ಸಾವಿಲ್ಲದ ಮನೆ ; ಸ್ಮಶಾನವಿಲ್ಲದ ಊರು !

ತನ್ನ ಮಗುವಿನ ಜೀವ ಭಿಕ್ಷೆಯನ್ನು ಬೇಡಿ ಭಗವಾನ್ ಬುದ್ಧರ ಬಳಿ ಬಂದ ಮಹಿಳೆಗೆ ‘ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ’ ಎಂದು ಹೇಳಿದರಂತೆ. ಆ ಮಹಿಳೆ ಇಡೀ ಊರು ತಿರುಗಾಡಿದರೂ ಸಾವು ಆಗದ ಮನೆ ಸಿಗಲೇ ಇಲ್ಲವಂತೆ. ಕೊನೆಗೆ ಆಕೆಗೆ ಗೊತ್ತಾಯಿತು, ಹುಟ್ಟು-ಸಾವು ಒಂದು ಸಹಜ ಪ್ರಕ್ರಿಯೆ. ಹುಟ್ಟಿದ ಜೀವಿ ಸಾಯಲೇ ಬೇಕು. ಇದು ಸಾವಿಲ್ಲದ ಮನೆಯ ಕಥೆ ಆಯಿತು, ಇನ್ನು ಸ್ಮಶಾನವಿಲ್ಲದ ಊರು…?
ಸಾಯುವುದು ಖಂಡಿತ ಎಂದಾದ ಬಳಿಕ ಸತ್ತವರನ್ನು ಹೂಳಲು ಅಥವಾ ಸುಡಲು ಸ್ಮಶಾನವೊಂದು ಬೇಕಲ್ಲವೇ? ಜಪಾನ್ ದೇಶದ ಇಟ್ಸುಕುಶಿಮಾ ಎನ್ನುವ ದ್ವೀಪದಲ್ಲಿ ಸ್ಮಶಾನವೇ ಇಲ್ಲವಂತೆ. ಜಪಾನ್ ದೇಶದವರ ಆಚಾರ-ವಿಚಾರಗಳು ವಿಚಿತ್ರವಾಗಿರುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದಿರುವ ಜಪಾನ್ ಜನ, ಸಾಕಷ್ಟು ಮೂಢನಂಬಿಕೆಗಳನ್ನು ಹೊಂದಿದ್ದಾರೆ ಎಂದರೆ ಅಚ್ಚರಿಯೇ ಅಲ್ಲವೇ? ಅಭಿವೃದ್ಧಿಶೀಲ ದೇಶದವಾದ ಜಪಾನ್ ದೇಶದ ಒಂದು ನಗರದಲ್ಲಿ ಸ್ಮಶಾನವೇ ಇಲ್ಲವೇ? ಹಾಗಾದರೆ ಸತ್ತವರನ್ನು ಏನು ಮಾಡುತ್ತಾರೆ? ಇಟ್ಸುಕುಶಿಮಾ ನಗರವನ್ನು ಜಪಾನ್ ದೇಶದ ಪುಣ್ಯಕ್ಷೇತ್ರ ಎಂದೂ ಕರೆಯುತ್ತಾರೆ.
ಇಟ್ಸುಕುಶಿಮಾ ಎನ್ನುವು ಒಂದು ದ್ವೀಪ ನಗರ. ಈ ನಗರದಲ್ಲಿ ಯಾರೂ ಸಾಯುವಂತಿಲ್ಲ ! ಸತ್ತರೂ ಅಲ್ಲಿ ಅಂತ್ಯ ಸಂಸ್ಕಾರ ಮಾಡಲು ಅನುಮತಿ ಇಲ್ಲ. ಇದಾದರೆ ಪರವಾಗಿಲ್ಲ. ಬೇರೆ ನಗರಕ್ಕೆ ಕೊಂಡುಹೋಗಿ ಹೂಳಬಹುದಾಗಿತ್ತು. ೧೮೬೮ರ ತನಕ ಅಲ್ಲಿ ಹುಟ್ಟಲು ಹಾಗೂ ಸಾಯಲೂ ಅನುಮತಿ ಇರಲಿಲ್ಲವಂತೆ. ಈ ಕಾರಣದಿಂದ ಈಗಲೂ ಆ ನಗರದಲ್ಲಿ ಆಸ್ಪತ್ರೆ ಹಾಗೂ ಸ್ಮಶಾನಗಳಿಲ್ಲ. ಇಲ್ಲಿ ಸತ್ತವರನ್ನು ಬೇರೆ ನಗರಕ್ಕೆ ಕೊಂಡುಹೋಗಿ ಹೂಳಬೇಕು ಅಥವಾ ಸುಡಬೇಕಷ್ಟೇ. ಸಾವಿಲ್ಲದ ಮನೆಯಿಂದ ಸಾಸಿವೆ ತರಲಿಕ್ಕಾಗದಿದ್ದರೂ ಜಪಾನ್ ದೇಶಕ್ಕೆ ಹೋದರೆ ಸಾವಿಲ್ಲದ ಊರಾದ ಇಟ್ಸುಕುಶಿಮಾದಿಂದ ಸಾಸಿವೆ ತರಬಹುದೇನೋ?!
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ