ಸಿಯಾಚಿನ್

ಸಿಯಾಚಿನ್

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಉಮೇಶ್
ಪ್ರಕಾಶಕರು
ಧಾತ್ರಿ ಪ್ರಕಾಶನ, ನ್ಯೂ ಕಾಂತರಾಜೇ ಅರಸು ರಸ್ತೆ, ಮೈಸೂರು-೫೭೦೦೦೯, ಮೊ: ೯೯೦೦೫೮೦೩೯೪
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ಡಿಸೆಂಬರ್ ೨೦೨೧

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ ಇದು. ಜನ ಸಾಮಾನ್ಯರಿಗೆ ಹೋಗಲು ಕಷ್ಟ ಸಾಧ್ಯವಾದ, ಅಲ್ಲಿಯ ಬಗ್ಗೆ ಕೇಳಿಯಷ್ಟೇ ತಿಳಿದಿರುವವರಿಗೆ ಸಮಗ್ರ ಮಾಹಿತಿಯನ್ನು ಒಂದು ಪ್ರವಾಸ ಕಥನದ ರೀತಿಯಲ್ಲಿ ಬರೆದಿದ್ದಾರೆ. ಲೇಖಕರು ಸಿಯಾಚಿನ್ ದಾರಿಯಲ್ಲಿ ಕಂಡ ಪ್ರತಿಯೊಂದು ಪುಟ್ಟ ಪುಟ್ಟ ಅಂಶವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆ ನಮ್ಮಲ್ಲಿ ಮೂಡಬಹುದಾದ ಸಂಶಯವನ್ನು ಪರಿಹರಿಸಿದ್ದಾರೆ. 

ಪುಸ್ತಕ ಓದುತ್ತಾ ಓದುತ್ತಾ ನೀವೂ ಸಿಯಾಚಿನ್ ಪ್ರದೇಶದಲ್ಲಿ ಕಳೆದುಹೋಗುವಿರಿ. ನಿಮಗೆ ಗೊತ್ತಿರದ ಪದಗಳ, ಊರುಗಳ, ಮಿಲಿಟರಿ ಭಾಷೆಯ ಪದಗಳ ವಿವರಗಳನ್ನು ಆಯಾ ಪುಟದ ಕೆಳಗಡೆ ನೀಡಿದ್ದಾರೆ. ನೀವು ಆ ಪದಗಳ ಅರ್ಥಗಳಿಗಾಗಿ ಬೇರೆಡೆ ಹುಡುಕಾಡಬೇಕಿಲ್ಲ. ಹಾಗೊಂದು ವೇಳೆ ಯಾವುದಾದರೂ ತಾಂತ್ರಿಕ ವಿಷಯಗಳ ಬಗ್ಗೆ ಸಂಶಯವಿದ್ದರೆ ಪುಸ್ತಕದ ಕೊನೆಯಲ್ಲಿ ತಾಂತ್ರಿಕ ಪದಕೋಶವನ್ನು ನೀಡಿ, ನಿಮ್ಮ ಕೆಲಸವನ್ನು ಸುಲಭ ಮಾಡಿದ್ದಾರೆ. ಉಮೇಶ್ ಅವರ ಬರವಣಿಗೆಯ ಶೈಲಿ ನಿಜಕ್ಕೂ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಈ ಮೊದಲ ಅವರ ಅನುವಾದಗಳಲ್ಲಿ ಮತ್ತು ಕೃತಿಗಳಲ್ಲಿ ಸಾಬೀತಾಗಿದೆ. 

ನಮ್ಮಂಥಹ ಜನಸಾಮಾನ್ಯರಿಗೆ ಸಿಯಾಚಿನ್ ಅಂದರೆ ಲೇಖಕರೇ ಬರೆದಂತೆ ‘ಸಿಯಾಚಿನ್ ಗೆ ಭೇಟಿ ನೀಡಿದ ಪ್ರಧಾನಿಯಿಂದ ದೀಪಾವಳಿ ಆಚರಣೆ, ರಕ್ಷಣಾ ಮಂತ್ರಿಯಿಂದ ಅಗಲಿದ ಯೋಧರಿಗೆ ಗೌರವ ನಮನ, ಸಿಯಾಚಿನ್ ಪ್ರದೇಶದಲ್ಲಿ ಯೋಗ ದಿನಾಚರಣೆ' ಹೀಗೆ ಪತ್ರಿಕಾ ವರದಿಗಳನ್ನು ಓದಲು ಮಾತ್ರ ಸಾಧ್ಯ. ನಮ್ಮವರೇ ಆದ ಕನ್ನಡಿಗರೊಬ್ಬರು ಎಲ್ಲಾ ಅಡೆತಡೆಗಳನ್ನು ಮೀರಿ ಸಿಯಾಚಿನ್ ಪ್ರದೇಶಕ್ಕೆ ತೆರಳಿ ಈ ಪುಸ್ತಕ ಬರೆದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯೇ ಸರಿ. 

“ಸಿಯಾಚಿನ್ ಜಗತ್ತಿನ ಅತ್ಯಂತ ಎತ್ತರದ ಭಯಾನಕ ಯುದ್ಧಭೂಮಿ. ಅಲ್ಲಿನ ವಾತಾವರಣವೇ ಮಹಾಶತ್ರು. ನಿತ್ಯ ಅಲ್ಲಿ ನಡೆಯುವ ರೋಚಕ ವಿದ್ಯಮಾನಗಳೇ ಈ ಕೃತಿಯ ಕಥಾಹಂದರ. ಮರಗಟ್ಟುವ ಚಳಿ ಮತ್ತು ಭೀಕರ ಹಿಮಗಾಳಿಯನ್ನೂ ಲೆಕ್ಕಿಸದೆ ೨೧,೦೦೦ ಅಡಿ ಎತ್ತರದಲ್ಲಿ ನಿಂತು ಹಗಲು ರಾತ್ರಿ ಗಡಿ ಕಾಯುವ ಭಾರತೀಯ ವೀರ ಯೋಧನೇ ಈ ಕೃತಿಯ ಕಥಾನಾಯಕ.” ಈ ವಾಕ್ಯಗಳನ್ನು ಲೇಖಕರು ಪುಸ್ತಕದ ಬೆನ್ನುಡಿಯಾಗಿ ಪ್ರಕಟ ಮಾಡಿದ್ದಾರೆ.

ಮೈಸೂರಿನ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಪ್ರಧಾನ್ ಗುರುದತ್ತ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ “ ಈಗ ನಮ್ಮ ಮುಂದಿರುವ ‘ಸಿಯಾಚಿನ್' ಮೂಲತಃ ಒಂದು ಪ್ರವಾಸ ಕಥನದಂತೆ ಮೊದಲಿಡುತ್ತದೆಯಾದರೂ, ಅನೇಕ ಪ್ರವಾಸ ಕಥನಗಳಿಗೆ ‘ಪ್ರವಾಸಿಗರ ಮಾರ್ಗದರ್ಶಿ'ಗಳಲ್ಲಿನ ಮಾಹಿತಿಯನ್ನು ಅರೆ-ಬರೆಯಾಗಿ ತಂದುಕೊಡುವ ಬೇಸರದ ಕೃತಿಯಾಗಿರದೆ ಖುದ್ದು ಸ್ಥಳ ಸಂದರ್ಶನ, ಭಾರತೀಯ ಸೇನಾನಿ ಮತ್ತು ಯೋಧರುಗಳ ನರಕಾತೀತ ಬವಣೆಗಳ, ಸಾಹಸ ಕಾರ್ಯಗಳ, ಅಪ್ರತಿಮ ತ್ಯಾಗದ, ಅನುಪಮ ಬಲಿದಾನದ, ಶೌರ್ಯ ಪರಾಕ್ರಮಗಳ ಅನೇಕ ಮುಖಗಳನ್ನು ಚಿತ್ರಿಸುವ ಅಪರೂಪದ ನಿರೂಪಣೆಯನ್ನು ಒಳಗೊಂಡಿರುವ ಕೃತಿ.” ಎಂದು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಇವರೂ ತಮ್ಮ ಹಾರೈಕೆಗಳ ಮಾತುಗಳನ್ನು ಬರೆದಿದ್ದಾರೆ. ಲೇಖಕರಾದ ಉಮೇಶ್ ಇವರು ತಮ್ಮ ಮುನ್ನುಡಿಯನ್ನು ೧೯೬೨ರ ಭಾರತ-ಚೀನಾ ಯುದ್ಧದ ಸಮಯದ ಒಂದು ಘಟನೆಯನ್ನು ಉಲ್ಲೇಖಿಸುವುದರ ಮೂಲಕ ಪ್ರಾರಂಭಿಸಿದ್ದಾರೆ. ರೆಸಾಂಗ್ ಲಾ ಎಂಬ ಮಹಾಪರ್ವತದ ಹತ್ತಿರವಿರುವ ಚುಶೂಲ್ ಎಂಬ ಗ್ರಾಮದಲ್ಲಿ ನಡೆದ ಘಟನೆಯಿದು. ಮೈನಸ್ ೨೫ ಡಿಗ್ರಿ ಸೆಂಟಿಗ್ರೇಡ್ ಚಳಿಯಲ್ಲಿ ಭಾರತೀಯ ಸೈನ್ಯದ ಕುಮಾವ್ ರೆಜಿಮೆಂಟ್ ನ ೧೨೩ ಸೈನಿಕರನ್ನು ಮುನ್ನಡೆಸಿದ ವೀರ ಸೈನ್ಯಾಧಿಕಾರಿಯೇ ಮೇಜರ್ ಶೈತಾನ್ ಸಿಂಗ್ ಭಾಟಿ. ಮೂರು ಸಾವಿರ ಚೀನಾ ಸೈನಿಕರ ವಿರುದ್ಧ ವೀರಾವೇಷದಿಂದ ಹೋರಾಡಿ ಹುತಾತ್ಮರಾದ ಮೇಜರ್ ಶೈತಾನ್ ಸಿಂಗ್ ಅವರನ್ನು ಭಾರತೀಯ ಸೇನೆ ಸದಾಕಾಲ ಸ್ಮರಿಸಿಕೊಳ್ಳುತ್ತದೆ. ರೆಸಾಂಗ್ ಲಾ ದಲ್ಲಿ ಅವರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಿದ್ದಾರೆ. ೧೨೩ ಸೈನಿಕರ ಭಾರತೀಯ ಸೇನೆ ೧೩೦೦ ಚೀನಾ ಸೈನಿಕರನ್ನು ಕೊಂದು ಹಾಕಿತ್ತು ಎಂದರೆ ಅದು ಭಾರತದ ವಿಜಯವೇ ಅಲ್ಲವೇ? ಎನ್ನುತ್ತಾರೆ ಲೇಖಕರು. ನಿಜಕ್ಕೂ ಅಂತಹ ಕೆಚ್ಚೆದೆಯ ಸೈನಿಕರನ್ನು ಹೊಂದಿರುವುದೇ ಭಾರತದ ಅಸಲಿ ತಾಕತ್ತು. 

ಈ ಪುಸ್ತಕದ ಪ್ರತಿಯೊಂದು ಪುಟಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ನೀಡಿದ್ದಾರೆ. ಎಲ್ಲಾ ಚಿತ್ರಗಳು ವರ್ಣಮಯವಾಗಿದ್ದರೆ ಪುಸ್ತಕದ ಸೊಗಡೇ ಬೇರೆಯಾಗಿರುತ್ತಿತ್ತು. ಪುಸ್ತಕದ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದ್ದೇ ಇರುತ್ತಿತ್ತು. ಬಹುಶಃ ಈ ಕಾರಣದಿಂದಲೇ ಲೇಖಕರು ಎಂಟು ಪುಟಗಳ ಫೋಟೋಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಪುಟಗಳ ಫೋಟೋಗಳನ್ನು ಕಪ್ಪು ಬಿಳುಪಿನಲ್ಲೇ ಮುದ್ರಿಸಿದ್ದಾರೆ. ಲೇಖಕರ ಜೊತೆ ಅವರ ಸಹೋದರ ಅಭಿಲಾಷ್ ಕೂಡಾ ಈ ಪ್ರವಾಸದಲ್ಲಿ ಜೊತೆಯಾಗಿದ್ದರು. 

ಲಾಮಾಗಳ ನಾಡು ಲಡಾಕ್ ನಿಂದ ಪ್ರಾರಂಭವಾಗುವ ಸಿಯಾಚಿನ್ ಯಾನ ಸಾಗುತ್ತಾ ಸಾಗುತ್ತಾ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಲೇಖಕರು ೨೮ ಅಧ್ಯಾಯಗಳಾಗಿ ಈ ಪುಸ್ತಕವನ್ನು ವಿಂಗಡಿಸಿದ್ದಾರೆ. ಅಲ್ಲಿಯ ಸರಕು ಸಾಗಾಟದ ಪ್ರಾಣಿಯಾದ ಮ್ಯೂಲ್, ಬೆಳೆಯುವ ಹಣ್ಣಾದ ಏಪ್ರಿಕಾಟ್ ಬಗ್ಗೆ ಲೇಖಕರು ವಿವರಗಳನ್ನು ನೀಡಿದ್ದಾರೆ. ಸಾಗುವ ಹಾದಿಯಲ್ಲಿ ಸಿಕ್ಕ ೯೦ರ ಹರೆಯದ ಮುದುಕ ನೀಡಿದ ಬೊಗಸೆ ತುಂಬಾ ಏಪ್ರಿಕಾಟ್ ಹಣ್ಣು, ಹಣ ತೆಗೆದುಕೊಳ್ಳದ ಆತನ ಸೌಜನ್ಯವನ್ನು ಮನಸಾರೆ ವರ್ಣಿಸಿದ್ದಾರೆ. ಅಸ್ಸಾಂ ರೆಜಿಮೆಂಟ್ ನ ಯುದ್ಧ ಘೋಷವಾದ ‘ತಗಡ ರಹೋ’ ಅಥವಾ ಗಟ್ಟಿ ಮುಟ್ಟಾಗಿರು' ಬಗ್ಗೆ ಒಂದು ಪುಟ್ಟ ಘಟನೆಯನ್ನು ಲೇಖಕರು ವಿವರಿಸಿದ್ದಾರೆ. ಅವರದ್ದೇ ಮಾತುಗಳಲ್ಲಿ ಕೇಳಿ. 

“ಒಮ್ಮೆ ಅಸ್ಸಾಂ ರೆಜಿಮೆಂಟ್ ಗೆ ಹೊಸ ಸೈನ್ಯಾಧಿಕಾರಿಯೊಬ್ಬ ಬಂದಿದ್ದ. ಮೊದಲ ದಿನ ರೆಜಿಮೆಂಟಿನ ಸೈನಿಕನೊಬ್ಬ ಅಧಿಕಾರಿಯನ್ನು ಕಂಡ ಕೂಡಲೇ ‘ತಗಡ ರಹೋ ! ಸಾಹಬ್' ಎಂದ. ಕೂಡಲೇ ಆ ಅಧಿಕಾರಿಗೆ ಸಿಟ್ಟು ಬಂದಿತ್ತು. ‘ನಾನು ಅಷ್ಟೊಂದು ಗಟ್ಟಿಮುಟ್ಟಾಗಿದ್ದರೂ ಮತ್ತೆ ಗಟ್ಟಿಯಾಗಿರು ಎಂದು ನನ್ನನ್ನೇ ಅವಮಾನಿಸುತ್ತಿದ್ದಾನಲ್ಲ ಈತ' ಎಂದು ಸಿಡಿಮಿಡಿಗೊಂಡ. ಕೂಡಲೇ ತಾನು ನಿಂತಿದ್ದ ಆ ಬೃಹತ್ ಮೈದಾನವನ್ನು ಹತ್ತು ಸುತ್ತು ಸುತ್ತಿ ಬರುವಂತೆ ಆ ಸೈನಿಕನಿಗೆ ಆದೇಶ ನೀಡಿದ. ಸೈನಿಕನಿಗೆ ಅಚ್ಚರಿ. ತಾನೇನೂ ತಪ್ಪು ಮಾಡಿಲ್ಲವಾದರೂ ಅಧಿಕಾರಿ ಹೀಗೆ ಹೇಳುತ್ತಿದ್ದರಲ್ಲ ಎಂದುಕೊಂಡ. ಏನೇ ಆದರೂ ಅಧಿಕಾರಿ ನೀಡುವ ಶಿಕ್ಷೆಯನ್ನು ಪ್ರಶ್ನಿಸಲಾದೀತೇ? ಸೈನಿಕ ಮರುಮಾತನಾಡದೆ ಮೈದಾನ ಸುತ್ತಲಾರಂಭಿಸಿದ. ವಾಸ್ತವದಲ್ಲಿ ಅದು ಆ ಸೈನಿಕ ಆಡಿದ್ದ ಮಾತಿಗೆ ಸಿಕ್ಕಿದ್ದ ಶಿಕ್ಷೆ. ಪಾಪ ಬಡಪಾಯಿ ಸೈನಿಕ ಮಾಡದ ತಪ್ಪಿಗೆ ಹತ್ತು ಸುತ್ತು ಹೊಡೆದ. ಕಾಲುಗಳೆಲ್ಲಾ ಪದ ಹಾಡುತ್ತಿದ್ದವು. ಬೆವರು ಕಿತ್ತು ಬಂದಿತ್ತು. ಸೈನಿಕ ಮತೆ ಅಧಿಕಾರಿಯ ಮುಂದೆ ಬಂದು ‘ನೀವು ಹೇಳಿದ್ದ ಕೆಲಸ ಮಾಡಿದ್ದೇನೆ ಸಾಹಬ್ ! ತಗಡ್ ರಹೋ ! ಎಂದ. ಅಧಿಕಾರಿಗೆ ಮತ್ತೆ ಪಿತ್ತ ನೆತ್ತಿಗೇರಿತು. ಅಷ್ಟರಲ್ಲಿ JOCಗೆ ಅಲ್ಲಿ ಏನಾಗುತ್ತಿದೆ ಎಂದು ಸೂಕ್ಷ್ಮವಾಗಿ ತಿಳಿಯಿತು. ಕೂಡಲೇ ಆತ ಅಧಿಕಾರಿಯ ಬಳಿಗೆ ಬಂದು ರೆಜಿಮೆಂಟಿನ ಸಂಪ್ರದಾಯದ ಬಗ್ಗೆ ತಿಳಿಸಿದ. ಆನಂತರ ಅಧಿಕಾರಿಯ ಮುಖದಲ್ಲಿ ಮೂಡಿದ್ದು ಮಂದಹಾಸ.” ಹೀಗೆ ಹಲವಾರು ಪುಟ್ಟ ಪುಟ್ಟ ವಿಷಯಗಳನ್ನು ಸ್ವಾರಸ್ಯಕರವಾಗಿ ಬರೆಯುತ್ತಾ ಹೋಗಿದ್ದಾರೆ ಲೇಖಕರು.

ಗಡಿ ರೇಖೆಗಳ ಬಗ್ಗೆ, ಸಿಯಾಚಿನ್ ಯುದ್ಧ ಭೂಮಿಯ ಎತ್ತರದ ಬಗ್ಗೆ, ಓ.ಪಿ.ಬಾಬಾ ಮಂದಿರ, ಬಾಬಾ ಅಮರನಾಥ ಗುಹೆ ಹೀಗೆ ಹತ್ತಾರು ವಿಷಯಗಳ ಬಗ್ಗೆ ಚುಟುಕಾಗಿಯಾದರೂ ಮಾಹಿತಿ ಪೂರ್ಣವಾಗಿ ಬರೆದಿದ್ದಾರೆ. ಇಲ್ಲಿರುವ ಹಲವಾರು ಬಾಬಾ ಮಂದಿರಗಳ ಬಗ್ಗೆ ಬರೆಯುತ್ತಾ ‘ಕುಕ್ಕರ್ ಬಾಬಾ’ ಬಗ್ಗೆ ವರ್ಣಿಸಿರುವುದನ್ನು ಓದುವಾಗ ಮಾತ್ರ ನಮ್ಮ ಮುಖದಲ್ಲೂ ಮಂದಹಾಸ ಮೂಡುವುದು ಖಂಡಿತ. ಸಿಯಾಚಿನ್ ಯುದ್ಧ ಭೂಮಿಯ ಬಗ್ಗೆ ಈ ರೀತಿಯ ಸಮಗ್ರ ಮಾಹಿತಿ ನೀಡುವ ಪುಸ್ತಕ ಇರಲೇ ಇಲ್ಲ. ‘ಹುಲ್ಲು ಕಡ್ಡಿ ಸಹಾ ಬೆಳೆಯದ ಪ್ರದೇಶ’ ಎಂದು ಜವಾಹರ್ ಲಾಲ ನೆಹರೂ ಬಾಯಲ್ಲಿ ಹೇಳಿಸಿಕೊಂಡ ಸಿಯಾಚಿನ್ ಬಗ್ಗೆ ತಿಳಿಯಲು ಬಹಳಷ್ಟಿದೆ ಎಂದು ಈ ಪುಸ್ತಕ ಓದುವಾಗ ತಿಳಿದು ಬರುತ್ತದೆ. ಇದು ಭಾರತದ ಮುಕುಟ ಎಂದರೂ ತಪ್ಪೇನಿಲ್ಲ.

ಎಸ್. ಉಮೇಶ್ ಅವರ ಸಾಧನೆ ಅಭಿನಂದನೀಯ. ಮೂರು ತಿಂಗಳು ಕೊರೆಯುವ ಮೈನಸ್ ಡಿಗ್ರಿಯ ಚಳಿಯಲ್ಲಿ ಸಿಯಾಚಿನ್ ಪ್ರದೇಶವನ್ನು ಕಾಯುವುದು ನಮ್ಮ ಭಾರತೀಯ ಸೈನಿಕರಿಗೆ ಹೆಮ್ಮೆಯ ಸಂಗತಿ. ಅಪರೂಪದ ಆಕಾರದ ಪುಸ್ತಕದ ಮುಖಪುಟವನ್ನು ಸಿಯಾಚಿನ್ ಬೇಸ್ ಕ್ಯಾಂಪ್ ನಲ್ಲಿ ಲೇಖಕರು ಶಿಲಾ ಚೆಂಡನ್ನು ಮೇಲಕ್ಕೆ ಎಸೆಯುವ ಚಿತ್ರ ಅಲಂಕರಿಸಿದೆ. ಇದೊಂದು ಅಪರೂಪದ ಚಿತ್ರ ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ ಏಕೆಂದರೆ ಈ ಚಿತ್ರದ ಬಲಭಾಗದ ಪರ್ವತಶ್ರೇಣಿಯೇ ಕಾರಕೋರಂ ಪಾಸ್. ಅದರ ಆಚೆಗೆ ಚೀನಾ ಆಕ್ರಮಿತ ಕಾಶ್ಮೀರ. ವಿವಾದಿತ ಚೀನಾ -ಪಾಕೀಸ್ತಾನ್ ಎಕನಾಮಿಕ್ ಕಾರಿಡಾರ್ (CPEC)  ಹಾದುಹೋಗುವುದು ಇಲ್ಲೇ. ಚಿತ್ರದ ಎಡಭಾಗದ ಶಿಖರ ಸಾಲುಗಳೇ ಸಾಲ್ತೋರ್ ರಿಡ್ಜ್. ಅಲ್ಲಿಂದ ಮುಂದೆ ಕಾಣುವುದೇ ಪಾಕ್ ಆಕ್ರಮಿತ ಕಾಶ್ಮೀರ. 

೧೮೮ ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಿದಾಗ ನೀವು ಸಿಯಾಚಿನ್ ಯುದ್ಧ ಭೂಮಿಗೆ ಹೋಗಿ ಬಂದ ಪ್ರತ್ಯಕ್ಷದರ್ಶಿಯಾಗಿ ಬಿಡುತ್ತೀರಿ. ಪುಸ್ತಕ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಲೇಖಕರು ಪುಸ್ತಕವನ್ನು ಸಿಯಾಚಿನ್ ಹಿಮಶಿಖರಗಳಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಂತು ಹೋರಾಡುತ್ತಿರುವ ಭಾರತೀಯ ಸೈನಿಕರಿಕರಿಗೆ ಸಮರ್ಪಿಸಿದ್ದಾರೆ. ಈ ಪುಸ್ತಕ ಓದಿ ಮುಗಿಸಿದಾಗ ನಿಮ್ಮ ಎದೆಯಲ್ಲೂ ದೇಶಭಕ್ತಿ ಖಂಡಿತವಾಗಿಯೂ ಅರಳಿ ನಿಲ್ಲುವುದರಲ್ಲಿ ಸಂದೇಹವಿಲ್ಲ.