ಸಾವಿಗಿಲ್ಲವೇ ಸಾವು

ಸಾವಿಗಿಲ್ಲವೇ ಸಾವು

ಕವನ

"ಸಾವಿಗಿಲ್ಲವೇ ಸಾವು"

ಸಾವೇ ನಿನಗಿಲ್ಲವೇ ಸಾವು
ನಿನಗೂ ಉಂಟೆ ಹೇಳಲಾಗದ ನೋವು..?

ನೀಡು ನೀನಿರುವ ವಿಳಾಸವ
ಹೇಳು ನೀ ಬರುವ ದಿನವ..
ಅಂದೋ.......!
ನೀ ಬರುವ ಎಲ್ಲಾ ದಾರಿಗಳ ಮುಚ್ಚವೆ
ಬಾಳಿ ಬದುಕಬೇಕಾದ ಜೀವಗಳ ನಿನ್ನಿಂದ ಕಾಯುವೆ....

ಹೇಳು..., ನಿನಗಿಲ್ಲವೇ ಸಾವು?
ನಿನಗುಂಟೇ ಹೇಳಲಾಗದ ನೋವು....?

ಒಮ್ಮೊಮ್ಮೆ, ಇತಿ ಮಿತಿಯಿಲ್ಲದ ಅತಿರೇಕ ನಿನ್ನದು
ಅನ್ಯಾಯದೀ ನೀ ಬಂದು ಅಮಾಯಕರ ಕರೆದೊಯ್ಯುವೆ
ಉಸಿರನಷ್ಟೇ ಒಯ್ದು, ನೆನಪುಗಳ ರಾಶಿ ಬಿಟ್ಟೋಗುವ
ನಿನ್ನ ಪರಿ ಮೋಸವಲ್ಲವೇ....?

ಹೇಳು..., ನೀನಷ್ಟೇ ಶಾಶ್ವತವೆ ಭುವಿಯಲಿ
ನಿನಗಿಲ್ಲವೇ ಸಾವು....?

ಏತಕೆ ಈ ದುರ್ಬುದ್ದಿ ನಿನಗೆ, ಸಾಯಿಸುವುದೇ ಆದರೆ
ಸಾಯಿಸು ಯಾರನ್ನು ನೋಯಿಸದಾಗೆ...
ಉಸಿರ ಜೊತೆ ಜೊತೆಗೆ ಶರೀರವನು ಒತ್ತೊಯ್ಯು
ಅಲುಗಾಡದೇ ಬಿದ್ದ ದೇಹವ ಕಂಡು ಬಿಕ್ಕಳಿಸಿ ಅಳದ ಹಾಗೆ...

ಹೇಳು...,
ಅನಿಸುವುದಿಲ್ಲವೇ ನಿನಗೆ ನೊಂದವರ ಕಂಡಾಗ ಪಾಪ..,
ತಟ್ಟುವುದಿಲ್ಲವೇ ನಿನಗೆ ಅವರಾಕುವ ಶಾಪ....?

ಅರಳದ ಎಷ್ಟೋ ಮೊಗ್ಗುಗಳ ಬದುಕನ್ನೇ ಕಸಿದುಕೊಂಡ
ನೀನೆಷ್ಟು ಕ್ರೂರಿ
ನಿನಗಿಲ್ಲವೇ ಸಾವು... ನಿನಗಾಗದೇ ನೋವು......?
(ಚೇತನ್ ಗುನ್ನೂರು)