೂ ಹೇಗೆ ಬೆಳೆದಾವು? ಇದು ಮಹಾರಾಷ್ಟ್ರದಲ್ಲಿ ಸಾಧ್ಯವಾಗುವುದಾದರೆ, ಕರ್ನಾಟಕದಲ್ಲಿ ಏಕೆ ಸಾಧ್ಯವಾಗಬಾರದು?

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದರು ಈ ದಿಸೆಯಲ್ಲ್ಲಿ ಯೋಚಿಸಬಲ್ಲರೆಂಬ ನಂಬಿಕೆ ನನಗಿರುವುದರಿಂದಲೇ ಇಷ್ಟೆಲ್ಲ ಬರೆದಿದ್ದೇನೆ.