ಸೀಮಾರೇಖೆ ಉಲ್ಲಂಘನೆಯಾಗಬೇಕೇ?

ಸೀಮಾರೇಖೆ ಉಲ್ಲಂಘನೆಯಾಗಬೇಕೇ?

ಮಂದಿರ, ಮಸೀದಿಗಳ ಪ್ರಾರ್ಥನೆಯ ಸಮಯದಲ್ಲಿ ಹೊರಗೆ ಬಳಸುವ ಧ್ವನಿವರ್ಧಕ ಮತ್ತದರಿಂದ ಹೊರಹೊಮ್ಮುವ ಶಬ್ದ ತೀವ್ರತೆಯ ಬಗ್ಗೆ ದಶಕಗಳಿಂದಲೂ ಈ ದೇಶದ ಎಲ್ಲ ಕಡೆ ಜಿಜ್ಞಾಸೆ ಇದೆ. ಮಂದಿರದಲ್ಲಿ  ಗಂಟೆ, ಜಾಗಟೆ ಮೊಳಗಬಾರದೇಕೆ? ಇದು ಜನತೆಗೆ ಧ್ವನಿವರ್ಧಕದ ಮೂಲಕ ತಲುಪಬಾರದೇಕೆ? ಈ ಪ್ರಶ್ನೆಗಳಿಂದು ದೇಶದ ಉನ್ನತ ನ್ಯಾಯಪೀಠಗಳ ಮುಂದೆ ಗಂಭೀರ ಸ್ವರೂಪದ ವಾದ, ಪ್ರತಿವಾದಗಳಿಗೆ ಎಡೆ ಮಾಡಿಕೊಟ್ಟಿರುವುದು ನಿಜ.

ಭಾರತ ದೇಶವು ಪ್ರಜಾತಂತ್ರದ ನೆಲೆಯೂ ಹೌದು. ಇಲ್ಲಿ ಮಂದಿರಗಳೂ ಇವೆ. ಹಾಗೆಯೇ ಮಸೀದಿಗಳೂ ಕೂಡಾ. ಅವರವರ ಧರ್ಮಾಚರಣೆಗೆ ಯಾವುದೇ ಅಡ್ಡಿ ಆಕ್ಷೇಪಗಳಿಲ್ಲದೆ ವಿಧಿಯನ್ನು ಆಚರಿಸುವ ಹಕ್ಕುಗಳಂತೂ ಇದೆ. ಇದೇ ವೇಳೆ ಧ್ವನಿವರ್ಧಕಗಳಿಂದ ಹೊರಡುವ ಶಬ್ದ ತೀವ್ರತೆ ಕುರಿತು ವಿವಿಧ ಸರ್ಕಾರಗಳು ಮತ್ತು ದೇಶದ ಉನ್ನತ ನ್ಯಾಯಾಲಯಗಳು ಹಲವು ಹತ್ತು ತೀರ್ಪುಗಳನ್ನು ನೀಡಿರುವುದು ಗಮನಾರ್ಹ. ಒಟ್ಟಿನಲ್ಲಿ ಈ ವಿಚಾರದಲ್ಲಿ ಈ ದೇಶದ ನ್ಯಾಯಪೀಠಗಳು ಹೇಳಿರುವ ತಿರುಳು ಇಷ್ಟೆ. ಮಂದಿರವಿರಲಿ, ಮಸೀದಿಯಾಗಲಿ ಪ್ರಾರ್ಥನೆಯ ಸಮಯದಲ್ಲಿ ಧ್ವನಿವರ್ಧಕಗಳ ಮೂಲಕ ಹೊರಬರುವ ಶಬ್ಧ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಭಂಗ ತರುವ ರೀತಿಯಲ್ಲಿರಬಾರದು. ಆದರೆ ಇಂತಹ ಆದೇಶಗಳನ್ನು ಮೇಲಿಂದ ಮೇಲೆ ನ್ಯಾಯಾಲಯಗಳು ಫೋಷಿಸಿದರೂ ಅವುಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ಸಾರ್ವತ್ರಿಕ ಆರೋಪಗಳೂ ಇವೆ.

ಹೌದು, ಧರ್ಮನಿರಪೇಕ್ಷ ದೇಶದಲ್ಲಿ ಧಾರ್ಮಿಕ ಸಂಪ್ರದಾಯ ಮತ್ತು ಪಾಲನೆಗೆ ಸಂಬಂಧಿಸಿದಂತೆ ಕೋರ್ಟುಗಳು ನೀಡಿರುವ ತೀರ್ಪುಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಿರುವ ಪ್ರಥಮ ಕರ್ತವ್ಯ ಸರಕಾರದ್ದು. ಮಿಗಿಲಾಗಿ ಅಂತಹ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಹೊಣೆಗಾರಿಕೆ ಜನತೆಯದ್ದು. ಯಾವುದೇ ಧರ್ಮವಾಗಲಿ, ಅದನ್ನು ಸಾಮರಸ್ಯ ಮತ್ತು ಸಹನೆಯಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಪಾಲಿಸಿಕೊಂಡು ಹೋದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಸಮಾಜದ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುವ ರೀತಿಯಲ್ಲಿ ನಡೆದುಕೊಂಡರೆ ಅದು ದೇಶದ ಸಂವಿಧಾನದ ಪಾಲನೆಗೆ ಭಂಗವುಂಟಾಗುತ್ತೆ. ಮಸೀದಿಗಳಲ್ಲಿ ನಿತ್ಯ ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ನಡೆಯುವ ಆಜಾನ್ ಮತ್ತು ಧ್ವನಿವರ್ಧಕ ಬಳಕೆ ಸಂಬಂಧ ರಾಜ್ಯ ಹೈಕೋರ್ಟ್ ಬಹಳ ದಿನಗಳ ಹಿಂದೆಯೇ ಪ್ರಮುಖ ತೀರ್ಪು ನೀಡಿದೆ. ಆಜಾನ್ ವೇಳೆ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ಇಂತಿಷ್ಟೇ (ಡೆಸಿಬಲ್) ಸದ್ದಿನ ಪ್ರಮಾಣದಲ್ಲಿ ಧ್ವನಿವರ್ಧಕದಿಂದ ಇದು ಹೊರ ಬರಬೇಕೆಂದೂ ಕೋರ್ಟ್ ವಿಧಿಸಿರುವ ನಿರ್ಭಂಧ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಈ ವಿಚಾರದಲ್ಲಿ ನೀಡಿರುವ ಹೇಳಿಕೆ ಸ್ಪಷ್ಟ. ಆಜಾನ್ ವಿಚಾರದಲ್ಲಿ ಇದುವರೆಗೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ಅನುಸಾರವೇ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿರುವುದು ಅತಿ ಮುಖ್ಯ. ಇಂತಹ ಧರ್ಮ ಸೂಕ್ಷ್ಮ ವಿಷಯಗಳಲ್ಲಿ ಇಡೀ ಸಮಾಜವಿಂದು ಎಚ್ಚರಿಕೆ ಮತ್ತು ಸಾಮರಸ್ಯದ ಧೋರಣೆ ಅನುಸರಿಸುವುದು ಸೂಕ್ತ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೬-೦೪-೨೦೨೨

ಸಾಂದರ್ಭಿಕ ಚಿತ್ರ: ಅಂತರ್ಜಾಲ ತಾಣ