ಸಾವಯವ ಕೃಷಿಯಿಂದಲೂ ಉತ್ತಮ ಇಳುವರಿ
ಸಾವಯವ ಕೃಷಿಯಿಂದ ಉತ್ತಮ ಇಳುವರಿ ಸಿಗುತ್ತದೆಯೇ? ಕೋಟಿಗಟ್ಟಲೆ ಜನರಿಗೆ ಆಹಾರ ಪೂರೈಸಲು ಸಾವಯವ ಕೃಷಿಯಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಮತ್ತೆಮತ್ತೆ ಎದುರಾಗುತ್ತವೆ.
ಯುಎಸ್ಎ ಮತ್ತು ಕೆನಡಾ ದೇಶದ ವಿಜ್ನಾನಿಗಳು ನಡೆಸಿದ ಈ ವಿಷಯದ ಅಧ್ಯಯನಗಳ ಸಮಗ್ರ ವಿಶ್ಲೇಷಣೆಯು ಈ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಸೂಕ್ತ ಬೆಳೆಗಳು, ಕೃಷಿ ವಿಧಾನಗಳು ಮತ್ತು ನಿರ್ವಹಣಾ ತಂತ್ರಗಳ ಆಯ್ಕೆಯ ಮೂಲಕ ಸಾವಯವ ಕೃಷಿ ಮತ್ತು ರಾಸಾಯನಿಕ ಒಳಸುರಿಗಳ ಬಳಕೆಯ ಕೃಷಿಯ ಇಳುವರಿಗಳ ಅಂತರ ಕುಗ್ಗಿಸಬಹುದೆಂದು ಈ ವಿಶ್ಲೇಷಣೆ ತೋರಿಸಿಕೊಟ್ಟಿದೆ.
೩೪ ಬೆಳೆಗಳ (ಗೋಧಿ, ಟೊಮೆಟೋ ಮತ್ತು ಸೋಯಾಬೀನ್ ಸಹಿತ) ಸಾವಯವ ಕೃಷಿ ಮತ್ತು ರಾಸಾಯನಿಕ ಒಳಸುರಿ ಬಳಕೆಯ ಕೃಷಿಯ ಇಳುವರಿಗಳ ಬಗ್ಗೆ ೬೬ ಪ್ರಕಟಿತ ಅಧ್ಯಯನ ವರದಿಗಳನ್ನು ವೆರೆನಾ ಸ್ಯೂಪರ್ಟ್ ಮತ್ತು ಸಹೋದ್ಯೋಗಿಗಳ ತಂಡ ವಿಶ್ಲೇಷಣೆ ಮಾಡಿತು. ಸಾವಯವ ಕೃಷಿಯಿಂದ ಇಳುವರಿ ಕಡಿಮೆಯಾದೀತು ಎಂದು ಅವರು ಗಮನಿಸಿದರು. ಅದರ ಪ್ರಮಾಣ: ಏಕದಳ ಧಾನ್ಯಗಳಲ್ಲಿ ಶೇಕಡಾ ೨೬ ಮತ್ತು ತರಕಾರಿಗಳಲ್ಲಿ ಶೇಕಡಾ ೩೩.
ಆದರೆ ಕೆಲವು ಬೆಳೆಗಳಲ್ಲಿ ಸಾವಯವ ಕೃಷಿಯಿಂದಾಗಿ ಇಳುವರಿ ಬಹಳ ಕಡಿಮೆಯಾಗಲಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದಾಗ ಸ್ಟ್ರಾಬೆರಿ ಮತ್ತು ಸೇಬುಹಣ್ಣುಗಳ ಇಳುವರಿ ಶೇ.೩ ಮತ್ತು ಎಣ್ಣೆಬೀಜಗಳ ಇಳುವರಿ ಶೇ.೧೧ರಷ್ಟು ಮಾತ್ರ ತಗ್ಗಿತು.
ಲೆಗ್ಯೂಮುಗಳು ಮತ್ತು ಬಹುವಾರ್ಷಿಕ ಸಸ್ಯಗಳ ಬೆಳವಣಿಗೆಯು ಸಾರಜನಕದ ಒದಗಣೆ ಪ್ರಮಾಣ ಆಧಾರಿತವಾಗಿಲ್ಲ ಎಂಬುದೇ ಇದಕ್ಕೆ ಕಾರಣ ಎಂಬುದು ಸಂಶೋಧನಾ ತಂಡದ ಅಭಿಪ್ರಾಯ. "ಲೆಗ್ಯೂಮುಗಳ ಬೆಳವಣಿಗೆ ಬಾಹ್ಯ ಸಾರಜನಕವನ್ನು ಅವಲಂಬಿಸಿಲ್ಲ. ಯಾಕೆಂದರೆ ಬೇರುಗಂಟುಗಳಲ್ಲಿ ಸಾರಜನಕ ಸ್ಥಿರೀಕರಣದ ಮೂಲಕ ಅವು ಅದನ್ನು ಪಡೆದುಕೊಳ್ಳುತ್ತವೆ. ಬಹುವಾರ್ಷಿಕ ಸಸ್ಯಗಳ ಬೇರುಜಾಲ ವಿಸ್ತಾರವಾಗಿದೆ. ಹಾಗಾಗಿ ಅವು ಪೋಷಕಾಂಶಗಳ ಅಗತ್ಯ ಮತ್ತು ಸಾವಯವ ಪದಾರ್ಥಗಳಿಂದ ಸಾರಜನಕದ ನಿಧಾನಗತಿಯ ಬಿಡುಗಡೆಯ ನಡುವೆ ಉತ್ತಮ ಸಮತೋಲನ ಸಾಧಿಸುತ್ತವೆ" ಎಂಬುದು ಅವರ ವಿವರಣೆ.
ದುರ್ಬಲ ಆಮ್ಲೀಯ ಮತ್ತು ದುರ್ಬಲ ಕ್ಷಾರೀಯ ಮಣ್ಣಿನಲ್ಲಿ ಸಾವಯವ ಪದ್ದತಿಯಲ್ಲಿ (ಪಿಎಚ್ ೫.೫ರಿಂದ ೮ರ ನಡುವಣ) ಬೆಳೆಸಿದ ಬೆಳೆಗಳು ಉತ್ತಮ ಇಳುವರಿ ನೀಡುತ್ತವೆ ಎಂಬುದನ್ನೂ ಅವರು ಗಮನಿಸಿದರು. ಇದಕ್ಕೆ ಕಾರಣ ರಂಜಕದ ಲಭ್ಯತೆ. ಪ್ರಬಲ ಆಮ್ಲೀಯ ಮತ್ತು ಪ್ರಬಲ ಕ್ಷಾರೀಯ ಮಣ್ಣಿನಲ್ಲಿ ಸಸ್ಯಗಳಿಗೆ ರಂಜಕದ ಲಭ್ಯತೆ ಕಡಿಮೆ. ಯಾಕೆಂದರೆ ಅಲ್ಲಿ ರಂಜಕವು ನೀರಿನಲ್ಲಿ ಕರಗದ ರೂಪದಲ್ಲಿರುತ್ತದೆ.
ಸಾವಯವ ಪದ್ಧತಿಯಲ್ಲಿ ಆರಂಭದ ವರುಷಗಳಲ್ಲಿ ಇಳುವರಿ ಕಡಿಮೆಯಾಗಿ, ಕ್ರಮೇಣ ಹೆಚ್ಚುತ್ತದೆ ಎಂಬುದನ್ನೂ ಅವರು ಗಮನಿಸಿದರು. ಇದಕ್ಕೆ ಕಾರಣ ಮಣ್ಣಿನ ಫಲವತ್ತತೆಯ ಹೆಚ್ಚಳ ಮತ್ತು ನಿರ್ವಹಣಾ ತಂತ್ರಗಳ ಸುಧಾರಣೆ. ಒಂದೇ ಜಮೀನಿನಲ್ಲಿ ಸಾವಯವ ಕೃಷಿ ಬಗ್ಗೆ ಎರಡು ಹಂಗಾಮುಗಳಲ್ಲಿ ನಡೆಸಿದ ಅಧ್ಯಯನ ಮತ್ತು ಮೂರು ವರುಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಜಮೀನಿನ ಅಧ್ಯಯನ - ಇವುಗಳಲ್ಲಿ ಇಳುವರಿಯ ಸುಧಾರಣೆ ದಾಖಲಾಗಿದೆ.
"ಅತ್ಯುತ್ತಮ ನಿರ್ವಹಣಾ ವಿಧಾನ ಅನುಸರಿಸಿ ಸಾವಯವ ಕೃಷಿಯ ಇಳುವರಿ ಹೆಚ್ಚಿಸಬಹುದು. ಬೆಳೆಗಳ ಪರಿವರ್ತನೆ ಅಂತಹ ಒಂದು ನಿರ್ವಹಣಾ ವಿಧಾನ. ಯಾಕೆಂದರೆ ಸಾವಯವ ಕೃಷಿಯಲ್ಲಿ ಪೋಷಕಾಂಶಗಳ ಮತ್ತು ಪೀಡೆಕೀಟಗಳ ನಿರ್ವಹಣೆಯು ಬೆಳೆಪರಿವರ್ತನೆ ಮತ್ತು ತಳಿ ವೈವಿಧ್ಯವನ್ನು ಬಹಳಷ್ಟು ಅವಲಂಬಿಸಿರುತ್ತದೆ. ಇದಕ್ಕಾಗಿ ಪ್ರಾಣಿಜನ್ಯ ಗೊಬ್ಬರ ಬಳಕೆ ಅಥವಾ ಲೆಗ್ಯೂಮು ಅಥವಾ ಬಹುವಾರ್ಷಿಕ ಬೆಳೆಪದ್ಧತಿ ಬಳಕೆ ಅಗತ್ಯ" ಎನ್ನುತ್ತಾರೆ ವೆರೆನಾ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಎಆರ್ಐ) ಹಿರಿಯ ವಿಜ್ನಾನಿ ದ್ವಿವೇದಿ ಸಾವಯವ ಕೃಷಿಯ ಬಗ್ಗೆ ಹೀಗೆನ್ನುತ್ತಾರೆ, "ಸಾವಯವ ಕೃಷಿ ಪದ್ಧತಿಯಿಂದ ಇಕಾಲಜಿಗೆ ಆಗುವ ಅನುಕೂಲಗಳು ಮತ್ತು ಸಾವಯವ ಆಹಾರದ ಉತ್ತಮ ಗುಣಮಟ್ಟವನ್ನು ಹಣದ ಲೆಕ್ಕಾಚಾರದಲ್ಲಿ ಅಂದಾಜಿಸಬೇಕು. ಆಗ ಸಾವಯವ ಕೃಷಿ ಪದ್ಧತಿಯು ಸಾವಯವರಹಿತ ಕೃಷಿಪದ್ಧತಿಗಿಂತ ಉತ್ತಮವೆಂದು ಖಂಡಿತವಾಗಿ ತಿಳಿಯುತ್ತದೆ."
Comments
ರಾಸಾಯನಿಕ ಒಳಸುರಿಕೆ ಕೃಷಿಗೆ