ಸಾಹಿತ್ಯ ಸಮ್ಮೇಳನ : ವಾರೆನೋಟ
* ಕನ್ನಡ ನಾಡು-ನುಡಿ, ನೆಲ-ಜಲಗಳ ಸಂರಕ್ಷಣೆಯ ಉದ್ದೇಶ ಹೊಂದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದವರು ಸಚಿವ ಶ್ರೀರಾಮುಲು. ಇವರು ಮೂಲತಃ ಆಂಧ್ರದವರು. ಕನ್ನಡ ಭಾಷೆಯನ್ನು ಸರಿಯಾಗಿ ಅರಿಯದವರು. ನೆಲ ಬಗಿದು ಮಾರಿ ಕೋಟಿಗಟ್ಟಲೆ ಹಣ ಮಾಡಿಕೊಂಡವರು. ಜಲಪ್ರಳಯದ ಸಂತ್ರಸ್ತರೆಡೆಗೆ ಸೂಕ್ತ ಗಮನ ಹರಿಸದವರು. ಇವರು ಕನ್ನಡ ನಾಡು-ನುಡಿ, ನೆಲ-ಜಲಗಳ ಸಂರಕ್ಷಣೆಯ ಸಮ್ಮೇಳನ ಉದ್ಘಾಟಿಸಿದರು!
* ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಬರಲಿಲ್ಲ. ಮಾತುಮಾತಿಗೆ ’ನಾನು ಈ ರಾಜ್ಯದ ಮುಖ್ಯಮಂತ್ರಿ’ ಎಂದು ಬಡಬಡಿಸುತ್ತಿರುವ ಇವರು ಸಮ್ಮೇಳನದ ಉದ್ಘಾಟನೆಯ ದಿನ ಮಾತ್ರ ಮುಖ್ಯಮಂತ್ರಿಯ ಕರ್ತವ್ಯ ಪಾಲಿಸದೆ ಪಕ್ಷದ ಕಾರ್ಯಕರ್ತ ಆಗಿ ಇಂದೋರಿಗೆ ಹೋಗಿದ್ದರು. ಆದ್ಯತೆ ಗೊತ್ತಾಯಿತಲ್ಲ!
* ಸಮ್ಮೇಳನದ ಸಂಘಟಕರಿಗೆ ಗದಗದವರೇ ಆದ ಪಂಡಿತ ಭೀಮಸೇನ ಜೋಶಿ ಹಾಗೂ ಗರೂಡ ಸದಾಶಿವರಾಯರ ನೆನಪಾಗಲಿಲ್ಲ. ಏಕೆಂದರೆ ಸಂಘಟಕರ ಸಾಹಿತ್ಯ-ಸಂಸ್ಕೃತಿಜ್ಞಾನ ಮತ್ತು ಕರ್ತವ್ಯನಿಷ್ಠೆ ಅಷ್ಟಕ್ಕಷ್ಟೆ. ಉಳಿದ ಗಣ್ಯರೆಲ್ಲರ ನೆನಪಾಗಿದ್ದೇ ದೊಡ್ಡದು!
* ಶಾಲೆಗಳಲ್ಲಿ ಮಕ್ಕಳಿಗೆ ಕೈಯೆತ್ತಿ ನಿಲ್ಲುವ ಶಿಕ್ಷೆ ಕೊಡುತ್ತಾರೆ. ಸಮ್ಮೇಳನಾಧ್ಯಕ್ಷೆಯ ಮೆರವಣಿಗೆಯಾದ್ಯಂತ ಹತ್ತು ವರ್ಷ ವಯಸ್ಸಿನ ಬಾಲಕ ಬಾಲಕಿಯರು ಪಾಳಿಮೇಲೆ ಎರಡೂ ಕೈಯಿಂದ ಛತ್ರಿ ಎತ್ತಿಹಿಡಿದು ನಿಂತು ಅಧ್ಯಕ್ಷೆಯ ಮುಖಕ್ಕೆ ಬಿಸಿಲು ಬೀಳದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು!
* ಕೃಷ್ಣದೇವರಾಯನ ವೈಭವ ಸಾರಲು ಎಪ್ಪತ್ತೈದು ಕೋಟಿ ರೂಪಾಯಿ. ಕನ್ನಡಾಂಬೆಗೆ ಕಸುವು ನೀಡಲು ಒಂದೇ ಕೋಟಿ ರೂಪಾಯಿ! ಕನ್ನಡಾಂಬೆ ಕೃಶಳಾಗದೆ ಇನ್ನೇನಾದಾಳು?