ಸಿದ್ಧಾರ್ಥ್ - ಆ ಮುಖ

ಸಿದ್ಧಾರ್ಥ್ - ಆ ಮುಖ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ : ಆಗಸ್ಟ್, ೨೦೧೯

‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ ಪುಟ್ಟದಾದ ‘ಕೆಫೆ ಕಾಫಿ ಡೇ’ ಎಂಬ ಅಂಗಡಿಯನ್ನು ತೆರೆದರು. ಅದು ಅವರ ಭಾಗ್ಯದ ಬಾಗಿಲೇ ತೆರೆಯಿತು. ಅದರ ಉನ್ನತಿಯೇ ಅವರ ಸಾವಿಗೂ ಕಾರಣವಾದದ್ದು ಮಾತ್ರ ದುರಂತವೇ ಸರಿ. ೧೯೯೬ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಲೆ ಎತ್ತಿದ ಮೊದಲ ‘ಅಡ್ಡಾ’ ಶ್ರೀಮಂತ ಯುವಕ-ಯುವತಿಯರ ಪಾಲಿನ ಹ್ಯಾಂಗ್ ಔಟ್ ಝೋನ್ ಆಯಿತು. ದೇಶದಾದ್ಯಂತ ನೂರಾರು ಮಳಿಗೆಗಳು ತೆರೆಯಲ್ಪಟ್ಟಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾದ ಸಿದ್ದಾರ್ಥ್ ಬಹಳ ಖ್ಯಾತ ವ್ಯಕ್ತಿಯಾದ. ಆ ಖ್ಯಾತಿ ಜೊತೆಗೆ ಕೆಲವು ಸಮಸ್ಯೆಗಳು, ಅಪವಾದಗಳೂ ಇವರ ಬೆನ್ನು ಬಿದ್ದಿದ್ದವು. ಸಿದ್ಧಾರ್ಥ್ ಅವರಿಗೆ ಕೋಟಿಗಟ್ಟಲೆ ಸಾಲವಿತ್ತು ಎಂದು ಹೇಳುತ್ತಾರೆ. ಎಷ್ಟು ನಿಜ? ಎಂಬೆಲ್ಲಾ ವಿಷಯದ ಬಗ್ಗೆ ರವಿ ಬೆಳಗೆರೆ ಈ ಪುಸ್ತಕದಲ್ಲಿ ವಿವರಿಸುತ್ತಾರೆ. ಇವರ ಜೊತೆ ಲಕ್ಷ್ಮಿ ಬೆಳಗೆರೆ, ಉದ್ಯಮಿ ಪ್ರದೀಪ ಕೆಂಜಿಗೆ, ವ್ಯಂಗ್ಯ ಚಿತ್ರಕಾರ, ಸಿದ್ದಾರ್ಥ್ ಅವರ ಸಹಪಾಠಿ ಪ್ರಕಾಶ್ ಶೆಟ್ಟಿ ಇವರೆಲ್ಲಾ ಅಧಿಕ ಮಾಹಿತಿಯನ್ನು ಹಂಚಿಕೊಡಿದ್ದಾರೆ. 

ಪ್ರದೀಪ ಕೆಂಜಿಗೆ ಅವರು ತಮ್ಮ ಲೇಖನದಲ್ಲಿ ಒಂದೆಡೆ ಬರೆಯುತ್ತಾರೆ “ಕೆಫೆ ಕಾಫಿ ಡೇ ಸಿದ್ಧಾರ್ಥರ ಕನಸಿನ ಕೂಸು. ಅದರ ಬೆಳವಣಿಗೆಗೆ ಅಗತ್ಯದ ಪರಿಕರಗಳನ್ನು ಜಗತ್ತಿನೆಲ್ಲೆಡೆಯಿಂದ ಅದೆಷ್ಟೇ ದುಬಾರಿಯಾದರೂ ಬಿಡದೆ ತರುತ್ತಿದ್ದರು. ಸ್ವಂತಕ್ಕೆ ತೀರಾ ಹಿಡಿತದ, ಮಿತವ್ಯಯಿಯಾದ ಸಿದ್ಧಾರ್ಥ್ ಕೆಫೆಯ ವಿಚಾರದಲ್ಲಿ ಮಾತ್ರ ಕೈ ಮುಂದು. ಯಾವುದೇ ವೆಚ್ಚಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹಾಗಾಗಿ ಕೋಟ್ಯಾಂತರ ರುಪಾಯಿ ವೆಚ್ಚದಲ್ಲಿ ಜರ್ಮನಿಯಿಂದ ಕಾಫಿ ರೋಸ್ಟರ್ ಗಳು, ಸ್ವಿಝರ್ ಲ್ಯಾಂಡ್ ನಿಂದ ಕಾಫಿ ಮೆಷಿನ್ ಗಳು, ಫ್ರಾನ್ಸ್ ನಿಂದ ಫ್ಲೇವರ್ ಗಳು, ಇಟಲಿಯಿಂದ ಪೀಠೋಪಕರಣಗಳನ್ನು ಆಮದು ಮಾಡಿಕೊಂಡರು. ಅಷ್ಟೇ ಅಲ್ಲ, ಮುಂದೊಂದು ದಿನ ಈ ಎಲ್ಲಾ ಪರಿಕರಗಳನ್ನು ನಮ್ಮ ಚಿಕ್ಕಮಗಳೂರಿನಲ್ಲೇ ತಯಾರಿಸುವ ಘಟಕಗಳನ್ನು ಸ್ಥಾಪಿಸಿದರು. ಕೆಫೆಗಳ ಆ ದೊಡ್ದ ಕನಸು ಅವರಿಗೆ ಮೊದಲು ಮೊಳಕೆಯೊಡೆದದ್ದು ೧೯೯೫ರ ಸುಮಾರಿಗೆ ಅಥವಾ ಸ್ವಲ್ಪ ಹಿಂದೆಯೇ ಇರಬಹುದು.”

ಈ ಕನಸನ್ನು ನನಸು ಮಾಡಿದ ಸಿದ್ಧಾರ್ಥ್ ವಿದೇಶಗಳಲ್ಲಿರುವಂತೆಯೇ ಇಲ್ಲಿಯೂ ಕಾಫಿ ಹೌಸ್ ಗಳನ್ನು ಪ್ರಾರಂಭಿಸಿದರು. ಈ ಪುಸ್ತಕದಲ್ಲಿ ಸಿದ್ದಾರ್ಥ್ ಅವರ ಬಾಳಿಗೆ ಸಂಬಂಧಿಸಿದ ಹಲವಾರು ಛಾಯಾಚಿತ್ರಗಳಿವೆ. ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ  ಹೀಗೆ ಬರೆದಿದ್ದಾರೆ “ಈ ಸಾವು ಭಯಾನಕ, ಅನಿರೀಕ್ಷಿತ ಮತ್ತು ದುಃಖದಾಯಕ. ಎಸ್ಸೆಂ ಕೃಷ್ಣರ ಅಳಿಯ ಸಿದ್ಧಾರ್ಥ್ ಬದುಕಿದ್ದಾಗ ಸುದ್ದಿಗೆ ಬಂದವರೇ ಅಲ್ಲ. ಅವರು ಪಬ್ಲಿಸಿಟಿಯಿಂದ ತುಂಬ ದೂರ. ಸದ್ದಿಲ್ಲದೇ ನೂರೆಂಟು ಸಾಧನೆಗಳನ್ನು ಮಾಡಿದ ಕ್ರಿಯಾಶೀಲ. ಅವರು ಎಂದಿಗೂ ಯಾರನ್ನೂ ಗಟ್ಟಿಯಾಗಿ ಗದರಿಸಿದವರಲ್ಲ. ಆದರೆ ನಿಮಗೆ ಗೊತ್ತಿರಲಿ, ಇದೇ ಎಸ್ಸೆಂ ಕೃಷ್ಣರ ಅಳಿಯ ಸಿದ್ಧಾರ್ಥ್ ಕರ್ನಾಟಕದ ಮನೆ ಮನೆಗೂ ಬೆಂಕಿ ಹಚ್ಚಿದ ಪರಮ ಕ್ರೂರಿ. ಆ ಸೌಮ್ಯ ಮುಖದ  ಹಿಂದೆ ಒಂದು ಭಯಾನಕ ಸತ್ಯವೂ ಇದೆ. ಇಷ್ಟಕ್ಕೂ ಅವರೇಕೆ ಆತ್ಮಹತ್ಯೆ ಮಾಡಿಕೊಂಡರು? I will tell you.”

ಸುಮಾರು ೭೦ ಪುಟಗಳ ಪುಟ್ಟ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಬಹುದು. ರವಿ ಬೆಳಗೆರೆಯವರು ಈ ಪುಸ್ತಕವನ್ನು ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ಅರ್ಪಿಸಿದ್ದಾರೆ.