ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ

ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ

ನಾನು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಲ್ದಾರ್ ನಾಗ್, ಜಾಧವ್ ಪಯಾಂಗ್, ಲಕ್ಷ್ಮಿ ಕುಟ್ಟಿ ಬಗ್ಗೆ ಲೇಖನ ಬರೆದೆ. ನನ್ನ ಲೇಖನ ಓದಿದ ಹಲವಾರು ಮಂದಿ ನೀವು ಬರೆದ ಮಹನೀಯರು ಎಲ್ಲರೂ ಕರ್ನಾಟಕ ರಾಜ್ಯದ ಹೊರಗಿನವರು. ನಮ್ಮ ಕರ್ನಾಟಕ ರಾಜ್ಯದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರತಿಭಾವಂತರ ಬಗ್ಗೆ ಯಾಕೆ ಬರೆಯುವುದಿಲ್ಲ ಎಂದರು. ಪ್ರತಿಭೆಗೆ ರಾಜ್ಯದ, ದೇಶದ ಸೀಮೆಗಳಿರುವುದಿಲ್ಲ. ಆದರೂ ಕರ್ನಾಟಕದಲ್ಲೂ ಪದ್ಮ ಪ್ರಶಸ್ತಿ ಪಡೆದ ಹಲವಾರು ಮಂದಿ ಗಣ್ಯರು ಇದ್ದಾರೆ. ೨೦೧೮ರಲ್ಲಿ ಪದ್ಮ ಪ್ರಶಸ್ತಿ ದೊರೆತವರ ಪಟ್ಟಿ ನೋಡಿದಾಗ ನಾನು ಸೂಲಗಿತ್ತಿ ನರಸಮ್ಮ ಅವರ ಸಾಧನೆ ಬಗ್ಗೆ ಗಮನಿಸಿದ್ದೆ. ಆದರೆ ನಮ್ಮದೇ ರಾಜ್ಯದವರಾದುದರಿಂದ ಹಲವಾರು ಮಂದಿಗೆ ಅವರ ಬಗ್ಗೆ ತಿಳಿದೇ ಇರುತ್ತದೆ, ನಾನು ಮತ್ತೆ ಬರೆದು ಓದುಗರಿಗೆ ಬೋರ್ ಹೊಡೆಸುವುದು ಏಕೆ? ಎಂದು ಬರೆದಿರಲಿಲ್ಲ. ಆದರೆ ಇನ್ನೂ ಹಲವಾರು ಮಂದಿಗೆ ಈ ‘ಅಮ್ಮ' ನ ಸಾಧನೆಗಳ ಬಗ್ಗೆ ತಿಳಿದಿಲ್ಲ ಎಂದು ಹಲವರ ಜೊತೆ ಮಾತನಾಡುವಾಗ ತಿಳಿಯಿತು. ಅದಕ್ಕೇ ಈ ಲೇಖನ.

ಪ್ರಧಾನಿ ನರೇಂದ್ರ ಮೋದಿ ಸರಕಾರದ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ. ಈಗ ಪದ್ಮ ಪ್ರಶಸ್ತಿಗಳ ಪಟ್ಟಿ ಹೊರ ಬರುವಾಗ ಮೊದಲಿನಂತೆ ವಿವಾದಗಳು ಆಗುತ್ತಿಲ್ಲ. ಹಲವಾರು ಅಪರೂಪದ, ಎಲೆಮರೆಯ ಕಾಯಿಗಳಂತಹವರನ್ನು ಅಯ್ಕೆ ಮಾಡುತ್ತಿದ್ದಾರೆ. ಇಂಥವರೂ ನಮ್ಮ ಊರಿನಲ್ಲಿದ್ದಾರಾ? ಎಂದು ಅವರ ಊರಿನವರೇ ಹುಬ್ಬೇರಿಸುವಂತೆ ಆಯ್ಕೆ ಸಮಿತಿ ಕೆಲಸ ಮಾಡುತ್ತಿದೆ. ಈ ಕಾರಣದಿಂದಲೇ ಸೂಲಗಿತ್ತಿ ನರಸಮ್ಮನವರ ಆಯ್ಕೆ ಮಹತ್ವ ಪಡೆಯುತ್ತದೆ.

ಸೂಲಗಿತ್ತಿ ಡಾ॥ ನರಸಮ್ಮ ಹೆರಿಗೆ ಮಾಡಿಸುವುದರಲ್ಲೇ ತಮ್ಮ ಜೀವನ ಸವೆಸಿದವರು. ನರಸಮ್ಮನವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರ ಗ್ರಾಮದವರು. ತೆಲುಗು ಅವರ ಮಾತೃಭಾಷೆ. ಪಾವಗಢ ಆಂಧ್ರದ ಗಡಿಭಾಗದಲ್ಲಿರುವುದರಿಂದ, ಇವರು ಅಲೆಮಾರಿ ಜನಾಂಗಕ್ಕೆ ಸೇರಿದವರಾದುದರಿಂದ ಅಲ್ಲಿಂದ ವಲಸೆ ಬಂದಿರ ಬೇಕೆಂದು ಅಂದಾಜಿಸಲಾಗಿದೆ. ಇವರು ಹುಟ್ಟಿದ ನಿಖರವಾದ ವರ್ಷ ಸರಿಯಾಗಿ ಯಾರಿಗೂ ತಿಳಿಯದು. ಕೆಲವು ಮೂಲಗಳ ಪ್ರಕಾರ ಅವರು ಹುಟ್ಟಿದ್ದು ೧೯೨೦ರಲ್ಲಿ ಪಾವಗಡದ ತಿಮ್ಮನಾಯಕನ ಬೆಟ್ಟ ಎಂಬ ಊರಿನಲ್ಲಿ ಎನ್ನುತ್ತಾರೆ. ಇವರ ತಂದೆ ಕದಿರಪ್ಪ ಹಾಗೂ ತಾಯಿ ಭಾವಮ್ಮ. ನರಸಮ್ಮ ವಿದ್ಯಾವಂತರಲ್ಲ. ಆದರೆ ವಿದ್ಯಾವಂತ ವೈದ್ಯರಿಗಿಂತಲೂ ಸುಸೂತ್ರವಾಗಿ ಹೆರಿಗೆ ಮಾಡಿಸುತ್ತಿದ್ದರಂತೆ. ಇವರು ಈ ಸೂಲಗಿತ್ತಿ ವೃತ್ತಿಯ ಒಳಹೊರಗುಗಳನ್ನು ತಮ್ಮ ಅಜ್ಜಿ ಮರಿಗೆಮ್ಮ ಇವರಿಂದ ಕಲಿತಿರುತ್ತಾರೆ. ಅಜ್ಜಿ ಮರಿಗೆಮ್ಮರೂ ಸೂಲಗಿತ್ತಿಯಾಗಿದ್ದರು. ಊರಿನವರು ಹೆರಿಗೆಗೆ ಎಂದು ಮರಿಗೆಮ್ಮ ಅವರನ್ನು ಕರೆದಾಗ ಅವರು ತಮ್ಮ ಮೊಮ್ಮಗಳನ್ನೂ ಕರೆದುಕೊಂಡು ಹೋಗುತ್ತಿದ್ದರು. ಅವರು ಹೆರಿಗೆ ಮಾಡಿಸುವಾಗ ಬೇರೆ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಆದರೆ ತಮ್ಮ ಮೊಮ್ಮಗಳನ್ನು ಮಾತ್ರ ಹತ್ತಿರವೇ ಇರಿಸುತ್ತಿದ್ದರು. ಅಜ್ಜಿಯ ಈ ಸಾಮೀಪ್ಯವು ನರಸಮ್ಮನಿಗೆ ಹೆರಿಗೆ ಮಾಡಿಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆ, ನಾಜೂಕುತನ ಮುಂತಾದುವುಗಳನ್ನೆಲ್ಲಾ ಕಲಿಸಿತು. ಅಜ್ಜಿ ಜೊತೆ ಹೋಗಿ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ ನರಸಮ್ಮ ಅವರಿಗೆ ಒಮ್ಮೆ ಅಗ್ನಿ ಪರೀಕ್ಷೆ ಒದಗಿ ಬರುತ್ತೆ.

ಒಂದು ಸಲ ಏನಾಗುತ್ತೆ ಅಂದ್ರೆ ಹೆರಿಗೆ ಮಾಡಿಸಲು ನರಸಮ್ಮ ಅಜ್ಜಿ ಜೊತೆ ಹೋಗಿರುತ್ತಾರೆ. ಅದೇ ಸಮಯ ಏನೋ ಅವಶ್ಯವಾದ ಕೆಲಸ ಒದಗಿ ಬಂದು ಅಜ್ಜಿ ಹೊರಗಡೆ ಹೋಗುತ್ತಾರೆ. ಆ ಸಮಯದಲ್ಲೇ ಗರ್ಭಿಣಿ ಹೆಂಗಸಿಗೆ ಜೋರಾಗಿ ಹೆರಿಗೆ ನೋವು ಬರಲು ಪ್ರಾರಂಭವಾಗುತ್ತದೆ. ಆಗ ನರಸಮ್ಮನಿಗೆ ಕೇವಲ ಹದಿನೇಳು ವರ್ಷ ವಯಸ್ಸು. ಆದರೆ ಈ ಗಂಭೀರ ಸಂದರ್ಭದಲ್ಲೂ ಅವರು ಧೃತಿಗೆಡದೇ ತನ್ನ ಅಜ್ಜಿ ಜೊತೆ ಕಲಿತ ಪಾಠವನ್ನು ನೆನಪಿಟ್ಟುಕೊಂಡು ಹೆರಿಗೆಯನ್ನು ಸುಸೂತ್ರವಾಗಿ ಮಾಡಿಸಿ ಬಿಡುತ್ತಾರೆ. ಎಲ್ಲರೂ ಅಜ್ಜಿಗೆ ತಕ್ಕ ಮೊಮ್ಮಗಳೆಂದು ಪ್ರಶಂಸೆ ಮಾಡುವವರೇ. ಇದು ನರಸಮ್ಮನವರು ಮಾಡಿಸಿದ ಮೊದಲ ಹೆರಿಗೆ. 

ನರಸಮ್ಮನವರಿಗೆ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಅಂಜಿನಪ್ಪ ಎಂಬವರ ಜೊತೆ ವಿವಾಹವಾಗುತ್ತದೆ. ಇವರ ದಾಂಪತ್ಯಕ್ಕೆ ಹನ್ನೆರಡು ಮಂದಿ ಮಕ್ಕಳು ಹುಟ್ಟುತ್ತಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ನರಸಮ್ಮನವರ ನಾಲ್ಕು ಮಂದಿ ಗಂಡು ಮಕ್ಕಳು ಸಣ್ಣ ವಯಸ್ಸಿನಲ್ಲೇ ನಿಧನ ಹೊಂದುತ್ತಾರೆ. ಉಳಿದ ಮಕ್ಕಳಿಂದ ನರಸಮ್ಮನವರಿಗೆ ೩೦ ಮಂದಿ ಮೊಮ್ಮಕ್ಕಳಿದ್ದಾರೆ.     

ನರಸಮ್ಮನವರು ಹೆರಿಗೆ ಮಾಡಿಸುವುದರಲ್ಲಿ ಮಾತ್ರ ಸಿದ್ಧಹಸ್ತರಲ್ಲ. ಹಲವಾರು ಕಾಯಿಲೆಗಳಿಗೆ ಇವರ ಗಿಡಮೂಲಿಕೆಯ ಮದ್ದು ರಾಮಬಾಣವಂತೆ. ದೂರದ ಊರಿಂದ ಇವರ ಮದ್ದು ತೆಗೆದುಕೊಂಡು ಹೋಗಲು ಜನರು ಪಾವಗಢಕ್ಕೆ ಬರುತ್ತಿದ್ದರಂತೆ. ಇವರು ಕಣ್ಣಿನಿಂದ ಕಸ ತೆಗೆಯುವುದು, ಬಾಣಂತಿಯರಿಗೆ ಬೇಕಾದ ಮದ್ದು ಮಾಡುವುದು, ಮಗುವನ್ನು ತೈಲ ಹಚ್ಚಿ ಸ್ನಾನ ಮಾಡಿಸುವುದು, ಶೀತವಾಗಿ ಗಂಟಲು ನೋವು ಆದರೆ ಅದಕ್ಕೆ ಮದ್ದು ಎಲ್ಲವನ್ನೂ ತಿಳಿದಿದ್ದರು. ಇವರು ಮಾಡಿಸಿದ ಹೆರಿಗೆಗಳ ಸಂಖ್ಯೆ ಒಂದು ರೀತಿಯಲ್ಲಿ ಗಿನ್ನೆಸ್ ದಾಖಲೆಯಾದೀತೇನೋ? ಸುಮಾರು ಹದಿನೈದು ಸಾವಿರ ಹೆರಿಗೆಗಳನ್ನು ಮಾಡಿಸಿದ ಖ್ಯಾತಿ ಇವರದ್ದು. ಅದರಲ್ಲೂ ಬಹುತೇಕ ಸಫಲ ಹೆರಿಗೆಗಳು. ಇವರು ಗರ್ಭಿಣಿ ಸ್ತ್ರೀಯರ ಹೊಟ್ಟೆ ಮುಟ್ಟಿ ಯಾವಾಗ ಹೆರಿಗೆ ಆಗುತ್ತದೆ? ಮಗು ಗಂಡೋ, ಹೆಣ್ಣೋ ಎಲ್ಲವನ್ನೂ ಹೇಳುತ್ತಿದ್ದರಂತೆ. ಇವರು ಸೂಲಗಿತ್ತಿ ಎಂಬ ವೃತ್ತಿಯನ್ನು ಒಂದು ಸೇವೆಯಾಗಿ ಮಾಡುತ್ತಾ ಬಂದಿರುವುದು ಇವರ ಹೆಗ್ಗಳಿಕೆ. ಹೆರಿಗೆ ಮಾಡಿಸಿದ ಬಳಿಕ ಜನರು ಏನು ಕೊಡುತ್ತಾರೋ ಅದನ್ನು ತೆಗೆದುಕೊಂಡು ಬರುತ್ತಿದ್ದರು. ಯಾವತ್ತೂ ಹಣಕ್ಕಾಗಿ ಆಶೆ ಪಡಲಿಲ್ಲ, ಅಕ್ಕಿ, ರಾಗಿ, ಜೋಳ, ದವಸಧಾನ್ಯಗಳು ಹೀಗೆ ಏನು ಕೊಟ್ಟರೂ ಪ್ರೀತಿಯಿಂದ ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಒಂದೇ ದಿನ ೩-೪ ಹೆರಿಗೆ ಮಾಡಿಸಿದ್ದೂ ಇದೆಯಂತೆ. ಹಗಲು ರಾತಿಗಳ ಪರಿವೆ ಇಲ್ಲದೇ, ಹೋಗಬೇಕಾದ ಸ್ಥಳದ ದೂರದ ಬಗ್ಗೆ ಯೋಚಿಸದೇ ಕೆಲವೊಮ್ಮೆ ಎತ್ತಿನ ಬಂಡಿಯಲ್ಲಿ, ಅದೂ ಇಲ್ಲವಾದರೆ ಕಿಲೋಮೀಟರುಗಟ್ಟಲೇ ನಡೆದುಕೊಂಡೇ ಹೊರಟುಬಿಡುತ್ತಿದ್ದರಂತೆ.

ಇವರ ಸಮಾಜಸೇವೆಯನ್ನು ಗಮನಿಸಿ ೨೦೧೪ರಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಅನಕ್ಷರಸ್ಥ ಹೆಣ್ಣು ಮಗಳು ತನ್ನ ಕೈಗುಣದಿಂದಲೇ ಜನರ ಸೇವೆ ಮಾಡಿ ಡಾಕ್ಟರ್ ಎನಿಸಿಕೊಂಡದ್ದು ಅಪರೂಪದ ಸಂಗತಿಯೇ ಸರಿ. ನರಸಮ್ಮನವರನ್ನು ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದವು. ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಭಾರತ ಸರಕಾರದ ವಯೋಶ್ರೇಷ್ಟ ಸನ್ಮಾನವೂ ಇವರಿಗೆ ಒಲಿದು ಬಂದಿದೆ. ೨೦೧೮ರಲ್ಲಿ ಇವರಿಗೆ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರದಿಂದ ಸನ್ಮಾನಿಸಲಾಯಿತು. ವಯೋ ಸಹಜ ಕಾರಣಗಳಿಂದ ಇವರು ಪದ್ಮಶ್ರೀ ಪ್ರಶಸ್ತಿಯನ್ನು ಗಾಲಿ ಕುರ್ಚಿಯಲ್ಲಿ ಕುಳಿತೇ ಪಡೆದುಕೊಳ್ಳಬೇಕಾಯಿತು. ಅದೇ ವರ್ಷ ಡಿಸೆಂಬರ್ ೨೫ರಂದು ಸೂಲಗಿತ್ತಿ ನರಸಮ್ಮ ನಮ್ಮನ್ನು ಅಗಲಿದರು. 

ಸೂಲಗಿತ್ತಿ ನರಸಮ್ಮನವರಿಂದ ಈ ಹೆರಿಗೆ ಮಾಡಿಸುವ ವಿದ್ಯೆಯನ್ನು ಕಲಿತು ಇವರ ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೂ ಪ್ರಾಥಮಿಕ ಸೌಲಭ್ಯಗಳಿಲ್ಲದ ಸಮಯದಲ್ಲಿ ತಮಗೆ ತಿಳಿದ ವಿದ್ಯೆಯನ್ನು ಬಳಸಿ ಜನರ ಸೇವೆ ಮಾಡಿದ ನರಸಮ್ಮ ಸದಾ ಸ್ಮರಣೀಯರು. ವಿದ್ಯಾವಂತರಲ್ಲದಿದ್ದರೂ ತಮ್ಮ ವಿವೇಕವಂತಿಕೆಯಿಂದ ಎಲ್ಲರ ಮನಸ್ಸು ಗೆದ್ದ ನರಸಮ್ಮ ಬಾಳಿನುದ್ದಕ್ಕೂ ನಿಸ್ವಾರ್ಥ, ನಿರ್ಮಲ ಮನಸ್ಸಿನಿಂದ ಜನರ ಸೇವೆ ಮಾಡಿದರು. ತಮಗೆ ಗೊತ್ತಿದ್ದ ಆಯುರ್ವೇದ, ಗಿಡಮೂಲಿಕೆಗಳ ಮದ್ದಿನಿಂದ ಸಾವಿರಾರು ಸುಸೂತ್ರವಾಗಿ ಮಕ್ಕಳನ್ನು ಭೂಮಿಗೆ ತಂದರು. ಇವರು ಯಾವಾಗಲೂ ತಮ್ಮ ಈ ಸೇವಾಕೌಶಲ್ಯಕ್ಕೆ ದೇವರ ಆಶೀರ್ವಾದವೇ ಕಾರಣ ಎಂದು ನಮ್ರತೆಯಿಂದ ಹೇಳುತ್ತಾರೆ. ಸೂಲಗಿತ್ತಿ ನರಸಮ್ಮ ಅವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ನಿಸ್ವಾರ್ಥ ಸೇವಾ ಮನೋಭಾವನೆ ನಮ್ಮ ಬಾಳಿಗೆ ಸ್ಪೂರ್ತಿಯಾಗಬೇಕಾಗಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ