ಸೀಗೆ ಹುಣ್ಣಿಮೆಯ ಸಂಭ್ರಮ

ಸೀಗೆ ಹುಣ್ಣಿಮೆಯ ಸಂಭ್ರಮ

ಕೆಮ್ಮಣ್ಣು ಸುಣ್ಣದಿ

ಚಿತ್ತಾರ ಬಿಡಿಸಿದ ಬುಟ್ಟಿ

ವೈವಿಧ್ಯ ಖಾದ್ಯಗಳ

ಭೂದೇವಿಗೆ ಚರಗ ಅರ್ಪಿಸುತ ಒಟ್ಟು

ನಲಿವಾರು ಕುಣಿವಾರು

ಉಂಡುಟ್ಟು ಹೊಲದಿ

ಹಾಡಿನ ಪದಬಂಡಿ

ಗಾಳಿಪಟ ಹಾರಿಸುವರು

ಪಾಂಡವರೈವರ ನೆನೆಯುತ

ಕಲ್ಲಿಗೆ ಪೂಜೆ ಗೈಯುತ

ಕಳ್ಳಕಲ್ಲು ಸ್ಥಾಪಿಸಿ ಎಡೆಯಿಕ್ಕುವರು

ಭೂಮಿತಾಯಿ ಫಸಲಿಗೆ

ಶ್ರೀಮಂತ ಮಾಡಿ ಕೃತಜ್ಞತೆ ಹೇಳುವರು

ರೈತಾಪಿ ವರ್ಗದ

ಸಡಗರದ ಸೀಗೆ ಹುಣ್ಣಿಮೆ

ಸೀಗೆ ಹುಣ್ಣಿಮೆ (ಭೂಮಿ ಹುಣ್ಣಿಮೆ) ಅಥವಾ ಚರಗ ನೀಡುವ ಸಂಪ್ರದಾಯ ರೈತಾಪಿ ವರ್ಗದಲ್ಲಿ ಅತಿ ಹೆಚ್ಚು ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯಲ್ಲಿ ಆಚರಿಸುವ ಹಬ್ಬವಾಗಿದೆ. ಭೂಮಿತಾಯಿ ನಮಗೆ ಸಂಪತ್ತನ್ನು, ಧನಧಾನ್ಯಗಳನ್ನು ನೀಡಿ ಬದುಕಿಗೊಂದು ಅರ್ಥವನ್ನು ಕಲ್ಪಿಸುವವಳು. ಉದರವನ್ನು ತುಂಬಿಸುವವಳು. ಅನ್ನದ ಋಣ ಸ್ವಲ್ಪವಾದರೂ ತೀರಿಸಬೇಕಲ್ಲವೇ? ಖೆಡ್ವಾಸ (ತುಳು ಭಾಷೆ)ದಲ್ಲಿ ಮುಟ್ಟಾದ ಭೂಮಿತಾಯಿಗೆ ಸೀಗೆ ಹುಣ್ಣಿಮೆ ಅಥವಾ ಶರದ್ ಪೌರ್ಣಿಮೆಯಂದು ವೈವಿಧ್ಯ ಖಾದ್ಯಗಳನ್ನು ತಯಾರಿಸಿ ಸೀಮಂತ ಮಾಡುತ್ತಾರೆ. ಈ ಭಕ್ಷ್ಯಗಳನ್ನೆಲ್ಲ ಹೊಲದಲ್ಲಿ ಬಡಿಸಿ,ಭೂಮಿ ತಾಯಿಯನ್ನು ಸಂತೃಪ್ತಿ ಪಡಿಸುವರು.'ಚರಗ ಚೆಲ್ಲುವುದೆಂದು' ಹೇಳುವರು.

ಅಶ್ವಯುಜ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಎತ್ತುಗಳ ಕೋಡಿಗೆ ಬಣ್ಣ ಬಳಿದು ಸಿಂಗರಿಸುವರು. ಈ ದಿನ ಸಮುದ್ರಮಥನ ಕಾಲದಲ್ಲಿ ಲಕ್ಷ್ಮೀದೇವಿ ಹುಟ್ಟಿ ಬಂದಳೆಂಬ ಉಲ್ಲೇಖವೂ ಇದೆ. ಪೂರ್ಣಿಮೆಯ ತಂಪಾದ ಶಶಿಯ ಬೆಳದಿಂಗಳಿನಿಂದ ಅಮೃತ ಕಿರಣಗಳು ಪಸರಿಸುತ್ತದೆಯೆಂಬುದೂ ತಿಳಿದು ಬರುತ್ತದೆ. ಚಂದ್ರನು ಕ್ಷೀಣಿಸಿದ್ದನ್ನು ತೇಜೋವಂತನಾಗಿ ಮಾಡುವವನು. ರೋಗ ನಿವಾರಕನೆಂಬ ನಂಬಿಕೆ. ಲಕ್ಷ್ಮೀದೇವಿ ಮನೆಮನೆಗೆ ಭೇಟಿ ನೀಡುವಳೆಂಬ ಪ್ರತೀತಿ ಇದೆ. ಒಂದು ರೀತಿಯ 'ಧಾರ್ಮಿಕ ಹಬ್ಬವೂ' ಆಗಿದೆ. ಭೂಮಿಯ ಫಲವಂತಿಕೆಯ ಪೂಜೆಯಾದ ಕಾರಣ ಉಂಡೆ, ಚಕ್ಕುಲಿ, ಕೋಡುಬಳೆ, ಸಕ್ಕರೆ ಅಚ್ಚು, ಪಾಯಸ, ಶೇಂಗಾ ಹೋಳಿಗೆ, ಹುರಿಯಕ್ಕಿ ಉಂಡೆ, ರೊಟ್ಟಿ, ಸಜ್ಜೆ,ಪಲ್ಯ ಇತ್ಯಾದಿ ಖಾದ್ಯಗಳನ್ನು ಬೆಳಗಿನ ಜಾವವೆದ್ದು, ಶುಚಿಯಿಂದ ಮನೆಯ ಹೆಣ್ಣುಮಕ್ಕಳು ತಯಾರಿಸುವರು. ಗಂಡಸರು ಎತ್ತಿನ ಗಾಡಿಯೊಳಗೆ ಚಿತ್ತಾರ ಬರೆದ ಬಿದಿರಿನ ಬುಟ್ಟಿಯೊಳಗಿಟ್ಟು ಎಲ್ಲಾ ಬಂಧುಗಳೂ ಹೊಲದಲ್ಲಿ ಒಟ್ಟಾಗುವರು. ಹಾಗೆಯೇ ಪೌರಾಣಿಕ ಕಥೆಯಂತೆ ಪಾಂಡವರೈವರ ಕಲ್ಲುಗಳನ್ನಿರಿಸಿ, ಜೊತೆಗೆ ಒಂದು ಕಳ್ಳಕಲ್ಲನ್ನಿರಿಸಿ, ಸಿಂಗರಿಸುವರು. ಬನ್ನಿ ಎಲೆಯೊಂದಿಗೆ ಮಾಡಿದ ಅಡುಗೆಯನ್ನೆಲ್ಲ ಬಡಿಸಿ ನೈವೇದ್ಯ ಮಾಡುವರು. ಉತ್ತಮ ಬೆಳೆ ಸಿಗಲಿ, ಫಸಲನ್ನು ಕೀಟಗಳಿಂದ ಹಾಳಾಗದಂತೆ ರಕ್ಷಿಸಿರಿ, ಅತಿವೃಷ್ಠಿ ಅನಾವೃಷ್ಠಿ ಬಾರದಿರಲಿ, ರೈತಾಪಿ ಜನರ ಕೈಹಿಡಿದು ನಡೆಸಿರೆಂದು ಪ್ರಾರ್ಥಿಸುವರು.

ಹಳ್ಳಿಗರಾದ ನಾವು ಭೂಮಿತಾಯಿಯನ್ನು ಪ್ರತಿಕ್ಷಣ ನೆನೆಯುತ್ತೇವೆ. ಫಲಹೊತ್ತ ಬುವಿಯ ಸೌಂದರ್ಯ ಬಣ್ಣಿಸಲಸದಳ. ವಿವಿಧ ಪದಾರ್ಥಗಳೂ, ಸಿಹಿ ಖಾದ್ಯಗಳೂ, ಎಣ್ಣೆಯಲ್ಲಿ ಬೇಯಿಸಿದ ಕಜ್ಜಾಯಗಳೊಂದಿಗೆ ಅನೇಕ ಗಿಡಬಳ್ಳಿಗಳ ಚಿಗುರಿನ ಸೊಪ್ಪಿನ ಪಲ್ಯ, ಸೌತೆಯ ಕಡುಬು, ಬಾಳೆದಿಂಡು, ಹೀರೇಕಾಯಿ ಪಲ್ಯ, ಕೊಟ್ಟೆ  ಕಡುಬು ಇತ್ಯಾದಿಗಳನ್ನು ಪೂಜಿಸಿ, ಭೂಮಿ ತಾಯಿಗರ್ಪಿಸಿ, ಪಾಂಡವರ ಪ್ರತೀತಿ ಕಲ್ಲುಗಳಿಗೆ ನೀಡಿ ಎಡೆ ಬಡಿಸಿ  ,ಕೆಲವು ಕಡೆ ಮಣ್ಣಿನಿಂದ ಮುಚ್ಚುವರು. ಕೆಲವೆಡೆ ಭೂಮಿಗೆ ಚೆಲ್ಲುತ ಹರಡುವರು. ಈ ಪದ್ಧತಿಗೆ 'ಚರಗ ಚೆಲ್ಲುವಿಕೆ' ಎನ್ನುವರು. ಭೂಮಿತಾಯಿ ನಮಗೆ ಹೇಗೆ ನೀಡುವಳೋ ಅದರಲ್ಲಿ ಒಂದಂಶ ತಾಯಿಗೆ ನೀಡಿ ನಾವು  ಋಣ ತೀರಿಸಬೇಕು, ಕೃತಜ್ಞರಾಗಬೇಕು ಎನ್ನುವುದೇ ಈ ಸಂಪ್ರದಾಯ. ಇದೆಲ್ಲ ಆಗಿ ಪ್ರಾರ್ಥನೆಯಾದ ಮೇಲೆ ಬಂಧುವರ್ಗದವರೊಂದಿಗೆ ಮನೆಮಂದಿ ಹೊಲದಲ್ಲಿ ಕುಳಿತು ಸಂಭ್ರಮದಿಂದ ಉಣ್ಣುವರು.

(ಸಂಗ್ರಹ)

-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ