ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಉಚಿತ ಗಿಡ ವಿತರಣೆ

ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಉಚಿತ ಗಿಡ ವಿತರಣೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ೭ ಜುಲಾಯಿ ೨೦೧೯ರ ಬೆಳಗ್ಗೆ ೭ ಗಂಟೆಗೆ ಪಂಜೆ ಮಂಗೇಶ ರಾವ್ ರಸ್ತೆ ಪಕ್ಕದಲ್ಲಿ ಜರಗುವ “ಭಾನುವಾರದ ಸಾವಯವ ಸಂತೆ”ಯಲ್ಲಿ “ಉಚಿತ ಗಿಡ ವಿತರಣೆ” ಹಮ್ಮಿಕೊಳ್ಳಲಾಗಿತ್ತು.
ಇಬ್ಬರಿಗೆ ಗಿಡಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು “ಆಸರೆ” ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ. ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, “ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಉಳಿಸಿಕೊಂಡಿದ್ದರು. ಈಗಿನ ತಲೆಮಾರು ಪ್ರಕೃತಿಯಿಂದ ದೂರವಾಗಿ ಬದುಕುತ್ತಿದೆ. ನಮ್ಮ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸಗಳನ್ನು ನಾವು ಹೆಚ್ಚೆಚ್ಚು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ, ಇವತ್ತು ಉಚಿತವಾಗಿ ಗಿಡಗಳ ವಿತರಣೆಗೆ ವ್ಯವಸ್ಥೆ ಮಾಡಿರುವುದು ಪೂರಕವಾದ ಕೆಲಸ” ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪರಿಸರ ಹೋರಾಟಗಾರ ಧಿನೇಶ್ ಹೊಳ್ಳ ಅವರು, “ನಾವು ಪರಿಸರವನ್ನು ಈಗಾಗಲೇ ಬಹಳ ನಾಶ ಮಾಡಿದ್ದೇವೆ. ದೂರದ ಪ್ರದೇಶಗಳಿಗೆ ನೀರು ಒಯ್ಯುವ ನೆವನದಲ್ಲಿ ನೇತ್ರಾವತಿಯ ನದಿಮೂಲಗಳನ್ನು ಧ್ವಂಸ ಮಾಡಿ, ಬೇಸಗೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಲ್ಲದಂತೆ ಮಾಡಲಾಗಿದೆ. ಪಶ್ಚಿಮಘಟ್ಟದ ಕಾಡುಗಳ ನಾಶವನ್ನು ತಡೆಯದಿದ್ದರೆ ಮಂಗಳೂರು ಮತ್ತು ಕರಾವಳಿಯ ನಗರಗಳಿಗೆ ಕುಡಿಯುವ ನೀರು ಸಿಗಲಿಕ್ಕಿಲ್ಲ” ಎಂದು ಎಚ್ಚರಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ್ಯರಾದ ಅಡ್ಡೂರು ಕೃಷ್ಣ ರಾವ್, ಈ ವರುಷ ಬೇಸಿಗೆಯಲ್ಲಿ ಮಂಗಳೂರಿಗರು ನೀರಿಗಾಗಿ ಪರದಾಡಿದ್ದನ್ನು ನೆನಪಿಸಿದರು. ಪರಿಸರ ಸಂರಕ್ಷಣೆಗಾಗಿ ಜನ ಜಾಗೃತರಾಗಬೇಕಾದ ಅಗತ್ಯವನ್ನು ಅವರು ತಮ್ಮ ಮಾತಿನಲ್ಲಿ ಎತ್ತಿ ನುಡಿದರು: “ನಮ್ಮ ಕರಾವಳಿಯಲ್ಲಿ ಸುರಿಯುವ ಮಳೆಯ ಪರಿಮಾಣ ಕರ್ನಾಟಕದ ಸರಾಸರಿ ಮಳೆಯ ನಾಲ್ಕು ಪಟ್ಟು. ಆದರೂ, ಈ ವರುಷ ಬೇಸಿಗೆಯ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಂಗಳೂರಿನಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿದ್ದು ನಮ್ಮೆಲ್ಲರ ಕಣ್ಣು ತೆರೆಸಬೇಕು. ಮಣಿಪಾಲದ ಕೆಲವು ಪ್ರದೇಶಗಳಿಗಂತೂ ಸತತ ಹದಿನೈದು ದಿನಗಳು ನೀರು ಸರಬರಾಜು ಇರಲಿಲ್ಲ. ಇದರಿಂದ ನಾವೆಲ್ಲರೂ ಪಾಠ ಕಲಿಯಬೇಕಾಗಿದೆ. ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸಬೇಕಾಗಿದೆ. ಇನ್ನೂ ನಾವು ಪಾಠ ಕಲಿಯದಿದ್ದರೆ ಪ್ರಕೃತಿಯೇ ನಮಗೆ ಪಾಠ ಕಲಿಸುತ್ತದೆ.”
ಈ ಕಾರ್ಯಕ್ರಮದಲ್ಲಿ ಆಸಕ್ತರಿಗೆ ಉಚಿತವಾಗಿ ಹಂಚಲಿಕ್ಕಾಗಿ ಮುನ್ನೂರು ಗಿಡಗಳನ್ನು ಒದಗಿಸಿದವರು ಮಧುಸೂದನ ಆಯಾರ್. ತೇಗ, ನೇರಳೆ, ಮಾವು, ಪುನರ್ಪುಳಿ, ಉಂಡೆಹುಳಿ, ಶ್ರೀಗಂಧ, ರಕ್ತಚಂದನ, ಹೊಳೆದಾಸವಾಳ ಇತ್ಯಾದಿ ಜನೋಪಯೋಗಿ ಸಸಿಗಳನ್ನು ಆಸಕ್ತರಿಗೆ ವಿತರಿಸಲಾಯಿತು.