ಸಿದ್ದನ ಮನೆಯಲ್ಲಿ ಇಸೇಸ ಹೋಮ
ನೋಡ್ರಲಾ ನಾಡಿದ್ದು ನಮ್ಮನ್ಯಾಗೆ ಇಸೇಸ ಹೋಮ ಕಾರ್ಯಕ್ರಮ ಮಡಿಗಿದೀನಿ, ನೀವು ಬಂದು ಭಾಗವಹಿಸಿ, ಅದೂ ಸಾನ ಮಾಡಿಕೊಂಡು ಬರ್ರಲಾ. ಹೋದ ತಿಂಗಳು ಸಾನ ಮಾಡಿದ್ದು , ವಾಲಿಡಿಟಿ ಐತೆ ಅಂತ , ಅಂಗೇ ಬಂದು ಬಿಟ್ಟೀರಾ, ಮಯ್ಲಿಗೆ ಆಗೋದು ಇರಲಿ ಹೋಮದ ವಾಸ್ನೆ ಬದಲು ನಿಮ್ಮ ದೇಹದ ಕೆಟ್ಟ ಸುಗಂಧ ಕುಡಿ ಬೇಕಾಯ್ತದೆ, ರೀ ಚಾರ್ಜ್ ಮಾಡಕಂಡು ಬರ್ರಲಾ, ಅಂಗೇ ಹಿಂದಿನ ದಿನ ಮಾಂಸ ಬಿಟ್ಟು ಬರೀ ತರಕಾರಿ ತಿನ್ರಲಾ, ನಿಮ್ಮ ಗ್ಯಾಸ್ ನಮ್ಮ ಹೋಮವನ್ನು ಹಾಳು ಮಾಡಬಾರದು, ಭಟ್ಟರು ಹೋಮ ಬಿಟ್ಟು ಹೋಗಬಾರದು ಕನ್ರಲಾ ಅಂತಾ ಸಾನೇ ಮರ್ವಾದೆ ಕೊಟ್ಟು ಅಂದ. ಸಂದಾಕಿ ಭಾಗವಹಿಸಿ ನಿಮ್ಮ ದರಿದ್ರನೂ ಕಡಿಮೆ ಆಯ್ತದೆ ಅಂದ ಸಿದ್ದ. ಏಥೂ. ಅಲ್ಲ ಕಲಾ, ನಿಂಗೆ ಬೀಡಿ ಹೊಗೆನೇ ಆಗಕ್ಕಿಲ್ಲಾ, ಇನ್ನು ಹೋಮದ ಹೊಗೆ ಎಂಗಲಾ ಕುಡಿತೀಯಾ ಅಂದ ಸುಬ್ಬ, ಅದಕ್ಕೆ ಅಂತ ಮಾಸ್ಕ್ ಮತ್ತೆ ಕೂಲಿಂಗ್ ಗಿಲಾಸ್ ತರಿಸಿದ್ದೀನಿ ಬುಡ್ಲಾ , ಅದೆಲ್ಲಕ್ಕಿಂತ ಹೆಚ್ಚಾಗಿ ಆಕ್ಸಿಜನ್ ಸಿಲಿಂಡರ್ ತರ್ಸಿದೀನಿ ಕನ್ರಲಾ, ಅಂಗೇ ಒಂದು ಮಹಿಳಾ ನರ್ಸ್, ನಿವೃತ್ತಿಗೆ ಇನ್ನು ಒಂದು ತಿಂಗಳು ಮಾತ್ರ ಐತೆ ಅಂದ ಸಿದ್ದ. ಹೌದು ಯಾಕ್ಲಾ ಹೋಮ. ಲೇ ನಾನು ಸಾನೇ ಸಾಲ ಮಾಡಿದೀನಿ, ಅದೆಲ್ಲಾ ಬೇಗ ತೀರಿಸಬೇಕು ಅಂದ್ರೆ ಹೋಮ ಮಾಡಿಸಬೇಕು ಅಂತ ನಮ್ಮ ಜೋಯ್ಸ ಹೇಳವ್ನೆ ಕಲಾ ಅಂದ ಸಿದ್ದ. ಹೌದು ಸಾಲ ಮಾಡಿದ್ದು ಯಾಕೆ ಅಂದ ವಾಲಗದೋರು ರಾಜ. ನನ್ನ ಜೊತೆ ಇರ್ತಾರಲ್ಲಾ ದರಿದ್ರ ಸ್ನೇಹಿತರು ಅವರಿಗೋಸ್ಕರ ಕಲಾ,. ಅದು ಬರೀ ಎಣ್ಣೆ ಹೊಡೆಸಕ್ಕೆ ಅಂದ ಸಿದ್ದ. ಏನ್ಲಾ ನೀ ನಮ್ಮ ಬುಡಕ್ಕೆ ಬತ್ತಾ ಇದೀಯಾ ಅಂದ ಸುಬ್ಬ. ಹೌದು ಎಷ್ಟು ಸಾಲ ಇರೋದು ಅಂದ ತಂಬೂರಿ ನಾಗ. 50ಸಾವಿರ ಕಲಾ, ಮತ್ತೆ ಹೋಮಕ್ಕೆ ಖರ್ಚು ಆಗ್ತಾ ಇರೋದು ಎಷ್ಟಲಾ ಅಂದ ಸುಬ್ಬ. ಒಂದು ಲಕ್ಷ ಕಲಾ ಅಂದ ಸಿದ್ದ. ಲೇ ನಿನ್ನ ಮಕ್ಕೆ ನಮ್ಮ ಹಳೇ ಎಕ್ಕಡ ಹಾಕ, ಲೇ ಇದೇ ದುಡ್ಡನ್ನ ಸಾಲ ತೀರಿಸಿ ಇನ್ನು 50ಸಾವಿರ ಬ್ಯಾಂಕಿನಾಗೆ ಮಡಗಬೋದಿತ್ತು ಕಲಾ, ಅದಕ್ಕೆ ನಿನ್ನ ತಲ್ಯಾಗೆ ಲದ್ದಿ ಇರೋದು ಅಂದ ಸುಬ್ಬ. ಲೇ ಅದಲ್ಲ ಕಲಾ, ನನ್ನ ಜಾತಕದಾಗೆ ಪಕ್ಕದ ಮನ್ಯಾಗೆ ಸನಿ, ಎದರು ಮನ್ಯಾಗೆ ರಾಹು, ಹಿಂದಗಡೆ ಮನ್ಯಾಗೆ ಕೇತು ದೋಸ ಐತಂತೆ ಅದಕ್ಕೆ ಕಲಾ ಅಂದ ಸಿದ್ದ. ಲೇ ನಾವೆ ಅಲ್ವೇನ್ಲಾ ನಿನ್ನ ಮುಂದೆ ಹಿಂದೆ ಇರೋದು ಅಂದ ಸುಬ್ಬ. ಬುಡ್ರಲಾ, ನಿಮ್ಮನ್ನ ಹಿಂಗೆ ಬಿಟ್ಟರೆ, ನಾನು ಯಾವುದಕ್ಕೆ ಹೋಮ ಮಾಡ್ತಾ ಇದೀನಿ ಅನ್ನೋದೆ ಮರೆತು ಹೋಯ್ತದೆ , ಈಗ ಸ್ವಲ್ಪ ಮುಚ್ಕಂಡು ಹೋಯ್ತೀರಾ ಅಂದ ಸಿದ್ದ. ಸರಿ ಮಾರನೇ ದಿನ ಬೆಳಗ್ಗೆ ಒಂದು ಲೋಡ್ ಇಟ್ಟಿಗೆ ಅಂಗೇ ಒಂದು ಟ್ರಾಕ್ಟರ್ ಮರಳು ಬಂತು, ಅಲ್ಲೇ ನಿಂತಿದ್ದ ಕುಳ್ಳ ನಾಗೇಸ. ಲೇ ಯಾಕ್ಲಾ ಈಟೊಂದು ಸಾಮಾನು, ಮನೆ ಏನಾದ್ರೂ ಕಟ್ಟಿಸ್ತಾ ಇದೀಯೇನ್ಲಾ ಅಂದ ನಾಗೇಸ. ಇಲ್ಲ ಕಲಾ, ಹೋಮದ ಕುಂಡ ಮಾಡಕ್ಕೆ, ಒಂದು 20 ಕುಂಡ ಮಾಡ್ತಾರೆ ಅಂದ ಸಿದ್ದ. ಅಟೊತ್ತಿಗೆ ಒಂದು ಗಾಡಿ ಕಟ್ಟಿಗೇನೂ ಬಂತು. ಲೇ ನಿಮ್ಮನ್ಯಾಗೆ ಯಾರದ್ರೂ ಹೋದ್ರೇನ್ಲಾ ಅಂದ ನಾಗೇಸ. ಲೇ ಹೋಮಕ್ಕೆ ಕಲಾ ಅಂದ ಸಿದ್ದ. ಲೇ ಈಟೊಂದು ದೊಡ್ಡ ಹೋಮ ಮಾಡ್ತಾ ಇದೀಯಾ ಅಂದ್ರೆ ನಿಮ್ಮನೆ ಸಾಕಾಗಕ್ಕೆ ಇಲ್ಲ. ಸುಮ್ನೆ ಯಾದಾದ್ರೂ ಯಾಗ ಸಾಲೆ ಬುಕ್ ಮಾಡ್ಲಾ ಅಂದ ನಾಗೇಸ. ಇನ್ನೂ ನಾಗೇಸನ ಮಾತೇ ಮುಗಿದಿರಲಿಲ್ಲ. ಒಂದು ಬಸ್ ತುಂಬಾ ಭಟ್ಟರು ಟೀಮ್ ಇಳೀತು. ಎಲ್ಲಾ ಬೂತಯ್ಯನ ವಂಸದೋರು ಇದ್ದಂಗೆ ಇದ್ರು, ನೋಡಿಪ್ಪಾ ನಮಗೆ ಬೆಳಗ್ಗೆ ಎಲ್ಲಾರಿಗೂ ಒಂದು ಚೊಂಬು ಹಾಲು, ಆಮೇಲೆ ಅವಲಕ್ಕಿ ಅದಕ್ಕೆ ಗಟ್ಟಿ ಮೊಸರು, ಹಾಗೇ ಹಣ್ಣು, ಹಂಪಲು ಗೊತ್ತಲ್ಲಾ ಅಂದ್ರು ರಾಗು ಭಟ್ಟರು. ನೋಡ್ಲಾ ಇವರು ಹೇಳೋ ಲೀಸ್ಟ್ ನೋಡಿದ್ರೆ, ನಿಮ್ಮ ಮನೆ ಹಾಲು ಸಾಕಾಗಕ್ಕೆ ಇಲ್ಲ. ಸುಮ್ನೆ ಡೈರಿಗೆ ಅಂಗೇ ಹಣ್ಣಿಗೆ ಮಂಡಿಗೆ ಹೇಳಲಾ ಅಂದ ನಾಗೇಸ. ಮಗ ತುಪ್ಪಕ್ಕೆ ಅವರ ಮಾವಂಗೆ ಹೇಳಿದ್ದ, ಪಾಪ ಅವರ ಮನ್ಯಾಗೆ ಬೆಣ್ಣೆ ಕಾಯಿಸಿ, ಕಾಯಿಸಿ ಮೂರು ಸಿಲಿಂಡರ್ ಕಾಲಿ ಆಗಿತ್ತಂತೆ, ಈಗ ಅಡಿಗೆಗೆ ಸೀಮೆ ಎಣ್ಣೆ ಸ್ಟೌವ್ ಬಳಸ್ತಾವ್ರೆ. ಏಥೂ, ಸಿದ್ದ ಮಾತ್ರ ಭಕ್ತಿ ಪರವಸನಾಗಿ ಆಯ್ತು ಬುದ್ದಿ ಅಂತ ದಾಂಡಿಗರ ತರಾ ಇದ್ದ ಭಟ್ಟರ ಹಿಂದೆ ಓಡಾಡಿದ್ದೇ ಓಡಾಡಿದ್ದು. ಅಲ್ಲ ಕಲಾ, ಇಸ್ಟೆಲ್ಲಾ ಇನ್ ಪುಟ್ ಆದ್ ಮ್ಯಾಕೆ ಔಟ್ ಪುಟ್ ಹೆಂಗಲಾ ಅಂತಿದ್ದ ತಂಬೂರಿ ನಾಗ. ಹೋಮಕ್ಕೆ ಎಲ್ಲಾ ರೆಡಿ ಆತು. ಸಿದ್ದ ಅಂಗೇ ಅವನ ಹೆಂಡರು ಕೆಂಪಿ ಬಂದು ಭಟ್ಟರಿಗೆ ಡೈವ್ ಹೊಡಿದ್ರು, ಎರಡೇ ನಿಮಿಸಕ್ಕೆ, ಇಬ್ಬರೂ ಅಮ್ಮಾ ಅಂದ್ರು, ಭಟ್ಟರು ಏನು ಭಕ್ತಿ, ಆ ದೇವಿಯನ್ನು ನೆನಸುತ್ತಿದ್ದಾರೆ ಅಂದ್ರು, ಎದ್ದರೆ ಇಬ್ಬರೂ ಹಣ್ಯಾಗೂ ರಕ್ತ. ಅಬ್ಬಾ ಕುಂಕುಮ ಎಷ್ಟೊಂದು ದೊಡ್ಡದಾಗಿ ಇಟ್ಟಿದ್ದೀರಿಲ್ಲಾ ಅಂದ್ರು ಭಟ್ರು, ಭಟ್ಟರೇ ಅದು ಕುಂಕುಮ ಅಲ್ಲಾ, ರಕ್ತ ಕಣ್ರೀ ಅಂದ ಸುಬ್ಬ, ಸಿದ್ದನ ಹಣ್ಯಾಗೆ ಆಂಜನೇಯನ ಚಿಹ್ನೆ ಮೂಡಿತ್ತು. ಲೇ ಭಟ್ಟರು ಪಕ್ಕ ಯಾರಲೇ ಗಂಟೆ ಮಡಗಿದ್ದು ಅಂತಿದ್ದ ಸಿದ್ದ. ಅವನ ಹೆಂಡರು ಭಟ್ಟರು ಮಣೆಗೆ ಹೊಡಕ್ಕಂಡಿತ್ತು. ಲೇ ಹಚ್ರಲಾ ಅರಿಸಿನ ಅಂದ ಸುಬ್ಬ. ಲೇ ನಿಮಗೆ ರಕ್ತಕ್ಕೆ ಅರಿಸಿನ ಬಿಟ್ಟು ಬೇರೇ ಏನೂ ಸಿಗದೇ ಇಲ್ವೇನ್ರಲಾ ಅಂದ ಸಿದ್ದ. ಹಂಗಾರೆ ತಗೊಳಪ್ಪಾ ಇಭೂತಿ ಅಂದ್ರು ಭಟ್ಟರು. ನಮ್ಮನ್ನ ಬೇಡರ ಕಣ್ಣಪ್ಪ ಮಾಡ್ಬಿಡಿ ಅಂದ ಸಿದ್ದ. ಏಥೂ ಸಿದ್ದನ ಹೆಂಡರು ಅವಾಗವಾಗ ಬೀಳ್ತಾ ಇತ್ತು, ಒಂದು ಕಿತಾ ಕುಂಡದ ಮ್ಯಾಕೇನೇ ಬೀಳ್ತಾ ಇತ್ತು. ಯಾಕಮ್ಮೀ, ಸೀರೆ ಉದ್ದ ಆಗ್ಬಿಟ್ಟೈತೆ, ಕೆಳಗೆ ಹರ್ಕಂಡೈತೆ ಅಂತು, ಮ್ಯಾಕೆ ಕಟ್ಟಿಕೋ ಅಂತಿದ್ದಾಗೆನೇ. ಸಗಣಿ ಬಾಚೋ ಬೇಕಾದ್ರೆ ಕಟ್ಕಂತಾರಲ್ಲಾ ಅಂಗೆ ಕಟ್ಕಂತು,. ಏಥೂ, ಸಿದ್ದ ನಮಸ್ಕಾರ ಮಾಡೋ ಬೇಕಾದ್ರೆ ಮಗಂದು ಜಡೆ ಮಾಯಿಸಂದ್ರ ಚೆಡ್ಡಿ ಕಾಣೋದು, ಏಥೂ, ಸರಿ ಹೋಮ ಸುರುವಾತು 20ಕುಂಡಕ್ಕೆ ನಮಸ್ಕಾರ ಮಾಡೋ ಹೊತ್ತಿಗೆ, ಎರಡು ಎಕರೆ ಜೋಳ ಬಿತ್ತನೆ ಮಾಡಿದಂಗೆ ಆಗಿದ್ದ ಸಿದ್ದ. ಯಾಕ್ಲಾ, ಲೇ ಒಂದು ವಾರದಿಂದ ಬರೀ ಅವಲಕ್ಕಿ, ಮೊಸರು ಕಲಾ ಸಕ್ತಿನೇ ಇಲ್ಲಾ ಅನ್ನೋನು. ಲೇ ನೆಂಚ್ಕಳಕ್ಕೆ ಚಿಕನ್ ತಗೋ ಬೇಕಾಗಿತ್ತು ಕಲಾ ಅಂದ ಸುಬ್ಬ. ಯಾಕೆ ಹೇಳು, ಹೋಮ ಮಯ್ಲಿಗೆ ಆಯ್ತದೆ ಕಲಾ ಅನ್ನೋನು ಸಿದ್ದ. ನಮ್ಮೂರಿನ ಮಹಿಳಾ ಅಧ್ಯಕ್ಷೆ ಬಸಮ್ಮ, ನಮ್ಮೂರು ಅಧ್ಯಕ್ಸ ರಾಜೇಗೌಡ ಎಲ್ಲಾರೂ ಬಂದಿದ್ರು., ಸರಿ ಹೋಮ ಸುರುವಾತು, ಕಟ್ಟಿಗೆ ಒಡಿಯೋ ಕಿಸ್ನ, ಹಸೀ ಕಟ್ಟಿಗೆ ತಂದಿದ್ದ. ಮಗಂದು ಉರಿತಾನೇ ಇರ್ಲಿಲ್ಲ. ಸೀಮೆ ಎಣ್ಣೆ ಹಾಕ್ಲಾ ಬುದ್ದಿ ಅಂದ ಸಿದ್ದ, ಲೇ ಇದೇನು ಹೆಣ ಸುಡೋ ಕಾರ್ಯನಾ, ಹಾಕ್ರಪ್ಪಾ ತುಪ್ಪಾ ಅಂದು ಎರಡು ಡಬ್ಬ ಹಾಕಿದ್ರು ಭಟ್ಟರು. ಹೋಮ ಸುರುವಾಗಕ್ಕಿಂತ ಮುಂಚೆ ಇದ್ದ ಜನ, ಆಮ್ಯಾಕೆ ನೋಡಿದ್ರೆ ಕಾಲಿ, ಆಟೊಂದು ಹೊಗೆ, ಕೆಂಪಿ ಏನ್ರೀ, ಅಂತ ಭಟ್ಟರ ಪಕ್ಕ ಹೋಗಿ ಕೂರೋದು,. ಲೇ ನಾನು ಇಲ್ಲೇ ಇದೀನಿ ಕಣೇ, ಗುಕ್ಕೂ, ಗುಕ್ಕೂ ಅಂತ ಕೆಮ್ಮೋನು, ಮಗಾ ಯಾರಿಗೂ ಕಾಣಕ್ಕಿಲ್ಲಾ ಅಂತ ಅಲ್ಲೇ ಬೀಡೀನೂ ಸೇದಿದ್ದ. ಜನ ಎಲ್ಲಾ ಗಾಬರಿಯಾಗಿದ್ರು, ಎಲ್ಲಿ ನಮ್ಮನೆಗೆ ಬೆಂಕಿ ತಾಕ್ತದೋ ಅಂತ. ಎಲ್ಲಾರೂ ಮನೇ ಮುಂದೇನೂ ಒಂದು ನೂರು ಕೊಡ ನೀರು ರೆಡಿ. ಈಗ ನೋಡಪ್ಪಾ, ಪೂರ್ಣಹುತಿ ಅಂದ್ರೆ, ಕಾಯಿ, ಹಿತ್ತಾಳೆ ತಟ್ಟೇನಾ, ಇಬ್ರೂ ಭಟ್ಟರು ತಲೆ ಮೇಲೆ ಹಾಕಿದ್ರು, ಅಮ್ಮಾ ಅಂದಾಗಲೇ ಗೊತ್ತಾಗಿದ್ದು, ಅದು ಕುಂಡಕ್ಕೆ ಬಿದ್ದಿಲ್ಲ ಅಂತಾ, ಊರಿನ ಟೆಂಪರೇಚರ್ ಬರೀ 30ಡಿಗ್ರಿ ಇದ್ರೆ, ಹೋಮದ ರೂಮಿನ ಟೆಂಪರೇಚರ್ 100ಡಿಗ್ರಿ ಆಗಿತ್ತು. ಸಿದ್ದ ಮಂಡಕ್ಕಿ ಭಟ್ಟಿಯಲ್ಲಿ ಬೇಯಿಸಿದಂಗೆ ಆಗಿದ್ದ. ಹೊರಿಕ್ಕೆ ಬಂದು ಸಿದ್ದ ಮಾತಾಡಿದ್ರೆ ಬರೀ ನೀಲಗಿರಿ ವಾಸನೆ ಹೊಗೆ ಬರೋದು. ಮಗಾ ಕಟ್ಟಿಗೆ ಕಿಸ್ನ ನಗೋನು, ಯಾಕ್ಲಾ, ಪುಕ್ಕಟೆ ಕಟ್ಟಿಗೆ ಹಾಕು ಅಂದ ಅದಕ್ಕೆ ಹಿಂಗೆ ಮಾಡೀವ್ನಿ ಅನ್ನೋನು. ಮಗಂದು ಸಿದ್ದನ ಕಣ್ಣು ಅನ್ನೋದು ಕೆಂಪು ಚೆಂಡು ಆಗಿತ್ತು. ಅಲ್ಲ ಕಲಾ ಕೂಲಿಂಗ್ ಗಿಲಾಸ್, ಮಾಸ್ಕ್ ಎಲ್ಲಲಾ ಅಂದ ಸುಬ್ಬ. ಅದನ್ನು ಹಾಕ್ಕಂಡು ನೀ ಏನಾದ್ರೂ ರೆಡ್ಡಿ ಗಣೀಲಿ ಕೆಲಸ ಮಾಡಬೇಕಾ, ತೆಗಿಯೋ ಮುಂಡೇದೇ ಅಂತ ತೆಗಿಸಿ ಬುಟ್ರಲ್ಲಾ ಅಂದ ಸಿದ್ದ. ಸರಿ ಎಲ್ಲಾ ಹೋಮ ಮುಗೀತು, ನಮ್ಮ ಹಳ್ಯಾವು ಬೆಂಕಿ ಹಾಳಾಯ್ತದೆ ಅಂತ ಬಂದು ಚಾ ಕಾಯಿಸೋವು. ಏಥೂ. ಎಲ್ಲಾವೂ ದೇವರು ಪ್ರಸಾದ ಅಂತ ಹೋಮದ ಬೂದಿನಾ ಚೀಲಕ್ಕೆ ತುಂಬಿದ್ದೇ ತುಂಬಿದ್ದು, ಹಂಗೇ ಇಟ್ಟಿಗೆ ಮರಳು ಎಸ್ಕೇಪ್ ಆಗಿತ್ತು. ಸಿದ್ದ ನಮಸ್ಕಾರ ಮಾಡಿ, ಮಾಡಿ ಅಲ್ಲೇ ಮೂಲ್ಯಾಗೆ ಕಿಸ್ಕಂಡಿದ್ದ. ಅವನ ಹೆಂಡರು ಕೆಂಪಿ ಕೊಟ್ಟಿಗೇಲಿ ಹಸಾ ಪಕ್ಕ ಮಕ್ಕೊಂಡಿದ್ಲು. ಊಟಕ್ಕೆ ಅಂತ ನೂರು ಜನಕ್ಕೆ ಹೇಳಿದ್ದ, ಅವು ಗಡದ್ದಾಗಿ ಕತ್ತರಿಸಿ, ಲೇ ಸಿದ್ದ ಇಂತಹ ಹೋಮ ವಾರಕ್ಕೆ ಒಂದು ಕಿತನಾದ್ರೂ ಮಾಡ್ಲಾ, ಯಾಕ್ರಲಾ, ಉಂಡು ಹೋಗಬೈದು, ಯಾಕ್ ಹೇಳು, ನಮ್ಮಪ್ಪನ ತಿಥಿ ಏನ್ರಲಾ, ಈಗ ಎದ್ದು ಎಲೆ ಬಿಸಾಕಿ ಹೋಗ್ರಲಾ, ಮತ್ತೆ ಬೀಡಿ, ಹೋಮದ ಕಟ್ಟಿಗೆ ಐತೆ ಅದನ್ನೆ ಬಾಯಿಗೆ ಮಡಗ್ರಲ್ಲಾ, ಏಥೂ. ಮಾರನೆ ದಿನಾ ಸಿದ್ದನ ಮನೆಗೆ ಹೋದ್ರೆ ಅಡುಗೆ ಮನೆ ಕಾಲಿ, ಯಾಕ್ಲಾ, ಲೇ ಆ ದಾನ, ಈ ದಾನ ಅಂತ ಎಲ್ಲಾದನ್ನೂ ತಗೊಂಡು ಭಟ್ರು ಹೋದ್ರಲಾ, ಅಂಗೇ ಉಳಿದಿರೋ ಕಾಯಿ, ಅಕ್ಕಿ ಎಲ್ಲಾ ವ್ಯಾನ್ನಾಗೆ ಎತ್ತಾಕಂಡು ಹೋದ್ರಲಾ, ಒಂದು ತಿಂಗಳು ರೇಸನ್ ತರೋದು ತಪ್ತದೆ, ಎಲ್ಲಾ ತಗಳ್ರೋ ಅಂತಿದ್ರು, ಸದ್ಯ ನನ್ನ ಹೆಂಡರನ್ನ ಬಿಟ್ಟಾವ್ರೆ ಕಲಾ ಅಂತಿದ್ದ ಸಿದ್ದ,. 3ಲಕ್ಷ ಖರ್ಚಾತು ಕಲಾ, ಕಪ್ಪು ಕನ್ನಡ ಹಾಕಿದ್ದ ಸಿದ್ದ, ಯಾಕ್ಲಾ, ಲೇ ಇನ್ನೊಂದು ಸ್ವಲ್ಪ ಹೋಮದಾಗೆ ಇದ್ದಿದ್ರೆ, ಬೇಡರ ಕಣ್ಣಪ್ಪಾ ಆಯ್ತಿದ್ದೆ ಕಲಾ ಅಂದು ಐ ಡ್ರಾಪ್ಸ್ ಹಾಕ್ಕಂಡ. ಲೇ ನಿನ್ನ ಹೆಂಡರು ಎಲ್ಲಲಾ, ಲೇ ಅದು ಕೊಟ್ಯಾಗೆಗೆ ಸಗಣಿ ಗುಡ್ಡೆ ಪಕ್ಕ ಇರಬೇಕು ಕಲಾ, ಅದು ಒಂದು ತರಾ ನಾ ನಿನ್ನ ಬಿಡಲಾರೆ ಆಗೈತೆ, ಇನ್ಮುಂದೆ ಹೋಮ ಮಾಡಕ್ಕಿಲ್ಲಾ ಕಲಾ, ಯಾಕ್ಲಾ ಸಿದ್ದ, ಲೇ ನಮ್ಮ ಮನೆ ಗುಡಿಸಿ ಗುಂಡಾಂತರ ಮಾಡ್ತವ್ರೆ , ನಮ್ಮ ಮಾವ ಈಗ ಹೋಮ ಅಂದ್ರೆ ಸಾನೇ ಉಗಿತಾನೆ ಕಲಾ ಅಂದ ಸಿದ್ದ, ಯಾಕ್ಲಾ, ಕಾಲಿಯಾಗಿರೋ ಸಿಲಿಂಡರ್ ಇನ್ನೂ ಏಜೆನ್ಸಿಯೋರು ಕೊಟ್ಟಿಲ್ವಂತೆ, ದಿನಾ ಕಟ್ಟಿಗ್ಯಾಗೆ ಅಡುಗೆ ಅಂತಾನೆ. ಇನ್ಮುಂದೆ ಏನಿದ್ರೂ ದೇವರು ಹೆಸರು ಹೇಳಿ ಕಾಣಿಕೆ ಮಡಗೋದು ಅಂತಾನೆ ಬಡ್ಡೆ ಐದ.
Comments
ಉ: ಸಿದ್ದನ ಮನೆಯಲ್ಲಿ ಇಸೇಸ ಹೋಮ