ಸುಧಾರಿತ ಪ್ಯಾರಾಚ್ಯೂಟ್ ಗಳು ಹಾಗೂ ಚಿಮ್ಮುವ ಆಸನ
ಪ್ಯಾರಾಚ್ಯೂಟ್ ಸರಣಿಯ ಮೂರನೇಯ ಭಾಗ ಇದು. ಈ ಭಾಗದಲ್ಲಿ ನಾವು ವಿಮಾನದಲ್ಲಿ ಚಾಲಕರ ಪ್ರಾಣರಕ್ಷಣೆಗೆ ಬಳಕೆಯಾಗುವ ‘ಚಿಮ್ಮುವ ಆಸನ' ಎಂಬ ವ್ಯವಸ್ಥೆಯ ಬಗ್ಗೆ ಹಾಗೂ ಪ್ಯಾರಾಚ್ಯೂಟ್ ಗಳ ತಯಾರಿಕೆಯಲ್ಲಿ ಸುಧಾರಣೆಗಳು ಸಾಗಿ ಬಂದ ಹಾದಿಯನ್ನು ಗಮನಿಸುವ.
ವಿಮಾನವೊಂದು ಆಗಸದಲ್ಲಿ ಹಾರಾಡುತ್ತಿರುವಾಗ ಅವಘಡಕ್ಕೆ ತುತ್ತಾದರೆ ಚಾಲಕನಿಗೆ ಬಾಗಿಲು ತೆಗೆದು ಹೊರಗೆ ಹಾರುವಷ್ಟು ಸಮಯವಿರುವುದಿಲ್ಲ. ಈ ಸಂದರ್ಭಕ್ಕೆ ಬಳಕೆಯಾಗುವ ವ್ಯವಸ್ಥೆಯೇ ‘ಚಿಮ್ಮುವ ಆಸನ'. ಅವಘಡಗಳು ಸಂಭವಿಸಿದಾಗ ಚಾಲಕ ತನ್ನ ಆಸನದ ತಲೆಯ ಭಾಗದಲ್ಲಿರುವ ಅಥವಾ ಕಾಲಿನ ಹತ್ತಿರದ ಹಿಡಿಕೆಯನ್ನು ಎಳೆಯುತ್ತಾನೆ. ಆಗ ಅವನ ಆಸನದ ಕೆಳಗೆ ಚಿಕ್ಕ ಸ್ಫೋಟವುಂಟಾಗುತ್ತದೆ. ಇದರಿಂದ ಚಾಲಕ ತನ್ನ ಆಸನ ಸಹಿತವಾಗಿ ವೇಗವಾಗಿ ಸುಮಾರು ಅರವತ್ತು ಅಡಿ ದೂರಕ್ಕೆ ವಿಮಾನದಿಂದ ಮೇಲಕ್ಕೆ ಹಾರಿಸಲ್ಪಡುತ್ತಾನೆ. ವೇಗವಾಗಿ ಚಲಿಸುತ್ತಿರುವ ವಿಮಾನದಿಂದ ಹೊರಗೆ ಹಾರಿರುವುದರಿಂದ ಅವನು ಆಸನ ಸಹಿತವಾಗಿ ಗಾಳಿಯಲ್ಲಿ ಹೊರಳಾಡುತ್ತಿರುತ್ತಾನೆ. ಇದನ್ನು ಸರಿಪಡಿಸಲು ಆ ಆಸನಕ್ಕೆ ಪುಟ್ಟ ಪ್ಯಾರಾಚ್ಯೂಟ್ ವ್ಯವಸ್ಥೆ ಇರುತ್ತದೆ. ಇದು ಅವನ ಸಮತೋಲನವನ್ನು ಕಾಪಾಡುತ್ತದೆ.
ಚಾಲಕ ಕೆಳಗೆ ಇಳಿಯುತ್ತಿದ್ದಂತೆ ಆಸನಕ್ಕೆ ಕಟ್ಟಿಕೊಂಡ ಪಟ್ಟಿಯನ್ನು ಬಿಚ್ಚಿ ಅದನ್ನು ದೂರಕ್ಕೆ ಎಸೆಯುತ್ತಾನೆ. ಆಸನವನ್ನು ದೂರಕ್ಕೆ ತಳ್ಳುವ ಸಮಯ ಮತ್ತು ಪ್ಯಾರಾಚ್ಯೂಟ್ ಬಿಚ್ಚಿಕೊಳ್ಳುವ ಸಮಯದ ಅಂತರವನ್ನು ಹೊಂದಿಸಿರುವುದರಿಂದ ಪ್ಯಾರಾಚ್ಯೂಟ್ ಬಿಚ್ಚಿಕೊಳ್ಳುವಾಗ ಆಗುವ ಆಘಾತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹೊರಕ್ಕೆ ಬಂದಾಗ ಹಲವಾರು ಸಲ ಗಾಳಿಯ ಹೊಡೆತ ಜಾಸ್ತಿ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಚಾಲಕರು ‘ಜೀವರಕ್ಷಕ ಕೋಶ' ಎಂಬ ಉಪಕರಣವನ್ನು ಬಳಸುತ್ತಾರೆ.
ಪ್ಯಾರಾಚ್ಯೂಟ್ ಗಳನ್ನು ತಯಾರಿಸಲು ಎರಡನೆಯ ಮಹಾಯುದ್ಧದವರೆಗೂ ಹತ್ತಿಯ ನಾರು, ಅಗಸೆ ನಾರು ಅಥವಾ ಸೆಣಬಿನ ನಾರುಗಳನ್ನು ಬಳಸಲಾಗುತ್ತಿತ್ತು. ಇದು ಭಾರವಾಗಿದ್ದು, ಈ ನಾರುಗಳ ಹಗ್ಗಗಳು ಒಂದಕ್ಕೊಂದು ಹೊಸೆದುಕೊಂಡು ಬಿಡುತ್ತಿದ್ದವು. ಪ್ಯಾರಾಚ್ಯೂಟ್ ಬಿಡಿಸಿಕೊಂಡಾಗ ಈ ದಾರಗಳು ಒಂದಕ್ಕೊಂಡು ಹೆಣೆದುಕೊಂಡು ಬಿಡುತ್ತಿದ್ದವು. ಹೀಗೆ ಹೆಣೆದುಕೊಂಡಾಗ ಪ್ಯಾರಾಚ್ಯೂಟ್ ಗಳು ಸರಿಯಾಗಿ ಕೆಳಗಡೆ ಇಳಿಯುತ್ತಿರಲಿಲ್ಲ. ಕ್ರಮೇಣ ಇದನ್ನು ಸರಿಪಡಿಸಲು ರೇಷ್ಮೆಯ ದಾರಗಳನ್ನು ಬಳಸಲು ಶುರು ಮಾಡಿದರು. ನಂತರ ಬಂದದ್ದೇ ರಯಾನ್ ಎಂಬ ದಾರದ ಪ್ಯಾರಾಚ್ಯೂಟ್. ಹತ್ತಿ ಹಾಗೂ ಅಗಸೆ ನಾರಿನಿಂದ ತಯಾರಿಸಲ್ಪಟ್ಟ ಪ್ಯಾರಾಚ್ಯೂಟ್ ಗಳ ವೆಚ್ಚ ಕಮ್ಮಿಯಾಗಿದ್ದರೂ ಅದರಲ್ಲಿ ತಾಂತ್ರಿಕ ಸಮಸ್ಯೆ, ಅಧಿಕ ಭಾರ ಇರುತ್ತಿತ್ತು. ಒಮ್ಮೆ ಬಿಡಿಸಿದ ಪ್ಯಾರಾಚ್ಯೂಟ್ ಮತ್ತೆ ಮಡಿಸಲು ಬಹಳ ಸಮಯ ಬೇಕಾಗುತ್ತಿತ್ತು. ಆದರೆ ರಯಾನ್ ಹಾಗೂ ರೇಷ್ಮೆಯ ಪ್ಯಾರಾಚ್ಯೂಟ್ ಗಳು ಹಗುರವಾಗಿದ್ದರೂ ತಯಾರಿಕಾ ವೆಚ್ಚ ಬಹಳ ದುಬಾರಿಯಾಗಿತ್ತು.
೧೯೩೯ರಲ್ಲಿ ಅಮೇರಿಕಾದ ‘ಡ್ಯೂಪಾಂಟ್’ ಎಂಬ ಕಂಪೆನಿಯವರು ಒಂದು ಹೊಸ ವಸ್ತುವಾದ ನೈಲಾನ್ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದು ಪ್ಯಾರಾಚ್ಯೂಟ್ ತಯಾರಿಕೆಯಲ್ಲಿ ಬಳಸಲಾಗಿ ಬಹುಬೇಗನೇ ಜನಪ್ರಿಯವಾಯಿತು. ಇದರ ಜನಪ್ರಿಯತೆಗೆ ಹಲವಾರು ಕಾರಣಗಳಿದ್ದುವು.
* ನೈಲಾನ್ ಎಳೆಗಳು ಹತ್ತಿ, ಅಗಸೆ, ರೇಷ್ಮೆ, ರಯಾನ್ ಗಳಿಗಿಂತ ಶಕ್ತಿಯುತವಾಗಿರುತ್ತವೆ. ಅವುಗಳಿಗೆ ಹೊಳಪೂ ಇರುವುದರಿಂದ ಆಕರ್ಷಕವಾಗಿಯೂ ಕಾಣಿಸುತ್ತವೆ.
* ಇದರಿಂದ ತಯಾರಿಸಲಾದ ಪ್ಯಾರಾಚ್ಯೂಟ್ ನ ಕೊಡೆ ಬಿಡಿಸಿಕೊಳ್ಳುವಾಗ ಅದರಿಂದ ಆಗುವ ಮೇಲ್ಮುಖ ಎಳೆತ ಅಥವಾ ಆಘಾತ ಬಹಳ ಕಡಿಮೆ.
* ನೈಲಾನ್ ಬಿಸಿ ಮಾಡಿದಾಗ ಕರಗುತ್ತದೆ. ಆದುದರಿಂದ ಇದರಿಂದ ಯಾವ ಆಕಾರವನ್ನು ಬೇಕಾದರೂ ಪಡೆಯಬಹುದು.
* ನೈಲಾನ್ ವಸ್ತುವಿಗೆ ಯಾವ ಬಣ್ಣವನ್ನು ಬೇಕಾದರೂ ಹಾಕಬಹುದು. ಇದರಿಂದಾಗಿ ಪ್ಯಾರಾಚ್ಯೂಟ್ ಅನ್ನು ಆಕರ್ಷಕವಾಗಿ ಕಾಣಿಸುವಂತೆ ಮಾಡಬಹುದು.
* ಸಣ್ಣದಾಗಿ ಮಡಿಸಿ ಪ್ಯಾಕ್ ಮಾಡಬಹುದು. ಅಧಿಕ ಜಾಗದ ಅವಶ್ಯಕತೆಯಿಲ್ಲ. ತೂಕವೂ ಬಹಳ ಕಡಿಮೆ.
ನೈಲಾನ್ ಪ್ಯಾರಾಚ್ಯೂಟ್ ನ ದಾರಗಳಲ್ಲಿ ಒಂದು ಅನನುಕೂಲತೆ ಇದೆ. ತೂಗು ಹಗ್ಗಗಳು ಎಲ್ಲಾದರೂ ಉಜ್ಜಿ ಹೋದರೆ ಅಥವಾ ಘರ್ಷಣೆಗೆ ಒಳಪಟ್ಟರೆ ಕರಗುತ್ತವೆ. ಇದರಿಂದ ಪ್ಯಾರಾಚ್ಯೂಟ್ ಗೆ ಧಕ್ಕೆಯಾಗುತ್ತದೆ. ಇದನ್ನು ನಿವಾರಿಸಲು ನೈಲಾನಿಗೆ ಸಿಲಿಕೋನ್ ನ ತೆಳುಪದರದ ರಕ್ಷಣೆ ಕೊಟ್ಟಿರುತ್ತಾರೆ.
ಪ್ಯಾರಾಚ್ಯೂಟ್ ಯಾವ ಕ್ರಮದಲ್ಲಿ ಬಿಚ್ಚಿಕೊಳ್ಳಬೇಕು ಎಂದು ಮೊದಲೇ ನಿರ್ಧಾರ ಮಾಡಲಾಗಿರುತ್ತದೆ. ಆ ರೀತಿಯಲ್ಲೇ ಅದನ್ನು ಮಡಚಿ ಇಡುತ್ತಾರೆ. ಮಡಚುವಾಗ ಇಸ್ತ್ರಿ ಮಾಡಿ ಇಡಬೇಕಾಗುತ್ತದೆ. ಇದರಿಂದ ನೈಲಾನ್ ಎಳೆಗಳು ಅಗಲವಾಗಿ ಹೆಚ್ಚು ಗಾಳಿಯನ್ನು ಹಿಡಿದಿಡುವ ಸಾಮರ್ಥ್ಯವನ್ನು ಪಡೆಯುತ್ತವೆ.
ನಂತರದ ದಿನಗಳಲ್ಲಿ ಪ್ಯಾರಚ್ಯೂಟ್ ತಯಾರಿಕೆಯಲ್ಲಿ ಪಾಲಿಪ್ರೊಪಿಲೀನ್, ಪಾಲಿಥೀನ್ ಹಾಗೂ ಕ್ರೇಪ್ ವಸ್ತುಗಳನ್ನು ಬಳಸಿ ಪ್ರಯತ್ನಿಸಲಾಗಿದೆ. ಆದರೆ ಕೆಲವೊಂದು ವಿಷಯದಲ್ಲಿ ಯಶಸ್ಸು ಕಂಡರೂ, ತಯಾರಿಕಾ ಹಂತದಲ್ಲಿ ಹಲವಾರು ತೊಡಕುಗಳು ಕಾಣಸಿಗುತ್ತಿವೆ. ಬದಲಾವಣೆ ನಿರಂತರ ಪ್ರಕ್ರಿಯೆ. ಇನ್ನಷ್ಟು ಸುಧಾರಿತ ಪ್ಯಾರಾಚ್ಯೂಟ್ ಗಳು ಮುಂದಿನ ದಿನಗಳಲ್ಲಿ ಖಂಡಿತಾ ಬರಲಿವೆ.
ಆಧಾರ: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯ ‘ಪ್ಯಾರಾಚ್ಯೂಟ್' ಪುಸ್ತಕ
ಚಿತ್ರ ಕೃಪೆ: ಅಂತರ್ಜಾಲ ತಾಣ