ಸಾಹಿತಿಗಳ ಚತುರ್ವರ್ಣ!
’ನೀವು ಶೋಷಿತರ ಪರವೋ, ಶೋಷಕರ ಪರವೋ?’ ಎಂದು ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೀಠದಿಂದ ಪ್ರಶ್ನಿಸುವ ಮೂಲಕ ಗೀತಾ ನಾಗಭೂಷಣ ಅವರು ಸಾಹಿತಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಏಕಕಾಲಕ್ಕೆ ಚಿಂತನೆಗೆ ಹಚ್ಚಿದ್ದಾರೆ. ನಮ್ಮ ಸಾಹಿತಿಗಳನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಬಹುದು.
ನಡೆ, ನುಡಿ ಎರಡರಲ್ಲೂ (ನುಡಿಯೆಂದರಿಲ್ಲಿ ಬರಹ-ಭಾಷಣ) ಶೋಷಿತರ ಪರವಾಗಿರುವವರು ಒಂದು ವರ್ಗ.
ನುಡಿಯಲ್ಲಿ ಶೋಷಿತರ ಪರವಾಗಿರುತ್ತ, ನಡೆಯಲ್ಲಿ ಶೋಷಕರಿಗೆ ಹತ್ತಿರವಾಗಿರುವ ವಂಚಕರು ಇನ್ನೊಂದು ವರ್ಗ.
ಶೋಷಕರ ಪರವಾದ ತಮ್ಮ ನುಡಿಯನ್ನು ಅದು ಶೋಷಿತರ ಪರವಾದುದೆಂಬಂತೆ ಬಿಂಬಿಸಲೆತ್ನಿಸುತ್ತ, ಶೋಷಕರೊಡನೆ ಹೆಜ್ಜೆಹಾಕುವ ಮಹಾವಂಚಕರು ಮತ್ತೊಂದು ವರ್ಗ.
ಶೋಷಿತ, ಶೋಷಕ ಎಂಬ ಗೊಡವೆಗೇ ಹೋಗದೆ ಶುಷ್ಕ ಸಾಹಿತ್ಯ ಬರೆದುಕೊಂಡು ಮಹಾಮಹಿಮರಂತೆ ಪೋಸು ಕೊಡುತ್ತ ಕನಸಿನ ಮೋಡಗಳಲ್ಲಿ ತೇಲಾಡುವವರು ನಾಲ್ಕನೆಯ ವರ್ಗ.
ಈ ಚತುರ್ವರ್ಣಗಳ ಪೈಕಿ ಕೊನೆಯ ಮೂರು ವರ್ಣಗಳವರು ಚತುರ ವರ್ಣಿಗರು.
ಇಷ್ಟೆಲ್ಲ ವಿಶ್ಲೇಷಿಸುವ ನಾನು ಯಾವ ವರ್ಗದವನು?
ನಲವತ್ತೈದು ವರ್ಷಗಳಿಂದ ನನ್ನ ಬರವಣಿಗೆಯನ್ನು ಓದುತ್ತಿರುವ, ಭಾಷಣಗಳನ್ನು ಆಲಿಸುತ್ತಿರುವ ಮತ್ತು ನಡೆಯನ್ನು ಗಮನಿಸುತ್ತಿರುವ ಓದುಗರು ಬಲ್ಲರು, ಸಾಹಿತಿಮಿತ್ರರೂ ಬಲ್ಲರು.