ಸಾಲದ ಆಪ್ ಗಳ ಹಾವಳಿ ಮತ್ತೆ ಹೆಚ್ಚಳ : ಕ್ರಮ ಕೈಗೊಳ್ಳಿ

ಸಾಲದ ಆಪ್ ಗಳ ಹಾವಳಿ ಮತ್ತೆ ಹೆಚ್ಚಳ : ಕ್ರಮ ಕೈಗೊಳ್ಳಿ

ದೇಶದಲ್ಲಿ ಐದಾರು ತಿಂಗಳ ಹಿಂದೆ ಚೀನಾ ಮೂಲದ ಸಾಲದ ಆಪ್ ಗಳ ಹಾವಳಿ ದೊಡ್ದ ಸುದ್ದಿಯಾಗಿತ್ತು. ಆರ್ ಬಿ ಐ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ದೇಶದಲ್ಲಿ ಯಾವುದೇ ಸಂಸ್ಥೆಗಳು ಹಣಕಾಸು ವ್ಯವಹಾರ ನಡೆಸುವಂತಿಲ್ಲ. ಜೊತೆಗೆ ಚೀನಾದ ಮೊಬೈಲ್ ಆಪ್ ಗಳು ಸಾಲ ನೀಡಿ, ದುಬಾರಿ ಬಡ್ದಿ ವಿಧಿಸಿ, ನಂತರ ಸಾಲ ಅಥವಾ ಬಡ್ಡಿ ಮರುಪಾವತಿಯನ್ನು ಸರಿಯಾಗಿ ಮಾಡದವರಿಗೆ ಕಿರುಕುಳ ನೀಡುತ್ತಿದ್ದವು. ಈ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಇಂತಹ ಆಪ್ ಗಳನ್ನು ಬಂದ್ ಮಾಡಿಸಿತ್ತು. ನಂತರ ಕೆಲ ಕಾಲ ಈ ಹಾವಳಿ ನಿಂತಿತ್ತು. ಈಗ ಮತ್ತೆ ಬಂದಿದೆ. ಚೀನಾದ ಆಪ್ ಗಳ ಜೊತೆಗೆ ಕೆಲ ಭಾರತೀಯ ಆಪ್ ಗಳೂ ಸಾಲ ನೀಡಲು ಹಾಗೂ ನಂತರ ಕಿರುಕುಳ ನೀಡಲು ಆರಂಭಿಸಿವೆ. ಕೆಲ ದಿನಗಳ ಹಿಂದೆ ಉಡುಪಿಯ ಕುಂದಾಪುರದ ಯುವಕನೊಬ್ಬ ಈ ಸಾಲದ ಆಪ್ ನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮೊನ್ನೆ ದಕ್ಷಿಣ ಕನ್ನಡದ ಇನ್ನೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿಯ ಯುವತಿಯೊಬ್ಬಳು ಕಿರುಕುಳ ಅನುಭವಿಸಿ ಸೈಬರ್ ಪೋಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣಗಳು ಇದ್ದಕ್ಕಿದ್ದಂತೆ ಮತ್ತೆ ಸಾಲದ ಆಪ್ ಗಳ ಚಟುವಟಿಕೆಗಳು ಜೋರಾಗಿರುವುದಕ್ಕೆ ಸಾಕ್ಷಿ. 

ಮೊಬೈಲ್ ನಲ್ಲೇ ಸಾಲ ನೀಡುವ ಆಪ್ ಗಳು ಸಾಲ ಪಡೆಯುವವರಿಂದ ಅವರ ಕಾಂಟಾಕ್ಟ್ ಗಳನ್ನು ಪಡೆದುಕೊಂಡಿರುತ್ತವೆ. ಸಾಲ ಸರಿಯಾಗಿ ತೀರಿಸದಿದ್ದರೆ ಅವರ ಕಾಂಟಾಕ್ಟ್ ಗಳಿಗೆ ಸಂದೇಶ ಕಳುಹಿಸಿ ಮರ್ಯಾದೆ ಕಳೆಯುತ್ತದೆ. ಜೊತೆಗೆ ಬೆದರಿಕೆ ಹಾಕುತ್ತವೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಫೊಟೋ ಹಾಗೂ ಖಾಸಗಿ ವಿವರಗಳನ್ನು ಪೋಸ್ಟ್ ಮಾಡಿ ಅವಮಾನ ಮಾಡುತ್ತವೆ. ಇಂತಹ ಅವಮಾನಕ್ಕೆ ಹೆದರಿ ಜನರು ಆತ್ಮಹತ್ಯೆ ಮಾಡಿಕೊಳ್ಳುವುದುಂಟು. ಇಲ್ಲಿ ಎರಡು ವಿಚಾರಗಳಿವೆ. ಒಂದು - ಈ ರೀತಿಯಲ್ಲಿ ಹಣಕಾಸು ವ್ಯವಹಾರ ನಡೆಸುವುದೇ ಅಕ್ರಮ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ತೆರಿಗೆ ನಷ್ಟವಾಗುತ್ತದೆ. ಎರಡು - ಈ ಆಪ್ ಗಳು ಜನರಿಗೆ ಕಿರುಕುಳ ನೀಡುತ್ತವೆ. ಪೋಲೀಸ್ ಇಲಾಖೆಯು ದೂರು ಬಂದ ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳುತ್ತದೆ. ಅದರ ಬದಲಿ ಆಪ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳನ್ನು ಬಂದ್ ಮಾಡಿಸಲು ಸರ್ಕಾರ ಹಾಗೂ ಪೋಲೀಸ್ ಇಲಾಖೆಗೆ ಅಧಿಕಾರವಿದೆ. ಅದನ್ನು ಚಲಾಯಿಸಲು ಮೀನಮೇಷ ಎಣಿಸಬೇಕಿಲ್ಲ. ಪೋಲೀಸ್ ಇಲಾಖೆಯಲ್ಲಿ ಸೈಬರ್ ಅಪರಾಧ ತನಿಖೆಗೆ ಪ್ರತ್ಯೇಕ ವಿಭಾಗವಿದೆ. ಜಡ್ಡು ಹಿಡಿದಿರುವ ಈ ವಿಭಾಗವನ್ನು ಚುರುಕುಗೊಳಿಸಬೇಕಾಗಿದೆ.

(‘ಕನ್ನಡ ಪ್ರಭ’ ಪತ್ರಿಕೆಯ ಸಂಪಾದಕೀಯದಿಂದ ಸಂಗ್ರಹಿತ) 

ಚಿತ್ರ ಕೃಪೆ: ಇಂಟರ್ನೆಟ್ ತಾಣ